ಅಹಮದಾಬಾದ್: ವಿರೋಧ ಪಕ್ಷದಲ್ಲಿ ತಮ್ಮನ್ನು ನಿಂದಿಸುವ ಪೈಪೋಟಿ ನಡೆಯುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಗುಜರಾತ್‌ನ ಪಂಚಮಹಲ್ ಜಿಲ್ಲೆಯ ಕಲೋಲ್ ಪಟ್ಟಣದಲ್ಲಿ ಗುರುವಾರ ಚುನಾವಣಾ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ತನ್ನ ವಿರುದ್ಧ ಯಾರು ಹೆಚ್ಚು ನಿಂದನೀಯ ಪದಗಳನ್ನು ಬಳಸಬಹುದೆಂದು ಕಾಂಗ್ರೆಸ್ ನಾಯಕರು ತಮ್ಮಲ್ಲೇ ಜಗಳವಾಡುತ್ತಿದ್ದಾರೆ. ಮೋದಿಯವರಿಗೆ ಯಾರು ಹೆಚ್ಚು ನಿಂದನೀಯ ಪದಗಳನ್ನು ಬಳಸುತ್ತಾರೆ ಎಂಬ ಪೈಪೋಟಿ ಕಾಂಗ್ರೆಸ್ ನಾಯಕರಲ್ಲಿದೆ’ ಎಂದರು.
‘ರಾಮನ ಅಸ್ತಿತ್ವವನ್ನು ಎಂದಿಗೂ ನಂಬದವರು ಈಗ ರಾಮಾಯಣದಿಂದ ರಾಕ್ಷಸ ರಾಜ ‘ರಾವಣ’ನನ್ನು ತಂದಿದ್ದಾರೆ. ನನಗೆ ಆಶ್ಚರ್ಯವಾಗಿದೆ, ನನಗೆ ಇಂತಹ ಕಟುವಾದ ಪದಗಳನ್ನು ಬಳಸಿದ ನಂತರ ಅವರು ಎಂದಿಗೂ ಪಶ್ಚಾತ್ತಾಪ ಪಡಲಿಲ್ಲ, ಕ್ಷಮೆಯಾಚಿಸುವ ಬಗ್ಗೆ ಮರೆತುಬಿಡುತ್ತಾರೆ’ ಎಂದರು.
‘ನಾನು ಖರ್ಗೆ ಅವರನ್ನು ಗೌರವಿಸುತ್ತೇನೆ. ಅವರು ಅವರಿಗೆ ಏನು ಹೇಳಬೇಕು ಅನ್ನಿಸಿದ್ದನ್ನು ಹೇಳಲಿ. ಗುಜರಾತ್ ರಾಮ ಭಕ್ತರ ನಾಡು ಎನ್ನುವುದು ಕಾಂಗ್ರೆಸ್ ಪಕ್ಷಕ್ಕೆ ತಿಳಿದಿಲ್ಲ. ಈ ರಾಮ ಭಕ್ತರ ನಾಡಿನಲ್ಲಿ ಅವರು ಮೋದಿ ನೂರು ತಲೆಯುಳ್ಳ ರಾವಣ ಎಂದು ಹೇಳಿದ್ದಾರೆ’ ಎಂದು ಬಲವಾದ ತಿರುಗೇಟು ನೀಡಿದರು.
ಖರ್ಗೆ ಅವರು ಸೋಮವಾರ“ಪ್ರಧಾನಿ ಎಲ್ಲಾ ಚುನಾವಣೆಗಳಲ್ಲಿ ತಮ್ಮ ಮುಖವನ್ನು ತೋರಿಸಿ ಮತ ಕೇಳುತ್ತಾರೆ.ಅವರು ರಾವಣನಂತೆ 100 ತಲೆಯುಳ್ಳವರು” ಎಂದಿದ್ದರು.