Advertisement

Gadaga: ಹಿಂದೂ ಧರ್ಮ ನಾಶಕ್ಕೆ ಬಂದವ್ರೇ ನಾಶವಾಗ್ತಾರೆ-ಮುತಾಲಿಕ

06:25 PM Sep 06, 2023 | Team Udayavani |

ಗದಗ: ಸನಾತನ ಧರ್ಮದಲ್ಲಿ ಸಮಾನತೆ, ಏಕತೆ ಹಾಗೂ ಎಲ್ಲರೂ ಒಂದೇ ಎಂಬ ಭಾವನೆಯಿದೆ. ಹಿಂದೂ ಧರ್ಮ ಗಂಧದ ಮರ ಇದ್ದಂತೆ. ಗಂಧವನ್ನು ನಾಶ ಮಾಡಿದಷ್ಟು ಸುಗಂಧ ಹರಡುತ್ತದೆ. ಅಷ್ಟೇ ಆನಂದ ಕೊಡುತ್ತದೆ. ಅದನ್ನು ನಾಶ ಮಾಡಲು ಬಂದವರೇ ನಾಶವಾಗಿದ್ದಾರೆ ಎಂದು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್‌ ಮುತಾಲಿಕ ಹೇಳಿದರು.

Advertisement

ಸನಾತನ ಧರ್ಮವನ್ನು ನಿರ್ನಾಮ ಮಾಡಬೇಕೆಂಬ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್‌ ಹೇಳಿಕೆಗೆ ನಗರದಲ್ಲಿ
ಮಂಗಳವಾರ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದ ಅವರು, ಉದಯನಿಧಿ ಅವರ ಅಜ್ಜ ಕೂಡ ರಾಮಸೇತುವೆ ಕಟ್ಟೋದಕ್ಕೆ ರಾಮ ಯಾವ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಓದಿದ್ದ ಎನ್ನುವ ದಾಖಲೆ ಕೇಳಿದ್ದರು. ರಾಮ ಕುಡುಕ ಎಂದರು. ಯಾರ್ಯಾರು ಧರ್ಮದ ಅವಹೇಳನ ಮಾಡಿದ್ದರು. ಅವರೆಲ್ಲರೂ ನಾಶ ಆಗಿದ್ದಾರೆ. ನಮ್ಮ ಧರ್ಮ ನಾಶ ಆಗೋದಿಲ್ಲ. ಇದು ಸಾವಿರಾರು ವರ್ಷಗಳಿಂದ ಮುಂದುವರೆಯುತ್ತಿದೆ. “ಸರ್ವೇಜನಃ ಸುಖೀನೋ ಭವಂತು’ ಅಂತ ಹೇಳಿದ ಏಕೈಕ ಧರ್ಮ ಎಂದು ಹೇಳಿದರು.

ತಮಿಳುನಾಡಿನಲ್ಲಿರುವಷ್ಟು ದೇವಸ್ಥಾನ, ಆಧ್ಯಾತ್ಮ, ಸಂಸ್ಕೃತಿ, ಸಂಪ್ರದಾಯ ಎಲ್ಲಿಯೂ ಇಲ್ಲ. ಸನಾತನ ಧರ್ಮ ನಾಶವಾಗುವ ಬದಲು ನೀವು ನಾಶ ಆಗುತ್ತೀರಿ. ಸನಾತನ ಧರ್ಮ ನಿಮಗೆ ಶಾಪ ಕೊಡುತ್ತದೆ. ಮುಂದಿನ ದಿನಗಳಲ್ಲಿ ಡಿಎಂಕೆ ಸರ್ವನಾಶ ಆಗಲಿದೆ. ಉದಯನಿಧಿ ವಿರುದ್ಧ ಮೂರು ಹೈಕೋರ್ಟ್‌ನಲ್ಲಿ ದೂರು ದಾಖಲಿಸುತ್ತೇವೆ ಎಂದರು. ನಾವು ಶಾಂತವಾಗಿದ್ದೇವೆ, ಸಂಯಮದಿಂದ ಇದ್ದೇವೆ ಎಂದು ಬಾಯಿಗೆ ಬಂದಂತೆ ಹೇಳ್ಳೋದು ಸರಿಯಲ್ಲ. ಇನ್ನು ಮುಂದೆ ಹಿಂದೂ ಸಮಾಜ ಶಾಂತವಾಗಿ ಇರುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಬಿಜೆಪಿಯವರದು ಬೂಟಾಟಿಕೆಯ ಹಿಂದುತ್ವ. ಹಿಂದುತ್ವದ ಹಿನ್ನೆಲೆಯಲ್ಲಿ ಚುನಾವಣೆ ಮಾಡಿದ್ದರೆ ಕಳೆದ ವಿಧಾನಸಭೆ
ಚುನಾವಣೆಯಲ್ಲಿ ಸೋಲುತ್ತಿರಲಿಲ್ಲ. ಕಾಂಗ್ರೆಸ್‌ ಹಾಗೂ ಬಿಜೆಪಿಯ ಎಲ್ಲ ನಾಯಕರು ಒಂದೇ. ಅವರಿಗೆ ದೇಶ, ಧರ್ಮ, ಹಿಂದುತ್ವ ಬೇಕಾಗಿಲ್ಲ ಎಂದು ಬಿಜೆಪಿ ವಿರುದ್ಧ ವಾಗ್ಧಾಳಿ ನಡೆಸಿದರು. ತನ್ನ ಮಠ, ತನ್ನ ಜಾತಿ, ತನ್ನ ಸಮಾಜ ಎಂದು ಎಲ್ಲಾ ಮಠಾಧಿಧೀಶರು ಸ್ವಾರ್ಥಿಗಳಾಗಿದ್ದಾರೆ. ಸನಾತನ ಧರ್ಮಕ್ಕೆ ಕೊಡಲಿ ಏಟು ಬೀಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಈಗಲಾದರೂ ಎಲ್ಲ ಮಠಾಧೀಶರು ಮಠಗಳಿಂದ ಹೊರಬಂದು ಧ್ವನಿ ಎತ್ತಬೇಕೆಂದು ಒತ್ತಾಯಿಸಿದರು.

ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಮುತಾಲಿಕ್‌ ಅವರು, ಗಣೇಶನ ಹಬ್ಬವನ್ನು ಆಚರಣೆ ಮಾಡುತ್ತೇವೆ. ಅಲ್ಲಿ ಯಾವುದೇ ಗಲಾಟೆಯಾಗುವ ಪ್ರಶ್ನೆ ಬರೋದಿಲ್ಲ. ವಿರೋಧ  ಮಾಡಿದರೆ ದೊಡ್ಡ ಮಟ್ಟದ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

Advertisement

ನನ್ನನ್ನು ಗಡಿಪಾರು ಮಾಡಬೇಕೆಂದು ಕೆಲವರು ಮನವಿ ಸಲ್ಲಿಸಿದ್ದಾರೆ. ನಾನು ಪಾಕಿಸ್ತಾನ, ಅಪಘಾನಿಸ್ತಾನದಲ್ಲಿ ಇಲ್ಲ.
ಹಿಂದೂಸ್ತಾನದಲ್ಲಿದ್ದೇನೆ. ಗಡಿಪಾರು ಮಾಡುವಂತಹ ತಪ್ಪನ್ನು ನಾನು ಮಾಡಿಲ್ಲ. ತಾಕತ್ತಿದ್ದರೆ ನನ್ನನ್ನು ಗಡಿಪಾರು ಮಾಡಿ ಎಂದು ಸವಾಲು ಹಾಕಿದರು. ಅಲ್ಲದೇ, ಗಣೇಶನ ಹಬ್ಬಕ್ಕೆ ನೀವು ವಿರೋಧ ಮಾಡಿದರೆ, ನಾಳೆ ನಾವು ಕೂಡ ನಮಾಜ್‌ಗೆ ವಿರೋಧ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ರಿಪಬ್ಲಿಕ್‌ ಆಫ್‌ ಭಾರತ ಸ್ವಾಗತಾರ್ಹ
ದೇಶಕ್ಕೆ ರಿಪಬ್ಲಿಕ್‌ ಆಫ್‌ ಭಾರತ ಎಂಬ ಮರು ನಾಮಕರಣ ವಿಚಾರಕ್ಕೆ ಸಂಬಂಧಿಸಿ ಮಾತನಾಡಿದ ಶ್ರೀರಾನ ಸೇನೆ ಮುಖ್ಯಸ್ಥ ಪ್ರಮೋದ್‌ ಮುತಾಲಿಕ್‌ ಅವರು, ರಿಪಬ್ಲಿಕ್‌ ಆಫ್‌ ಭಾರತ ನಾಮಕರಣ ಮಾಡುತ್ತಿರುವುದು ಸ್ವಾಗತಾರ್ಹ. ದೇಶದಲ್ಲಿನ ಗ್ರಾಮ, ಪಟ್ಟಣ, ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣಗಳಿಗೆ ಗುಲಾಮಗಿರಿಯ ಹೆಸರು ಇದ್ದವು. 2014ರ ನಂತರ ಗುಲಾಮರಿ ಹೆಸರನ್ನು ತೆಗೆದು, ಭಾರತೀಯ ಹೆಸರು, ನಮ್ಮ ಸಂಸ್ಕೃತಿ, ಸಂಪ್ರದಾಯ, ಹಿಂದೂ ಧರ್ಮದ ಹೆಸರು ಇಡಲಾಗುತ್ತಿದೆ.

ಬ್ರಿಟಿಷರು ಇಟ್ಟಿರುವ ಇಂಡಿಯಾ ಎನ್ನುವ ಶಬ್ಧದಲ್ಲಿ ಗುಲಾಮಗಿರಿಯಿದೆ. ಭಾರತ ಎನ್ನುವುದು ಹೆಮ್ಮೆಯ ಶಬ್ಧವಾಗಿದೆ. ಸ್ವಾಭಿಮಾನದ ಅರ್ಥ ಬರುವ ಶಬ್ಧವಾಗಿದೆ. ಈಗ ಜಿ 20 ಸಮ್ಮೇಳನದಲ್ಲಿ ರಿಪಬ್ಲಿಕ್‌ ಆಫ್‌ ಭಾರತ ಎಂದು ಹೆಸರು ಇಟ್ಟಿರುವುದು ಸ್ವಾಗತಾರ್ಹ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next