ರಾಯಚೂರು: ರಾಜ್ಯದಲ್ಲಿ ಅಕ್ರಮ ಮರಳು ಗಣಿಗಾರಿಕೆಗೆ ಕಡಿವಾಣ ಹಾಕಲು ತೆಲಂಗಾಣ ಮಾದರಿಯ ಮರಳು ನೀತಿ ಜಾರಿಗೆ ಚಿಂತನೆ ನಡೆಸಲಾಗಿದೆ ಎಂದು ಗಣಿ ಮತ್ತು ಖನಿಜ ಸಂಪನ್ಮೂಲ ಹಾಗೂ ಅರಣ್ಯ ಸಚಿವ ಸಿ.ಸಿ.ಪಾಟೀಲ್ ತಿಳಿಸಿದರು.
ನಗರ ಶಾಸಕ ಡಾ. ಶಿವರಾಜ್ ಪಾಟೀಲ್ ಮನೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಣಿ ಇಲಾಖೆಯಲ್ಲಿ ಮರಳಿನ ಸಮಸ್ಯೆ ಇದೆ. ಎಲ್ಲರಿಗೂ ಮರಳು ಸಿಗಬೇಕು. ರಾಜ್ಯದಲ್ಲಿ ಅಕ್ರಮ ಮರಳು ಗಣಿಗಾರಿಕೆ ತಡೆಯಲು ಸರ್ಕಾರ ಕ್ರಮ ಕೈಗೊಳ್ಳುತ್ತಿದೆ. ಇದರ ಭಾಗವಾಗಿ ಮರಳು ನೀತಿ ಜಾರಿಗೆ ತರಲಾಗುವುದು.
ತೆಲಂಗಾಣದಲ್ಲಿ ಅಕ್ರಮ ಮರಳು ತಡೆಯುವ ಕ್ರಮ ಕುರಿತು ಇಲ್ಲಿಂದ ಅಧಿಕಾರಿಗಳನ್ನು ಅಧ್ಯಯನಕ್ಕೆ ಕಳುಹಿಸಲಾಗುವುದು. ಅಲ್ಲಿನ ಮಾದರಿಯಲ್ಲಿಯೇ ಮರಳು ತಡೆಗಟ್ಟಲಾಗುವುದು ಎಂದರು.
ಜಿಲ್ಲೆಯಲ್ಲಿ ಅಕ್ರಮ ಮರಳು ಗಣಿಗಾರಿಕೆ ತಡೆಯಲು ವಿಶೇಷ ತಂಡ ರಚಿಸಲಾಗುವುದು. ಅಕ್ರಮ ನಡೆದಲ್ಲಿ ಆ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಗಳನ್ನೆ ಹೊಣೆ ಮಾಡಲಾಗುವುದು ಎಂದು ತಿಳಿಸಿದರು.
ಖನಿಜ ಸಂಪನ್ಮೂಲಗಳಿಂದ ರಾಜ್ಯದಲ್ಲಿ 3500 ಕೋಟಿಗಿಂತ ಅಧಿಕ ಆದಾಯ ಬರುತ್ತಿದೆ. ಅದನ್ನು ಹೇಗೆ ವಿನಿಯೋಗಿಸಬೇಕು ಎಂಬ ಬಗ್ಗೆ ಚರ್ಚೆ ನಡೆದಿದೆ ಎಂದರು.
ಉಪ ಮುಖ್ಯಮಂತ್ರಿ ಹಾಗೂ ಸಚಿವ ಸ್ಥಾನದ ಹಂಚಿಕೆ ಬಗ್ಗೆ ಮುಖ್ಯಮಂತ್ರಿ ಹಾಗು ಕೋರ್ ಕಮಿಟಿ ನಿರ್ಧಾರ ಕೈಗೊಳ್ಳುತ್ತದೆ. ಆ ಬಗ್ಗೆ ಹೇಳುವಷ್ಟು ನಾನು ದೊಡ್ಡವನಲ್ಲ ಎಂದು ಸಚಿವ ಸಿ.ಸಿ ಪಾಟೀಲ್ ಕೈ ಮುಗಿದು ಹೇಳಿದರು.