Advertisement

ದಲಿತ ಮಹಿಳೆಯರ ಅಭಿವೃದ್ಧಿಗೆ‌ ಸಮ್ಮಾನ್‌; ರಾಜ್ಯ ಸರಕಾರದಿಂದ ಹೊಸ ಯೋಜನೆ ಜಾರಿಗೆ ಚಿಂತನೆ

01:12 AM Apr 11, 2022 | Team Udayavani |

ಬೆಂಗಳೂರು: ರಾಜ್ಯದಲ್ಲಿ ಅಧಿಕಾರ ಉಳಿಸಿ ಕೊಳ್ಳುವುದಕ್ಕಾಗಿ ಬಿಜೆಪಿ ಈಗಾಗಲೇ ಹಲವಾರು ಕಾರ್ಯ ಕ್ರಮಗಳನ್ನು ಜಾರಿಗೊಳಿಸಲು ಮುಂದಾಗಿದೆ. ಇದೇ ಹಿನ್ನೆಲೆಯಲ್ಲಿ ಹಿಂದೂ ಮತಗಳನ್ನು ಒಗ್ಗೂಡಿಸಲು ಪ್ರಯತ್ನ ನಡೆಸಿದೆ. ಇದರ ಜತೆಗೆ ಕಾಂಗ್ರೆಸ್‌ ನಂಬಿಕೊಂಡಿರುವ ದಲಿತ ಮತಗಳನ್ನು ಸೆಳೆಯಲು ಯೋಜನೆ ರೂಪಿಸುತ್ತಿದೆ.

Advertisement

ಕೇಂದ್ರ ಸರಕಾರದ ಕಿಸಾನ್‌ ಸಮ್ಮಾನ್‌ ಮಾದರಿಯಲ್ಲೇ “ದಲಿತ ಮಹಿಳಾ ಸಮ್ಮಾನ್‌’ ಯೋಜನೆ ಜಾರಿಗೆ ತರಬೇಕೆಂಬ ಇರಾದೆ ರಾಜ್ಯ ಬಿಜೆಪಿ ನಾಯಕರಲ್ಲಿದೆ.

ದಲಿತ ಮಹಿಳಾ ಸಮ್ಮಾನ್‌ ಯೋಜನೆ
ಕಿಸಾನ್‌ ಸಮ್ಮಾನ್‌ ಮಾದರಿಯಲ್ಲಿ ರಾಜ್ಯದಲ್ಲಿ ತುಳಿತ ಕ್ಕೊಳಗಾಗಿರುವ ಮತ್ತು ಅತ್ಯಂತ ಹಿಂದುಳಿದಿರುವ ದಲಿತ ಮಹಿಳೆಯರ ಶ್ರೇಯೋಭಿವೃದ್ಧಿಗೆ ದಲಿತ ಮಹಿಳಾ ಸಮ್ಮಾನ್‌ ಯೋಜನೆ ಜಾರಿಗೆ ತರಬೇಕು ಎಂದು ಪಕ್ಷದ ವ್ಯಾಪ್ತಿಯಲ್ಲಿ ಚರ್ಚೆ ಆರಂಭವಾಗಿದೆ. ಬಿಜೆಪಿಯ ಮುದ್ದೇಬಿಹಾಳ ಶಾಸಕ ಎ.ಎಸ್‌. ಪಾಟೀಲ್‌ ನಡಹಳ್ಳಿ ನೇತೃತ್ವದಲ್ಲಿ ಕೆಲವು ಯುವ ಶಾಸಕರು ಬಜೆಟ್‌ ಸಂದರ್ಭದಲ್ಲಿ ಸರಕಾರ ಮತ್ತು ಪಕ್ಷಕ್ಕೆ ಈ ಬಗ್ಗೆ ಸಲಹೆ ನೀಡಿದ್ದಾರೆ.

ಏನಿದು ಯೋಜನೆ?
ರಾಜ್ಯ ಸರಕಾರವು ಎಸ್‌ಸಿಪಿ ಮತ್ತು ಟಿಎಸ್‌ಪಿ ಯೋಜನೆ ಅಡಿಯಲ್ಲಿ ಪ್ರತೀ ವರ್ಷ ಎಸ್‌ಸಿ ಮತ್ತು ಎಸ್‌ಟಿ ಸಮುದಾಯದ ಜನಸಂಖ್ಯೆಗೆ ಅನು ಗುಣ ವಾಗಿ ರಾಜ್ಯದ ಒಟ್ಟು ಬಜೆಟ್‌ ಗಾತ್ರದ ಶೇ. 24.01ರಷ್ಟು ಅನುದಾನವನ್ನು ಈ ಸಮುದಾಯಗಳಿಗೆ ಪ್ರತ್ಯೇಕವಾಗಿ ಇರಿಸ ಲಾಗಿದೆ. 2022-23ನೇ ಸಾಲಿನ ಬಜೆಟ್‌ನಲ್ಲಿ ಈ ಯೋಜನೆ ಅಡಿ 28, 307 ಕೋಟಿ ರೂ. ಮೀಸಲಿಡಲಾಗಿದೆ.

ಅಲ್ಲದೆ ಅನುಸೂಚಿತ ಜಾತಿಗಳ ಉಪಯೋಜನೆ (ಎಸ್‌ಸಿಎಸ್‌ಪಿ) ಮತ್ತು ಅನುಸೂಚಿತ ಬುಡಕಟ್ಟುಗಳ ಉಪ ಯೋಜನೆ (ಟಿಎಸ್‌ಪಿ) ಕಾಯ್ದೆ ಅಡಿಯಲ್ಲಿ ಅನೇಕ ಯೋಜನೆಗಳನ್ನು ಜಾರಿಗೆ ತಂದರೂ ಅತ್ಯಂತ ಕೆಳ ಸ್ತರದಲ್ಲಿರುವ ದಲಿತ ಮಹಿಳೆರಿಗೆ ಈ ಯೋಜನೆಗಳು ತಲುಪದೆ ಆ ವರ್ಗ ನಿರಂತರ ಅನ್ಯಾಯಕ್ಕೊಳಗಾಗುತ್ತಿದೆ ಎಂದು ಬಿಜೆಪಿ ಶಾಸಕರು ಕಂಡುಕೊಂಡಿದ್ದಾರೆ.

Advertisement

ಯಾಕೆ ಈ ಯೋಜನೆ?
ಬಿಜೆಪಿ ಶಾಸಕರ ಪ್ರಕಾರ ಈ ಯೋಜನೆ ಜಾರಿಯಿಂದ ಎರಡು ರೀತಿಯ ಅನುಕೂಲಗಳಿವೆ. ದಲಿತ ಮಹಿಳೆಗೆ ಆರ್ಥಿಕ ಶಕ್ತಿ ಇಲ್ಲದಿರುವುದು ಹಿಂದುಳಿಯುವಿಕೆಗೆ ಕಾರಣವಾಗಿದ್ದು, ಆರ್ಥಿಕ ಶಕ್ತಿ ನೀಡಿದರೆ ಅವರ ಜೀವನೋಪಾಯಕ್ಕೆ, ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲಿದೆ. ಅಲ್ಲದೆ ದಲಿತ ಮಹಿಳೆಯರಲ್ಲಿ ರಕ್ತಹೀನತೆ ಹೆಚ್ಚಿದ್ದು, ಅದನ್ನು ಕಡಿಮೆ ಮಾಡಲು,ದಲಿತ ಮಹಿಳೆಯರ ವಲಸೆಯನ್ನು ತಪ್ಪಿಸಲು ಈ ಯೋಜನೆಯಿಂದ ಅನುಕೂಲವಾಗ ಲಿದೆ ಎಂಬ ಅಭಿಪ್ರಾಯ ಇದೆ. ಆದರೆ ಬಿಜೆಪಿಯ ಒಂದು ವರ್ಗ ಈ ರೀತಿಯ ಉಚಿತ ಯೋಜನೆಗಳನ್ನು ನೀಡುವ ಬಗ್ಗೆ ಆಕ್ಷೇಪ ಹೊಂದಿದೆ ಎಂಬ ಮಾತಿದೆ.

ಸಮಾಜದಲ್ಲಿ ಹಿಂದುಳಿದಿರುವ ದಲಿತ ಮಹಿಳೆಯರ ಸ್ವಾವಲಂಬಿ ಬದುಕಿಗಾಗಿ ನೇರ ನಗದು ಯೋಜನೆಯನ್ನು ಜಾರಿಗೆ ತರಬೇಕು ಎಂದು ಸಲಹೆ ನೀಡಿದ್ದೇನೆ. ಇದನ್ನು ಸಿಎಂ ಮತ್ತು ಸಮಾಜ ಕಲ್ಯಾಣ ಸಚಿವರ ಗಮನಕ್ಕೆ ತಂದಿದ್ದೇನೆ. ಪಕ್ಷ ಮತ್ತು ಸರಕಾರದ ಹಂತದಲ್ಲಿ ಚರ್ಚೆಯಾಗಿ ಅಂತಿಮ ತೀರ್ಮಾನವಾಗಲಿದೆ.
ಎ.ಎಸ್‌. ಪಾಟೀಲ್‌ ನಡಹಳ್ಳಿ, ಬಿಜೆಪಿ ಶಾಸಕ

ರಾಜಕೀಯ ಲಾಭ
ಕಾಂಗ್ರೆಸ್‌ ದಲಿತ ಪರ ಎಂದು ಹೇಳುತ್ತ ಬಂದಿದೆ. ಆದರೆ ಇದುವರೆಗೆ ದಲಿತ ಮಹಿಳೆ ಯ ರನ್ನು ಮುಖ್ಯವಾಹಿನಿಗೆ ತರಲು ಆಗಿಲ್ಲ. ಕಾರಣ ಅವರಿಗೆ ಸರಕಾರದ ಯೋಜನೆಗಳು ತಲುಪುತ್ತಿಲ್ಲ. ಈ ವರ್ಗಕ್ಕೆ ನೇರವಾಗಿ ಯೋಜನೆ ತಲುಪಿಸಿದರೆ ಅವರು ಬಿಜೆಪಿ ಬಗ್ಗೆ ಒಲವು ತೋರಿ, ಚುನಾವಣೆಗಳಲ್ಲಿ ಅನುಕೂಲವಾಗಬಹುದು ಎಂಬುದು ಬಿಜೆಪಿ ಆಲೋಚನೆ ಎನ್ನಲಾಗುತ್ತಿದೆ.

 

Advertisement

Udayavani is now on Telegram. Click here to join our channel and stay updated with the latest news.

Next