ನವದೆಹಲಿ: “ಬರೀ ಅಧಿಕಾರಕ್ಕಾಗಿ ದೇಶವನ್ನೇ ಜೈಲನ್ನಾಗಿ ಪರಿವರ್ತಿಸಿ ತುರ್ತು ಪರಿಸ್ಥಿತಿ ಹೇರಿದವರು ಇಂದು ಸಂವಿಧಾನದ ಪ್ರೀತಿಯನ್ನು ಪ್ರತಿಪಾದಿಸಲು ಅರ್ಹರಲ್ಲ. ಮೂಲಭೂತ ಸ್ವಾತಂತ್ರ್ಯವನ್ನು ಬುಡಮೇಲು ಮಾಡಿ, ಸಂವಿಧಾನದ ಮೌಲ್ಯಗಳನ್ನು ಕಾಂಗ್ರೆಸ್ ಹೇಗೆ ತುಳಿಯಿತು ಎಂಬುದನ್ನು ತುರ್ತು ಪರಿಸ್ಥಿತಿಯ ಕರಾಳ ದಿನಗಳ ನೆನಪಿಸುತ್ತವೆ’ ಎಂದು ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ. ತುರ್ತು ಪರಿಸ್ಥಿತಿ ಘೋಷಣೆಯಾಗಿ 49 ವರ್ಷ ತುಂಬಿದ ಹಿನ್ನೆಲೆಯಲ್ಲಿ ಪ್ರಧಾನಿ ಈ ರೀತಿ ಟ್ವೀಟ್ ಮಾಡಿದ್ದಾರೆ.
ಇತ್ತ ಕೇಂದ್ರ ಗೃಹ ಸಚಿವ ಅಮಿತ್ ಶಾ, ಜೆ.ಪಿ.ನಡ್ಡಾ, ರಾಜನಾಥ ಸಿಂಗ್ ಸೇರಿದಂತೆ ಹಲವು ಬಿಜೆಪಿ ನಾಯಕರೂ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದು, ಪ್ರಜಾಪ್ರಭುತ್ವವನ್ನು ಕಾಂಗ್ರೆಸ್ ಹಿಂದಿನಿಂದಲೂ ಹೇಗೆ ಕೊಂದಿದೆ ಎಂಬುದಕ್ಕೆ ಈ ಕರಾಳ ದಿನವೇ ಸಾಕ್ಷಿ ಎಂದಿದ್ದಾರೆ.
10 ವರ್ಷ ಅಘೋಷಿತ ತುರ್ತು ಪರಿಸ್ಥಿತಿ: ಖರ್ಗೆ ಚಾಟಿ
ಮೋದಿ ಟ್ವೀಟ್‌ಗೆ ಎಐಸಿಸಿ ಅಧ್ಯಕ ಮಲ್ಲಿಕಾರ್ಜುನ ಖರ್ಗೆ ತಿರುಗೇಟು ನೀಡಿದ್ದಾರೆ. “ಮೋದಿ ಅವರೇ, ನೀವು ನಿಮ್ಮ ವೈಫಲ್ಯಗಳನ್ನು ಮುಚ್ಚಿಡಲು ಹಳೆಯ ವಿಚಾರಗಳನ್ನು ಕೆದಕುತ್ತಿದ್ದೀರಿ. ಕಳೆದ 10 ವರ್ಷಗಳಲ್ಲಿ ದೇಶದ 140 ಕೋಟಿ ಜನರಿಗೆ ನೀವು ಅಘೋಷಿತ ತುರ್ತು ಪರಿಸ್ಥಿತಿಯನ್ನು ಅನುಭವಿಸುವಂತೆ ಮಾಡಿದ್ದೀರಿ’ ಎಂದಿದ್ದಾರೆ. ಜತೆಗೆ ಇಂದು ಸಹಮತ, ಸಹಕಾರದ ಬಗ್ಗೆ ಮಾತನಾಡುವ ನೀವು ನೋಟ್ ಬ್ಯಾನ್, ಲಾಕ್‌ಡೌನ್, ಪ್ರತಿಮೆ ಸ್ಥಳಾಂತರ, 146 ಸಂಸದರ ಅಮಾನತು ಮಾಡುವಾಗ ಸಹಮತವನ್ನು ಕೇಳಲಿಲ್ಲವೇಕೆ ಎಂದು ಪ್ರಶ್ನಿಸಿದ್ದಾರೆ. ಮತ್ತೂಂದೆಡೆ ಮಣಿಪುರದಲ್ಲಿ ಸಂಘರ್ಷ, ನೀಟ್ ಪರೀಕ್ಷೆ ಪತ್ರಿಕೆ ಸೋರಿಕೆ, ನಿರುದ್ಯೋಗ, ರೈತ ಪ್ರತಿಭಟನೆಗಳಂಥ ತುರ್ತು ಪರಿಸ್ಥಿತಿ ಬಗ್ಗೆ ಮೋದಿ ತುಟಿ ಬಿಚ್ಚುವುದಿಲ್ಲ ಏಕೆ ಎಂದು ಶರದ್ ಪವಾರ್ ನೇತೃತ್ವದ ಎನ್‌ಸಿಪಿ ಪ್ರಶ್ನಿಸಿದೆ