ಕಿನ್ನಿಗೋಳಿ: ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಬಾರದು ಹಾಗೂ ಯಾವುದೇ ರೀತಿಯ ತೊಂದರೆ ಆಗಬಾರದು ಎಂಬ ಕಾರಣಕ್ಕಾಗಿ ಕಳೆದ 27 ವರ್ಷಗಳಿಂದ ಇಲ್ಲಿನ ಶಾಲಾ ಮಕ್ಕಳಿಗೆ ಉಚಿತ ಪುಸ್ತಕ ವಿತರಣೆಯನ್ನು
ಮಾಡುತ್ತಿದ್ದೇನೆ ಎಂದು ಕರ್ನಿರೆ ವಿಶ್ವನಾಥ ಶೆಟ್ಟಿ ಹೇಳಿದರು.
ಅವರು ಜು. 2ರಂದು ದಕ್ಷಿಣ ಕನ್ನಡ ಜಿಲ್ಲಾ ಹಿರಿಯ ಪ್ರಾಥಮಿಕ ಶಾಲೆ ಕರ್ನಿರೆ ಇಲ್ಲಿ ಕರ್ನಿರೆ ಫೌಂಡೇಷನ್ ವತಿಯಿಂದ ನಡೆದ ಪುಸ್ತಕ ವಿತರಣಾ ಸಮಾರಂಭದಲ್ಲಿ ಮಾತನಾಡಿದರು. ಸರಕಾರಿ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು ಇಂದು ದೇಶ ವಿದೇಶದಲ್ಲಿ ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದಾರೆ. ವಿದ್ಯಾರ್ಥಿಗಳಲ್ಲಿ ನಿರ್ದಿಷ್ಟ ಗುರಿ ಇದ್ದರೆ ಯಶಸ್ಸಿನ ಗುರಿ ತಲುಪಲು ಸಾಧ್ಯ. ಶಿಕ್ಷಣಕ್ಕೆ ಸಹಕಾರ ನೀಡುವ ಬಗ್ಗೆ ನನ್ನ ತಾಯಿಗೂ ಸಂತಸವಿತ್ತು. ಅವರ ಆಸೆಯಂತೆ ನಿರಂತರ ಶಿಕ್ಷಣಕ್ಕೆ ನೀಡುವ ಸಹಕಾರವನ್ನು ಮುಂದುವರಿಸುತ್ತೇನೆ ಎಂದರು.
ಉದ್ಯಮಿ ಕೆ.ಎಸ್ ಅಶ್ರಪ್ ಮಾತನಾಡಿ, ನಾನು ಇದೇ ಶಾಲೆಯಲ್ಲಿ ಕಲಿತವನು. ತಂದೆ ನನಗೆ ಉತ್ತಮ ಶಿಕ್ಷಣ ಕೊಟ್ಟ ಕಾರಣ ನಮ್ಮಭವಿಷ್ಯವನ್ನು ರೂಪಿಸಲು ಸಾದ್ಯವಾಯಿತು. ತಂದೆ-ತಾಯಿ ಮಕ್ಕಳಿಗೆ ಶಿಕ್ಷಣ ಕೊಟ್ಟರೆ ಅದೇ ದೊಡ್ಡ ಆಸ್ತಿ, ಬೇರೆ ಆಸ್ತಿ ಬೇಡ, ಶಿಕ್ಷಣಕ್ಕೆ ನನ್ನಿಂದ ಯಾವುದೇ ಸಹಕಾರ ನೀಡುತ್ತೇನೆ ಎಂದರು.
ಹರಿಶ್ಚಂದ್ರ ಶೆಟ್ಟಿ ಕರ್ನಿರೆಗುತ್ತು, ಗಂಗಾಗಧರ ಅಮೀನ್, ಮೋಹನ್ ಶೆಟ್ಟಿ, ರವೀಂದ್ರ ಶೆಟ್ಟಿ, ಬಳ್ಕುಂಜೆ ಪಂಚಾಯತ್ ಸದಸ್ಯರಾದ ಪ್ರಶಾಂತ್ ಶೆಟ್ಟಿ, ವನಜಾ ಕೋಟ್ಯಾನ್, ಬಳ್ಕುಂಜೆ ಪಂ.ಮಾಜಿ ಸದಸ್ಯ ಪ್ರಭಾಕರ ಶೆಟ್ಟಿ, ಸಂಪತ್ ಶೆಟ್ಟಿ ಕರ್ನಿರೆಗುತ್ತು , ಹಿರಿಯ ವಿದ್ಯಾರ್ಥಿ ಸಂಘದ ನಿಕಟಪೂರ್ವ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ, ಪ್ರಸಾದ್ ಶೆಟ್ಟಿ, ಉದ್ಯಮಿ ವಿಲ್ಸನ್ ಪೆರ್ನಾಂಡಿಸ್,
ಕೆ.ಎಸ್ ಆಶ್ರಪ್, ಎಸ್ ಡಿ.ಎಂಸಿ ಅಧ್ಯಕ್ಷೆ ಹೇಮಲತಾ ಮತ್ತಿತರರು ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕಿ ಜೂಲೆಟ್ ಲೂವಿಸ್ ಸ್ವಾಗತಿಸಿ, ಸಹ ಶಿಕ್ಷಕ ಸಂತೋಷ್ ನಿರೂಪಿಸಿದರು.