Advertisement

ಥಾಮಸ್ ಕುಕ್ ದಿವಾಳಿಯೆದ್ದ ಸುದ್ದಿ ಬಂದಾಗ ಆ ವಿಮಾನ ಆಕಾಶದಲ್ಲಿ ಹಾರಾಡುತ್ತಿತ್ತು!

08:36 AM Sep 24, 2019 | Hari Prasad |

ಬ್ರಿಟನ್ ಮೂಲದ ವಿಶ್ವದ ಅಗ್ರಮಾನ್ಯ ಹಾಲಿಡೇ ಮೇಕಿಂಗ್ ಹಾಗೂ ವೈಮಾನಿಕ ಸೇವಾ ಸಂಸ್ಥೆ ಥಾಮಸ್ ಕುಕ್ ನಷ್ಟದ ಕಾರಣವನ್ನು ಇಂದು ನೀಡಿ ಇದ್ದಕ್ಕಿದ್ದಂತೆಯೇ ತನ್ನ ಸೇವೆಗಳನ್ನು ಸ್ಥಗಿತಗೊಳಿಸುವ ನಿರ್ಧಾರವನ್ನು ಪ್ರಕಟಿಸಿದಾಗ ಪ್ರವಾಸಿ ವಲಯವೇ ಒಮ್ಮೆಗೆ ಬೆಚ್ಚಿ ಬಿದ್ದಿತ್ತು.

Advertisement

ಥಾಮಸ್ ಕುಕ್ ಮೂಲಕ ಹಾಲಿಡೇ ಪ್ಲ್ಯಾನ್ ಮಾಡಿಕೊಂಡಿದ್ದ ಸಾವಿರಾರು ಪ್ರವಾಸಿಗರು ವಿಶ್ವದ ನಾನಾ ಭಾಗಗಳಲ್ಲಿರುವ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ರಜೆಯ ಮಜಾ ಅನುಭವಿಸುತ್ತಿದ್ದಂತೆಯೇ ಈ ಕಂಪೆನಿ ದಿವಾಳಿ ಎದ್ದಿರುವ ಸುದ್ದಿ ಬಂದಪ್ಪಳಿಸಿದೆ. ಇನ್ನು ಈ ಸಂಸ್ಥೆಯಲ್ಲಿ ದುಡಿಯುತ್ತಿದ್ದ ಸುಮಾರು 21 ಸಾವಿರ ಜನ ಉದ್ಯೋಗಿಗಳ ಭವಿಷ್ಯವೂ ಇದೀಗ ಅತಂತ್ರಗೊಂಡಿದೆ.

ಇತ್ತ ಫ್ಲೋರಿಡಾದ ಒರ್ಲ್ಯಾಂಡೋದಿಂದ ಮ್ಯಾಂಚೆಸ್ಟರ್ ಗೆ ಆಗಮಿಸುತ್ತಿದ್ದ ಥಾಮಸ್ ಕುಕ್ ಪ್ರವಾಸಿ ಏರ್ ಬಸ್ ಎ330 ಆಗಸ ಮಧ್ಯದಲ್ಲಿದ್ದಾಗಲೇ ಕಂಪೆನಿ ದಿವಾಳಿ ಎದ್ದಿರುವ ಮತ್ತು ತನ್ನೆಲ್ಲಾ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿರುವ ಮಾಹಿತಿ ಲಭಿಸುತ್ತದೆ. ಈ ಸಂದರ್ಭದಲ್ಲಿ ವಿಮಾನದಲ್ಲಿದ್ದ ಪ್ರವಾಸಿ ಪ್ರಯಾಣಿಕರು ಕಂಪೆನಿಯ ಈ ಸ್ಥಿತಿಗೆ ಮರುಕ ವ್ಯಕ್ತಪಡಿಸುತ್ತಾರೆ ಮತ್ತು ಇನ್ನು ಕೆಲವೇ ಗಂಟೆಗಳಲ್ಲಿ ಕೆಲಸ ಕಳೆದುಕೊಳ್ಳಲಿರುವ ವಿಮಾನ ಸಿಬ್ಬಂದಿಗಳ ಪರಿಸ್ಥಿತಿಗೆ ಅವರೆಲ್ಲಾ ಮರುಗುತ್ತಾರೆ..

ಗ್ರೇಟರ್ ಮ್ಯಾಂಚೆಸ್ಟರ್ ನಿವಾಸಿಗಳಾಗಿರುವ ಎಲಿಝಬೆತ್ ಇವಾನ್ಸ್ ಮತ್ತು ಆಕೆಯ ಪತಿ ಕ್ರಿಸ್ ಹೇಳುವ ಪ್ರಕಾರ, ‘ಇದೊಂದು ಬಹಳ ದುಃಖದ ದಿನ, ಇನ್ನು ಕೆಲವೇ ಗಂಟೆಗಳಲ್ಲಿ ಈ ವಿಮಾನ ಇಳಿಯುತ್ತಿದ್ದಂತೆಯೇ ಇವರೆಲ್ಲಾ ನಿರುದ್ಯೋಗಿಗಳಾಗಿಬಿಡುತ್ತಾರೆ’ ಎಂದು ಬೇಸರದಿಂದ ನುಡಿಯುತ್ತಾರೆ.

ಇನ್ನು ಏರ್ ಬಸ್ ಎ330 ವಿಮಾನದ ಪೈಲಟ್ ವಿಮಾನದಲ್ಲಿದ್ದ ತನ್ನ ಸಹೋದ್ಯೋಗಿಗಳಿಗೆ ಮತ್ತು ಗಗನಸಖಿಯರಿಗೆ ಅಭಿನಂದನೆ ಸಲ್ಲಿಸುತ್ತಿದ್ದ ದೃಶ್ಯ ಮನಕಲುಕುವಂತಿತ್ತು ಎಂದು ಪ್ರಯಾಣಿಕರೊಬ್ಬರು ಹೇಳಿಕೊಳ್ಳುತ್ತಾರೆ.

Advertisement

ಇನ್ನು ಸೋಮವಾರ ಬೆಳಿಗ್ಗೆ 9.30 ಗಂಟೆಗೆ ವಿಮಾನ ಮ್ಯಾಂಚೆಸ್ಟರ್ ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿದ್ದಂತೆ ವಿಮಾನದ ಸಿಬ್ಬಂದಿಗಳು ಪ್ರವಾಸಿ ಪ್ರಯಾಣಿಕರಿಗೆ ಕಣ್ಣೀರು ತುಂಬಿದ ಬೀಳ್ಕೊಡುಗೆಯನ್ನು ನೀಡಿದರು. ಅದರಲ್ಲಿ ಓರ್ವ ಸಿಬ್ಬಂದಿ ತಮ್ಮ 22 ವರ್ಷಗಳ ಸೇವೆ ಈ ರೀತಿ ಅಂತ್ಯಕಾಣುತ್ತಿರುವುದಕ್ಕೆ ಬಹಳವಾಗಿ ದುಃಖಿಸುತ್ತಿದ್ದ ದೃಶ್ಯ ಎಲ್ಲರಿಗೂ ಬೇಸರವನ್ನುಂಟುಮಾಡುವಂತಿತ್ತು.


ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಇನ್ನೊಂದು ವಿಡಿಯೋದಲ್ಲಿ ಥಾಮಸ್ ಕುಕ್ ವಿಮಾನದಲ್ಲಿದ್ದ ಪ್ರಯಾಣಿಕರು ಥಾಮಸ್ ಕುಕ್ ಸಂಸ್ಥೆಗಾಗಿ ದುಡಿದ ಎಲ್ಲಾ ಸಿಬ್ಬಂದಿಗಳಿಗೆ ‘ಚಿಯರ್ ಅಪ್’ ಸಂಜ್ಞೆಯ ಮೂಲಕ ‘ಗುಡ್ ಲಕ್’ ಸಂದೇಶವನ್ನು ನೀಡಿರುವುದು ಇದೀಗ ವೈರಲ್ ಆಗಿದೆ. ಥಾಮಸ್ ಕುಕ್ ಸಂಸ್ಥೆಯ ಸಿಬ್ಬಂದಿಗಳ ಕಠಿಣ ಪರಿಶ್ರಮ ಮತ್ತು ಉತ್ತಮ ಆತಿಥ್ಯ ನಿರ್ವಹಣೆಯನ್ನು ಪ್ರಯಾಣಿಕರು ಮುಕ್ತಕಂಠದಿಂದ ಪ್ರಶಂಸಿಸಿದ್ದಾರೆ ಮತ್ತು ಚಪ್ಪಾಳೆಯ ಮೂಲಕ ಸಿಬ್ಬಂದಿವರ್ಗಕ್ಕೆ ತಮ್ಮ ಗೌರವವನ್ನು ಸೂಚಿಸಿದ್ದಾರೆ.

ತಮ್ಮ ಭವಿಷ್ಯ ಇದೀಗ ಅನಿಶ್ಚಿತತೆಯಲ್ಲಿ ಇರುವ ಸಂದರ್ಭದಲ್ಲಿ ವಿಮಾನ ಸಿಬ್ಬಂದಿಯೊಬ್ಬರು ಪ್ರಯಾಣಿಕರಲ್ಲಿ ತಮಗೆಲ್ಲಾ ‘ಥಮ್ಸ್ ಅಪ್’ ನೀಡುವಂತೆ ಮನವಿ ಮಾಡಿ ಅದರ ವಿಡಿಯೋ ಚಿತ್ರಣವನ್ನು ಮಾಡಿಕೊಂಡಿದ್ದಾರೆ.

ಥಾಮಸ್ ಕುಕ್ ಕಂಪೆನಿ ದಿವಾಳಿ ಘೋಷಿಸಿಕೊಂಡಿರುವುದರಿಂದ ಸುಮಾರು 9000ದಷ್ಟು ಬ್ರಿಟಿಷ್ ಉದ್ಯೋಗಿಗಳು ತಮ್ಮ ಉದ್ಯೋಗವನ್ನು ಕಳೆದುಕೊಳ್ಳುವ ಭೀತಿ ಎದುರಿಸುತ್ತಿದ್ದಾರೆ.


ನಿಕೊಲಾ ಸ್ಮಿತ್ ಎನ್ನುವ ಕ್ಯಾಬಿನ್ ಸಿಬ್ಬಂದಿ ಥಾಮಸ್ ಕುಕ್ ವಿಮಾನದಲ್ಲಿ ತನ್ನ ಕೊನೆಯ ಪ್ರಯಾಣದ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಮತ್ತು ಇದುವರೆಗೆ ತನಗೆ ಕೆಲಸ ನೀಡಿದ ಸಂಸ್ಥೆಗೆ ಭಾರವಾದ ಹೃದಯದಿಂದ ಧನ್ಯವಾದವನ್ನು ಸಲ್ಲಿಸಿದ್ದಾರೆ.

ಥಾಮಸ್ ಕುಕ್ ಸಂಸ್ಥೆ 200 ಮಿಲಿಯನ್ ಡಾಲರ್ ಮೊತ್ತದ ಸಾಲದ ಸುಳಿಯಲ್ಲಿ ನಲುಗುತ್ತಿತ್ತು ಮತ್ತು ಸಾಲಗಾರರಿಗೆ ಸಾಲ ಮರುಪಾವತಿ ಮಾಡಲು ಆದಿತ್ಯವಾರ ರಾತ್ರಿ 11.59 ಅಂತಿಮ ಗಡುವು ಆಗಿತ್ತು. ಇದಕ್ಕೆ ವಿಫಲವಾದ ಸಂಸ್ಥೆಯು ಇಂದು ಬೆಳಿಗ್ಗೆ ತನ್ನ ಎಲ್ಲಾ ವ್ಯವಹಾರಗಳನ್ನು ಅಧಿಕೃತವಾಗಿ ನಿಲುಗಡೆಗೊಳಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next