ಉಳ್ಳಾಲ: ತೊಕ್ಕೊಟ್ಟು ಸ್ಮಾರ್ಟ್ ಸಿಟಿ ನಿವಾಸಿಗೆ ಕೋವಿಡ್-19 ಸೋಂಕು ತಗಲಿದ ಹಿನ್ನೆಲೆಯಲ್ಲಿ ಕಳೆದ ಒಂದು ತಿಂಗಳಿನಿಂದ ಸೀಲ್‌ಡೌನ್ ಆಗಿದ್ದ ತೊಕ್ಕೊಟ್ಟು ಜಂಕ್ಷನ್‌ನನ್ನು ಶನಿವಾರ ಸೀಲ್‌ಡೌನ್ ಮುಕ್ತ ಪ್ರದೇಶವಾಗಿ ಘೋಷಿಸಿದ ಹಿನ್ನೆಲೆಯಲ್ಲಿ ತೊಕ್ಕೊಟ್ಟು ಜಂಕ್ಷನ್‌ಗೆ ಶಾಸಕ ಯು.ಟಿ. ಖಾದರ್ ಅವರು ಪೊಲೀಸರು ಆರೋಗ್ಯ ಇಲಾಖೆಯ ಅಧಿಕಾರಿಗಳು, ಮತ್ತು ಉಳ್ಳಾಲ ನಗರಸಭೆಯ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಬ್ಯಾರಿಕೇಡ್‌ಗಳನ್ನು ತೆಗೆಸಿ ಸೀಲ್‌ಡೌನ್ ಮುಕ್ತ ಮಾಡಿಸಿದರು.
ಸೀಲ್‌ಡೌನ್‌ನಿಂದ ತೊಕ್ಕೊಟ್ಟು ಜಂಕ್ಷನ್‌ನಿಂದ ತೊಕ್ಕೊಟ್ಟು ಬಸ್ ನಿಲ್ದಾಣದ ಕ್ರಾಸ್‌ವರೆಗೆ ಪೊಲೀಸರು ಬ್ಯಾರಿಕೇಡ್ ಅಳವಡಿಸಿ ಸಂಚಾರ ಸ್ಥಗಿತಗೊಳಿಸಿದ್ದರು.
ಇದೀಗ ಸೀಲ್‌ಡೌನ್ ಮುಕ್ತದಿಂದ ಜಂಕ್ಷನ್ ಮೂಲಕವೇ ಸಂಚಾರ ಸುಗಮವಾಗಲಿದೆ.ಈ ಸಂದರ್ಭದಲ್ಲಿ ಶಾಸಕ ಯು.ಟಿ. ಖಾದರ್ ಅವರು ಮಾತನಾಡಿ, ಕೋವಿಡ್-19 ಸೋಂಕು ತಡೆಯುವ ನಿಟ್ಟಿನಲ್ಲಿ ಈ ವ್ಯಾಪ್ತಿಯ ಜನರು ಉತ್ತಮ ಸಹಕಾರ ನೀಡಿದ್ದಾರೆ.
ಕಳೆದ ಒಂದು ತಿಂಗಳ ಕಾಲ ಸಮಸ್ಯೆಯನ್ನು ಎದುರಿಸಿದರೂ ಆರೋಗ್ಯಕ್ಕೆ ಬೇಕಾದ ಸಹಕಾರ ನೀಡಿದ್ದು, ಸರಕಾರದ ಆದೇಶವನ್ನು ಪಾಲಿಸಿರುವುದು ಶ್ಲಾಘನೀಯ. ಮುಂದಿನ ದಿನಗಳಲ್ಲಿ ಜಿಲ್ಲಾಡಳಿತ ಕೈಗೊಳ್ಳುವ ಲಾಕ್‌ಡೌನ್ ಸಡಿಲಿಕೆಯನ್ನು ದುರುಪಯೋಗಪಡಿಸದೆ ಸಾಮಾಜಿಕ ಅಂತರವನ್ನು ಕಾಪಾಡಿ ಕೊಳ್ಳಬೇಕು. ಕೋವಿಡ್-19 ಸೋಂಕು ನಿರ್ಮೂಲನೆಗೆ ಕೈಜೋಡಿಸಬೇಕು ಎಂದು ಹೇಳಿದರು.