Advertisement

“ತೋತಾಪುರಿ’ಹಾಡಿಗೆ 60 ಮಿಲಿಯನ್‌ ಸಂಭ್ರಮ; ದೇಶ-ವಿದೇಶಿಗರು ಫಿದಾ…

02:30 PM Feb 18, 2022 | Team Udayavani |

ನವರಸ ನಾಯಕ ಜಗ್ಗೇಶ್‌ ನಟನೆಯ “ತೋತಾಪುರಿ’ ಸಾಕಷ್ಟು ಸದ್ದು ಮಾಡುತ್ತಿದೆ. ಕರ್ನಾಟಕ ಮಾತ್ರವಲ್ಲದೆ ದೇಶ-ವಿದೇಶದಲ್ಲೂ ಈ ಸಿನಿಮಾದ ಹಾಡಿನ ಬಗ್ಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇತ್ತೀಚೆಗೆ ಬಿಡುಗಡೆಯಾದ “ಬಾಗ್ಲು ತೆಗಿ ಮೈರಿ ಜಾನ್‌’ ಹಾಡು ಯಾವ ಪರಿ ಹಿಟ್‌ ಆಗಿದೆ ಎಂಬುದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ರೀಲ್ಸ್‌, ಶಾರ್ಟ್ಸ್ ಹಾಗೂ ಸ್ಟೋರಿಸ್‌ಗಳೇ ಸಾಕ್ಷಿ.

Advertisement

“ಮೋನಿಫ್ಲಿಕ್ಸ್‌ ಆಡಿಯೋಸ್‌’ ಯೂ-ಟ್ಯೂಬ್‌ ಚಾನೆಲ್‌ನಲ್ಲಿ ಅಧಿಕೃತವಾಗಿ ಬಿಡುಗಡೆಯಾಗಿರುವ ಈ ಹಾಡಿಗೆ ಆ ಚಾನೆಲ್‌ ಒಂದರಲ್ಲೇ 10 ಮಿಲಿಯನ್‌ಗೂ ಅಧಿಕ ಹಿಟ್ಸ್‌ ದಾಖಲಾಗಿದೆ. ಅಲ್ಲದೆ ಸಾಮಾಜಿಕ ಜಾಲತಾಣದಲ್ಲಿ 60 ಮಿಲಿಯನ್ಸ್‌ಗೂ ಅಧಿಕ ಹಿಟ್ಸ್‌ ದಾಖಲಾಗಿರುವುದು ದಾಖಲೆಯೇ ಸರಿ.

ಇತ್ತೀಚೆಗೆ ಬಂದ ಹಾಡುಗಳ ಪೈಕಿ ದೊಡ್ಡ ಮಟ್ಟದಲ್ಲಿ ಜನರನ್ನು ಸೆಳೆದ ಹಾಡು ಇದಾಗಿದ್ದು, ದಿನದಿಂದ ದಿನಕ್ಕೆ ಕ್ರೇಜ್‌ ಹೆಚ್ಚಿಸುತ್ತಲೇ ಇದೆ. ಹಾಡು ಕೇಳಿದವರು ಮತ್ತೆ ಮತ್ತೆ ಕೇಳುತ್ತಿದ್ದಾರೆ. ಅಲ್ಲದೆ ರೀಲ್ಸ್‌, ಶಾರ್ಟ್ಸ್ ಹಾಗೂ ಸ್ಟೋರಿಸ್‌ಗಳಲ್ಲಿ ಈ ಹಾಡಿನ ತುಣುಕಿಗೆ ಡ್ಯಾನ್ಸ್‌ ಮಾಡಿ ಅಪ್‌ಲೋಡ್‌ ಮಾಡಿರುವುದು ವಿಶೇಷ. ವಿದೇಶದಲ್ಲಿ ನೆಲೆಸಿರುವ ಕನ್ನಡಿಗರಿಗೂ ಈ ಹಾಡು ಇಷ್ಟವಾಗಿರುವುದು “ತೋತಾಪುರಿ’ ಹೆಚ್ಚುಗಾರಿಕೆ.

ಒಂದೇ ಹಾಡಿಗೆ ಇಷ್ಟು ದೊಡ್ಡ ಹಿಟ್‌ ಪಡೆದುಕೊಂಡಿರುವ ಚಿತ್ರತಂಡ ಸಹ ಸಖತ್‌ ಖುಷಿಯಾಗಿದೆ. ನಿರ್ದೇಶಕ ವಿಜಯಪ್ರಸಾದ್‌ ಅವರೇ ಈ ಹಾಡಿಗೆ ಸಾಹಿತ್ಯ ರಚಿಸಿದ್ದು, ಅನೂಪ್‌ ಸೀಳಿನ್‌ ಸಂಗೀತ ಸಂಯೋಜಿಸಿದ್ದಾರೆ. ಮೋಜ್‌, ಇನ್ಸ್ಟಾಗ್ರಾಮ್, ಯೂ-ಟ್ಯೂಬ್‌ ರೀಲ್ಸ್‌, ಶೇರ್‌ ಚಾಟ್‌, ಮ್ಯಾಕ್‌ ಟಕಾ ಟಕ್‌ ಸೇರಿದಂತೆ ಹಲವಾರು ಆ್ಯಪ್‌ಗ್ಳಲ್ಲಿ ಈ ಹಾಡಿನ ತುಣುಕುಗಳಿರುವ ವಿಡಿಯೋಗಳು ಸದ್ದು ಮಾಡುತ್ತಿವೆ.

“ತೋತಾಪುರಿ’ ಸಿನಿಮಾ ಎರಡು ಭಾಗಗಳಾಗಿ ತಯಾರಾಗಿದೆ. ಕೆ. ಎ ಸುರೇಶ್‌ ನಿರ್ಮಾಣವಿರುವ ಈ ಸಿನಿಮಾದ ಮೊದಲ ಭಾಗ ಸದ್ಯದಲ್ಲೇ ಬಿಡುಗಡೆಯಾಗಲಿದ್ದು, ನಂತರ ಮತ್ತೂಂದು ಭಾಗವನ್ನು ರಿಲೀಸ್‌ ಮಾಡುವ ಆಶಯ ಚಿತ್ರತಂಡಕ್ಕಿದೆ. “ಡಾಲಿ’ ಧನಂಜಯ್, ಅದಿತಿ ಪ್ರಭುದೇವ, ಸುಮನ್‌ ರಂಗನಾಥ್‌, ದತ್ತಣ್ಣ, ವೀಣಾ ಸುಂದರ್‌, ಹೇಮಾದತ್‌ ಮೊದಲಾದವರು ಚಿತ್ರದ ತಾರಾಗಣದಲ್ಲಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next