ಚಿಂಚೋಳಿ: ತಾಲೂಕಿನ ರುಮ್ಮನಗೂಡ ಗ್ರಾಪಂನ 10 ಸ್ಥಾನಗಳಿಗೆ ಬುಧವಾರ ನಡೆದ ಮತದಾನ ಸಂದರ್ಭದಲ್ಲಿ ಸಾಸರಗಾಂವ ಗ್ರಾಮದಲ್ಲಿ ಮತದಾನ ಕೇಂದ್ರ 4ರಲ್ಲಿ ನೂಕುನುಗ್ಗಲು ಉಂಟಾಗಿದ್ದರಿಂದ ಪೊಲೀಸರು ಲಾಠಿ ಪ್ರಹಾರ ನಡೆಸಿದರು.
ಲಾಠಿ ಪ್ರಹಾರದಲ್ಲಿ ಸಂತೋಷ ಮಾಣಿಕಪ್ಪ ನಾಟೀಕಾರ, ಬಸಪ್ಪ ವಿಠ್ಠಲ ಜಮಾದಾರ, ವಹೀದ ಅಹೆಮದ್ ಪಟೇಲ್, ಜಗಪ್ಪ ಭೀಮಸೇನ ನಾಟೀಕಾರ ಹಾಗೂ ಮತ್ತಿತರರು ತೀವ್ರ ಗಾಯಗೊಂಡಿದ್ದಾರೆ. ಸಾಸರಗಾಂವ ಗ್ರಾಮದ ಮತಗಟ್ಟೆ 4ರಲ್ಲಿ ಮಧ್ಯಾಹ್ನ 12 ಗಂಟೆ ಸುಮಾರಿಗೆ ಮತ ಯಂತ್ರ ಕೆಟ್ಟು ಹೋಗಿದ್ದರಿಂದ ಮತದಾನ ನಿಲ್ಲಿಸಲಾಗಿತ್ತು.
ಹೀಗಾಗಿ ಮತಗಟ್ಟೆ ಅಧಿಕಾರಿಗಳು ಹೆಚ್ಚಿನ ಸಮಯ ನೀಡಲಾಗುವುದು ಎಂದು ತಿಳಿಸಿದ್ದರು. ಸಂಜೆ ವೇಳೆ 200ಕ್ಕೂ ಹೆಚ್ಚು ಮತದಾರರು ಮತದಾನ ಕೇಂದ್ರಕ್ಕೆ ಬಂದಾಗ ಪೋಲಿಸರು ಮತದಾನಕ್ಕೆ ಅವಕಾಶ ನೀಡದೇ ಲಾಠಿ ಪ್ರಹಾರ ಮಾಡಿದ್ದಾರೆ ಎಂದು ಗ್ರಾಪಂ ಮಾಜಿ ಸದಸ್ಯ ಸುಲ್ತಾನ ಪಟೇಲ, ಕಾಶಿಮ ಪಟೇಲ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಂಜೆ 8 ಗಂಟೆ ವರೆಗೂ ಮತದಾನ: ತಾಲೂಕಿನ ಸಾಸರಗಾಂವ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿರುವ ಮತದಾನ ಕೇಂದ್ರ 4ರಲ್ಲಿ ಒಟ್ಟು 1320 ಮತದಾರರಿದ್ದಾರೆ. ಹೀಗಾಗಿ ಮಧ್ಯಾಹ್ನ 4ಗಂಟೆಯಿಂದ ಸಂಜೆ 8 ಗಂಟೆ ವರೆಗೂ ಮತದಾನಕ್ಕೆ ಅವಕಾಶ ನೀಡಲಾಗಿತ್ತು ಎಂದು ಮತಗಟ್ಟೆ ಅಧಿಕಾರಿಗಳು ತಿಳಿಸಿದ್ದಾರೆ.
ಭಾರಿ ಗಲಾಟೆ: ರುಮ್ಮನಗೂಡ ಗ್ರಾಮದಲ್ಲಿ ಹಾಗೂ ತಾಂಡಾದಲ್ಲಿ ಸಂಜೆ 5 ಗಂಟೆ ವರೆಗೆ ಮತದಾನ ನಡೆದಿದೆ. ಆದರೆ ಸಾಸರಗಾಂವ ಗ್ರಾಮದಲ್ಲಿ ಮಾತ್ರ ಪೋಲಿಸರು ಲಾಠಿ ಪ್ರಹಾರ ನಡೆಸಿದ್ದರಿಂದ ಭಾರಿ ಗಲಾಟೆ ನಡೆಯಿತು. ಇದರಿಂದಾಗಿ ಸಂಜೆ 8 ಗಂಟೆವರೆಗೆ ಮತದಾನ ಮುಂದುವರಿಸಲಾಗಿತ್ತು ಎಂದು ಮತಗಟ್ಟೆ ಅಧಿಕಾರಿ ಖುರ್ಷಿದ ಮಾಸ್ಟರ ತಿಳಿಸಿದ್ದಾರೆ.
ರುಮ್ಮನಗೂಡ ಮತದಾನ ಕೇಂದ್ರದಲ್ಲಿ ಸಂಜೆ ವೇಳೆ ಮತದಾನ ನಡೆಯುವಾಗ ವಿದ್ಯುತ್ ದೀಪದ ವ್ಯವಸ್ಥೆ ಸರಿಯಾಗಿ ಮಾಡದೇ ಇರುವುದರಿಂದ ಜನರು ಕತ್ತಲಿನಲ್ಲಿ ಮತದಾನಕ್ಕಾಗಿ ಸಾಲಾಗಿ ನಿಂತುಕೊಂಡಿದ್ದರು. ಅಧಿಕಾರಿಗಳು ಮತದಾರರನ್ನು ನಿರ್ಲಕ್ಷಿಸಿದ್ದಾರೆ ಎಂದು ಗ್ರಾಮದ ಮುಖಂಡ ಕಾಶಿಮ ಪಟೇಲ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸುಲೇಪೇಟ ಸಿಪಿಐ ಡಿ.ಬಿ. ಕಟ್ಟಿಮನಿ, ಎಚ್.ಎಂ. ಇಂಗಳೇಶ್ವರ, ಪಿಎಸ್‌ಐ ರಾಜಶೇಖರ ರಾಠೊಡ ಸೂಕ್ತ ಪೋಲಿಸ್ ಬಂದೋಬಸ್ತ್ ಮಾಡಿದ್ದರು.