ಗುಳೇದಗುಡ್ಡ: ಒಂದು-ಒಂದೂವರೆ ಗಂಟೆಯ ಪ್ರಯಾಣ. ಆ ಪ್ರಯಾಣ ಮುಗಿದು ಬಿಟ್ಟಿದ್ದರೆ ಎಲ್ಲರೂ ಊರು ತಲುಪಿ, ಗ್ರಾಮದ ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಿದ್ದರು. ಆದರೆ ಆ ದೇವರ ಲಿಖೀತವೇ ಬೇರೆಯಾಗಿತ್ತು. ಮಣ್ಣು ಕೊಟ್ಟು ಬರುವವರಿಗೆ ಆ ದೇವರು ಮಣ್ಣು ಕೊಡುವಂತಹ ಸ್ಥಿತಿ ತಂದೊಡ್ಡಿದ.
ಮುದ್ದೇಬಿಹಾಳ ತಾಲೂಕು ಕಂದಗನೂರ ಗ್ರಾಮಕ್ಕೆ ಸಂಬಂಧಿಕರು ತೀರಿ ಹೋಗಿದ್ದಾರೆಂದು ಹೋದ ಸಮೀಪದ ಹಳದೂರ ಗ್ರಾಮದ ಸಾಧನಿ ಕುಟುಂಬದ ಇಬ್ಬರು, ರಕ್ಕಸಗಿ ಕುಟುಂಬದ ಒಬ್ಬರು ಮೃತಪಟ್ಟಿದ್ದು, ಮೃತರ ಮನೆಗಳ ಮುಂದೆ ಸೂತಕದ ಛಾಯೆ ಆವರಿಸಿದೆ. ಅಂತ್ಯಕ್ರಿಯೆಗೆ ಸಾಧನಿಯವರ ಕುಟುಂಬ, ಸಂಬಂಧಿಕರು, ಗ್ರಾಮಸ್ಥರು ತೆರಳಿದ್ದರು.
ಮಕ್ಕಳ ಅಳುವಿನ ಆಕ್ರಂದನ, ತಂದೆಯನ್ನು ನೆನೆದು ಬಿಕ್ಕಿ ಬಿಕ್ಕಿ ಅಳುತ್ತಿದ್ದ ಮಕ್ಕಳನ್ನು ನೋಡಿ ಸಮಾಧಾನ ಪಡಿಸಲು ಬಂದವರ ಕಣ್ಣುಗಳು ಸಹ ಒದ್ದೆಯಾಗಿದವು. ಸಾಧನಿಯವರ ಮನೆಯಲ್ಲಿ ಮಕ್ಕಳಷ್ಟೇ ಇದ್ದು, ಆ ಮಕ್ಕಳ ಅಳು ನೋಡಲಾಗುತ್ತಿಲ್ಲ.
ಗ್ರಾಮದಲ್ಲಿ ಜಾತ್ರೆ: ಹಳದೂರ ಗ್ರಾಮದಲ್ಲಿ ಕಳೆದ ಒಂಬತ್ತು ದಿನಗಳಿಂದ ದುರ್ಗಾದೇವಿ ಹಾಗೂ ದ್ಯಾಮವ್ವ ದೇವಿ ಜಾತ್ರೆ ನಡೆಯುತ್ತಿದ್ದು, ಇಂದು ನಡೆದ ರಸ್ತೆ ಅಪಘಾತ ಜಾತ್ರೆಯ ಖುಷಿಯಲ್ಲಿದ್ದ ಗ್ರಾಮಸ್ಥರಿಗೆ ಆಘಾತ ನೀಡಿದೆ.
ಪರಿಹಾರಕ್ಕೆ ಸಿದ್ದು ಮನವಿ: ಅಪಘಾತದಲ್ಲಿ ಮೃತರಾದವರಿಗೆ ಸರಕಾರದಿಂದ ಪರಿಹಾರ ನೀಡಬೇಕೆಂದು ಮಾಜಿಮುಖ್ಯಮಂತ್ರಿ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ಮನವಿ ಮಾಡಿದ್ದಾರೆ. ಹಳದೂರ ಗ್ರಾಮ ಬಾದಾಮಿ ಮತಕ್ಷೇತ್ರ ವ್ಯಾಪ್ತಿಯಲ್ಲಿ ಬರುತ್ತಿದ್ದು, ಸ್ವತಃ ಸಿದ್ದರಾಮಯ್ಯನವರು ಘಟನೆ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದು, ಗಾಯಾಳುಗಳಿಗೆ ಚಿಕಿತ್ಸೆ ನೀಡಬೇಕೆಂದು ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾರೆ. ಅಲ್ಲದೇ ಈ ಬಗ್ಗೆ ಗಮನ ವಹಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಅವರಿಗೂ ಸೂಚನೆ ನೀಡಿದ್ದಾರೆ.