Advertisement

ಈ ವರ್ಷವೂ ಅತ್ಯುತ್ತಮ ಡಿಫೆಂಡರ್‌ ಆಗಬೇಕು: ಫ‌ಜಲ್‌

07:25 AM Aug 04, 2017 | Team Udayavani |

ಹೈದರಾಬಾದ್‌: ಇರಾನಿನ ಡಿಫೆಂಡರ್‌, 100 ಟ್ಯಾಕಲ್‌ ಅಂಕಗಳನ್ನು ಪೂರ್ತಿಗೊಳಿಸಿದ ಮೊದಲ ವಿದೇಶಿ ಆಟಗಾರನೆಂಬ ಖ್ಯಾತಿಯ ಫ‌ಜಲ್‌ ಅತ್ರಾಚಲಿ 5ನೇ ಪ್ರೊ ಕಬಡ್ಡಿ ಪಂದ್ಯಾವಳಿಯ ಪ್ರಮುಖ ಆಕರ್ಷಣೆ. ನೂತನ ತಂಡವಾದ ಗುಜರಾತ್‌ ಫಾರ್ಚೂನ್‌ಜೈಂಟ್ಸ್‌ ತಂಡದ ಸ್ಟಾರ್‌ ಆಟಗಾರನಿಗೆ ಈ ಸಾಧನೆ ಕುರಿತು ಹೇಳಿದಾಗ “ರಿಯಲಿ? ಸೀರಿ ಯಸ್‌ಲಿ?’ ಎಂದು ಅಚ್ಚರಿ ವ್ಯಕ್ತಪಡಿಸಿದರು. ಬಳಿಕ “ಇಂಟರೆಸ್ಟಿಂಗ್‌’ ಎಂದು ನಕ್ಕರು. ಈ ಸಂದರ್ಭದಲ್ಲಿ ನಡೆದ ಮಾತುಕತೆ ಇಲ್ಲಿದೆ…

Advertisement

– ಫ‌ಜಲ್‌, ನೀವು ಪ್ರೊ ಕಬಡ್ಡಿಯಲ್ಲಿ 100 ಟ್ಯಾಕಲ್‌ ಅಂಕ ಸಂಪಾದಿಸಿದ ಮೊದಲ ಆಟಗಾರನಾಗಿದ್ದೀರಿ. ಈ ಸಾಧನೆ ಕುರಿತು ಏನು ಹೇಳುತ್ತೀರಿ?

ಈ ದೇಶಕ್ಕೆ ಬಂದು ಇಂಥದೊಂದು ಸಾಧನೆ ಮಾಡಿದ್ದಕ್ಕೆ ಬಹಳ ಖುಷಿಯಾಗುತ್ತಿದೆ. ಈ ವರ್ಷವೂ ನಾನು “ಬೆಸ್ಟ್‌ ಡಿಫೆಂಡರ್‌’ ಪ್ರಶಸ್ತಿ ಜತೆಗೆ ಹೆಚ್ಚಿನ ಬಹುಮಾನಗಳನ್ನು ಗೆಲ್ಲಬೇಕು. ಆದರೆ ನನಗೆ ನನ್ನ ತಂಡ ಬಹಳ ಮುಖ್ಯ. ನಾನು ಬರೀ ನನ್ನ ಅಂಕ ಹಾಗೂ ನನ್ನ ಬಗ್ಗೆ ಆಲೋಚಿಸುತ್ತ ಕುಳಿತರೆ ತಂಡಕ್ಕೆ ಹಾನಿಯಾಗುವ ಸಾಧ್ಯತೆ ಇದೆ. ನಾನು ಹೆಚ್ಚೆಚ್ಚು ಅಂಕ ಸಂಪಾದಿಸಬೇಕು, ಜತೆಗೆ ತಂಡವೂ ಗೆಲ್ಲುತ್ತ ಹೋಗಬೇಕು.

– ಮೊದಲ ಸಲ ಪ್ರೊ ಕಬಡ್ಡಿ ಆಡಲು ಬಂದಾಗ ನೀವು ಆಟಗಾರ ಮತ್ತು ವ್ಯಕ್ತಿಯಾಗಿ ಹೇಗಿದ್ದಿರಿ? ಅನಂತರದಲ್ಲಿ ನಿಮ್ಮ ಬೆಳವಣಿಗೆಯ ಮಟ್ಟ ಹೇಗಿದೆ?

ನಾನು 2ನೇ ಆವೃತ್ತಿಯ ಮೂಲಕ ಪ್ರೊ ಕಬಡ್ಡಿಗೆ ಆಗಮಿಸಿದೆ. ಆಗ ನನಗೆ ಇಂಗ್ಲಿಷ್‌ ತಿಳಿದಿರಲಿಲ್ಲ. ಹಿಂದಿ ಮಾತಾಡಲು ಬರುತ್ತಿರಲ್ಲಿ. ನನಗಿದು ಬಹಳ ಕಷ್ಟವಾಯಿತು. ಆದರೆ ಯು ಮುಂಬಾ ಆಟಗಾರರು ನನ್ನ ಆತ್ಮೀಯರಾದರು. ಎಲ್ಲರೂ ಸಹಕಾರ ನೀಡಿದರು. ಎಲ್ಲದಕ್ಕೂ ಮಿಗಿಲಾಗಿ ಅನೂಪ್‌ ಕುಮಾರ್‌ ಅವರಂಥ ದೊಡ್ಡ ಆಟಗಾರನೊಂದಿಗೆ ಆಡುವ ಅವಕಾಶ ಲಭಿಸಿತು. ಸಾಕಷ್ಟು ಅನುಭವಿ ಆಟಗಾರರು ತಂಡದಲ್ಲಿದ್ದರು. ಪಂದ್ಯವನ್ನು ನಿಯಂತ್ರಣಕ್ಕೆ ತರುವುದು ಹೇಗೆ ಎಂಬ ಮೊದಲ ಪಾಠವನ್ನು ನಾನು ಇವರಿಂದ ಕಲಿತೆ.

Advertisement

– ನೀವು ಪ್ರತಿನಿಧಿಸಿದ ಯು ಮುಂಬಾ, ಪಾಟ್ನಾ ಪೈರೇಟ್ಸ್‌ಗಳೆಲ್ಲ ಬಹಳ ಅನುಭವಿ ತಂಡಗಳು. ಆದರೆ ಗುಜರಾತ್‌ ಒಂದು ಯುವ ತಂಡ. ನಿಮ್ಮ ಪಾತ್ರ ಹೇಗೆ ಬದಲಾಗಿದೆ?

ಹೌದು, ಅಲ್ಲಿ ಅನುಭವಿ ಆಟಗಾರರಿದ್ದರು. ಇಲ್ಲಿ ಯುವ ಆಟಗಾರರ ಜತೆ ಆಡಬೇಕು. ತಂಡದಲ್ಲಿ ಅರ್ಧಕದಷ್ಟು ಮಂದಿ ಜೂನಿಯರ್. ಇದೊಂದು ಸವಾಲು. ಹೀಗಾಗಿ ಮೊದಲ ಸಲ ನನ್ನ ಆಟಕ್ಕೆ ಹೆಚ್ಚಿನ ಗಮನ ನೀಡುವುದರ ಜತೆಗೆ ಉಳಿದವರಿಗೂ ಮಾರ್ಗದರ್ಶನ ನೀಡಬೇಕಿದೆ. ಯಾವಾಗ ಕ್ಯಾಚ್‌ ಮಾಡಬೇಕು, ಯಾವಾಗ ಮಾಡಬಾರದು… ಹೀಗೆ. 

– ಪಂದ್ಯಕ್ಕೂ ಮೊದಲು ನರ್ವಸ್‌ ಆಗುತ್ತೀರಾ?

2ನೇ ಆವೃತ್ತಿಯಲ್ಲಿ ನರ್ವಸ್‌ ಆಗಿದ್ದೆ. ಆಗ ನಾನು ಹೊಸಬ. ಒಮ್ಮೆಲೇ ಸಾವಿರಾರು ಮಂದಿ ನನ್ನ ಆಟ ವೀಕ್ಷಿಸುತ್ತಿದ್ದಾರೆ ಎಂದೆಣಿಸಿ ಒತ್ತಡಕ್ಕೆ ಸಿಲುಕಿದ್ದೆ. ಆದರೆ ಈಗ ಈ ಸಮಸ್ಯೆ ಇಲ್ಲ. ನಾನೀಗ ಹೆಚ್ಚು ನಿರಾಳನಾಗಿದ್ದೇನೆ. 

– ನಿಮ್ಮ ವೈಯಕ್ತಿಕ ಫಾರ್ಮ್ ಬಗ್ಗೆ ಏನು ಹೇಳುತ್ತೀರಿ?
ಕಬಡ್ಡಿಯಲ್ಲಿ ನೀವು ಒಂದು ದಿನ ಶ್ರೇಷ್ಠ ಪ್ರದರ್ಶನ, ಇನ್ನೊಮ್ಮೆ ಸಾಮಾನ್ಯ ಆಟ, ಮತ್ತೂಂದು ದಿನ ತೀರಾ ಕೆಟ್ಟ ಆಟ ಆಡಬಹುದು. ಇದು ಮಾಮೂಲು. ನಾನು ಯಾವತ್ತೂ ಶ್ರೇಷ್ಠ ಪ್ರದರ್ಶನ ನೀಡಲು ಪ್ರಯತ್ನಿಸುತ್ತೇನೆ. ನನ್ನ “ಆ್ಯಂಕಲ್‌ ಹೋಲ್ಡ್‌’ ಉತ್ತಮವಾಗಿದೆ. ಹೀಗಾಗಿ ಇದರತ್ತ ಹೆಚ್ಚಿನ ಗಮನ ನೀಡುತ್ತೇನೆ. ಕೆಲವು ಸಲ ರೈಡರ್‌ಗಳನ್ನು ಕ್ಯಾಚ್‌ ಮಾಡಲು ಮುಂದಾಗುತ್ತೇನೆ. ಕೆಲವೊಮ್ಮೆ ಇದು ಅಸಾಧ್ಯವಾಗುತ್ತದೆ. 

– ನಿಮ್ಮ ರೈಡಿಂಗ್‌ ಬಗ್ಗೆ ಎಷ್ಟರ ಮಟ್ಟಿಗೆ ವಿಶ್ವಾಸ ಹೊಂದಿದ್ದೀರಿ?
ಇರಾನ್‌ನಲ್ಲಿ ನಾನು ರೈಡಿಂಗ್‌ ಮಾಡುವುದು ಸಾಮಾನ್ಯ. ಆದರೆ ಪ್ರೊ ಕಬಡ್ಡಿ ಲೀಗ್‌ ಹೆಚ್ಚು ವೃತ್ತಿಪರತೆಯಿಂದ ಕೂಡಿದೆ. ಅಕಸ್ಮಾತ್‌ ನಾನು ರೈಡ್‌ ಮಾಡಿ ಹಿಡಿಯಲ್ಪಟ್ಟರೆ ತಂಡಕ್ಕೆ ಲೆಫ್ಟ್ ಕಾರ್ನರ್‌ ಡಿಫೆಂಡರ್‌ನ ಕೊರತೆ ಮಾಡುತ್ತದೆ. ಇದು ದೊಡ್ಡ ಸಮಸ್ಯೆ. ಹೀಗಾಗಿ ನಾನು ನನ್ನ ಕೆಲಸವನ್ನಷ್ಟೇ ಮಾಡಿಕೊಂಡಿರಲು ಬಯಸಿದ್ದೇನೆ.

– ಇರಾನ್‌ ವಿಶ್ವಕಪ್‌ ಕಬಡ್ಡಿ ರನ್ನರ್‌ ಅಪ್‌ ತಂಡ. ನಿಮ್ಮಲ್ಲಿ ಕಬಡ್ಡಿ ಎಷ್ಟು ಜನಪ್ರಿಯ?
ನಾನಿರುವ ಉತ್ತರ ಇರಾನಿನ ಗೊರ್ಗಾನ್‌ನಲ್ಲಿ ಕಬಡ್ಡಿ ಭಾರೀ ಹೆಸರುವಾಸಿ. ಎಲ್ಲರಿಗೂ ಕಬಡ್ಡಿ ಬಗ್ಗೆ ಗೊತ್ತಿದೆ, ಆಸಕ್ತಿ ಇದೆ. ಆದರೆ ಇರಾನಿನ ಉಳಿದ ಕಡೆ ಇದೇ ಮಾತು ಅನ್ವಯಿಸದು. ಒಟ್ಟಾರೆ ದೇಶದ ಶೇ. 40ರಷ್ಟು ಮಂದಿ ಕಬಡ್ಡಿಯನ್ನು ಚೆನ್ನಾಗಿ ಬಲ್ಲರು. ಇರಾನ್‌ ರಾಷ್ಟ್ರೀಯ ತಂಡದಲ್ಲಿ ನನ್ನೂರಿನ 8 ಮಂದಿ ಆಟಗಾರರಿದ್ದಾರೆ!

Advertisement

Udayavani is now on Telegram. Click here to join our channel and stay updated with the latest news.

Next