Advertisement

SEP ಸಮಿತಿಗೆ ಥೋರಟ್‌ ಅಧ್ಯಕ್ಷತೆ

11:21 PM Oct 11, 2023 | Team Udayavani |

ಬೆಂಗಳೂರು: ಜನ್ಮ ತಾಳುವುದಕ್ಕೆ ಮುನ್ನವೇ ವಿವಾದವನ್ನು ಗರ್ಭೀಕರಿಸಿಕೊಂಡಿರುವ ರಾಜ್ಯ ಶಿಕ್ಷಣ ನೀತಿ (ಎಸ್‌ಇಪಿ) ಕರಡು ರಚನೆಗೆ ರಾಜ್ಯ ಸರಕಾರ ಕೊನೆಗೂ ಆಯೋಗವನ್ನು ರಚಿಸಿದೆ. ಯುಜಿಸಿ ಮಾಜಿ ಅಧ್ಯಕ್ಷ, ಶಿಕ್ಷಣ ಹಾಗೂ ಆರ್ಥಿಕ ತಜ್ಞ ಪ್ರೊ| ಸುಖದೇವ್‌ ಥೋರಟ್‌ ಅಧ್ಯಕ್ಷತೆಯಲ್ಲಿ 15 ಸದಸ್ಯರನ್ನು ಒಳಗೊಂಡ ಆಯೋಗ ರಚಿಸಲಾಗಿದ್ದು, ಪ್ರೊ| ಯೋಗೇಂದ್ರ ಯಾದವ್‌ ಸೇರಿದಂತೆ 8 ಜನರನ್ನು ಸಲಹೆಗಾರರನ್ನಾಗಿ ನೇಮಿಸಲಾಗಿದೆ.

Advertisement

ಎಸ್‌ಇಪಿ ರಚನೆಗೆ ಸಂಬಂಧಪಟ್ಟಂತೆ ರಾಜ್ಯ ಸರಕಾರ ಬುಧವಾರ ಆದೇಶ ಹೊರಡಿಸಿದೆ. ವರದಿ ಸಲ್ಲಿಕೆಗೆ ಯಾವುದೇ ಕಾಲಮಿತಿ ವಿಧಿಸಿಲ್ಲವಾದರೂ ಡಿಸಿಇಆರ್‌ಟಿ, ಉನ್ನತ ಶಿಕ್ಷಣ ಪರಿಷತ್‌ ಈ ಆಯೋಗಕ್ಕೆ ಅಗತ್ಯವಾದ ಎಲ್ಲ ಸಹಕಾರ ನೀಡುವಂತೆ ಸ್ಪಷ್ಟವಾಗಿ ಆದೇಶಿಸಲಾಗಿದೆ.

ಸದಸ್ಯರು
ಪ್ರೊ| ಸುಖದೇವ್‌ ಥೋರಟ್‌ ಅಧ್ಯಕ್ಷತೆಯ ಈ ಸಮಿತಿಯಲ್ಲಿ ಕೇಂದ್ರ ಶಿಕ್ಷಣ ಇಲಾಖೆ ಮಾಜಿ ಕಾರ್ಯದರ್ಶಿ ಸಂಜಯ್‌ ಕೌಲ್‌, ಬೆಂಗಳೂರು ವಿವಿ ವಿಶ್ರಾಂತ ಕುಲಪತಿ ಪ್ರೊ| ಎಸ್‌.ಜಾಫೆಟ್‌, ಕುವೆಂಪು ವಿ.ವಿ. ವಿಶ್ರಾಂತ ಕುಲಪತಿ ಪ್ರೊ| ಜೋಗನ್‌ ಶಂಕರ್‌, ಕುವೆಂಪು ವಿ.ವಿ. ಮಾಜಿ ಇಂಗ್ಲಿಷ್‌ ಪ್ರಾಧ್ಯಾಪಕ ಪ್ರೊ| ರಾಜೇಂದ್ರ ಚೆನ್ನಿ, ಲೇಖಕ ಡಾ| ನಟರಾಜ್‌ ಬೂದಾಳು, ಶಿಕ್ಷಣ ತಜ್ಞ ಡಾ| ವಿ.ಪಿ.ನಿರಂಜನಾರಾಧ್ಯ, ಬೆಂಗಳೂರು ವಿ.ವಿ. ನಿವೃತ್ತ ಪ್ರಾಧ್ಯಾಪಕ ಡಾ| ಎಂ.ಎಸ್‌.ತಳವಾರ್‌, ಕರ್ನಾಟಕ ಮುಕ್ತ ವಿ.ವಿ. ನಿವೃತ್ತ ಪ್ರಾಧ್ಯಾಪಕ ಡಾ| ಸಂತೋಷ್‌ ನಾಯ್ಕ, ಲೇಖಕಿ ಡಾ| ವಿನಯಾ ಒಕ್ಕುಂದ ಸಹಿತ 15 ಮಂದಿಯನ್ನು ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ. ಉನ್ನತ ಶಿಕ್ಷಣ ಇಲಾಖೆಯ ವಿಶೇಷಾಧಿಕಾರಿ ಡಾ| ಭಾಗ್ಯವಾನ್‌ ಎಸ್‌. ಮುದಿಗೌಡರ್‌ ಅವರನ್ನು ಆಯೋಗದ ಸದಸ್ಯ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ.

ಇದರ ಜತೆ ಹೊಸದಿಲ್ಲಿಯ ಸೆಂಟರ್‌ ಫಾರ್‌ ದಿ ಸ್ಟಡಿ ಆಫ್ ಡೆವಲಪ್ಪಿಂಗ್‌ ಸೊಸೈಟಿಯ ಪ್ರೊ| ಯೋಗೇಂದ್ರ ಯಾದವ್‌, ರಾಜೀವ್‌ ಗಾಂಧಿ ಆರೋಗ್ಯ ವಿ.ವಿ. ವಿಶ್ರಾಂತ ಕುಲಪತಿ ಡಾ| ಎಸ್‌.ಚಂದ್ರಶೇಖರ್‌ ಶೆಟ್ಟಿ, ಅಕ್ಕಮಹಾದೇವಿ ಮಹಿಳಾ ವಿ.ವಿ. ವಿಶ್ರಾಂತ ಕುಲಪತಿ ಪ್ರೊ| ಸಬೀಹಾ ಭೂಮಿಗೌಡ ಸಹಿತ 8 ಮಂದಿಯನ್ನು ಸಲಹೆಗಾರರನ್ನಾಗಿ ನೇಮಕ ಮಾಡಲಾಗಿದೆ.
ಈ ಆದೇಶವು ತತ್‌ಕ್ಷಣದಿಂದಲೇ ಜಾರಿಗೆ ಬರಲಿದ್ದು, ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಆಯೋಗಕ್ಕೆ ಅಗತ್ಯವಾದ ಸಹಕಾರವನ್ನು ನೀಡಬೇಕೆಂದು ಸೂಚಿಸಲಾಗಿದೆ. ಸಾಕ್ಷರತೆ ಮತ್ತು ಶಾಲಾ ಶಿಕ್ಷಣ ಮತ್ತು ಹಾಗೂ ಉನ್ನತ ಶಿಕ್ಷಣ ಇಲಾಖೆಯಿಂದ ಆಯೋಗಕ್ಕೆ ನೋಡಲ್‌ ಅಧಿಕಾರಿ ನೇಮಕ ಮಾಡುವಂತೆಯೂ ಸೂಚಿಸಲಾಗಿದೆ.

ರಾಜ್ಯ ಶಿಕ್ಷಣ ನೀತಿಯ ಕರಡು ಸಿದ್ಧಪಡಿಸಲು ಪ್ರೊ| ಸುಖದೇವ್‌ ಥೋರಟ್‌ ಅಧ್ಯಕ್ಷತೆಯಲ್ಲಿ ರಾಜ್ಯ ಶಿಕ್ಷಣ ನೀತಿ ಸಮಿತಿ ರಚಿಸಲಾಗಿದೆ. ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕತೆ, ವೈಚಾರಿಕತೆ ಬೆಳೆಸುವ ಮತ್ತು ಅವರ ಮನೋವಿಕಾಸಕ್ಕೆ ಅಗತ್ಯವಾದ ಶಿಕ್ಷಣ ನೀಡಲು ಸೂಕ್ತ ಶಿಫಾರಸುಗಳನ್ನು ಈ ಸಮಿತಿ ನೀಡಲಿದೆ ಎಂಬ ಭರವಸೆ ಇದೆ. ರಾಜ್ಯ ಶಿಕ್ಷಣ ನೀತಿ ದೇಶಕ್ಕೆ ಮಾದರಿಯಾಗಿ ಹೊರಹೊಮ್ಮಲಿ ಎಂದು ಹಾರೈಸುತ್ತೇನೆ.
-ಸಿದ್ದರಾಮಯ್ಯ, ಸಿಎಂ

Advertisement

ರಾಜ್ಯದ ಶಿಕ್ಷಣ ನೀತಿಯನ್ನು ದಿಲ್ಲಿಯ ಕಾಣದ ಕೈಗಳು ರೂಪಿಸಲು ಹೊರಟಿವೆ. ಇದು ಕರ್ನಾಟಕದ ದುರಾದೃಷ್ಟ. ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ)ಯನ್ನು ಹೆಮ್ಮೆಯ ಕನ್ನಡಿಗರು ರೂಪಿಸಿದರೆ ರಾಜ್ಯ ಶಿಕ್ಷಣ ನೀತಿಗೆ ದಿಲ್ಲಿಯಿಂದ ತಜ್ಞರನ್ನು ಆಮದು ಮಾಡಿಕೊಂಡಿದ್ದಾರೆ. ಇದು ಮಕ್ಕಳ ಮೇಲೆ ನಿರ್ದಿಷ್ಟ ವಿಚಾರಧಾರೆಯನ್ನು ಹೇರುವ ಪ್ರಯತ್ನವಲ್ಲದೇ ಮತ್ತೇನು ಅಲ್ಲ.
-ಬಿ.ಸಿ.ನಾಗೇಶ್‌, ಮಾಜಿ ಶಿಕ್ಷಣ ಸಚಿವ

 

Advertisement

Udayavani is now on Telegram. Click here to join our channel and stay updated with the latest news.

Next