Advertisement

ಮೂರು ವರ್ಷವಾದರೂ ಧಾರವಾಡ ಐಐಟಿಗಿಲ್ಲ ಸೂರು

10:02 AM Jan 14, 2020 | Lakshmi GovindaRaj |

ಧಾರವಾಡ: ಸರ್ಕಾರದ ಘೋಷಣೆ ಮತ್ತು ರಾಜಕಾರಣಿಗಳು ನೀಡಿದ್ದ ಭರವಸೆಯಂತೆ ಇಷ್ಟೊತ್ತಿಗಾಗಲೇ ವಿದ್ಯಾಕಾಶಿ ಧಾರವಾಡದಲ್ಲಿ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ)ಗೆ ಶಾಶ್ವತ ಸೂರು ನಿರ್ಮಾಣವಾಗಿ, ದೇಶದಲ್ಲಿಯೇ ವಿಭಿನ್ನವಾಗಿರುವ ಹಸಿರು ಐಐಟಿ ಕ್ಯಾಂಪಸ್‌ ಕಂಗೊಳಿಸಬೇಕಿತ್ತು. ಆದರೆ, ಐಐಟಿ ಆರಂಭಗೊಂಡು ಮೂರು ವರ್ಷ ಮುಗಿದು ನಾಲ್ಕನೇ ವರ್ಷ ಬಂದರೂ ಇಲ್ಲಿ ಕಲಿಯುವ ವಿದ್ಯಾರ್ಥಿಗಳು ವಾಲ್ಮಿ (ನೆಲ-ಜಲ ನಿರ್ವಹಣಾ ಸಂಸ್ಥೆ ) ಕಟ್ಟಡದ ತಾತ್ಕಾಲಿಕ ಕ್ಯಾಂಪಸ್‌ನಲ್ಲಿಯೇ ಐಐಟಿ ಪೂರ್ಣ ಗೊಳಿಸಿಕೊಂಡು ಹೋಗುವುದು ನಿಶ್ಚಿತವಾದಂತಿದೆ.

Advertisement

ಐಐಟಿ ಸ್ಥಾಪನೆಯಾಗಿ ಮೂರು ವರ್ಷಗಳು ಕಳೆದು ಇದೀಗ 600ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇಲ್ಲಿ ವಿದ್ಯಾ ಭ್ಯಾಸ ಮಾಡುತ್ತಿದ್ದಾರೆ. 1,459 ಕೋಟಿ ರೂ. ವೆಚ್ಚದಲ್ಲಿ ಧಾರವಾಡ ಐಐಟಿ ಕ್ಯಾಂಪಸ್‌ ಸಜ್ಜಾಗಬೇಕಿದೆ. ಈ ಸಂಬಂಧ 2015ರ ಬಜೆಟ್‌ನಲ್ಲಿಯೇ ಕೇಂದ್ರ ಸರ್ಕಾರ ಹಣಕಾಸಿನ ನೆರವು ಘೋಷಿಸಿತ್ತು. ಇದರನ್ವಯ ಈಗಾಗಲೇ 7.5 ಕಿ.ಮೀ. ಉದ್ದದ ಕಾಂಪೌಂಡ್‌ ನಿರ್ಮಿಸುತ್ತಿದ್ದು, ಅದೂ ಪೂರ್ಣಗೊಂಡಿಲ್ಲ.

ಕಾಂಪೌಂಡ್‌ ನಿರ್ಮಾಣ ಮುಗಿದ ಕೂಡಲೇ ರಾಜ್ಯ ಲೋಕೋಪಯೋಗಿ ಇಲಾಖೆ ಐಐಟಿ ಕ್ಯಾಂಪಸ್‌ನ್ನು ಕೇಂದ್ರ ಲೋಕೋಪಯೋಗಿ ಇಲಾಖೆಗೆ ಹಸ್ತಾಂತರ ಮಾಡಲಿದೆ. ಜತೆಗೆ ಐಐಟಿ ಆವರಣದಲ್ಲಿ ಬರುವ ಎಲ್ಲ ಗಿಡ ಮರಗಳನ್ನು ಸಂರಕ್ಷಿಸಿಕೊಂಡೇ ಕಟ್ಟಡಗಳನ್ನು ನಿರ್ಮಿಸುವ ಯೋಜನೆಯನ್ನು ಕಟ್ಟಡ ತಂತ್ರಜ್ಞರು ರೂಪಿಸಿದ್ದು, ಅವುಗಳ ರಕ್ಷಣೆಗೂ ಒತ್ತು ನೀಡಿಲ್ಲ. ಹೀಗಾಗಿ ಕೆಲವು ಮರಗಳು ಒಣಗಿ ಹೋಗಿವೆ. ಆಮೆಗತಿಯ ಕಾರಣದಿಂದಾಗಿ, ಕ್ಯಾಂಪಸ್‌ ಸಿದ್ಧಗೊಳ್ಳಲು ಇನ್ನೆಷ್ಟು ವರ್ಷಗಳು ಬೇಕಾಗುತ್ತವೆಯೋ ಎನ್ನುವ ಆತಂಕ ಶಿಕ್ಷಣ ಪ್ರೇಮಿಗಳಲ್ಲಿ ಉಂಟಾಗಿದೆ.

700 ಕೋಟಿಗೆ ಟೆಂಡರ್‌?: ಕೇಂದ್ರ ಲೋಕೋ ಪಯೋಗಿ ಇಲಾಖೆ ಇದೀಗ ಧಾರವಾಡ ಐಐಟಿ ಹಸಿರು ಕ್ಯಾಂಪಸ್‌ ನಿರ್ಮಾಣ ಮತ್ತು ಪ್ರಧಾನ ಕಟ್ಟಡ, ಹಾಸ್ಟೆಲ್‌, ಕ್ರೀಡಾಂಗಣ, ಜಲಗೋಳ, ಈಜುಗೋಳ, ವಸತಿ ಸಮು ತ್ಛಯ, ವಸತಿ ನಿಲಯಗಳು ಸೇರಿ ಅಗತ್ಯವಾದ ಪ್ರಧಾನ ಕಟ್ಟಡಗಳನ್ನು ನಿರ್ಮಿಸುವ ಮೊದಲ ಹಂತದ 700 ಕೋಟಿ ರೂ. ವೆಚ್ಚಕ್ಕೆ ಕಂಪನಿಗಳಿಂದ ಟೆಂಡರ್‌ಗೆ ಆಹ್ವಾನ ನೀಡಿದೆ. ಈಗಾಗಲೇ ಈ ಕುರಿತು ವಿಸ್ತೃತ ಯೋಜನಾ ವರದಿ (ಡಿಪಿಆರ್‌) ಸಿದ್ಧಗೊಂಡಿದ್ದು, ಸುವರ್ಣ ವಿಧಾನ ಸೌಧ ನಿರ್ಮಿಸಿದ ಶೀರ್ಕೆ ಕನ್‌ಸ್ಟ್ರಕ್ಷನ್‌ ಕಂಪನಿ ಸೇರಿ ದೇಶ- ವಿದೇಶಗಳ ಕಂಪನಿಗಳು ಟೆಂಡರ್‌ನಲ್ಲಿ ಭಾಗಿಯಾಗಿವೆ.

ಪರಿಹಾರ ಪೂರ್ಣ: ಮೊದಲು ಕೆಐಎಡಿಬಿ ಮೂಲಕ ಸರ್ಕಾರಕ್ಕೆ ಭೂಮಿ ನೀಡಿದ ರೈತರು ಹೆಚ್ಚಿನ ಪರಿಹಾರಕ್ಕೆ ಒತ್ತಾಯಿಸಿದ್ದರು. ಅಲ್ಲದೇ ಇಲ್ಲಿ 480ಕ್ಕೂ ಹೆಚ್ಚು ಆಲೊನ್ಸೋ ಮಾವಿನ ಹಣ್ಣಿನ ಗಿಡಗಳಿದ್ದು, ಅವುಗಳಿಗೆ ಪ್ರತ್ಯೇಕ ಪರಿಹಾರ ನೀಡುವಂತೆ ರೈತರು ಕೋರಿದ್ದರು. ಜಿಲ್ಲಾಡಳಿತ ರೈತರ ಸಮಸ್ಯೆ ಪರಿಹರಿಸಿ, ಐಐಟಿ ನಿರ್ಮಾಣಕ್ಕೆ ಅಗತ್ಯವಾದ ಅನುಕೂಲತೆ ಮಾಡಿದೆ. ಆದರೆ, ಏಕೆ ಕಾಮಗಾರಿ ವಿಳಂಬವಾಗುತ್ತಿದೆ ಕಾಣದಾಗಿದೆ.

Advertisement

ಹಸಿರು ಐಐಟಿ ಷರತ್ತು: ಧಾರವಾಡ ಐಐಟಿ ಆವರಣದ ಅಂದಾಜು ನಾಲ್ಕು ಸಾವಿರ ಗಿಡ ಮರಗಳನ್ನು ಹಾಗೇ ಉಳಿಸಿಕೊಂಡು ಮಾದರಿ ಹಸಿರು ಕ್ಯಾಂಪಸ್‌ ನಿರ್ಮಿಸುವಲ್ಲಿ ರಾಜಿ ಆಗದಂತೆ ಈಗಾಗಲೇ ಜಿಲ್ಲಾಡಳಿತ ಮತ್ತು ಉನ್ನತ ಶಿಕ್ಷಣ ಇಲಾಖೆಯು ಐಐಟಿ ಮತ್ತು ಕೇಂದ್ರ ಲೋಕೋಪಯೋಗಿ ಇಲಾಖೆಗೆ ಷರತ್ತು ಹಾಕಿದೆ. ಇದಕ್ಕೆ ಟೆಂಡರ್‌ನಲ್ಲಿ ಭಾಗಿಯಾದ ಕಂಪನಿಗಳು ಒಪ್ಪಿಗೆ ಸೂಚಿಸಿವೆ. ಆದರೆ ಮೂರು ವರ್ಷಗಳಲ್ಲಿ ಧಾರವಾಡ ಐಐಟಿಯ ಇಡೀ ಕ್ಯಾಂಪಸ್‌ ಸಜ್ಜುಗೊಳ್ಳಬೇಕಿತ್ತು. ಕಾಂಪೌಂಡ್‌ ನಿರ್ಮಾಣಕ್ಕೆ 4 ವರ್ಷವಾದರೆ ಐಐಟಿ ನಿರ್ಮಾಣ ಎಷ್ಟು ವರ್ಷಬೇಕು ಎಂಬುದು ಶೈಕ್ಷಣಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತದಿಂದ ಮಾಡಬೇಕಾಗಿದ್ದ ಧಾರವಾಡ ಐಐಟಿಯ ಎಲ್ಲ ಕೆಲಸಗಳನ್ನು ಮುಗಿಸಿಕೊಡಲಾಗಿದೆ. ಇನ್ನೇನಿದ್ದರೂ ಕೇಂದ್ರ ಲೋಕೋಪಯೋಗಿ ಇಲಾಖೆ ಮತ್ತು ಮುಂಬೈ ಐಐಟಿ ಇದನ್ನು ನಿರ್ವಹಿಸಲಿದೆ.
-ದೀಪಾ ಚೋಳನ್‌, ಧಾರವಾಡ

ಡೀಸಿಧಾರವಾಡ ಐಐಟಿ ಕ್ಯಾಂಪಸ್‌ಗೆ ಹಣಕಾಸಿನ ಕೊರತೆ ಇಲ್ಲ. ಆದರೆ ಜಾಗತಿಕ ಮಟ್ಟದ ಕಂಪನಿಗಳಿಂದ ಟೆಂಡರ್‌ ಕರೆಯಲಾಗಿದ್ದರಿಂದ ಕೊಂಚ ವಿಳಂಬವಾಗಿದೆ. ಮೊದಲ ಹಂತದಲ್ಲಿ 700 ಕೋಟಿ ರೂ. ಮೊತ್ತದ ಯೋಜನೆಗೆ ಟೆಂಡರ್‌ ಕರೆಯಲಾಗುವುದು.
-ಐಐಟಿ ಧಾರವಾಡ, ಹಿರಿಯ ಅಧಿಕಾರಿ

ಕೇಂದ್ರ ಲೋಕೋಪ ಯೋಗಿ ಇಲಾಖೆಯು ಐಐಟಿ ಕ್ಯಾಂಪಸ್‌ನ ಕಾಂಪೌಂಡ್‌ ನಿರ್ಮಿಸಲು ನಮಗೆ ಗುತ್ತಿಗೆ ಕೊಟ್ಟಿದ್ದರು. ಇನ್ನುಳಿದ ಕಾಮಗಾರಿಗಳನ್ನು ಜಾಗತಿಕ ಮಟ್ಟದಲ್ಲಿ ಟೆಂಡರ್‌ ಕರೆಯಲಾಗುತ್ತಿದೆ.
-ವೀರೇಶ ಪಾಟೀಲ್‌, ಎಇಇ, ಲೋಕೋಪಯೋಗಿ ಇಲಾಖೆ, ಧಾರವಾಡ

* ಬಸವರಾಜ ಹೊಂಗಲ್‌

Advertisement

Udayavani is now on Telegram. Click here to join our channel and stay updated with the latest news.

Next