Advertisement

ದೇಶದ್ರೋಹಿಗಳಿಗೆ ಮೂರೇ ದಿನಗಳಲ್ಲಿ ಗಲ್ಲು!

06:00 AM Dec 17, 2017 | |

ಬೆಂಗಳೂರು: “”ದೇಶದ್ರೋಹಿಗಳಿಗೆ ಕ್ಷಮೆ ನೀಡಲೇಬಾರದು, ಮೂರೇ ದಿನದಲ್ಲಿ ಇಂಥವರ ವಿಚಾರಣೆ ನಡೆಸಿ ನೇಣಿಗೆ ಏರಿಸಬೇಕು. ಈ ವಿಷಯವನ್ನು ಯಾವುದೇ ಮಾಧ್ಯಮದಲ್ಲೂ ಸುದ್ದಿ ಮಾಡಲೇಬಾರದು. ಇದಕ್ಕಾಗಿಯೇ ಪ್ರತ್ಯೇಕ ಕಾನೂನು, ಕೋರ್ಟ್‌ ಮತ್ತು ಕ್ರಿಮಿನಲ್‌ ಕೋಡ್‌ ರಚನೆ ಮಾಡಬೇಕು…”

Advertisement

ಇದು ರಾಜ್ಯಪಾಲ ವಜುಭಾಯಿ ರೂಢಭಾಯಿ ವಾಲಾ ಅವರ ಅಭಿಪ್ರಾಯ. ಶನಿವಾರ ನಗರದ ಖಾಸಗಿ ಹೋಟೆಲ್‌ನಲ್ಲಿ ಹಮ್ಮಿಕೊಂಡಿದ್ದ ಕೇಂದ್ರ ಸರ್ಕಾರದ ದಕ್ಷಿಣ ವಲಯ ವಕೀಲರ 2ನೇ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಭಯೋತ್ಪಾದಕರು ಮತ್ತು ದೇಶದ್ರೋಹಿಗಳನ್ನು ಶಿಕ್ಷಿಸಲು ಕಠಿಣ ಕಾನೂನು ಅಗತ್ಯವಿದೆ ಎಂದು ಪ್ರತಿಪಾದಿಸಿದರು.

ರಾಷ್ಟ್ರ ವಿರೋಧಿ ಕಸಬ್‌ ಪ್ರಕರಣ ಹೈಕೋರ್ಟ್‌, ಸುಪ್ರೀಂ ಕೋರ್ಟ್‌ ವಿಚಾರಣೆಯ ನಂತರ ರಾಷ್ಟ್ರಪತಿಗಳ ಅಂಗಳಕ್ಕೆ ಹೋಗಿತ್ತು. ಭಯೋತ್ಪಾದಕರಿಗೆ ಗಲ್ಲು ಶಿಕ್ಷೆ ನೀಡಲು ಅಷ್ಟೊಂದು ದಿನ ವಿಚಾರಣೆ ಮಾಡಬೇಕಾದ ಅಗತ್ಯ ಇಲ್ಲ. ಭಯೋತ್ಪಾದಕರನ್ನು ಗಲ್ಲಿಗೆ ಹಾಕುವುದನ್ನು ವಿರೋಧಿಸುವ ಮತ್ತು ವರ್ಷಾಚರಣೆ ಮಾಡುವವರು ದೇಶದೊಳಗೆ ಇದ್ದಾರೆ. ಅಂಥವರನ್ನು ಮೊದಲು ಬಂದೂಕಿನಿಂದ ಉಡಾಯಿಸಬೇಕು. ಅವರ ಹೆಣವನ್ನು ಯಾರಿಗೂ ನೀಡಬಾರದು. ದೇಶ ವಿರೋಧಿಗಳ ವಿರುದ್ಧ ಕಟುವಾದ ನಿಲುವು ಹೊಂದಬೇಕು ಎಂದರು.

ಕಠಿಣ ಕಾನೂನು ಅವಶ್ಯ: ದೇಶದಲ್ಲಿ  ವಲಸಿಗರ ಸಂಖ್ಯೆ ಹೆಚ್ಚಾಗುತ್ತಿದೆ. ಬಾಂಗ್ಲ ವಲಸಿಗರು ವೋಟರ್‌ ಐಡಿ, ರೇಷನ್‌ ಕಾರ್ಡ್‌ ಮತ್ತು ಆಧಾರ್‌ ಕಾರ್ಡ್‌ ಮಾಡಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ರೊಹಿಂಗ್ಯಾ ವಲಸಿಗರ ಸಮಸ್ಯೆಯೂ ಸೃಷ್ಟಿಯಾಗಿದೆ. ಇದರ ಜತೆಗೆ ಲವ್‌ ಜಿಹಾದ್‌ ಹುಟ್ಟಿಕೊಂಡಿದೆ. ನಮ್ಮ ದೌರ್ಬಲ್ಯದಿಂದಲೇ ಈ ಎಲ್ಲಾ ಸಮಸ್ಯೆ ದೇಶದೆಲ್ಲೆಡೆ ವ್ಯಾಪಿಸುತ್ತಿದೆ. ವಲಸಿಗರ ಸಮಸ್ಯೆ ಹಾಗೂ ಲವ್‌ಜಿಹಾದ್‌ ಮಟ್ಟಹಾಕಲು ಕಠಿಣ ಕಾನೂನಿನ  ಅವಶ್ಯಕತೆ ಇದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

ದೇಶಕ್ಕೆ ಭದ್ರತೆ ಅಗತ್ಯ : ಭದ್ರತೆ ಚೆನ್ನಾಗಿರುವ ದೇಶ ಯಾವ ಸಾಧನೆ ಬೇಕಾದರೂ ಮಾಡಬಲ್ಲ ಸಾಮರ್ಥ್ಯ ಹೊಂದಿರುತ್ತದೆ. ಇಸ್ರೇಲ್‌ ಇದಕ್ಕೆ ಉತ್ತಮ ನಿದರ್ಶನ. ಅಲ್ಲಿನ ಯುವಕರಿಗೆ ಮೂರು ವರ್ಷ ಮತ್ತು ಮಹಿಳೆಯರಿಗೆ 2 ವರ್ಷ ಸೈನ್ಯದ ತರಬೇತಿ ಕಡ್ಡಾಯ ಮಾಡಿದ್ದಾರೆ. ಹೀಗಾಗಿಯೇ ಆ ರಾಷ್ಟ್ರ ಎಲ್ಲಾ ರೀತಿಯಿಂದಲೂ ಬಲಿಷ್ಠವಾಗಿದೆ. ಜನಸಂಖ್ಯೆಯ ಆಧಾರದಲ್ಲಿ ದೇಶದ ಸಾಮರ್ಥ್ಯ ಅಳೆಯಲು ಸಾಧ್ಯವಿಲ್ಲ. ರಾಷ್ಟ್ರಪ್ರೇಮ ಮತ್ತು  ಯೋಚನಾ ಶಕ್ತಿಯಲ್ಲಿ ದೇಶದ ಸಾಮರ್ಥ್ಯ ಅಡಗಿದೆ. ಈ ನಿಟ್ಟಿನಲ್ಲಿ ನಾವೆಲ್ಲರೂ ಯೋಚನೆ ಮಾಡಬೇಕಿದೆ ಎಂದರು.

Advertisement

ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಮಾತನಾಡಿ, ಕಪ್ಪು ಹಣ ಭಯೋತ್ಪಾದಕರ ಕೈ ಸೇರುತ್ತಿದ್ದ ಪರಿಣಾಮ ಕಾಶ್ಮೀರದಲ್ಲಿ ಹೆಚ್ಚಿನ ಕೃತ್ಯ ನಡೆಯುತ್ತಿದ್ದವು.  ಇದಕ್ಕೆ ಸಾಕ್ಷಿ ಎಂಬಂತೆ 2015-16ರಲ್ಲಿ ಕಾಶ್ಮೀರದಲ್ಲಿ 2,683 ಕಲ್ಲು ಎಸೆತ ಪ್ರಕರಣ ದಾಖಲಾಗಿತ್ತು. 2016-17ರಲ್ಲಿ ಇದು 639ಕ್ಕೆ ಇಳಿದಿದೆ. ಕೇಂದ್ರ ಸರ್ಕಾರ ಗರಿಷ್ಠ ಮೌಲ್ಯದ ನೋಟು ರದ್ದು ಮಾಡಿರುವುದರಿಂದ ಕಾಶ್ಮೀರ ಶಾಂತವಾಗಿದೆ ಎಂದರು.

ರಾಜ್ಯ ಹೈಕೋರ್ಟ್‌ ನ್ಯಾಯಮೂರ್ತಿಗಳಾದ ಬಿ.ಎಸ್‌.ಪಾಟೀಲ್‌, ಅರವಿಂದ್‌ ಕುಮಾರ್‌, ಕೇರಳ ಹೈಕೋರ್ಟ್‌ ನ್ಯಾ. ಕೆ.ಸುರೇಂದ್ರ ಮೋಹನ್‌, ಆಂಧ್ರ ಪ್ರದೇಶ ಹೈಕೋರ್ಟ್‌ನ ನ್ಯಾ. ಚೆಲ್ಲಂ ಕೋದಂಡರಾಮ್‌, ಮದ್ರಾಸ್‌ ಹೈಕೋರ್ಟ್‌ನ ನ್ಯಾ.ಜಿ.ಆರ್‌.ಸ್ವಾಮಿನಾಥನ್‌, ಕೇಂದ್ರ ಕಾನೂನು ಇಲಾಖೆ ಕಾರ್ಯದರ್ಶಿ ಸುರೇಶ್‌ ಚಂದ್ರ, ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಕೆ.ಎಂ.ನಟರಾಜ್‌, ಜಿ.ರಾಜಗೋಪಾಲನ್‌, ಪ್ರಭುಲಿಂಗ ಕೆ.ನವಡ್ಗಿ, ಸಹಾಯಕ ಸಾಲಿಸಿಟರ್‌ ಜನರಲ್‌ ಕೃಷ್ಣ ಎಸ್‌.ದೀಕ್ಷಿತ್‌ ಮೊದಲಾದವರು ಉಪಸ್ಥಿತರಿದ್ದರು.

ನ್ಯಾಯಾಲಯದಲ್ಲಿ ಸರ್ಕಾರಿ ನೀತಿ, ನಿಯಮವನ್ನು ಸಮರ್ಥಿಸಿಕೊಳ್ಳುವ ಮಹತ್ತರ ಜವಾಬ್ದಾರಿ ಸರ್ಕಾರಿ ವಕೀಲರ ಮೇಲಿರುತ್ತದೆ. ಸರ್ಕಾರಿ ನೀತಿಗಳಲ್ಲಿ ಸಾರ್ವಜನಿಕ ಹಿತಾಸಕ್ತಿ ಅಡಗಿರುತ್ತದೆ ಎಂಬುದನ್ನು ನೆನಪಿಟ್ಟುಕೊಳ್ಳಬೇಕು. ದೇಶದ ಭವಿಷ್ಯ, ಗುರಿ ಮತ್ತು ಸಾಧನೆಯನ್ನು ಗಮನದಲ್ಲಿಟ್ಟುಕೊಂಡು ಹೊಸ ಕಾನೂನು ರೂಪಿಸಬೇಕು. ದೇಶದ ಭದ್ರತೆ ಹಾಗೂ ಸಮಗ್ರತೆ ಅತಿ ಅಗತ್ಯ.
– ನ್ಯಾ.ಬಿ.ಎಸ್‌.ಪಾಟೀಲ್‌, ರಾಜ್ಯ ಹೈಕೋರ್ಟ್‌ ನ್ಯಾಯಮೂರ್ತಿ

Advertisement

Udayavani is now on Telegram. Click here to join our channel and stay updated with the latest news.

Next