Advertisement

ಶಿಥಿಲಗೊಂಡ ಕಿರು ಸೇತುವೆಯಲ್ಲಿ  ಸಂಚಾರ ದುಸ್ತರ!

08:51 PM Sep 22, 2021 | Team Udayavani |

ಸಿದ್ದಾಪುರ: ಅಮಾಸೆಬೈಲು ಗ್ರಾಮ ಪಂಚಾಯತ್‌ ವ್ಯಾಪ್ತಿಯ ಪಶ್ಚಿಮ ಘಟ್ಟದ ತಪ್ಪಲಿನ ಕಾಡಿನ ಅಂಚಿನಲ್ಲಿರುವ ತೊಂಬಟ್ಟು ಹೊಳೆಗೆ ಮೂರ್‌ಸಾಲ್‌ ಗುಂಡಿ ಎಂಬಲ್ಲಿ ನಿರ್ಮಿಸಿರುವ ನಾಲ್ಕು ದಶಕಗಳ ಹಳೆಯ ಕಿರು ಸೇತುವೆ ಮುರಿದು ಬೀಳುವ ಹಂತ ತಲುಪಿದೆ. ಇದರೊಂದಿಗೆ ನಕ್ಸಲ್‌ ಪೀಡಿತ ತೊಂಬಟ್ಟು – ಕಬ್ಬಿನಾಲೆ ಪ್ರದೇಶದ ಹಳ್ಳಿಗಳ ಸಂಪರ್ಕ ಕೊಂಡಿಯೂ ಕಳಚಿ ಬೀಳಲಿದೆ.

Advertisement

1979ರಲ್ಲಿ ನಿರ್ಮಿಸಲಾದ ಸೇತುವೆ :

ಬೈಂದೂರು ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಮಚ್ಚಟ್ಟು ಗ್ರಾಮದ ತೊಂಬಟ್ಟುವಿನಿಂದ ಇರ್ಕಿಗದ್ದೆ, ಕಬ್ಬಿನಾಲೆ ಸಂಪರ್ಕಕ್ಕಿರುವ ಏಕೈಕ ಕಿರಿದಾದ ಸೇತುವೆ ಇದಾಗಿದೆ. 1979ರಲ್ಲಿ ತೊಂಬಟ್ಟು ಹೊಳೆಗೆ ಮೂರ್‌ಸಾಲು ಗುಂಡಿ ಎಂಬಲ್ಲಿ ಇದನ್ನು ನಿರ್ಮಿಸಲಾಗಿತ್ತು. ಇದೀಗ  ದ್ವಿಚಕ್ರ ವಾಹನ ಹೊರತುಪಡಿಸಿ ಬೇರೆ ಯಾವುದೇ ವಾಹನ ಸಂಚಾರ ಇಲ್ಲಿ ಸಾಧ್ಯವಿಲ್ಲ.

ತೊಂಬಟ್ಟು ಹೊಳೆಯಲ್ಲಿ ಮಳೆಗಾಲದಲ್ಲಿ ನೀರು ತುಂಬಿ ಸೇತುವೆಯ ಮೇಲೆ ಹರಿಯು ತ್ತದೆ. ಕಿರಿದಾದ ಶಿಥಿಲಗೊಂಡ ಸೇತುವೆಗೆ ಹಿಡಿಗಂಬವಿದ್ದರೂ ಮಳೆ ನೀರಿನ ರಭಸಕ್ಕೆ ಕಿತ್ತುಹೋಗುತ್ತದೆಯೊ ಎನ್ನುವ ಆತಂಕ. ಒಮ್ಮೊಮ್ಮೆ ನೀರಿನ ರಭಸಕ್ಕೆ ಸೇತುವೆಯೂ ತೇಲುವ ಭಾಸವಾಗುತ್ತದೆ. ಅಲ್ಲದೆ 2-3 ದಿನ ಬಿಡದೆ ಮಳೆ ಸುರಿದರೆ ಸೇತುವೆಗೆ ಸಂಪರ್ಕಿಸುವ ರಸ್ತೆಯ ಮೇಲೂ  ನೀರು ಹರಿಯುತ್ತದೆ. ಈ ಸಂದರ್ಭ  ವಿದ್ಯಾರ್ಥಿಗಳನ್ನು ಹೆತ್ತವರು  ಸೇತುವೆ ದಾಟಿ ಸುವುದು ಅನಿವಾರ್ಯವಾಗುತ್ತದೆ. ಜತೆಯಲ್ಲಿ ಸೇತುವೆ ಮೇಲೆ ನಡೆದಾಡುವವರು ಕೂಡ ಜೀವ ಕೈಯಲ್ಲಿ ಹಿಡಿದೇ ಸಾಗಬೇಕಾಗಿದೆ.

ಮೂಲಸೌಕರ್ಯಗಳೇ ಇಲ್ಲ  :

Advertisement

ಬೇಸಗೆಯಲ್ಲಿ ಮಳೆನೀರಿನ ರಭಸ ಕಡಿಮೆಯಿರುವುದರಿಂದ ಗ್ರಾಮಸ್ಥರು ಹೊಳೆಯ ನ್ನಿಳಿದು ಸಾಗುತ್ತಾರೆ.  ಜನಪ್ರತಿನಿಧಿಗಳಿಗೆ, ಅಧಿಕಾರಿ ಗಳಿಗೆ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. ನಕ್ಸಲ್‌ ಪೀಡಿತ ಪ್ರದೇಶವೆನ್ನುವ ಹಣೆಪಟ್ಟಿ ಹೊಂದಿದ್ದರೂ ಮೂಲಸೌಕರ್ಯಗಳಿಲ್ಲದೆ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದೇವೆ ಎನ್ನುವುದು ಗ್ರಾಮಸ್ಥರ ಅಳಲು.

ಹಿಂದೆಯೂ ಜನ ಪ್ರತಿನಿಧಿಗಳಿಗೆ ಈ ಕುರಿತು ಗಮನಕ್ಕೆ ತಂದಿದ್ದೆವು. ಎಂಜಿನಿಯರ್‌ ಬಂದು ಹೊಸ ಸೇತುವೆಗೆ ಯೋಜನೆ ರೂಪಿಸುತ್ತೇವೆ ಎಂದು  ತಿಳಿಸಿದ್ದರು. ಆದರೆ ಅದು ಅನುಷ್ಠಾನಕ್ಕೆ ಬರದೆ ಸಮಸ್ಯೆ ಎದುರಿಸುವಂತಾಗಿದೆ ಎಂದು ಅಮಾಸೆಬೈಲು ಗ್ರಾ.ಪಂ. ಸದಸ್ಯ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಕಿರು ಸೇತುವೆಯ ಪಿಲ್ಲರ್‌ಗಳು ಮಳೆಯ ರಭಸಕ್ಕೆ ಬಲ ಕಳೆದುಕೊಂಡಿವೆ. ಸೇತುವೆ ಕೆಳ ಭಾಗದಲ್ಲಿನ ಸಿಮೆಂಟ್‌, ಜಲ್ಲಿ ಕಲ್ಲು ಕಿತ್ತುಹೋಗಿ ಕಬ್ಬಿಣ ಸರಳುಗಳು ಕಾಣುತ್ತಿವೆ. ಅಲ್ಲದೆ ಅಲ್ಲಲ್ಲಿ ಕುಸಿತವಾಗಿದೆ.   ಈ ಭಾಗದಲ್ಲಿ ಕೂಲಿ ಕಾರ್ಮಿಕರೇ ಹೆಚ್ಚಿರುವುದರಿಂದ, ಕೆಲಸಕ್ಕಾಗಿ ಅವರು ಪೇಟೆ ಪಟ್ಟಣಗಳಿಗೆ ತಲು ಪಲು ಈ ಸೇತುವೆಯನ್ನೇ ಅವಲಂಬಿಸಿದ್ದಾರೆ. ತೊಂಬಟ್ಟು ಪೇಟೆಗೆ ಬಸ್‌ ಸಂಪರ್ಕವಿರುವುದರಿಂದ ಜನರ ಓಡಾಟವೂ ಹೆಚ್ಚಿರುತ್ತದೆ.

ಅಮಾಸೆಬೈಲು- ತೊಂಬಟ್ಟು ರಸ್ತೆಯನ್ನು ಮೇಲ್ದರ್ಜೆಗೇರಿಸಲು ಮತ್ತು ತೊಂಬಟ್ಟುವಿನಿಂದ ಇರ್ಕಿಗದ್ದೆ, ಕಬ್ಬಿನಾಲೆ ಸಂಪರ್ಕ ಸೇತುವೆ ನಿರ್ಮಾಣಕ್ಕಾಗಿ ಸ್ಥಳೀಯರಿಂದ ಮನವಿ ಬಂದಿದೆ. ಸೇತುವೆ ಹಾಗೂ ರಸ್ತೆ ನಿರ್ಮಾಣಕ್ಕೆ ಹೆಚ್ಚಿನ ಅನುದಾನ ಬೇಕಾಗಿರುವುದರಿಂದ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸುತ್ತೇನೆ.ಬಿ.ಎಂ. ಸುಕುಮಾರ್‌ ಶೆಟ್ಟಿ, ಶಾಸಕರು

ತೊಂಬಟ್ಟು- ಕಬ್ಬಿನಾಲೆ ಪ್ರದೇಶಗಳು ಅಮಾಸೆಬೈಲು ಗ್ರಾ.ಪಂ. ವ್ಯಾಪ್ತಿಗೆ ಬಂದರೂ, ವಿಧಾನಸಭೆ ಕ್ಷೇತ್ರ ಬೈಂದೂರು. ಸೇತುವೆ ಹಾಗೂ ರಸ್ತೆ ಅಭಿವೃದ್ಧಿಯ ಬಗ್ಗೆ ಮನವಿಗಳು ಬಂದಿವೆ. ಗ್ರಾ.ಪಂ. ನಿರ್ಣಯ ಮಾಡಿ, ಸ್ಥಳೀಯ ಸದಸ್ಯರ ಮೂಲಕ ಬೈಂದೂರು ಶಾಸಕರಿಗೆ ಕಳುಹಿಸಿದ್ದೇವೆ.ಚಂದ್ರಶೇಖರ ಶೆಟ್ಟಿ ಕೆಲಾ ,ಅಮಾಸೆಬೈಲು ಗ್ರಾ.ಪಂ. ಅಧ್ಯಕ್ಷ

ತೊಂಬಟ್ಟು ರಸ್ತೆ ಹಾಗೂ ಸೇತುವೆ ದುರಸ್ತಿ ಸಲುವಾಗಿ ವರದಿ ಮಾಡಿ ಇಲಾಖೆಗೆ ಕಳುಹಿಸಿದ್ದೇವೆ. ರಸ್ತೆಯ ತುರ್ತು ಕಾಮಗಾರಿಗೆ ಜಿಲ್ಲಾಧಿಕಾರಿ ಅವರ ಹತ್ತಿರ ಹಣ ಬಿಡುಗಡೆಗೆ ಮನವಿ ಮಾಡಿದ್ದೇವೆ.  –ಶ್ರೀಧರ್‌ ಪಾಲೇಕರ್‌, ಅಭಿಯಂತ, ಜಿ.ಪಂ. ಉಡುಪಿ

-ಸತೀಶ ಆಚಾರ್‌ ಉಳ್ಳೂರು

Advertisement

Udayavani is now on Telegram. Click here to join our channel and stay updated with the latest news.

Next