ಉಳ್ಳಾಲ: ರಾಷ್ಟ್ರೀಯ ಹೆದ್ದಾರಿ 66ರ ತೊಕ್ಕೊಟ್ಟು ಜಂಕ್ಷನ್ ಕೃತಕ ನೆರೆಗೆ ಕಾರಣವಾಗುತ್ತಿದ್ದ ಚರಂಡಿ ದುರಸ್ತಿಯ ತಾತ್ಕಾಲಿಕ ಕಾಮಗಾರಿ ಶುಕ್ರವಾರ ನಡೆದಿದ್ದು ಭಟ್ನಗರದಿಂದ ತೊಕ್ಕೊಟ್ಟು ಜಂಕ್ಷನ್‌ವರೆಗಿನ ಚರಂಡಿಯಲ್ಲಿ ತುಂಬಿದ್ದ ಮಣ್ಣು ತೆರವುಗೊಳಿಸಲಾಯಿತು.
ಗುರುವಾರ ಸುರಿದ ಮಳೆಗೆ ತೊಕ್ಕೊಟ್ಟು ಜಂಕ್ಷನ್‌ನಲ್ಲಿ ಕೃತಕ ನೆರೆಯಾಗಿತ್ತು ಈ ಕುರಿತು ಉದಯವಾಣಿ ಪತ್ರಿಕೆ ವರದಿ ಪ್ರಕಟಿಸಿತ್ತು ಈಗ ತಡವಾಗಿ ಎಚ್ಚೆತ್ತ ಹೆದ್ದಾರಿ ಕಾಮಗಾರಿ ನಡೆಸುವ ನವಯುಗ್ ಸಂಸ್ಥೆಯಿಂದ ಚರಂಡಿಯ ಮಣ್ಣು ತೆಗೆಯುವ ಕಾರ್ಯ ಬೆಳಗ್ಗಿನಿಂದ ಆರಂಭಗೊಂಡಿದೆ.
ಬೆಳಗ್ಗಿನಿಂದಲೇ ಜೇಸಿಬಿ ಮೂಲಕ ಚರಂಡಿಯ ಮಣ್ಣು ತೆಗೆಯುತ್ತಿದ್ದು ಈ ಚರಂಡಿಯ ನೀರು ಜಂಕ್ಷನ್‌ನ ಮುಖ್ಯ ಚರಂಡಿಗೆ ಹರಿದುಹೋಗಲು ವ್ಯವಸ್ಥೆ ಮಾಡ ಲಾಗಿದೆ. ಕಳೆದೆರಡು ದಿನಗಳ ಮಳೆಯಿಂದ ರಸ್ತೆ ಸಂಪೂರ್ಣ ಹೊಂಡ ಬಿದ್ದಿದ್ದು ರಸ್ತೆಗೆ ತಾತ್ಕಾಲಿಕ ಕಾಮಗಾರಿ ನಡೆಸಬೇಕಾಗಿದೆ.
ಅವಸರವಾಗಿ ಕಾಮಗಾರಿ ಆರಂಭಿ ಸಿದ್ದರಿಂದ ಹೆದ್ದಾರಿ ಬದಿಯ ಚರಂಡಿಯ ಸ್ಲ್ಯಾಬ್‌ಗಳನ್ನು ಸರಿಸಿ ಮಣ್ಣು ತೆಗೆದು ಮಣ್ಣನ್ನು ಚರಂಡಿಯ ಬದಿಯಲ್ಲೇ ಹಾಕಿದ್ದು ಇದರಿಂದ ಸ್ಥಳೀಯರಿಗೆ ಸಮಸ್ಯೆಯಾಗಲಿದೆ. ಈ ಹಿಂದೆ ಚರಂಡಿ ಸ್ಲ್ಯಾಬ್ ಹಾಕಿದ್ದರಿಂದ ಪಾದಚಾರಿಗಳು ಈ ಸ್ಲ್ಯಾಬ್‌ನ ಮೇಲೆಯೇ ಸಂಚರಿಸುತ್ತಿದ್ದರು.
ಈಗ ಚರಂಡಿ ತೆರೆದಿರುವುದರಿಂದ ವಾಹನಗಳು ಚರಂಡಿಗೆ ಬೀಳುವ ಸಾಧ್ಯತೆ ಯಿದ್ದು ಪಾದಚಾರಿಗಳು ಎಚ್ಚರಿಕೆಯಿಂದ ಇಲ್ಲಿ ನಡೆಯುವ ಸ್ಥಿತಿ ನಿರ್ಮಾಣವಾಗಿದೆ.