Advertisement
ಕಳೆದ ಎಂಟು ವರ್ಷಗಳಿಂದ ಮೇಲ್ಸೇತುವೆ ನಿರ್ಮಾಣ ಕಾಮಗಾರಿ ಆರಂಭವಾಗಿದ್ದರೂ ತೊಕ್ಕೊಟ್ಟು ಮತ್ತು ಪಂಪ್‌ವೆಲ್‌ನಲ್ಲಿ ಕಾಮಗಾರಿ ಆಮೆಗತಿಯಲ್ಲಿ ನಡೆಯುತ್ತಿತ್ತು. ಸಾರ್ವಜನಿಕರು, ಜನಪ್ರತಿನಿಧಿಗಳ ಹೋರಾಟದ ಬಳಿಕ ಮೂರು ತಿಂಗಳಿನಿಂದ ಕಾಮಗಾರಿ ವೇಗವನ್ನು ಪಡೆದುಕೊಂಡಿತ್ತು. ತೊಕ್ಕೊಟ್ಟು ಓವರ್‌ಬ್ರಿಡ್ಜ್ನಿಂದ ತೊಕ್ಕೊಟ್ಟು ಜಂಕ್ಷನ್‌ವರೆಗಿನ ಮೇಲ್ಸೇತುವೆ ಕಾಮಗಾರಿ ಮುಗಿದು ವರ್ಷ ಗಳೇ ಕಳೆದರೂ, ತೊಕ್ಕೊಟ್ಟು ಜಂಕ್ಷನ್‌ನಿಂದ ಕೆರೆಬೈಲ್ ನಾಗನ ಕಟ್ಟೆವರೆಗಿನ ಕಾಮಗಾರಿ ಕುಂಟುತ್ತಾ ಸಾಗಿತ್ತು. ತೊಕ್ಕೊಟ್ಟು ಓವರ್‌ಬ್ರಿಡ್ಜ್ವರೆಗಿನ ಡಾಮರು ಕಾಮಗಾರಿ, ಮೇಲ್ಸೇತುವೆ ತಡೆಗೋಡೆ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, ಜಂಕ್ಷನ್‌ನಿಂದ ನಾಗನಕಟ್ಟೆವರೆಗಿನ ಮೇಲ್ಸೇತುವೆ ಕಾಮಗಾರಿ ಭರದಿಂದ ಸಾಗುತ್ತಿದ್ದು, ತಡೆಗೋಡೆ ನಿರ್ಮಾಣ ಕಾರ್ಯ ನಡೆಯುತ್ತಿದೆ. ವರುಣ ಕೃಪೆ ತೋರಿದರೆ ಜೂ. 5ರೊಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಕಾಮಗಾರಿ ವಹಿಸಿಕೊಂಡಿರುವ ಸಂಸ್ಥೆಯ ಎಂಜಿನಿಯರ್ ತಿಳಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಯನ್ನು ನವಯುಗ್ ಸಂಸ್ಥೆ ನಿರ್ವಹಿಸುತ್ತಿದ್ದು, ಪಂಪ್‌ವೆಲ್ ಮತ್ತು ತೊಕ್ಕೊಟ್ಟಿನ ಮೇಲ್ಸೇತುವೆ ಕಾಮಗಾರಿಯನ್ನು ಬೇರೆ ಸಂಸ್ಥೆಗೆ ಗುತ್ತಿಗೆಯನ್ನು ನೀಡಿತ್ತು. ಹಣಕಾಸಿನ ಅಡಚಣೆಯಿಂದ ಮೇಲ್ಸೇತುವೆ ವಹಿಸಿಕೊಂಡಿದ್ದ ಸಂಸ್ಥೆ ಕಾಮಗಾರಿ ಪೂರ್ಣಗೊಳಿಸದೆ ಕಾಮಗಾರಿ ವಿಳಂಬವಾಗಿತ್ತು. ಈಗ ಕಾಮಗಾರಿ ಪೂರ್ಣಗೊಳ್ಳುತ್ತಿದ್ದು ಸಂಚಾರಕ್ಕೆ ದಿನ ಗಣನೆ ಆರಂಭವಾಗಿದೆ.
ಅಪಘಾತ ವಲಯವಾಗಲಿದೆ ಡೆಡ್ ಎಂಡ್ ತೊಕ್ಕೊಟ್ಟು ಕಾಪಿಕಾಡ್‌ನಿಂದ ನಾಗನಕಟ್ಟೆವರೆಗೆ ಮೇಲ್ಸೇತುವೆ ನಿರ್ಮಾಣವಾಗಲಿದೆ ಎಂದು ಕಾಮಗಾರಿ ಆರಂಭದಲ್ಲಿ ಮಾಹಿತಿ ಯಿತ್ತು. ಕಾಪಿಕಾಡು ಸಂಪರ್ಕಿಸುವ ಮೊದಲೇ ತೊಕ್ಕೊಟ್ಟು ಓವರ್‌ಬ್ರಿಡ್ಜ್ ಬಳಿ ಉಳ್ಳಾಲ ಕ್ರಾಸ್ ರಸ್ತೆಯಲ್ಲೇ ಮೇಲ್ಸೇತುವೆ ಡೆಡ್ ಎಂಡ್ ಆಗುವುದರಿಂದ ಮುಂದಿನ ದಿನಗಳಲ್ಲಿ ಮೇಲ್ಸೇತುವೆಯಿಂದ ಬರುವ ವಾಹನಗಳಿಗೂ ಉಳ್ಳಾಲ ಕ್ರಾಸ್ ರಸ್ತೆಯಲ್ಲಿ ಸಾಗುವ ವಾಹನ ಗಳು ಮುಖಾಮುಖೀಯಾಗಿ ಅಪಘಾತ ವಲಯವಾಗುವ ಸಾಧ್ಯತೆಯಿದೆ.ಈ ಕುರಿತು ಸ್ಥಳೀಯ ಜನಪ್ರತಿನಿ ಧಿಗಳು ಖಾಸಗಿ ಎಂಜಿನಿಯರ್‌ಗಳನ್ನು ಕರೆದು ತಂದು ಚರ್ಚೆ ನಡೆಸಿದರೂ ಅವರು ಅವೈಜ್ಞಾನಿಕ ಕಾಮಗಾರಿಯಿಂದ ಸಮಸ್ಯೆಯನ್ನು ಬಗೆಹರಿಸಲು ಸಾಧ್ಯವಿಲ್ಲ ಎಂದು ಕೈಚೆಲ್ಲಿದ್ದಾರೆ. ಮುಂದಿನ ದಿನಗಳಲ್ಲಿ ಅಪಘಾತಕ್ಕೆ ಈ ಮೇಲ್ಸೇತುವೆ ಡೆಡ್ ಎಂಡ್ ಕಾರಣ ವಾಗಲಿದೆ ಎಂದು ಸಾರ್ವ ಜನಿಕ ವಲಯದಲ್ಲಿ ಕಳವಳ ವ್ಯಕ್ತವಾಗಿದೆ. ರಸ್ತೆ ಉಬ್ಬು,ಟ್ರಾಫಿಕ್ ಲೈಟ್ ಅಳವಡಿಸಲು ಚಿಂತನೆ
ಉಳ್ಳಾಲ ಕ್ರಾಸ್ ರಸ್ತೆಯಲ್ಲಿ ಮೇಲ್ಸೇತುವೆಯಿಂದ ಕೇರಳ ಕಡೆ ಸಂಪರ್ಕಿಸುವ ವಾಹನಗಳ ವೇಗ ನಿಯಂತ್ರಣಕ್ಕೆ ಹೆದ್ದಾರಿಗೆ ಉಬ್ಬು ರಚನೆ ಮತ್ತು ಟ್ರಾಫಿಕ್ ಲೈಟ್ ವ್ಯವಸ್ಥೆ ಮಾಡಲು ಚಿಂತನೆ ನಡೆಸಲಾಗುತ್ತಿದೆ. ಈ ಪ್ರದೇಶದಲ್ಲಿ ಸರ್ಕಲ್ ನಿರ್ಮಾಣ ಮಾಡುವ ಚಿಂತನೆಯೂ ನಡೆಯುತ್ತಿದ್ದು, ಸಂಚಾರ ಪ್ರಾರಂಭವಾದ ಬಳಿಕ ಪರೀಕ್ಷಾರ್ಥವಾಗಿ ಅಧ್ಯಯನ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.