Advertisement

ಸಣ್ಣಗೆ ತಲೆನೋವು, ಆಗಾಗ ಕೆಮ್ಮು

12:46 PM Apr 15, 2020 | mahesh |

ಆಸ್ಪತ್ರೆಗೆ ಹೋಗೋ ಮೊದಲು, ಫೇಸ್‌ಬುಕ್‌ನಲ್ಲಿ ಒಂದು ಪೋಸ್ಟ್ ಹಾಕಿ, ನನ್ನ ಸ್ವಾಭಿಮಾನದ ಬದುಕಿಗೆ ಕಾರಣರಾದ ಎಲ್ಲರಿಗೂ ನಮನಗಳು ಅಂತ ಹೇಳಿ, ಅರಿತೋ ಅರಿಯದೆಯೋ ಮಾಡಿದ ತಪ್ಪುಗಳಿಗೆ ಕ್ಷಮೆಯಾಚಿಸಿ ಹೊರಡಬೇಕು ಅಂದುಕೊಂಡೆ…

Advertisement

ಯುಗಾದಿ ಮರುದಿನ ಸಣ್ಣಗೆ ತಲೆನೋವು, ಗಂಟಲು ಕೆರೆತ. ಮನದಲ್ಲಿ ಸಣ್ಣ ಆತಂಕ. ಆದ್ರೆ, ಆ ಒಂದು ವಾರದ ಕರ್ಫ್ಯೂ ಸಮಯದಲ್ಲಿ ನಾನೆಲ್ಲೂ ಆಚೆ ಹೋಗಿಲ್ಲ ಅನ್ನೋ ಧೈರ್ಯ. ಇದು ಕಾಮನ್‌ ಕೋಲ್ಡ್ ಅಂತ ಸಮಾಧಾನ ಮಾಡಿಕೊಂಡೆ. ಎರಡು ದಿನಕ್ಕೇ ಶೀತ ಜಾಸ್ತಿಯಾಯ್ತು. ರಾತ್ರಿ ನಿದ್ರೆ ಇಲ್ಲ. ಉಸಿರಾಟಕ್ಕೆ ತೊಂದರೆ… ನಾಳೆಯಿಂದ ನಾನೇ ಕ್ವಾರಂಟೈನ್‌ ಆಗಿಬಿಡ್ಲಾ ಅಂತ ಯೋಚಿಸಿದೆ. ಮನೆಯವರೆಲ್ಲಾ, “ಏನೇನೋ ಯೋಚಿಸ್ಬೇಡ. ಹೊರಗೇ ಹೋಗಿಲ್ಲ ನಾವ್ಯಾರೂ’ ಅಂತ ಸಮಾಧಾನಿಸಿದ್ರು. “ನಿಂಗೆ ಜ್ವರ ಇಲ್ಲವಲ್ಲಮ್ಮ. ಕೊರೊನಾದಲ್ಲಿ ಅದೇ ಮುಖ್ಯ ಸೂಚನೆ’ ಅಂದ ಮಗ!

ಆತಂಕದಲ್ಲೇ ದಿನ ಕಳೆಯತೊಡಗಿದೆ. ಬೇರೆ ಇರದೇ ಮನೆಯವರಿಗೆಲ್ಲ ಕಾಯಿಲೆ ಹರಡ್ತಾ ಇದೀನೇನೋ ಎಂಬ ಅಪರಾಧೀ ಭಾವ. ಹತ್ತು ನಿಮಿಷಕ್ಕೊಮ್ಮೆ ಕೈ-ಕಾಲು ತೊಳೆದೆ. ನಾಲ್ಕನೇ ದಿನಕ್ಕೆ ಸಣ್ಣದಾಗಿ ಕೆಮ್ಮು ಶುರು. ಗಾಬರಿಯ ಮಧ್ಯೆಯೇ ಎರಡೂ ಹೊತ್ತು ವಿಷ್ಣು ಸಹಸ್ರನಾಮ, ಜಾಸ್ತಿ ಹೊತ್ತು ಯೋಗ, ಪ್ರಾಣಾಯಾಮ ಮಾಡಿದೆ. ಪದೇಪದೆ ಧನ್ವಂತರಿ ಮಂತ್ರ ಪಠಣ, ಭಗವನ್ನಾಮ ಸ್ಮರಣೆ, ನೆನಪಿಗೆ ಬಂದ ದೇವರನಾಮ ಗಳನ್ನೆಲ್ಲ ಹಾಡಿಕೊಂಡೆ.

ನಾಲ್ಕು ದಿನಕ್ಕೆಲ್ಲ, ದೇಹ ಯಥಾಸ್ಥಿತಿಗೆ ಮರಳಿತು. ಆದರೆ, ಆ ನಾಲ್ಕು ದಿನಗಳಲ್ಲಿ ಮನದಲ್ಲಾದ ತಲ್ಲಣ… ಯಪ್ಪಾ! ಉಸಿರಾಟಕ್ಕೆ ತೊಂದರೆ ಆದ್ರೆ, ಆಸ್ಪತ್ರೆಗೆ ಫೋನ್‌ ಹೋಗುತ್ತೆ. ಆ್ಯಂಬುಲೆನ್ಸ್ ಬರುತ್ತೆ, ಹದಿನಾಲ್ಕು ದಿನದ ಐಸೊಲೇಷನ್‌, ಹೋಗೋವಾಗ ಮನೆಯವರ ಮುಖ ನೋಡದೇ ಹೋಗಬೇಕು, ಯಾಕಂದ್ರೆ ನೋಡಿದರೆ ಅಳು ಬಂದ್ಬಿಡುತ್ತೆ… ಮತ್ತೆ ಅವರಿಗೂ… ತಲೆ ತಗ್ಗಿಸಿ, ಕೈ ಮುಗಿದು ನಡೆದು ಬಿಡಬೇಕು… ಹೋಗೋ ಮೊದಲು, ಫೇಸ್‌ಬುಕ್‌ನಲ್ಲಿ
ಒಂದು ಪೋಸ್ಟ್ ಹಾಕಿ ಹೊರಡಬೇಕು. ನನ್ನ ಸ್ವಾಭಿಮಾನದ ಬದುಕಿಗೆ ಕಾರಣರಾದ ಎಲ್ಲರಿಗೂ ನಮನಗಳು ಅಂತ ಹೇಳಿ, ಅರಿತೋ ಅರಿಯದೆಯೋ ಮಾಡಿದ ತಪ್ಪುಗಳಿಗೆ ಕ್ಷಮೆ ಯಾಚಿಸಿ ಹೊರಡಬೇಕು…

ಥತ್‌… ಹಾಳು ಮನಸ್ಸು ಹೀಗೆಲ್ಲ ಯೋಚಿಸ್ತಾ ಇತ್ತು. ಊಫ್! ಇವತ್ತು ಮೂಗು, ಗಂಟಲು, ಎಲ್ಲ ಯಥಾಸ್ಥಿತಿಗೆ ಮರಳಿದೆ. ಕೆಟ್ಟದನ್ನು ಯೋಚಿಸಿದ ಮನಕ್ಕೆ ಬೈದು ಬುದ್ದಿ ಹೇಳಿದ್ದೀನಿ. ಆದ್ರೂ ಜೀವನದ ಕಡೇದಿನಗಳೇನೋ ಅನ್ನುವ ಭಯ, ಹಲವು ಪಾಠ ಕಲಿಸಿದ್ದು ಸುಳ್ಳಲ್ಲ… ಎಲ್ಲ ಬಿಟ್ಟು ಸದಾ ಭಗವನ್ನಾಮಸ್ಮರಣೆ ಮಾಡಿಸಿದ್ದು ಸುಳ್ಳಲ್ಲ…

Advertisement

ಶೈಲಜಾ, ಮೈಸೂರು

Advertisement

Udayavani is now on Telegram. Click here to join our channel and stay updated with the latest news.

Next