ಮಣಿಪಾಲ: ಮಣಿಪಾಲ ಸಂಸ್ಥೆಗಳ ಸ್ಥಾಪಕರಾದ ಉಪೇಂದ್ರ ಪೈ, ಡಾ| ಟಿಎಂಎ ಪೈ ಅವರ ಸಹೋದರ ಪಿ.ಎ. ಪೈ ಅವರ ಪುತ್ರನಾದ ಡಾ| ತೋನ್ಸೆ ವಿಟ್ಠಲ ಪೈ ಅವರ ಪತ್ನಿ ತೋನ್ಸೆ ಗೀತಾ ಪೈ (78) ಜು. 11ರಂದು ನ್ಯೂ ಮೆಕ್ಸಿಕೋದ ಅಲ್ಬುಕರ್ಕ್ ನಲ್ಲಿ ನಿಧನ ಹೊಂದಿದರು.
ಮೃತರು ಪತಿ ಡಾ| ವಿಟ್ಠಲ ಪೈ, ಪುತ್ರರಾದ ದೀಪಕ್ ಪೈ, ಸುನಿಲ್ ಪೈ, ಸೊಸೆ ರೇಖಾ ಡಿ. ಪೈ, ಮೊಮ್ಮಕ್ಕಳಾದ ಪ್ರಿಯಾಂಕಾ ಪೈ, ಮೇಘನಾ ಪೈ ಅವರನ್ನು ಅಗಲಿದ್ದಾರೆ.
ಕಾರ್ಕಳ ಪೈ ಕುಟುಂಬಕ್ಕೆ ಸೇರಿದ ದಿ| ಕೆ.ಪಿ.ಎಲ್. ಪೈ ಮತ್ತು ದಿ| ಸುನಂದಾ ಪೈ ಅವರ ಏಕೈಕ ಪುತ್ರಿ ಗೀತಾ ಪೈ ಅವರು ಬಂಟ್ವಾಳದಲ್ಲಿ ಜನಿಸಿದರು.
ಉದ್ಯಮಿಯಾಗಿ ಹೆಸರು ಪಡೆದಿದ್ದ ಇವರು ಸ್ವತಂತ್ರ ಮತ್ತು ಸಾಹಸಪ್ರವೃತ್ತಿಯವರಾಗಿ ವಿವಿಧ ಪ್ರಕಾರದ ಉದ್ಯಮ ನಡೆಸುತ್ತಿದ್ದರು.
ಕಾರ್ಪೊರೇಟ್ ಮತ್ತು ರೀಟೇಲ್ ಸೆಣಬಿನ ಗಿಫ್ಟ್ ಬ್ಯಾಗ್ ಕಂಪೆನಿ ಬಾಸ್ಕೆಟ್ -ಎನ್- ಬ್ಯಾಗ್ಸ್, ನೈಸರ್ಗಿಕ ಭಾರತೀಯ ಆಹಾರದ ಉದ್ಯಮ ನಡೆಸುತ್ತಿದ್ದರು. ಲಾಸ್ ಕ್ರೂಸಸ್, ನ್ಯೂಮೆಕ್ಸಿಕೋ, ಡೆನ್ವರ್, ಕೊಲೊರಡೋದಲ್ಲಿ ರೆಸ್ಟೋರೆಂಟ್ ಹೊಂದಿದ್ದರು. ನ್ಯೂ ಮೆಕ್ಸಿಕೋ ಫೆಡರೇಶನ್ ಆಫ್ ದಿ ಬ್ಲೈಂಡ್, ಸೌತ್‌ವೆಸ್ಟ್ ವುಮನ್ ಬಿಜಿನೆಸ್ ಎಂಟರ್‌ಪ್ರೈಸ್ ನ್ಯಾಶನಲ್ ಕೌನ್ಸಿಲ್ ಮತ್ತು ನ್ಯಾಶನಲ್ ಅಸೋಸಿಯೇಶನ್ ಆಫ್ ವುಮನ್ ಬಿಜಿನೆಸ್ ಓನರ್ ಸಂಸ್ಥೆಗಳ ಸ್ಥಾಪಕ ಸದಸ್ಯರಾಗಿದ್ದರು.
ಅಮೆರಿಕ, ಮೆಕ್ಸಿಕೋ, ಭಾರತದಲ್ಲಿ ಮಹಿಳಾ ಶಿಕ್ಷಣ, ಸಬಲೀಕರಣ ಹಾಗೂ ಉದ್ಯೋಗದ ಬಗ್ಗೆ ಮಾರ್ಗದರ್ಶನ ನೀಡುತ್ತಿದ್ದರು. ಅಂಧರ ಸಂಸ್ಥೆಗಳಿಗೆ ಸಹಾಯಹಸ್ತ ನೀಡುತ್ತಿದ್ದರು. ಶಾಂತಿ ಪಡೆ, ದಕ್ಷಿಣ ಏಶ್ಯಾಕ್ಕೆ ಹೋಗುವವರಿಗೆ ತರಬೇತಿ ಕಾರ್ಯಕ್ರಮಗಳಲ್ಲಿ ಸಕ್ರಿಯರಾಗಿದ್ದರು. ಅನೇಕರು ಗೀತಾ ಪೈಯವರ ಮಾರ್ಗದರ್ಶನ ಪಡೆದು ಸ್ವಾವಲಂಬಿ ಬದುಕನ್ನು ನಡೆಸುತ್ತಿದ್ದಾರೆ.