ಮುದಗಲ್ಲ: ಐದು ಜಿಲ್ಲೆಗಳ ಗಡಿ ಪ್ರದೇಶದಲ್ಲಿರುವ ಪ್ರಸಿದ್ಧ ಹೊಳೆ ತೊಂಡಿಹಾಳ ಗ್ರಾಮದ ಶ್ರೀ ಹುಲಿಗೇಮ್ಮ ದೇವಿ ಜಾತ್ರೆ ಜ.18, 19ರಂದು ನಡೆಯಲಿದ್ದು, ಸಿದ್ಧತಾ ಕಾರ್ಯಗಳು ಭರದಿಂದ ಸಾಗಿವೆ.
ಕೃಷ್ಣಾ ನದಿ ದಡದಲ್ಲಿ ನೆಲೆಸಿರುವ ಹುಲಿಗೆಮ್ಮದೇವಿ ರಾಯಚೂರು, ಬಾಗಲಕೋಟೆ, ವಿಜಯಪುರ, ಯಾದಗಿರಿ, ಕಲಬುರಗಿ ಗಡಿ ಪ್ರದೇಶದ ಮಧ್ಯ ಬಸವರಾಜ ಜಲಸಾಗರ ನಿರ್ಮಿಸಲಾಗಿದೆ. ಈ ನದಿ ದಡದಲ್ಲಿ ನೆಲೆಸಿರುವ ಹುಲಿಗೆಮ್ಮದೇವಿಯನ್ನು ಐದು ಜಿಲ್ಲೆಗಳ ಸಾವಿರಾರು ಭಕ್ತರು ಆರಾಧಿಸುತ್ತಾರೆ.
ಐದು ತಂಡ ರಚನೆ: ಜಾತ್ರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗುತ್ತಿದ್ದಂತೆ ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತ ಭರದಿಂದ ಸಿದ್ಧತಾ ಕಾರ್ಯ ನಡೆಸುತ್ತಿದೆ. ಲಿಂಗಸುಗೂರು ಉಪವಿಭಾಗಾಧಿ ಕಾರಿ ಡಾ| ದಿಲೀಶ ಶಶಿ ತಾಲೂಕು ಮಟ್ಟದ ಅಧಿಕಾರಿಗಳ ಪೂರ್ವಭಾವಿ ಸಭೆ ನಡೆಸಿದ್ದು, ಜಾತ್ರಾ ಮಹೋತ್ಸವ ಅಚ್ಚುಕಟ್ಟಾಗಿ ನೆರವೇರಿಸಲು, ಜಾತ್ರೆಯಲ್ಲಿ ಅನಿಷ್ಠ ಪದ್ಧತಿಯಾದ ದೇವದಾಸಿ ಬಿಡುವ ಆಚರಣೆ ತಡೆಗೆ 5 ತಂಡಗಳನ್ನು ರಚಿಸಿದ್ದಾರೆ.
ಆಗ್ರಹ: ಜಾತ್ರೆಗೆ ಆಗಮಿಸುವ ಭಕ್ತರಿಗೆ ಮೂಲಸೌಕರ್ಯದ ಜೊತೆಗೆ ಎಲ್ಲೆಂದರಲ್ಲಿ ಬಯಲುಶೌಚ ಮಾಡುವುದನ್ನು ನಿಲ್ಲಿಸಲು ತಾತ್ಕಾಲಿಕ ಶೌಚಾಲಯ ನಿರ್ಮಿಸಬೇಕು. ನೂತನವಾಗಿ ದೇವಾಲಯ ನಿರ್ಮಾಣ ಹಂತದಲ್ಲಿರುವುದರಿಂದ ಭಕ್ತರಿಗಾಗುವ ತೊಂದರೆಯನ್ನು ತಾಲೂಕಾಡಳಿತ ತಪ್ಪಿಸಬೇಕಿದೆ. ತೆಂಗಿನಕಾಯಿ ಒಡೆಯುವ ಸ್ಥಳವನ್ನು ಪ್ರತ್ಯೇಕಿಸಬೇಕು. ದೇವಿ ದರ್ಶನಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು. ರಾತ್ರಿ ಮಹಿಳೆಯರಿಗೆ ದೇವರ ದರ್ಶನಕ್ಕೆ ಪ್ರತ್ಯೇಕ ವ್ಯವಸ್ಥೆ ಮಾಡಬೇಕು. ಕುಡಿಯುವ ನೀರು, ಬೀದಿ ದೀಪ, ರಸ್ತೆ ಸುಧಾರಣೆ ಸೇರಿದಂತೆ ಶೌಚಾಲಯ, ಪ್ರಥಮ ಚಿಕಿತ್ಸೆಗೆ ಅನೂಕೂಲ ಕಲ್ಪಿಸಬೇಕು. ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಹಾಕಬೇಕು. ಸ್ವಚ್ಛತೆಗೆ ಕಾಪಾಡಬೇಕು. ಪ್ರಾಣಿ ಬಲಿ ತಡೆಯಬೇಕು. ಮದ್ಯ ಮಾರಾಟ ನಿಷೇಧಿಸಬೇಕೆಂದು ಕರವೇ ಅಧ್ಯಕ್ಷ ಬಾಲಪ್ಪ ಕನೇರಿ ಸೇರಿ ಭಕ್ತರು ಆಗ್ರಹಿಸಿದ್ದಾರೆ.
ಕಾರ್ಯಕ್ರಮಗಳೇನು..
ತೊಂಡಿಹಾಳ ಗ್ರಾಮದ ಶ್ರೀ ಹುಲಿಗೆಮ್ಮದೇವಿ ಜಾತ್ರಾ ಮಹೋತ್ಸವ ಅಂಗವಾಗಿ ವಿಶೇಷ ಕಾರ್ಯಕ್ರಮ ನಡೆಯುತ್ತವೆ. ಜ.14ರಂದು ದೇವಿಗೆ ಕಂಕಣ ಕಟ್ಟುವುದು. 15, 16ರಂದು ಪಲ್ಲಕಿ ಉತ್ಸವ, 17ರಂದು ಸಂಜೆ 6 ಗಂಟೆಗೆ ಗ್ರಾಮ ದೇವತೆ ಗಂಗಾಸ್ಥಳಕ್ಕೆ ಹೋಗುವುದು, ಚಿನ್ನಾಪುರದಿಂದ ಶ್ರೀ ಹುಲಿಗೆಮ್ಮದೇವಿ ತೊಂಡಿಹಾಳ ಗ್ರಾಮಕ್ಕೆ ಆಗಮನ, 18ರಂದು ಶನಿವಾರ ಬೆಳಗ್ಗೆ 8 ಗಂಟೆಗೆ ಅಕ್ಕಿಪಾಯಸ ಹಾಗೂ ಸಂಜೆ 6 ಗಂಟೆಗೆ ಹಲ್ಕಾವಟಗಿ ಗ್ರಾಮದ ಸದ್ಬಕ್ತರಿಂದ ಉಚ್ಛಾಯೋತ್ಸವ ಕಳಸ ಆಗಮಿಸುವುದು.
19ರಂದು ಮುಂಜಾನೆ 8ಘಂಟೆಗೆ ಅಗ್ನಿ ಹಾಯುವುದು, ಸಂಜೆ 6 ಗಂಟೆಗೆ ಮಹಾರಥೋತ್ಸವ ನಡೆಯಲಿದೆ. ಐದು ದಿನಗಳವರೆಗೆ ನಡೆಯುವ ಜಾತ್ರೆಯಲ್ಲಿ ನಿತ್ಯ ಸಾವಿರಾರು ಭಕ್ತರು ಭಾಗವಹಿಸುತ್ತಾರೆ.
ಪ್ರತಿ ವರ್ಷದಂತೆ ಈ ವರ್ಷವೂ ಜಾತ್ರೆ ಸುಸೂತ್ರವಾಗಿ ನಡೆಯಲಿದೆ. ಅನಿಷ್ಠ ಪದ್ಧತಿ ಆಚರಣೆ ನಿಷೇಧಕ್ಕೆ ಹಾಗೂ ಭಕ್ತರಿಗೆ ಸಕಲ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.
ಡಾ| ದಿಲೀಶ ಶಶಿ,
ಸಹಾಯಕ ಆಯುಕ್ತರು, ಲಿಂಗಸುಗೂರು
ದೇವಪ್ಪ ರಾಠೊಡ