Advertisement

ತೊಡಿಕಾನ: ದೇವರ ಮೀನಿಗೆ ನೀರಿನ ಕೊರತೆ

06:18 AM Feb 15, 2019 | |

ಅರಂತೋಡು : ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇಗುಲ ಸಮೀಪದ ಮತ್ಸ್ಯತೀರ್ಥ ಹೊಳೆಯಲ್ಲಿ ಸಾವಿರಾರು ಮಹಷೀರ್‌ (ದೇವರ) ಮೀನುಗಳಿದ್ದು, ಪ್ರತಿವರ್ಷ ಬೇಸಗೆ ಕಾಲದಲ್ಲಿ ನೀರಿನ ಕೊರತೆ ಎದುರಾಗಿ ಮೀನುಗಳು ಅಸುನೀ
ಗುತ್ತಿವೆ. ಮೀನುಗಾರಿಕಾ ಇಲಾಖೆ ದೇವರ ಮೀನುಗಳನ್ನು ಸಂರಕ್ಷಿಸಲು ಮುಂದಾಗ ಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

Advertisement

ದೇಗುಲದ ಪಕ್ಕ ಸುಮಾರು 100 ಮೀ. ಅಂತರದಲ್ಲಿ ಮತ್ಸ್ಯತೀರ್ಥ ಹೊಳೆಯಲ್ಲಿ ಮಹಷೀರ್‌ ಜಾತಿಯ ಸಾವಿರಾರು ಮೀನುಗಳಿವೆ.
ಇವುಗಳನ್ನು ಇಲ್ಲಿ ದೇವರ ಮೀನುಗಳೆಂದು ಕರೆಯಲಾಗುತ್ತಿದೆ. ದೇವಾಲಯದ ವತಿಯಿಂದ ಇದಕ್ಕೆ ಆಹಾರ ಹಾಕಿ ಸಂರರಕ್ಷಿಸಲಾಗುತ್ತಿದೆ. ಭಕ್ತರೂ ಮೀನುಗಳಿಗೆ ಆಹಾರ ಕೊಡುತ್ತಾರೆ.

ಪೈಪ್‌ ಅಳವಡಿಸಿ ಹೊಳೆಗೆ ನೀರು
ಬೇಸಗೆ ಕಾಲದಲ್ಲಿ ಹೊಳೆಯಲ್ಲಿ ಉಂಟಾಗುವ ನೀರಿನ ಕೊರತೆಗೆ ಮತ್ಸ್ಯತೀರ್ಥ ಹೊಳೆಯ ಮೇಲ್ಭಾಗದಲ್ಲಿ 2.5 ಕಿ.ಮೀ. ದೂರದಿಂದ ನೀರಿನ ಪೈಪ್‌ ಅಳವಡಿಸಿ ಹೊಳೆಗೆ ನೀರು ಹರಿಸಲಾಗುತ್ತದೆ. 

ಮೀನುಗಳು ಇರುವ ಭಾಗಕ್ಕೆ ಡ್ರಿಪ್‌ ಅಳವಡಿಸಿ ನೀರಿನ ಹನಿಗಳು ಅಲ್ಲಲ್ಲಿ ಬೀಳುವಂತೆ ಮಾಡಲಾಗುತ್ತಿದೆ. ಮೀನುಗಳಿಗೆ ಸಾಕಷ್ಟು ನೀರು ದೊರೆಯದೆ ಆಮ್ಲಜನಕದ ಕೊರತೆಯಿಂದ ಮೀನುಗಳು ಸಾಯುತ್ತವೆ.

ಕಿಂಡಿ ಅಣೆಕಟ್ಟು ನಿರ್ಮಾಣ
ಜಿಲ್ಲಾ ಪಂಚಾಯತ್‌ ವತಿಯಿಂದ ಹೊಳೆಗೆ ಕಿಂಡಿ ಅಣೆಕಟ್ಟನ್ನು ನಿರ್ಮಿಸಲಾಗಿದೆ. ಅಲ್ಲದೆ, ಹೊಳೆಯ ಕೆಳಗಿನ ಭಾಗದಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ ಕಿಂಡಿ ಅಣೆಕಟ್ಟನ್ನು ನಿರ್ಮಾಣ ಮಾಡಿ ನೀರು ಶೇಖರಣೆ ಮಾಡಲಾಗುತ್ತಿದೆ. ಬೇಸಗೆಯಲ್ಲಿ ನೀರಿನ ತೀವ್ರ ಕೊರತೆ ಹಾಗೂ ನೀರು ಬಿಸಿಯಾಗಿ ಸಮಸ್ಯೆ ಆಗುತ್ತಿದೆ.

Advertisement

ಸಂರಕ್ಷಣೆ ಅಗತ್ಯ
ಮಹಷೀರ್‌ ಮೀನುಗಳು ಕೆಲವಡೆ ಮಾತ್ರ ಕಂಡು ಬರುತ್ತವೆ. ಇವು ಜನರನ್ನು ಆಕರ್ಷಿಸುತ್ತವೆ. ಈ ಮೀನುಗಳನ್ನು ನೋಡಲೆಂದೇ ಅನೇಕ ಪ್ರವಾಸಿಗರು ತೊಡಿಕಾನ ಕ್ಷೇತ್ರಕ್ಕೆ ಬರುತ್ತಾರೆ. ತೊಡಿಕಾನದಲ್ಲಿರುವ ಮೀನುಗಳಿಗೆ ಆಹಾರ ಹಾಕುತ್ತೇವೆ ಎಂದು ಹರಕೆ
ಹೇಳಿಕೊಂಡರೆ ಕೆಲ ಚರ್ಮರೋಗ ವಾಸಿಯಾಗುತ್ತದೆ ಎನ್ನುವ ನಂಬಿಕೆಯೂ ಭಕ್ತರಲ್ಲಿದೆ. ಈ ಮೀನುಗಳು ನೀರಿನ ಕೊರತೆ ಕಾರಣಕ್ಕೇ ಈಗ ಅಳಿವಿನ ಅಂಚಿನಲ್ಲಿದೆ.

ಮನಸ್ಸಿಗೆ ಖುಷಿ
ತೊಡಿಕಾನ ದೇವಾಲಯದ ಸಮೀಪದ ಮತ್ಸ್ಯತೀರ್ಥದಲ್ಲಿರುವ ಮೀನುಗಳು ನೋಡಲು ಬಲು ಸುಂದರ. ಇದನ್ನು ನೋಡುತ್ತ ಒಂದಷ್ಟು ಹೊತ್ತು ಇದ್ದರೆ ಮನಸ್ಸಿಗೆ ಖುಷಿಯಾಗುತ್ತದೆ. ಬೇಸಗೆ ಕಾಲದಲ್ಲಿ ನೀರಿನ ಕೊರತೆ ಎದುರಾದಾಗ ಇದನ್ನು ಸಂರಕ್ಷಣೆ ಮಾಡುವ ಅಗತ್ಯ ಇದೆ ಎಂದು ಪ್ರವಾಸಿಗ ದಿನೇಶ್‌ ಹೇಳಿದ್ದಾರೆ.

ಸಂರಕ್ಷಣೆಗೆ ಪ್ರಯತ್ನ
ದೇಗುಲಕ್ಕೆ ಸಂಬಂಧಿಸಿದ ಮತ್ಸ್ಯತೀರ್ಥ ಹೊಳೆಯಲ್ಲಿರುವ ಮಹಷೀರ್‌ ಜಾತಿಯ (ದೇವರ) ಮೀನುಗಳಿಗೆ ಬೇಸಗೆ ಕಾಲದಲ್ಲಿ ಸಮಸ್ಯೆ ಎದುರಾಗುತ್ತದೆ. ಮತ್ಸ್ಯತೀರ್ಥ ಹೊಳೆಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದೆ. ದೇವಾಲಯದ ವತಿಯಿಂದ ಮೀನುಗಳನ್ನು ಸಂರಕ್ಷಿಸಲು ಸಾಕಷ್ಟು ಪ್ರಯತ್ನ ಮಾಡಲಾಗುತ್ತಿದೆ. ಮೀನುಗಳನ್ನು ಸಂರಕ್ಷಿಸಲು ಮೀನುಗಾರಿಕೆ ಇಲಾಖೆ ವೈಜ್ಞಾನಿಕವಾಗಿ ಕ್ರಮ ಕೈಗೊಂಡರೆ ನಮಗೂ ಸಹಕಾರಿಯಾಗುತ್ತದೆ.
– ಆನಂದ ಕಲ್ಲಗದ್ದೆ,
 ವ್ಯವಸ್ಥಾಪಕರು, ಶ್ರೀ ಮಲ್ಲಿಕಾರ್ಜುನ ದೇಗುಲ

ತೇಜೇಶ್ವರ್‌ ಕುಂದಲ್ಪಾಡಿ

Advertisement

Udayavani is now on Telegram. Click here to join our channel and stay updated with the latest news.

Next