ಬದಿಯಡ್ಕ: ಮಳೆಗಾಲದಲ್ಲಿ ಎದುರಾಗುವ ಸಮಸ್ಯೆಗಳನ್ನು ತಪ್ಪಿಸಲು ಮಳೆ ಪ್ರಾರಂಭವಾಗುವುದಕ್ಕೂ ಮುನ್ನ ಆಗತ್ಯದ ಕ್ರಮಗಳನ್ನು ಕೈಗೊಂಡಲ್ಲಿ ಜನರು ಸಮಾಧಾನಪಡುವಂತಾಗುತ್ತದೆ. ಸ್ವತ್ಛತಾ ಕಾರ್ಯ, ವಿದ್ಯುತ್ ತಂತಿಗಳ ಮೇಲಿಂದ ಹಾದುಹೋಗುವ ಮರದ ರೆಂಬೆ ಕೊಂಬೆಗಳಿಂದ ಬರಬಹುದಾದ ಅಪಾಯವನ್ನರಿತು ಅವುಗಳನ್ನು ಕಡಿದು ಬೇರ್ಪಡಿಸಬೇಕು.
ಆದರೆ ಈ ಬಗ್ಗೆ ಸಂಬಂಧಪಟ್ಟವರು ಕಾಳಜಿವಹಿಸದಿರುವುದು ಇಂದು ಜನರ ಆತಂಕಕ್ಕೆ ಕಾರಣವಾಗಿದೆ. ಬದಿಯಡ್ಕ ಪೇಟೆಯ ಪುತ್ತೂರು ರಸ್ತೆಯಲ್ಲಿರುವ ಬೃಹತ್ ಮರ ನೆಲಕಚ್ಚಲು ಸಿದ್ಧವಾಗಿದೆ. ಹಲವು ವರ್ಷಗಳಷ್ಟು ಹಳೆಯದಾದ ಈ ಮರದ ಕೆಳ ಭಾಗ ನಶಿಸಲಾರಂಭಿಸಿದ್ದು ರಸ್ತೆಯತ್ತ ವಾಲತೊಡಗಿದೆ. ಯಾವುದೇ ಸಂದರ್ಭದಲ್ಲಿ ಧರಾಶಾಯಿಯಾಗಲು ಸಿದ್ಧವಾಗಿರುವಂತೆ ಭಾಸವಾಗುತ್ತದೆ.
ಬದಿಯಡ್ಕ- ಪೆರ್ಲ ರಸ್ತೆ ಬದಿ ಈ ಬೃಹತ್ ಮರವಿದ್ದು ಕೆಳ ಭಾಗದಲ್ಲಿ ವಿದ್ಯುತ್ ತಂತಿ ಹಾದು ಹೋಗಿದೆ. ಬಸ್ ಸಹಿತ ನೂರಾರು ವಾಹನಗಳು ಈ ರಸ್ತೆಯಲ್ಲಿ ಸಂಚರಿಸುವುದಲ್ಲದೆ ಟೆಂಪೋ ಸ್ಟಾಂಡ್, ಖಾಸಗಿ ವಾಹನಗಳ ಪಾರ್ಕಿಂಗ್, 50ಕ್ಕೂ ಹೆಚ್ಚು ವ್ಯಾಪಾರ ಕೇಂದ್ರಗಳು ಈ ಪರಿಸರದಲ್ಲಿವೆ. ಭಾರೀ ಮಳೆ, ಗಾಳಿ ಬಂದಲ್ಲಿ ಮರ ನೆಲಕ್ಕುರಳಲಿದ್ದು, ದೊಡ್ಡ ಅಪಾಯ ಎದುರಾಗಲಿದೆ. ಮರ ರಸ್ತೆಗೆ ಬಿದ್ದಲ್ಲಿ ಪೆರ್ಲ ಭಾಗಕ್ಕೆ ಹೋಗುವ ಹಾಗೂ ಬದಿಯಡ್ಕ ಭಾಗಕ್ಕೆ ಬರುವ ವಾಹನಗಳ ಸಂಚಾರ ಮೊಟಕುಗೊಳ್ಳಲಿದೆ. ಸ್ಥಳೀಯ ಚಾಲಕರು ಹಾಗೂ ವ್ಯಾಪಾರಿಗಳು ಸೇರಿ ಲೋಕೋಪಯೋಗಿ ಅಧಿಕಾರಿಗಳನ್ನು ಭೇಟಿಯಾಗಿ ಮರದ ಈಗಿನ ಅವಸ್ಥೆಯ ಬಗ್ಗೆ ಮಾಹಿತಿ ನೀಡಿದ್ದರು. ಆದರೆ ಈ ಮರ ಕಡಿದು ತೆಗೆಯುವ ಬಗ್ಗೆ ಯಾವುದೇ ಕ್ರಮಗಳನ್ನೂ ಲೋಕೋಪಯೋಗಿ ಇಲಾಖೆ ಕೈಗೊಂಡಿಲ್ಲ.
ಚೆರ್ಕಳ- ಅಡ್ಕಸ್ಥಳ ರಸ್ತೆ ಮೆಕ್‌ಡಾಂ ಟಾರಿಂಗ್ ನಡೆಯುತ್ತಿದ್ದು, ಈ ರಸ್ತೆಯ ಅಗಲೀಕರಣದ ವೇಳೆ ಮರ ಕಡಿದು ತೆಗೆಯುವ ಸಾಧ್ಯತೆ ಇದೆಯಾದರೂ ಆಲ್ಲಿವರೆಗೂ ಈ ಮರ ಉಳಿಯುವ ಬಗ್ಗೆ ಸಂದೇಹವಿದೆ. ಸಮಸ್ಯೆ ಎದುರಾಗದಂತೆ ಜಾಗ್ರತೆ ಪಾಲಿಸುವ ಬದಲಾಗಿ ಸಮಸ್ಯೆ ಎದುರಾದರಷ್ಟೇ ಕ್ರಮ ಕೈಗೊಳ್ಳುವುದು ಎಂಬ ಧೋರಣೆ ಎಂದು ಕೊನೆಯಾಗುವುದೋ ಕಾದು ನೋಡಬೇಕಾಗಿದೆ.
– ಅಖೀಲೇಶ್ ನಗುಮುಗಂ