Advertisement

ಜ|ತೋಂಟದಾರ್ಯ ಮಠದ ಮಹಾರಥೋತ್ಸವ

03:01 PM Apr 17, 2022 | Team Udayavani |

ಗದಗ: ಉತ್ತರ ಕರ್ನಾಟಕದ ಪ್ರಸಿದ್ಧ ಜ|ತೋಂಟದಾರ್ಯ ಮಠದ ಮಹಾರಥೋತ್ಸವ ಶನಿವಾರ ಸಂಜೆ ಮಳೆಯ ಆರ್ಭಟದ ಮಧ್ಯೆಯೂ ಅಪಾರ ಭಕ್ತ ಸಮೂಹದ ಸಮ್ಮುಖದಲ್ಲಿ ಅದ್ಧೂರಿಯಾಗಿ ನೆರವೇರಿತು.

Advertisement

ಶ್ರೀಮಠದ ಪರಂಪರೆಯಂತೆ ಇಲ್ಲಿನ ವೀರನಾರಾಯಣ ದೇವಸ್ಥಾನದ ರಸ್ತೆಯಲ್ಲಿರುವ ಕಳಸಾಪುರ ಶೆಟ್ಟರ್‌ ಮನೆಯಿಂದ ಮಠದ ಪೀಠಾಧಿಪತಿ ಡಾ|ಸಿದ್ಧರಾಮ ಸ್ವಾಮೀಜಿ ಅವರನ್ನು ಸಾಂಪ್ರದಾಯಿಕವಾಗಿ ಕಲಾ ಮೇಳಗಳು, ಮಂಗಳ ವಾದ್ಯಗಳೊಂದಿಗೆ ಮೆರವಣಿಗೆಯಲ್ಲಿ ಶ್ರೀಮಠಕ್ಕೆ ಬರಮಾಡಿಕೊಳ್ಳುವ ಮೂಲಕ ಚಿತ್ತಾ ನಕ್ಷತ್ರದಲ್ಲಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.

ರಥೋತ್ಸವದುದ್ದಕ್ಕೂ ಓಂ ಶ್ರೀ ಗುರುಬಸವ ಲಿಂಗಾಯ ನಮಃ, ಜ|ತೋಂಟದ ಸಿದ್ಧಲಿಂಗಾಯ ನಮಃ, ಜಗಜ್ಯೋತಿ ಬಸವೇಶ್ವರ ಮಹಾರಾಜ್‌ ಕೀ ಜೈ ಎಂಬ ಜಯಘೋಷಗಳು ಮುಗಿಲು ಮುಟ್ಟಿದವು.

ನಾಡಿನ ವಿವಿಧೆಡೆಯಿಂದ ಆಗಮಿಸಿದ್ದ ಭಕ್ತರು, ರಥಕ್ಕೆ ಉತ್ತತ್ತಿ, ಹೂವು ಎಸೆದು ಭಕ್ತಿ ಸಮರ್ಪಿಸಿದರು. ಇದಕ್ಕೂ ಮೊದಲು ಸಾವಿರಾರು ಭಕ್ತರು ಮಠದಲ್ಲಿ ಹಿರಿಯ ಸ್ವಾಮೀಜಿಗಳ ಗದ್ದುಗೆ ದರ್ಶನ ಪಡೆದರು.

ಜಗದ್ಗುರು ಡಾ|ತೋಂಟದ ಸಿದ್ಧರಾಮ ಸ್ವಾಮೀಜಿ ಸಾನ್ನಿಧ್ಯದಲ್ಲಿ ನಡೆದ ಮಹಾ ರಥೋತ್ಸವದಲ್ಲಿ ವಿವಿಧ ಸ್ವಾಮೀಜಿಗಳು ಸೇರಿದಂತೆ ಹರಗುರು ಚರಮೂರ್ತಿಗಳು, ದೆಹಲಿಯ ಜಾಟ್ವಾ ಸಮಾಜದ ಭಕ್ತರು ಪಾಲ್ಗೊಂಡಿದ್ದರು.

Advertisement

ಮಳೆಯಲ್ಲೇ ಶ್ರೀಗಳ ಮೆರವಣಿಗೆ: ಶನಿವಾರ ಬೆಳಗ್ಗೆಯಿಂದ ಬಿರುಬಿಸಲಿನಿಂದ ತಾಪ ಹೆಚ್ಚಿತ್ತು. ಮಧ್ಯಾಹ್ನದ ವೇಳೆಗೆ ಮೋಡ ಕವಿದ ವಾತಾವರಣ ಆವರಿಸಿತ್ತು. ಸಂಜೆ 4 ಗಂಟೆ ವೇಳೆಗೆ ಗುಡುಗು, ಸಿಡಿಲು ಸಹಿತ ಬಿರುಸಿನ ಮಳೆ ಆರಂಭವಾಯಿತು. ಹೀಗಾಗಿ, ಕಳಸಾಪುರ ಶೆಟ್ಟರ್‌ ಮನೆಯಿಂದ ಮೆರವಣಿಗೆ ಕೆಲಕಾಲ ವಿಳಂಬವಾಯಿತು. ಬಳಿಕ ಮಳೆಯಲ್ಲೇ ಪೂಜ್ಯರ ಮೆರವಣಿಗೆ ನಡೆಯಿತು. ಜಿಲ್ಲೆ ಹಾಗೂ ನಾಡಿನ ವಿವಿಧೆಡೆಯಿಂದ ಆಗಮಿಸಿದ್ದ ಜಾನಪದ ಕಲಾ ತಂಡಗಳು ಮಳೆಯನ್ನು ಲೆಕ್ಕಿಸದೇ, ಕಲಾ ಸೇವೆ ಪ್ರದರ್ಶಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next