Advertisement

ಕೆಲಸ ಮಾಡಲು ಇಷ್ಟವಿಲ್ಲದವರು ಬಿಟ್ಟು ಹೋಗಿ

01:06 AM Aug 28, 2019 | Lakshmi GovindaRaj |

ಬೆಂಗಳೂರು: “ಯಾರಿಗೆ ಕರ್ನಾಟಕದಲ್ಲಿ ಕೆಲಸ ಮಾಡಲು ಇಷ್ಟವಿಲ್ಲವೋ ಅವರು ತಾವಾಗಿಯೇ ವರ್ಗಾವಣೆ ಪಡೆದು, ಮನಬಂದಲ್ಲಿಗೆ ಹೋಗುವುದು ಉತ್ತಮ..’ ಇದು ರೈಲ್ವೆ ಅಧಿಕಾರಿಗಳು ಮತ್ತು ನೌಕರರಿಗೆ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್‌ ಅಂಗಡಿ ನೀಡಿದ ಖಡಕ್‌ ಎಚ್ಚರಿಕೆ. ಬೈಯಪ್ಪನಹಳ್ಳಿ 3ನೇ ಕೋಚಿಂಗ್‌ ಟರ್ಮಿನಲ್‌ ಕಾಮಗಾರಿ ಪರಿಶೀಲಿಸಿದ ನಂತರ ಸುದ್ದಿಗೋಷ್ಠಿಯಲ್ಲಿ ಅವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

Advertisement

“ಎರಡು ವರ್ಷಗಳ ಹಿಂದೆಯೇ ಪೂರ್ಣಗೊಳ್ಳಬೇಕಿದ್ದ ಬೈಯಪ್ಪನಹಳ್ಳಿ 3ನೇ ಕೋಚಿಂಗ್‌ ಟರ್ಮಿನಲ್‌ ಕಾಮಗಾರಿ ಇನ್ನೂ ಆಗಿಲ್ಲ. ಪ್ರಗತಿ ಆಗಿದೆ ಎಂದು ಹೇಳಲಿಕ್ಕೂ ಆಗದ ರೀತಿಯಲ್ಲಿ ಈ ಕಾಮಗಾರಿ ನಡೆಯುತ್ತಿದೆ. ಮೇಲಧಿಕಾರಿಗಳೇ ಹೇಳುವಂತೆ ಉದ್ದೇಶಿತ ಈ ಯೋಜನೆಗೆ ರಾಜ್ಯ ಸರ್ಕಾರದಿಂದ ಯಾವುದೇ ಅಡತಡೆಗಳೂ ಇಲ್ಲ. ಆದಾಗ್ಯೂ ಯಾಕೆ ಈ ನಿರಾಸಕ್ತಿ? ಕರ್ನಾಟಕದಲ್ಲಿ ಕೆಲಸ ಮಾಡಲು ಇಷ್ಟವಿಲ್ಲದವರು ತಮಗೆ ಬೇಕಾದಲ್ಲಿ ವರ್ಗಾವಣೆ ತೆಗೆದುಕೊಂಡು ಹೋಗುವುದು ಉತ್ತಮ’ ಎಂದು ಎಚ್ಚರಿಸಿದರು.

“ನಾನು ನಿಮಗೆ (ಸಂಬಂಧಪಟ್ಟ ರೈಲ್ವೆ ಅಧಿಕಾರಿಗಳಿಗೆ) ಆದೇಶವನ್ನೂ ನೀಡಬಹುದು. ಆದರೆ, ಎಚ್ಚರಿಕೆಯನ್ನು ಮಾತ್ರ ನೀಡುತ್ತಿದ್ದೇನೆ. 2020ರ ಮಾರ್ಚ್‌ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳಿಸಬೇಕು. ಇದಕ್ಕಾಗಿ ಹಗಲು-ರಾತ್ರಿ ಕೆಲಸ ಮಾಡಬೇಕು. ಯಾವುದೇ ಕಾರಣಕ್ಕೂ ಮತ್ತೆ ಗಡುವು ವಿಸ್ತರಣೆ ಮಾಡಕೂಡದು. ಹಿಂದೆ ಏನಾಯ್ತು ಎಂಬುದರ ಪೋಸ್ಟ್‌ ಮಾರ್ಟಮ್‌ ಮಾಡಲು ಹೋಗುವುದಿಲ್ಲ. ನಿತ್ಯ ಈ ಕಾಮಗಾರಿಯ ಪ್ರಗತಿ ಬಗ್ಗೆ ನನಗೆ ರೈಲ್ವೆ ಬೆಂಗಳೂರು ವಿಭಾಗೀಯ ವ್ಯವಸ್ಥಾಪಕರು ಮಾಹಿತಿ ನೀಡಬೇಕು’ ಎಂದೂ ಸೂಚಿಸಿದರು.

“ಶ್ರೇಷ್ಠ ಎಂಜಿನಿಯರ್‌ ಸರ್‌ಎಂ. ವಿಶ್ವೇಶ್ವರಯ್ಯ ಅವರ ನಾಡು ಇದು. ಈ ಬೈಯಪ್ಪನಹಳ್ಳಿ ಮೂಲಕ ಹಾದುಹೋದ ರೈಲು ಮಾರ್ಗವು ಆ ಮಹಾನುಭಾವ ಹುಟ್ಟಿದ ಊರಿಗೇ (ಚಿಕ್ಕಬಳ್ಳಾಪುರ) ಹೋಗುತ್ತದೆ. ಅದಕ್ಕಾಗಿಯಾದರೂ ತ್ವರಿತಗತಿಯಲ್ಲಿ ದಕ್ಷತೆಯಿಂದ ಕಾಮಗಾರಿ ಪೂರ್ಣಗೊಳಿಸುವ ಮೂಲಕ ವಿಶ್ವೇಶ್ವರಯ್ಯ ಅವರಿಗೆ ಗೌರವ ಸಲ್ಲಿಸಿ. ಅದರೊಂದಿಗೆ ಪ್ರಯಾಣಿಕರಿಗೂ ಅನುಕೂಲ ಮಾಡಿಕೊಡಿ’ ಎಂದು ತೀಕ್ಷ್ಣವಾಗಿ ಹೇಳಿದರು.

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ ನಗರದ ಹೃದಯಭಾಗವಾಗಿದ್ದರೂ, ಎಲ್ಲ ರೈಲುಗಳು ಕಾರ್ಯಾಚರಣೆ ಆರಂಭಿಸುವುದು ಇದೇ ಬೈಯಪ್ಪನಹಳ್ಳಿಯಿಂದ. ಈ ನಿಟ್ಟಿನಲ್ಲಿ 3ನೇ ಕೋಚಿಂಗ್‌ ಟರ್ಮಿನಲ್‌ ತುಂಬಾ ಮುಖ್ಯವಾದುದು. ಆದ್ಯತೆ ಮೇರೆಗೆ ಇದನ್ನು ಪೂರ್ಣಗೊಳಿಸಲಾಗುವುದು. ನಿಗದಿತ ಅವಧಿಯಲ್ಲಿ ಕೆಲಸ ಮುಗಿದ ಮೇಲೆಯೇ ನಾನು ನಿಮ್ಮ (ಜನರ) ಬಳಿ ಬರುತ್ತೇನೆ’ ಎಂದೂ ರೈಲ್ವೆ ಖಾತೆ ರಾಜ್ಯ ಸಚಿವರು ಭರವಸೆ ನೀಡಿದರು.

Advertisement

ಕಾಮಗಾರಿಯ ಸದ್ಯದ ಸ್ಥಿತಿ ಬಗ್ಗೆ ಪ್ರಶ್ನಿಸಿದಾಗ, “ಪ್ರಗತಿ ಎಷ್ಟರಮಟ್ಟಿಗೆ ಆಗಿದೆ ಎಂಬುದು ನಿಮ್ಮ ಕಣ್ಮುಂದೆಯೇ ಇದೆ. ಪ್ರಗತಿ ಆಗಿದೆ ಎಂಬುದನ್ನು ಹೇಳಲಿಕ್ಕೂ ಆಗಲ್ಲ. ಒಟ್ಟಾರೆ 192 ಕೋಟಿ ರೂ.ಗಳಲ್ಲಿ ಈವರೆಗೆ 70 ಕೋಟಿ ಖರ್ಚಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು. ಸುದ್ದಿಗೋಷ್ಠಿಯಲ್ಲಿ ಸಂಸದ ಪಿ.ಸಿ. ಮೋಹನ್‌, ಶಾಸಕ ಎಸ್‌. ರಘು, ನೈರುತ್ಯ ರೈಲ್ವೆ ಪ್ರಧಾನ ಎಂಜಿನಿಯರ್‌ ಎ.ಕೆ. ಸಿಂಗ್‌, ಬೆಂಗಳೂರು ರೈಲ್ವೆ ವಿಭಾಗೀಯ ವ್ಯವಸ್ಥಾಪಕ ಅಶೋಕ್‌ ಕುಮಾರ್‌ ವರ್ಮ ಉಪಸ್ಥಿತರಿದ್ದರು.

ಏನೇನು ಬರಲಿದೆ?: ವಿಶ್ವದರ್ಜೆಯ ಈ ಟರ್ಮಿನಲ್‌ನಲ್ಲಿ 4,200 ಚದರ ಮೀ.ನಲ್ಲಿ ರೈಲು ನಿಲುಗಡೆಗೆ ಶೆಲ್ಟರ್‌, ಲಾಬಿ ಕಾಂಕೋರ್ಸ್‌ ಬರಲಿದ್ದು, 900 ಚದರ ಮೀಟರ್‌ ಲಾಬಿಯು ಸಂಪೂರ್ಣ ಹವಾನಿಯಂತ್ರಿತ ಆಗಿರಲಿದೆ. 24 ಬೋಗಿಗಳನ್ನು ನಿಲುಗಡೆ ಮಾಡಬಹುದಾದ ಏಳು ಪ್ಲಾಟ್‌ಫಾರಂಗಳು, 2 ಸಬ್‌ವೇಗಳು, ನಿತ್ಯ ನಾಲ್ಕು ಲಕ್ಷ ಲೀ. ಸಾಮರ್ಥ್ಯದ ಕೊಳಚೆ ನೀರನ್ನು ಸಂಸ್ಕರಣೆ ಮಾಡುವ ಘಟಕ, 22 ಸಾವಿರ ಚದರ ಮೀಟರ್‌ ಪ್ರದೇಶದಲ್ಲಿ ಮಳೆ ನೀರು ಕೊಯ್ಲು ವ್ಯವಸ್ಥೆ, ಫ‌ುಡ್‌ ಪ್ಲಾಜಾ, ಕಾರು ನಿಲುಗಡೆ ವ್ಯವಸ್ಥೆ, ಲ್ಯಾಂಡ್‌ಸ್ಕೇಪ್‌, 100 ಅಡಿ ಉದ್ದದ ರಾಷ್ಟ್ರೀಯ ಧ್ವಜದ ಸ್ಮಾರಕ ಮತ್ತಿತರ ವ್ಯವಸ್ಥೆ ಇಲ್ಲಿ ಬರಲಿದೆ.

ಯೋಜನೆ ಕುರಿತು…
* 2015-16ರಲ್ಲಿ ಬೈಯಪ್ಪನಹಳ್ಳಿ 3ನೇ ಕೋಚಿಂಗ್‌ ಟರ್ಮಿನಲ್‌ ನಿರ್ಮಾಣ ಯೋಜನೆ ಮಂಜೂರು
* 152 ಕೋಟಿ ರೂ. ಆರಂಭದಲ್ಲಿದ್ದ ಯೋಜನಾ ವೆಚ್ಚ
* 192 ಕೋಟಿ ರೂ. ಪ್ರಸ್ತುತ ಯೋಜನಾ ವೆಚ್ಚ (ಮೂಲಸೌಕರ್ಯಕ್ಕಾಗಿ ಹೆಚ್ಚುವರಿ 40 ಕೋಟಿ ರೂ. ನೀಡಲಾಯಿತು)
* 70 ಕೋಟಿ ರೂ. ಈವರೆಗೆ ಆದ ಖರ್ಚು
* ಶೇ. 40ರಷ್ಟು ಕಾಮಗಾರಿ ಪೂರ್ಣ
* 2020ರ ಮಾರ್ಚ್‌ ಕಾಮಗಾರಿ ಪೂರ್ಣಗೊಳಿಸಲಿರುವ ಡೆಡ್‌ಲೈನ್‌

Advertisement

Udayavani is now on Telegram. Click here to join our channel and stay updated with the latest news.

Next