ಬೆಂಗಳೂರು: ಪುಣೆಯಲ್ಲಿ ಗುರುವಾರ ನಡೆದ ಕ್ರಿಕೆಟ್ ವಿಶ್ವಕಪ್ 2023 ರ ಬಾಂಗ್ಲಾದೇಶ ವಿರುದ್ಧದ ಪಂದ್ಯದ ಬಳಿಕ ಶಾರ್ದೂಲ್ ಠಾಕೂರ್ ವಿರುದ್ಧ ಭಾರತೀಯ ಕ್ರಿಕೆಟ್ ತಂಡದ ಮಾಜಿ ವೇಗಿ ದೊಡ್ಡ ಗಣೇಶ್ ತೀವ್ರ ವಾಗ್ದಾಳಿ ನಡೆಸಿದರು.
ಗಾಯದ ಕಾರಣ ಹಾರ್ದಿಕ್ ಪಾಂಡ್ಯ ಅನುಪಸ್ಥಿತಿಯಲ್ಲಿ, ಶಾರ್ದೂಲ್ 9 ಓವರ್ ಬೌಲ್ ಮಾಡಿದರು ಮತ್ತು 6.60 ರ ಎಕಾನಮಿ ದರದಲ್ಲಿ 59 ರನ್ ಗಳನ್ನು ಬಿಟ್ಟುಕೊಟ್ಟರು. ಆಲ್‌ರೌಂಡರ್ ತೌಹಿದ್ ಹೃದೋಯ್ ಅವರ ವಿಕೆಟ್ ಪಡೆದರು. ಆದರೆ ಇದರಿಂದ ದೊಡ್ಡ ಗಣೇಶ್ ಪ್ರಭಾವಿತರಾಗಲಿಲ್ಲ. ಕೇವಲ ಬೌಲಿಂಗ್ ಆಧಾರದ ಮೇಲೆ, ಶಾರ್ದೂಲ್ ದೇಶೀಯ ಕ್ರಿಕೆಟ್ ನಲ್ಲಿ ಕರ್ನಾಟಕದ ಪ್ಲೇಯಿಂಗ್ ಇಲೆವೆನ್ ಗೂ ಆಯ್ಕೆಯಾಗುವುದಿಲ್ಲ ಎಂದು ದೊಡ್ಡ ಗಣೇಶ್ ಟೀಕಿಸಿದ್ದಾರೆ.
“ಶಾರ್ದೂಲ್ ಠಾಕೂರ್ ಅವರು ಅವರ ಬೌಲಿಂಗ್ ನಿಂದಾಗಿ ಅವರು ಭಾರತ ತಂಡ ಬಿಡಿ, ಯಾವುದೇ ಸ್ವರೂಪದಲ್ಲಿ ಕರ್ನಾಟಕದ ಪ್ಲೇಯಿಂಗ್ ಇಲೆವೆನ್ ಗೂ ಹೋಗಲು ಹೆಣಗಾಡುತ್ತಾರೆ” ಎಂದು ಅವರು ಸಾಮಾಜಿಕ ಮಾಧ್ಯಮ ಎಕ್ಸ್ (ಟ್ವಿಟರ್) ನಲ್ಲಿ ಪೋಸ್ಟ್ ಮಾಡಿದ್ದಾರೆ.
ಶಾರ್ದೂಲ್ ಅವರು 2023 ರ ಕ್ರಿಕೆಟ್ ವಿಶ್ವಕಪ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಮೊದಲ ಪಂದ್ಯದಲ್ಲಿ ಆಡಲಿಲ್ಲ. ಆದರೆ ಅವರು ಎರಡನೇ ಪಂದ್ಯಕ್ಕೆ ಆಯ್ಕೆಯಾದ ಅವರು ಅಂದಿನಿಂದ ಪ್ರತಿ ಪಂದ್ಯವನ್ನೂ ಆಡಿದ್ದಾರೆ.