ಮಹದೇವಪುರ: ಸಮುದಾಯದ ಕಲ್ಯಾಣ ಬಯಸುವವರೇ ನಿಜವಾದ ಸಂತರು ಎಂದು ಹುಬ್ಬಳ್ಳಿ ಮೂರು ಸಾವಿರ ಮಠದ ಪೀಠಾಧಿಪತಿಗಳಾದ ಶ್ರೀ ಗುರುಸಿದ್ಧರಾಜ ಯೋಗೀಂದ್ರ ಸ್ವಾಮೀಜಿ ಅಭಿಪ್ರಾಯಪಟ್ಟರು.
ಕೈವಾರದ ಶ್ರೀ ಯೋಗಿನಾರೇಯಣ ಮಠದ ವತಿಯಿಂದ ವರ್ತೂರಿನ ಸರ್ಕಾರಿ ಕಾಲೇಜು ಆವರಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಧರ್ಮ ಚಿಂತನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ತಾವು ಕಂಡುಕೊಂಡ ಸತ್ಯವನ್ನು ತಾವೊಬ್ಬರೇ ಅನುಭವಿಸದೆ, ಸಮಾಜದೊಂದಿಗೆ ಆತ್ಮಾನಂದ ಹಂಚಿಕೊಳ್ಳುವ ಕಾಯಕವನ್ನು ಸಂತರು ಮಾಡಿಕೊಂಡು ಬಂದಿದ್ದಾರೆ ಎಂದರು.
ಕೈವಾರ ಕ್ಷೇತ್ರದ ಧರ್ಮಾಧಿಕಾರಿ ಡಾ.ಎಂ.ಆರ್.ಜಯರಾಮ್ ಮಾತನಾಡಿ, ಅಜ್ಞಾನದಲ್ಲಿ ಇರುವವನಿಗೆ ಜ್ಞಾನದ ಮಾರ್ಗ ತೋರಿ ನಿಶ್ಚಲ ಮನಸ್ಸನ್ನು ನೀಡಿ, ಅಂತರಂಗದ ಕಲ್ಮಶ ತೆಗೆದುಹಾಕಿ, ಮುಕ್ತಿಯ ದಾರಿಯನ್ನು ತೋರಿಸುವವನೇ ಗುರು ಎಂದರು.
ಹಲವಾರು ವರ್ಷಗಳಿಂದಲೂ ಅನೇಕ ಗುರು ಮಹನೀಯರು ಕಾಲಾನುಸಾರವಾಗಿ ಮಾನವ ಕುಲಕ್ಕೆ ಬೋಧನೆ ಮಾಡುತ್ತಾ ಬಂದಿದ್ದಾರೆ. ಗೌತಮ ಬುದ್ಧ ಕಲಿಯುಗಕ್ಕೆ ಮೊದಲ ಗುರು. ಬುದ್ಧ ಹೇಳಿದ “ಆಸೆಯಿಂದ ದುಃಖ’ ಎಂಬ ಸತ್ಯ ಇಂದಿಗೂ ಪ್ರಸ್ತುತ. ನಂತರ ಎಲ್ಲಾ ಆಚಾರ್ಯರು ತಮ್ಮ ಜ್ಞಾನವನ್ನು ಸಮಾಜದ ಒಳಿತಿಗಾಗಿ ಹಂಚಿದ್ದಾರೆ. ವೈರಾಗ್ಯ ದೊಡ್ಡ ತಪಸ್ಸಾಗಿದ್ದು, ಅಹಂಕಾರ ಹೋಗದೆ ವೈರಾಗ್ಯ ಬರುವುದಿಲ್ಲ ಎಂದು ಹೇಳಿದರು.
ಕಾರ್ಯಕ್ರಮಕ್ಕೂ ಮೊದಲು ಶ್ರೀ ಯೋಗಿನಾರೇಯಣ ತಾತಯ್ಯನವರ ವಿಗ್ರಹವನ್ನು ವರ್ತೂರಿನ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಲಾಯಿತು. ನಂತರ ಶ್ರೀ ಚನ್ನರಾಯಸ್ವಾಮಿ ಹಾಗೂ ಶ್ರೀ ಕಾಶಿವಿಶ್ವನಾಥಸ್ವಾಮಿ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಕಳಶ ಹೊತ್ತ ಮಹಿಳೆಯರು, ಡೊಳ್ಳು ಕುಣಿತದ ಕಲಾವಿದರು, ನಾದಸ್ವರ ತಂಡದವರು ಮೆರವಣಿಗೆಗೆ ಮೆರುಗು ತಂದರು.
ಪಾಲಿಕೆ ಸದಸ್ಯೆ ಪುಷ್ಪಾ ಮಂಜುನಾಥ್, ಜಿ.ಪಂ ಸದಸ್ಯ ಗಣೇಶ್, ಓಂ ಶಕ್ತಿ ಸಂಘದ ರಾಜ್ಯಾಧ್ಯಕ್ಷ ಎಸ್.ದಿವಾಕರ್, ಡಾ.ಬಾಬುಕೃಷ್ಣಮೂರ್ತಿ, ವಾನರಾಶಿ ಬಾಲಕೃಷ್ಣ ಭಾಗವತರ್, ಹಿರಿಯ ಹರಿಕಥಾ ವಿದ್ವಾನ್ ಎನ್.ಆರ್.ಜ್ಞಾನಮೂರ್ತಿ, ಲಕ್ಷ್ಮೀನರಸಿಂಹಣ್ಣ, ಮಂಜುನಾಥ, ಜಿ.ಯತೀಶ್, ಮಾರತ್ತಳ್ಳಿ ನಾಗರಾಜ್ ಇತರರಿದ್ದರು.