Advertisement

ವಿಷಯ ತಿಳಿಯದೆ ಬಂದವರು ಬರಿಗೈಯಲ್ಲೇ ವಾಪಸು

11:11 PM Jun 22, 2019 | Team Udayavani |

ಮಹಾನಗರ: ರಾಜ್ಯ ಸರಕಾರಿ ನೌಕರರಿಗೆ ತಿಂಗಳ ನಾಲ್ಕನೇ ಶನಿವಾರ ಸರಕಾರ ರಜೆ ಘೋಷಿಸಿರುವುದರಿಂದ ಜೂ. 22ರಂದು (ಶನಿವಾರ) ಸರಕಾರಿ ಕಚೇರಿಗಳಲ್ಲಿ ಎಲ್ಲ ವಿಭಾಗಗಳು ಬಂದ್‌ ಆಗಿದ್ದವು. ಆದರೆ, ಸರಕಾರದ ನೂತನ ಆದೇಶದ ಬಗ್ಗೆ ತಿಳಿಯದೇ ಸಾರ್ವಜನಿಕರು ತಮ್ಮ ಅಗತ್ಯ ಕೆಲಸಗಳಿಗಾಗಿ ಸರಕಾರಿ ಕಚೇರಿಗಳಿಗೆ ಬಂದು ಬರಿಗೈಯಲ್ಲೇ ವಾಪಸಾಗಬೇಕಾಯಿತು.

Advertisement

ಈವರೆಗೆ ಕೇಂದ್ರ ಸರಕಾರಿ ನೌಕರರಿಗೆ ಎರಡನೇ ಮತ್ತು ನಾಲ್ಕನೇ ಶನಿವಾರ ರಜೆ ಇದ್ದರೆ, ರಾಜ್ಯ ಸರಕಾರಿ ನೌಕರರಿಗೆ ತಿಂಗಳ ಎರಡನೇ ಶನಿವಾರ ಮಾತ್ರ ರಜೆ ನೀಡಲಾಗುತ್ತಿತ್ತು. ಆದರೆ, ಈಗ ರಾಜ್ಯ ಸರಕಾರಿ ನೌಕರರಿಗೂ ಪ್ರತಿ ತಿಂಗಳ ನಾಲ್ಕನೇ ಶನಿವಾರ ರಜೆ ನೀಡುವುದಾಗಿ ಇತ್ತೀಚೆಗೆ ರಾಜ್ಯ ಸರಕಾರ ಘೋಷಿಸಿತ್ತು. ಅದರಂತೆ ಜೂನ್‌ ತಿಂಗಳ ನಾಲ್ಕನೇ ಶನಿವಾರವಾದ ಜೂ. 22ರಂದು ಸರಕಾರಿ ಕಚೇರಿಗಳಿಗೆ ಮೊದಲ ರಜೆ. ಅಧಿಕಾರಿಗಳು, ಸಿಬಂದಿ ನಾಲ್ಕನೇ ಶನಿವಾರ ರಜೆ ಲಭಿಸಿರುವುದಕ್ಕೆ ಸಂತಸಗೊಂಡರೆ, ಇತ್ತ ಸಾರ್ವಜನಿಕರಿಗೆ ರಜೆಯ ಬಗ್ಗೆ ತಿಳಿಯದೇ, ಸರಕಾರಿ ಕಚೇರಿಗಳತ್ತ ಬೆಳಗ್ಗಿನಿಂದಲೇ ದೌಡಾಯಿಸುತ್ತಿದ್ದರು. ಈ ಬಗ್ಗೆ ತಿಳಿದುಕೊಳ್ಳಲು ‘ಉದಯವಾಣಿ-ಸುದಿನ’ ವಿವಿಧ ಕಚೇರಿಗಳಿಗೆ ತೆರಳಿದಾಗ ಬಹುತೇಕ ಕಚೇರಿಗಳಲ್ಲಿ ಬೆಳಗ್ಗೆ ಹೊತ್ತಿನಲ್ಲಿ ಜನ ಬಂದು ವಾಪಸ್ಸಾಗುತ್ತಿದ್ದರು. ಮಧ್ಯಾಹ್ನದ ಬಳಿಕ ಜನ ಇರಲಿಲ್ಲ.

ತಿಂಗಳ ಎರಡನೇ ಶನಿವಾರ ಸರಕಾರಿ ಕಚೇರಿಗಳಿಗೆ ರಜೆ ಎಂಬುದು ಸಾರ್ವಜನಿಕರಿಗೆ ತಿಳಿದಿರುವುದರಿಂದ ಅಂದು ಯಾರೂ ಬರುವುದಿಲ್ಲ. ಆದರೆ, ನಾಲ್ಕನೇ ಶನಿವಾರ ಇದು ಮೊದಲ ರಜೆಯಾದ್ದರಿಂದ ಮಾಹಿತಿ ಇಲ್ಲದೆ ಜನ ಆಗಮಿಸಿದ್ದಾರೆ. ಆಧಾರ್‌ ಕಾರ್ಡ್‌ ತಿದ್ದುಪಡಿ, ರೇಷನ್‌ ಕಾರ್ಡ್‌ ಮಾಡಿಸಿಕೊಳ್ಳಲು ಬಂದವರೇ ಅಧಿಕವಿದ್ದರು ಎನ್ನುತ್ತಾರೆ ಜಿಲ್ಲಾಧಿಕಾರಿ ಕಚೇರಿಯ ಸಿಬಂದಿಯೋರ್ವರು.

ದ.ಕ. ಜಿ.ಪಂ. ಕಚೇರಿಯಲ್ಲಿ ಅಗತ್ಯದ ಕೆಲಸವನ್ನು ನಿರ್ವಹಿಸಲು ಕೆಲವು ಇಲಾಖೆಗಳ ಅಧಿಕಾರಿಗಳು, ಸಿಬಂದಿ ಆಗಮಿಸಿದ್ದರು. ಬೆಳಗ್ಗೆ ಹೊತ್ತಿನಲ್ಲಿ ಕೆಲವು ಮಂದಿ ಆಗಮಿಸಿದ್ದರು. ಬಳಿಕ ರಜೆ ಎಂದು ತಿಳಿಸಿದ ಮೇಲೆ ಹಿಂದಿರುಗಿದರು ಎಂದು ಸಿಬಂದಿ ಪ್ರತಿಕ್ರಿಯಿಸಿದರು.

ಹಂಪನಕಟ್ಟೆಯಲ್ಲಿರುವ ಮಿನಿ ವಿಧಾನ ಸೌಧಕ್ಕೆ ಬೆಳಗ್ಗೆ ಸಾರ್ವಜನಿಕರು ಆಗಮಿಸಿದ್ದರು. ಆದರೆ, ಮಿನಿ ವಿಧಾನಸೌಧವನ್ನು ಒಳಪ್ರವೇಶಿಸುವಲ್ಲಿ ‘ಕಚೇರಿಗೆ ರಜೆ’ ಎಂದು ಫಲಕ ಹಾಕಲಾಗಿದೆ. ಇದನ್ನು ನೋಡಿ ಜನ ವಾಪಸಾಗುತ್ತಿದ್ದರು. ಇಲ್ಲಿಯೂ ಕೆಲವು ಅಧಿಕಾರಿಗಳು, ಸಿಬಂದಿ ತಮ್ಮ ಉಳಿಕೆ ಕೆಲಸ ಮಾಡುವುದಕ್ಕಾಗಿ ಬಂದಿದ್ದರು. ನ್ಯಾಯಾಲಯ ಸಂಬಂಧಿ ಕೆಲಸಗಳು ಎಂದಿನಂತೆಯೇ ಶನಿವಾರವೂ ನಡೆದವು.

Advertisement

ತಾ. ಪಂ. ಕಚೇರಿಯಲ್ಲಿ ಬಾಗಿಲಿಗೆ ಬೀಗ ಜಡಿಯಲಾಗಿದ್ದು, ಸಿಬಂದಿ ಬಂದಿ ರಲಿಲ್ಲ. ಪಾಲಿಕೆಯಲ್ಲಿಯೂ ಬೆಳಗ್ಗೆ ಸಾರ್ವಜನಿಕರು ಆಗಮಿಸಿ ರಜೆ ಎಂದು ಹಿಂದಿ ರುಗಿದ್ದಾರೆ. ಕೆಲವು ಸಿಬಂದಿ ಆಗಮಿಸಿ ತಮ್ಮ ಕೆಲಸದಲ್ಲಿ ತಲ್ಲೀನರಾಗಿದ್ದರು.

ರಜೆ ಎಂದು ಕಳುಹಿಸಿದೆ
ಪ್ರತಿದಿನ ಜನಜಂಗುಳಿಯಿಂದ ತುಂಬಿರುತ್ತಿದ್ದ ಜಿಲ್ಲಾಧಿಕಾರಿ ಕಚೇರಿ ಶನಿವಾರ ಬಿಕೋ ಎನ್ನುತ್ತಿತ್ತು. ಡಿಸಿ ಕಚೇರಿ ವಾಚ್ಮೆನ್‌ ಟಿಪ್ಪು ಸುಲ್ತಾನ್‌ ಹೇಳುವ ಪ್ರಕಾರ, ಬೆಳಗ್ಗೆ ವೇಳೆಗೆ ಕೆಲವು ಸಾರ್ವಜನಿಕರು ತಮ್ಮ ಕೆಲಸಗಳಿಗಾಗಿ ಕಚೇರಿಗೆ ಬಂದಿದ್ದರು. ಅವರಿಗೆಲ್ಲ ಇವತ್ತು ರಜೆ ಎಂಬುದನ್ನು ತಿಳಿಸಿ ವಾಪಾಸು ಕಳುಹಿಸಿದೆ ಎಂದರು. ಡಿಸಿ ಕಚೇರಿಯ ಜಿಲ್ಲಾ ಖಜಾನೆಯ ಬಾಗಿಲು ತೆರೆದಿದ್ದರೆ, ಉಳಿದಂತೆ ಯಾವುದೇ ಇಲಾಖೆಗಳ ಕಚೇರಿ ಬಾಗಿಲು ತೆರೆದಿರಲಿಲ್ಲ. ಕಚೇರಿ ಒಳಗೆ ಪ್ರವೇಶಿಸುವ ಗೇಟ್ನ್ನು ಕೂಡ ಮುಚ್ಚಲಾಗಿತ್ತು.

ಮೂಲ್ಕಿ: ತೊಂದರೆಯಾಗಿಲ್ಲ
ಮೂಲ್ಕಿ:
ಮೂಲ್ಕಿ ನಗರ ವ್ಯಾಪ್ತಿಯ ಕಂದಾಯ ಇಲಾಖೆ ಮತ್ತು ನ.ಪಂ. ಮತ್ತು ಸಬ್‌ ರಿಜಿಸ್ಟ್ರಾರ್‌ ಮುಂತಾದ ಸರಕಾರಿ ಕಚೇರಿಗಳು ಮುಚ್ಚಿರುವುದರಿಂದ ಸಾರ್ವ ಜನಿಕರಿಗೆ ಯಾವುದೇ ತೊಂದರೆಯಾಗಿಲ್ಲ.

ಬಾಕಿ ಕೆಲಸಗಳಿಗಾಗಿ ತೆರೆದ ಕೊಂಡ ಕೆಲವು ಕಚೇರಿಗಳು
ಮೂಡುಬಿದಿರೆ:
ತಾಲೂಕಿನಲ್ಲಿ ಸರಕಾರಿ ಕಚೇರಿಗಳಲ್ಲಿ ನಾಗರಿಕರ ಸೇವೆಗೆ ಅವಕಾಶ ಇಲ್ಲದಿದ್ದರೂ ಬಾಕಿ ಉಳಿದಿದ್ದ ಕೆಲಸಗಳನ್ನು ಪೂರ್ಣಗೊಳಿಸಲು ಸಿಬಂದಿ ಶನಿವಾರ ಕಚೇರಿಗೆ ಹಾಜರಾಗಿದ್ದರು. ಹೊರಾಂಗಣ ಕಾಮಗಾರಿಗಳೂ ನಡೆದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆಧಾರ್‌ ತಿದ್ದುಪಡಿಗೆ ಬಂದವರು

ತಿಂಗಳ ಎರಡನೇ ಶನಿವಾರ ಸರಕಾರಿ ಕಚೇರಿಗಳಿಗೆ ರಜೆ ಎಂಬುದು ಸಾರ್ವಜನಿಕರಿಗೆ ತಿಳಿದಿರುವುದರಿಂದ ಅಂದು ಯಾರೂ ಬರುವುದಿಲ್ಲ. ಆದರೆ, ನಾಲ್ಕನೇ ಶನಿವಾರ ಇದು ಮೊದಲ ರಜೆಯಾದ್ದರಿಂದ ಮಾಹಿತಿ ಇಲ್ಲದೆ ಜನ ಆಗಮಿಸಿದ್ದಾರೆ. ಆಧಾರ್‌ ಕಾರ್ಡ್‌ ತಿದ್ದುಪಡಿ, ರೇಷನ್‌ ಕಾರ್ಡ್‌ ಮಾಡಿಸಿಕೊಳ್ಳಲು ಬಂದವರೇ ಅಧಿಕವಿದ್ದರು ಎನ್ನುತ್ತಾರೆ ಜಿಲ್ಲಾಧಿಕಾರಿ ಕಚೇರಿಯ ಸಿಬಂದಿಯೋರ್ವರು.
ಲೋಪ ಸರಿಪಡಿಸಲು ಬಂದಿದ್ದೆ

ನಾಲ್ಕನೇ ಶನಿವಾರ ಸರಕಾರಿ ಕಚೇರಿಗಳಿಗೆ ರಜೆ ಇರುವುದು ತಿಳಿದಿರಲಿಲ್ಲ. ನಗರದ ಖಾಸಗಿ ಕಾಲೇಜಿನಲ್ಲಿ ಓದುತ್ತಿರುವ ಮಗನ ಶಾಲಾ ಸರ್ಟಿಫಿಕೇಟ್‌ನಲ್ಲಿದ್ದ ಲೋಪಗಳನ್ನು ಸರಿಪಡಿಸಬೇಕಿತ್ತು. ಅದಕ್ಕಾಗಿ ಜಿಲ್ಲಾಧಿಕಾರಿ ಕಚೇರಿಗೆ ಬಂದಿದ್ದೆ. ಇನ್ನು ಸೋಮವಾರ ಮತ್ತೆ ಬರಬೇಕಿದೆ.
– ಸುಮನಾ ಮಂಜೇಶ್ವರ, ಡಿಸಿ ಕಚೇರಿಗೆ ಬಂದವರು
Advertisement

Udayavani is now on Telegram. Click here to join our channel and stay updated with the latest news.

Next