ಹೊಸದಿಲ್ಲಿ: ತಮಿಳುನಾಡಿನ ಜನಪ್ರಿಯ ಸಾಹಸ ಕ್ರೀಡೆ ಜಲ್ಲಿಕಟ್ಟುಗೆ ಸಂಬಂಧಿಸಿದ ಪ್ರಕರಣದ ತೀರ್ಪನ್ನು ಶನಿವಾರ ಆಚರಿಸಲಾಗುವ ಪೊಂಗಲ್ ಹಬ್ಬದೊಳಗಾಗಿ ನೀಡಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಗಳನ್ನು ಸು.ಕೋರ್ಟ್ ಗುರುವಾರ ವಜಾಗೊಳಿಸಿದೆ. ಇದರಿಂದಾಗಿ ಜಲ್ಲಿಕಟ್ಟು ಆಚರಣೆಗೆ ನಿರ್ಬಂಧ ಮುಂದುವರಿದಂತಾಗಿದ್ದು, ಅದನ್ನು ಆಡುವ ತಮಿಳುನಾಡಿನ ಜನರ ಆಸೆ ಬಹುತೇಕ ಕಮರಿದಂತಾಗಿದೆ.
“ಆದೇಶ ಹೊರಡಿಸಿ ಎಂದು ನ್ಯಾಯಪೀಠವನ್ನು ಕೇಳುವುದು ಸರಿಯಲ್ಲ. ತೀರ್ಪಿನ ಕರಡು ಸಿದ್ಧವಾ ಗುತ್ತಿದೆ. ಜಲ್ಲಿಕಟ್ಟು ಆಯೋಜಿಸುವ ದಿನವಾದ ಶನಿವಾರ ದೊಳಗೆ ತೀರ್ಪು ಪ್ರಕಟಿಸಲು ಸಾಧ್ಯವಿಲ್ಲ’ ಎಂದು ನ್ಯಾಯಮೂರ್ತಿಗಳಾದ ದೀಪಕ್ ಮಿಶ್ರಾ ಹಾಗೂ ಭಾನುಮತಿ ಅವರಿದ್ದ ಪೀಠ ವಕೀಲರ ಗುಂಪೊಂದಕ್ಕೆ ತಿಳಿಸಿದೆ.
ಇದರ ಬೆನ್ನಲ್ಲೇ, ಜಲ್ಲಿಕಟ್ಟು ವಿಚಾರ ತಮಿಳುನಾಡಿನಲ್ಲಿ ರಾಜಕೀಯ ತಿರುವು ಪಡೆದಿದೆ. ಜಲ್ಲಿಕಟ್ಟುಗೆ ಅವಕಾಶ ಕೊಡಿಸಲು ಕೇಂದ್ರ, ರಾಜ್ಯ ಸರಕಾರಗಳು ಯಾವುದೇ ಕ್ರಮ ತೆಗೆದು ಕೊಳ್ಳುತ್ತಿಲ್ಲ ಎಂದು ಟೀಕಿಸಿರುವ ವಿಪಕ್ಷ ಡಿಎಂಕೆ, ಶುಕ್ರವಾರ ರಾಜ್ಯಾದ್ಯಂತ ಪ್ರತಿಭಟನೆಗೆ ಕರೆ ನೀಡಿದೆ. ಈ ನಡುವೆ ಕೆಲ ಸಂಘಟನೆಗಳು ಸುಪ್ರೀಂಕೋರ್ಟ್ ಈ ಹಿಂದಿನ ತೀರ್ಪಿನ ಹೊರತಾಗಿಯೂ ರಾಜ್ಯದ ಕೆಲವು ಕಡೆ ಜಲ್ಲಿಕಟ್ಟು ಸ್ಪರ್ಧೆ ನಡೆಸಿವೆ.
2014ರಲ್ಲಿ ಸುಪ್ರೀಂಕೋರ್ಟ್ ಜಲ್ಲಿಕಟ್ಟುಗೆ ನಿಷೇಧ ಹೇರಿತ್ತು. ಆದರೆ 2016ರಲ್ಲಿ ಕೇಂದ್ರ ಸರಕಾರ ಅದಕ್ಕೆ ಅನುಮತಿ ನೀಡಿ ಆದೇಶ ಹೊರಡಿಸಿತ್ತು. ಇದರ ವಿರುದ್ಧ ಅರ್ಜಿಗಳು ಸಲ್ಲಿಕೆಯಾಗಿದ್ದವು. ಅದನ್ನು ನ್ಯಾಯಾಲಯ ವಿಚಾರಣೆ ನಡೆಸಿದ್ದು, ತೀರ್ಪು ಪ್ರಕಟಿಸಬೇಕು ಎಂಬುದು ಜಲ್ಲಿಕಟ್ಟು ಪರ ಇರುವವರ ಬೇಡಿಕೆಯಾಗಿದೆ.
ಏನಿದು ಜಲ್ಲಿಕಟ್ಟು?
ಸಂಕ್ರಾಂತಿ ಹಬ್ಬದಂದು ಹುಚ್ಚೆದ್ದು ಓಡುವ ಗೂಳಿಗಳನ್ನು ಹಿಡಿಯುವ ಆಟವೇ ಈ ಜಲ್ಲಿಕಟ್ಟು. ದಷ್ಟಪುಷ್ಟ ವಾದ ಗೂಳಿಗಳ ಮೂಗುದಾರ ತೆಗೆದು ಅವುಗಳನ್ನು ರೋಷ ಬರಿಸಿ ಓಡಿಸಲಾಗುತ್ತದೆ. ಹೀಗೆ ಓಡುವ ಗೂಳಿಗಳನ್ನು ರಸ್ತೆ ಇಕ್ಕೆಲಗಳಲ್ಲಿ ನಿಂತಿರುವ ಜನರು ಹಿಡಿಯಲು ಯತ್ನಿಸುತ್ತಾರೆ. ಈ ವೇಳೆ ಜನರಿಗೆ ಮತ್ತು ಗೂಳಿಗಳಿಗೆ ಗಾಯಗಳಾತ್ತವೆ.
– ಸಂಕ್ರಾಂತಿಗೆ ತೀರ್ಪು ಅಸಾಧ್ಯ: ಸುಪ್ರೀಂ
– ಅನುಮತಿ ನಿರೀಕ್ಷಿಸಿದ್ದವರಿಗೆ ಹಿನ್ನಡೆ
– ಸರಕಾರಗಳ ವಿರುದ್ಧ ಇಂದು ಪ್ರತಿಭಟನೆ