Advertisement

ಈ ವರ್ಷವೂ ಕೋವಿಡ್‌ ಮಾದರಿ ಎಸೆಸೆಲ್ಸಿ ಪರೀಕ್ಷೆಗೆ ಸಿದ್ಧತೆ

12:24 AM Dec 25, 2022 | Team Udayavani |

ದಾವಣಗೆರೆ: ಪ್ರಸ್ತುತ ಕೋವಿಡ್‌ ಸಾಂಕ್ರಾಮಿಕದ ಆತಂಕ ಇಲ್ಲದೇ ಇದ್ದರೂ ಪ್ರಸಕ್ತ ಶೈಕ್ಷಣಿಕ ವರ್ಷ ಮಾರ್ಚ್‌-ಎಪ್ರಿಲ್‌ನಲ್ಲಿ ನಡೆಯುವ ಎಸೆಸೆಲ್ಸಿ ಪರೀಕ್ಷೆಯಲ್ಲಿ ಕೋವಿಡ್‌-19 ನಿಯಮಾವಳಿ ಪಾಲನೆ ಜತೆಗೆ ಸಾಮಾಜಿಕ ಅಂತರ ಕಾಯ್ದುಕೊಂಡೇ ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳಿಗೆ ಆಸನ ವ್ಯವಸ್ಥೆ ಮಾಡಲು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ನಿರ್ಧರಿಸಿದೆ.

Advertisement

ನೂತನವಾಗಿ ರಚನೆಗೊಂಡಿರುವ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಇದೇ ಮೊದಲ ಬಾರಿಗೆ ನಡೆಸುತ್ತಿರುವ ಪ್ರಸಕ್ತ ಸಾಲಿನ (2022-23) ಎಸೆಸೆಲ್ಸಿ ಪರೀಕ್ಷೆಯನ್ನು ಸುವ್ಯವಸ್ಥಿತ ಹಾಗೂ ಅಚ್ಚುಕಟ್ಟಾಗಿ ನಡೆಸುವ ಉದ್ದೇಶದಿಂದ ಕೆಲವು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ಇದನ್ನು ಕಡ್ಡಾಯವಾಗಿ ಪಾಲಿಸಲು ಸಾರ್ವಜನಿಕ ಶಿಕ್ಷಣ ಇಲಾಖೆಯ ಎಲ್ಲ ಉಪನಿರ್ದೇಶಕರಿಗೆ ಸೂಚಿಸಿದೆ.

ಈ ಬಾರಿ ಪರೀಕ್ಷೆಯಲ್ಲಿಯೂ ಸರಕಾರದ ಕೋವಿಡ್‌-19 ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿ ಪರೀಕ್ಷಾ ಕೊಠಡಿಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಆಸನ ವ್ಯವಸ್ಥೆ ಮಾಡಬೇಕು. ಪರೀಕ್ಷಾ ಕೇಂದ್ರದ ಪ್ರತಿ ಕೊಠಡಿಗೆ 24 ವಿದ್ಯಾರ್ಥಿಗಳಂತೆ ಆಸನ ವ್ಯವಸ್ಥೆ ಮಾಡಿ ಪರೀಕ್ಷಾ ಕೇಂದ್ರ ರಚಿಸಬೇಕು ಎಂದು ನಿರ್ದೇಶನ ನೀಡಿದೆ.

ಮೂಲ ಸೌಲಭ್ಯಕ್ಕೆ ಆದ್ಯತೆ
ಪರೀಕ್ಷಾ ಕೇಂದ್ರಗಳಲ್ಲಿ ಅಗತ್ಯ ಮೂಲ ಸೌಲಭ್ಯ ಇರುವ ಬಗ್ಗೆ ಸ್ವತಃ ಕ್ಷೇತ್ರ ಶಿಕ್ಷಣಾಧಿಕಾರಿಗಳೇ ಕಡ್ಡಾಯವಾಗಿ ಭೇಟಿ ನೀಡಿ ಪರಿಶೀಲಿಸಿ ಖಚಿತಪಡಿಸಿಕೊಳ್ಳಬೇಕು. ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷಾ ತರಗತಿಗಳು, ಆಸನದ ವ್ಯವಸ್ಥೆಗಾಗಿ ಪೀಠೊಪಕರಣ, ಶಾಲೆಯ ಸುತ್ತ ಆವರಣ ಗೋಡೆ, ಶೌಚಾಲಯ, ಕುಡಿಯುವ ನೀರು, ಸಿಸಿಟಿವಿ ಕೆಮರಾ ಅಳವಡಿಸಿರುವುದು, ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲು ಸೂಕ್ತ ಸಾರಿಗೆ ವ್ಯವಸ್ಥೆ, ಪರೀಕ್ಷಾ ಕೇಂದ್ರಕ್ಕೆ ನಿಗದಿತ ಸಮಯದಲ್ಲಿ ಸುರಕ್ಷಿತವಾಗಿ ಪ್ರಶ್ನೆ ಪತ್ರಿಕೆ ವಿತರಿಸಲು ಯೋಗ್ಯ ರಸ್ತೆ ಮಾರ್ಗ ಸೇರಿದಂತೆ ಇನ್ನಿತರ ಅಗತ್ಯ ಸೌಲಭ್ಯಗಳು ಇರುವ ಬಗ್ಗೆ ಪರಿಶೀಲಿಸಬೇಕು ಎಂದು ಸೂಚಿಸಲಾಗಿದೆ.

ಸಿಸಿ ಕೆಮರಾ ಕಡ್ಡಾಯ
ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿ ಕೆಮರಾ ಅಳವಡಿಕೆ ಕಡ್ಡಾಯವಾಗಿದ್ದು, ಇವು ಪರೀಕ್ಷಾ ದಿನಗಳಲ್ಲಿ 24 ಗಂಟೆ ಕೆಲಸ ನಿರ್ವಹಿಸುವಂತಿರಬೇಕು. ಸಿಸಿ ಕೆಮರಾ ಅಳವಡಿಸದೇ ಇರುವ ಪರೀಕ್ಷಾ ಕೇಂದ್ರಗಳನ್ನು ಅನಿವಾರ್ಯವಾಗಿ ಉಪನಿರ್ದೇಶಕರು ಶಿಫಾರಸು ಮಾಡಿದ್ದರೆ ಅಲ್ಲಿ ಛಾಪಾ ಕಾಗದದಲ್ಲಿ ಜ.25ರೊಳಗೆ ಸಿಸಿ ಕೆಮರಾ ಅಳವಡಿಸುವ ಬಗ್ಗೆ ಒಪ್ಪಿಗೆ ಪತ್ರವನ್ನು ಕಡ್ಡಾಯವಾಗಿ ಪಡೆಯಬೇಕು ಎಂದು ತಿಳಿಸಲಾಗಿದೆ.

Advertisement

ಅತಿ ಸೂಕ್ಷ್ಮ, ಸೂಕ್ಷ್ಮ ಹಾಗೂ ಸಾಮಾನ್ಯ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷಾ ಅವ್ಯವಹಾರ ಪ್ರಕರಣಗಳಿದ್ದಲ್ಲಿ ಅಂತಹ ಕೇಂದ್ರಗಳನ್ನು ರದ್ದುಪಡಿಸಬೇಕು. ಯಾವುದೇ ಕಾರಣಕ್ಕೂ ಯಾರೇ ಶಿಫಾರಸು ಮಾಡಿದರೂ ಪುನಃ ಪರೀಕ್ಷಾ ಕೇಂದ್ರ ತೆರೆಯಬಾರದು. ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಹತ್ತಿರದ ಪರೀಕ್ಷಾ ಕೇಂದ್ರಗಳಿಗೆ ಸೇರ್ಪಡೆ ಮಾಡುವ ಬಗ್ಗೆ ಕ್ರಮ ವಹಿಸಬೇಕು. ಪ್ರವೇಶ ಪತ್ರ ಪಡೆದ ಬಳಿಕ ಬದಲಾವಣೆಗೆ ಆಸ್ಪದ ಇಲ್ಲ ಎಂದು ಸ್ಪಷ್ಟವಾಗಿ ಹೇಳಲಾಗಿದೆ.

ಡಿಡಿಪಿಐಗೆ ಸಂಪೂರ್ಣ ಹೊಣೆ
ಪರೀಕ್ಷಾ ಕೇಂದ್ರಗಳ ನಿಗದಿಯ ಸಂಪೂರ್ಣ ಜವಾಬ್ದಾರಿಯನ್ನು ಜಿಲ್ಲಾ ಉಪನಿರ್ದೇಶಕರು (ಆಡಳಿತ), ಜಿಲ್ಲಾ ನೋಡಲ್‌ ಅಧಿಕಾರಿಗಳು ಹಾಗೂ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ವಹಿಸಲಾಗಿದೆ. ಯಾವುದೇ ಪರೀಕ್ಷಾ ಕೇಂದ್ರ ರಚನೆ, ಶಾಲಾ ಸೇರ್ಪಡೆ, ಪರೀಕ್ಷಾ ಅಕ್ರಮಕ್ಕೆ ಸಂಬಂಧಿಸಿ ದೂರುಗಳು ಬಂದರೆ ಜಿಲ್ಲಾ ಉಪನಿರ್ದೇಶಕರನ್ನೇ (ಆಡಳಿತ) ಸಂಪೂರ್ಣ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಮಂಡಳಿ ಎಚ್ಚರಿಕೆ ನೀಡಿದೆ.

ಕ್ಷೇತ್ರ ಶಿಕ್ಷಣಾಧಿಕಾರಿಗಳು ಪರೀಕ್ಷಾ ಕೇಂದ್ರಗಳ ಪ್ರಸ್ತಾವನೆಯನ್ನು ನಿಗದಿತ ನಮೂನೆಗಳಲ್ಲಿ ತಯಾರಿಸಿ, ಜಿಲ್ಲಾ ಉಪನಿರ್ದೇಶಕರಿಗೆ ಡಿ.26ರೊಳಗೆ ನೀಡಬೇಕು. ಜಿಲ್ಲಾ ಹಂತದಲ್ಲಿ ಉಪನಿರ್ದೇಶಕರು, ನೋಡಲ್‌ ಅಧಿಕಾರಿಗಳು ಸಭೆ ನಡೆಸಿ ಸ್ವಯಂ ಪರಿಶೀಲಿಸಿ ಡಿ. 31ರೊಳಗೆ ಪರೀಕ್ಷಾ ಕೇಂದ್ರಗಳ ಪಟ್ಟಿಯನ್ನು ಮಂಡಳಿಗೆ ಕಳಹಿಸಬೇಕು ಎಂದು ಮಂಡಳಿ ಸೂಚನೆ ನೀಡಿದೆ.

ಪರೀಕ್ಷೆ ಬರೆವ ಮಕ್ಕಳಿದ್ದರೆ ಇಲ್ಲ ಜವಾಬ್ದಾರಿ
ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರ ಹೆಸರು ಸೂಚಿಸುವಾಗ ಕಡ್ಡಾಯವಾಗಿ ಅವರ ನಿವೃತ್ತಿ, ವರ್ಗಾವಣೆ, ಮರಣ, ಮುಂಭಡ್ತಿ, ಅನರ್ಹತೆ, ವೈದ್ಯಕೀಯ ದೀರ್ಘ‌ ರಜೆ, ದೂರು, ಪ್ರಸ್ತುತ ಸಾಲಿನಲ್ಲಿ 10ನೇ ತರಗತಿಯಲ್ಲಿ ಸ್ವಂತ ಮಕ್ಕಳು ವ್ಯಾಸಂಗ ಮಾಡಿ ಪರೀಕ್ಷೆಗೆ ಹಾಜರಾಗುತ್ತಿದ್ದರೆ, ಅವ್ಯವಹಾರದಲ್ಲಿ ಭಾಗಿಯಾಗಿರುವ ಇತ್ಯಾದಿ ಪ್ರಕರಣಗಳನ್ನು ಹೊರತುಪಡಿಸಿ ಅರ್ಹತೆ ಇರುವ ದಕ್ಷ ಅನುಭವಿ ಪ್ರೌಢಶಾಲಾ ಮುಖ್ಯ ಶಿಕ್ಷಕರನ್ನು ಪರೀಕ್ಷಾ ಕೇಂದ್ರದ ಅಧೀಕ್ಷಕರನ್ನಾಗಿ ನೇಮಕ ಮಾಡಬೇಕು. ಒಂದು ವೇಳೆ ಮುಖ್ಯ ಶಿಕ್ಷಕರ ಕೊರತೆ ಇದ್ದಲ್ಲಿ ಪಕ್ಕದ ಸರಕಾರಿ ಪ್ರೌಢಶಾಲೆಯ ಹಿರಿಯ ಸಹ ಶಿಕ್ಷಕರನ್ನು ಮುಖ್ಯ ಅಧೀಕ್ಷಕರನ್ನಾಗಿ ನೇಮಿಸಬೇಕು. ಶಿಕ್ಷಕರ ಸ್ವಂತ ಮಗ, ಮಗಳು ಎಸೆಸೆಲ್ಸಿ ಪರೀಕ್ಷೆಗೆ ಹಾಜರಾಗುತ್ತಿದ್ದರೆ ಅಂಥ ಶಿಕ್ಷಕರನ್ನು ಮುಖ್ಯ ಅಧೀಕ್ಷಕರು, ಕಸ್ಟೋಡಿಯನ್‌, ಕೊಠಡಿ ಮೇಲ್ವಿಚಾರಕರನ್ನಾಗಿ ನೇಮಿಸಬಾರದು ಎಂದು ಮಂಡಳಿ ನಿರ್ದೇಶನ ನೀಡಿದೆ.

ಎಸೆಸೆಲ್ಸಿ ಪರೀಕ್ಷೆಗೆ ಪರೀಕ್ಷಾ ಕೇಂದ್ರಗಳನ್ನು ರಚಿಸುವುದು ಅತ್ಯಂತ ಪ್ರಮುಖ ಹಾಗೂ ಮಹತ್ವಪೂರ್ಣ ಕಾರ್ಯವಾಗಿದೆ. ಪರೀಕ್ಷಾ ಕೇಂದ್ರ ರಚನೆಯ ಅನಂತರವೇ ಪ್ರವೇಶಪತ್ರ, ಕೇಂದ್ರಗಳ ಪಟ್ಟಿ, ಶಾಲಾವಾರು ಪಟ್ಟಿ, ಹಾಜರಾತಿ, ಪ್ರಶ್ನೆಪತ್ರಿಕೆ ಬೇಡಿಕೆ ಕಾರ್ಯ ನಡೆಯಲಿದೆ. ಪರೀಕ್ಷಾ ಕೇಂದ್ರ ರಚಿಸಲು ಅಗತ್ಯ ಉಪನಿರ್ದೇಶಕರಿಗೆ ಸೂಚನೆ ನೀಡಲಾಗಿದೆ.
– ಗೋಪಾಲಕೃಷ್ಣ ಎಚ್‌.ಎನ್‌., ನಿರ್ದೇಶಕರು (ಪರೀಕ್ಷೆಗಳು), ಕರ್ನಾಟಕ ಶಾಲಾ ಪರೀಕ್ಷೆ-ಮೌಲ್ಯನಿರ್ಣಯ ಮಂಡಳಿ

– ಎಚ್‌.ಕೆ. ನಟರಾಜ

Advertisement

Udayavani is now on Telegram. Click here to join our channel and stay updated with the latest news.

Next