ಯಶಸ್ವಿ ಪ್ರದರ್ಶನ ಕಾಣುತ್ತಿರುವ ಸಿನಿಮಾವನ್ನು ಏಕಾಏಕಿ ತೆಗೆದು ಹಾಕಿದರೆ, ಆ ಚಿತ್ರಕ್ಕೆ ತೊಂದರೆ ನೀಡಿದರೆ ಯಾರಿಗೆ ತಾನೇ ಬೇಸರ ಆಗಲ್ಲ ಹೇಳಿ? ಖಂಡಿತಾ ಆಗುತ್ತದೆ. ಈಗ ನಟ ಜಗ್ಗೇಶ್ ಅವರಿಗೂ ಇದೇಬೇಸರ ಆಗಿದೆ. ಅದಕ್ಕೆ ಕಾರಣ “ಕಾಳಿದಾಸ ಕನ್ನಡ ಮೇಷ್ಟ್ರು’. ಜಗ್ಗೇಶ್ ನಾಯಕರಾಗಿರುವ ಈ ಚಿತ್ರ ಕಳೆದ ವಾರತೆರೆಕಂಡಿತ್ತು. ಚಿತ್ರ ನೋಡಿದವರಿಂದಲೂ ಮೆಚ್ಚುಗೆ ವ್ಯಕ್ತವಾಗುವ ಮೂಲಕ ಜಗ್ಗೇಶ್ ಕೂಡಾ ಖುಷಿಯಾಗಿದ್ದರು.
ಆದರೆ, ಈ ವಾರ (ನ.29) ಬರೋಬ್ಬರಿ ಹತ್ತು ಸಿನಿಮಾಗಳು ಬಿಡುಗಡೆಯಾಗುವ ಮೂಲಕ “ಕಾಳಿದಾಸ’ನಿಗೆ ತೊಂದರೆಯಾಗಿದೆ. ಯಶಸ್ವಿ ಪ್ರದರ್ಶನ ಕಾಣುತ್ತಿರುವ “ಕಾಳಿದಾಸ ಕನ್ನಡ ಮೇಷ್ಟ್ರು’ ಚಿತ್ರವನ್ನು ಅನೇಕ ಚಿತ್ರಮಂದಿರಗಳಿಂದ ತೆಗೆದು ಹಾಕಲಾಗಿದೆ. ಇದು ಜಗ್ಗೇಶ್ ಅವರ ಬೇಸರಕ್ಕೆ ಕಾರಣವಾಗಿದೆ. ಈ ಕುರಿತಾಗಿ ಜಗ್ಗೇಶ್ ಟ್ವೀಟರ್‌ನಲ್ಲಿ ತಮ್ಮ ಬೇಸರ ಹೊರ ಹಾಕಿದ್ದಾರೆ.
“ವಿದ್ಯುತ್ ಚಿತಾಗಾರವಾಯಿತು ಕನ್ನಡ ಚಿತ್ರರಂಗ! ಕರುಣೆ ಇಲ್ಲದೆ ಬಂದ ಹೆಣ ಸುಟ್ಟು ದಕ್ಷಿಣೆ ಪಡೆದು ಕಳಿಸುವ ಚಾಂಡಾಳ ವೃತ್ತಿಯಾಗಿದೆ ಚಿತ್ರರಂಗ! ಯಶಸ್ವಿಯಾದ ಕಾಳಿದಾಸ ಕನ್ನಡ ಮೇಷ್ಟ್ರು ಕರುಣೆಯಿಲ್ಲದೆಎತ್ತಂಗಡಿ ಅನೇಕ ಚಿತ್ರಮಂದಿರದಲ್ಲಿ! ಧನ್ಯವಾದ ಕಿವುಡು ಕುರುಡು ಚಿತ್ರರಂಗದ ಹಿರಿಯರಿಗೆ! ಉದ್ಧಾರ ಕನ್ನಡ ಚಿತ್ರರಂಗ.ಶುಭಮಸ್ತು ಕನ್ನಡಕ್ಕೆ!’ ಎನ್ನುತ್ತಾ ತಮ್ಮ ಸಿಟ್ಟನ್ನು ಹೊರಹಾಕಿದ್ದಾರೆ ಜಗ್ಗೇಶ್.
ಕವಿರಾಜ್ ನಿರ್ದೇಶನದ “ಕಾಳಿದಾಸ ಕನ್ನಡ ಮೇಷ್ಟ್ರು’ ಚಿತ್ರದಲ್ಲಿಜಗ್ಗೇಶ್ ಸರ್ಕಾರಿ ಶಾಲೆಯ ಶಿಕ್ಷಕನಾಗಿ ಕಾಣಿಸಿಕೊಂಡಿದ್ದರು. ಈ ಚಿತ್ರದಲ್ಲಿ ಶಿಕ್ಷಣ ವ್ಯವಸ್ಥೆಯ ತಾರತಮ್ಯ, ಮಕ್ಕಳ ಮೇಲಾಗುವ ಪರಿಣಾಮ ಸೇರಿದಂತೆ ಶಿಕ್ಷಣ ವ್ಯವಸ್ಥೆಯ ಕುರಿತಾದ ಹಲವು ಸೂಕ್ಷ್ಮವಿಚಾರಗಳನ್ನು ಇಲ್ಲಿ ಹೇಳಲಾಗಿತ್ತು. ಜಗ್ಗೇಶ್‌ಗೆ ಜೋಡಿಯಾಗಿಮೇಘನಾ ರಾಜ್ ನಟಿಸಿದ್ದಾರೆ.