Advertisement
ಕುಂದಾಪುರ ತಾ.ಪಂ. ವಿಭಜನೆ ಯಾಗಲಿದ್ದು, ಮೊದಲ ಹಂತವಾಗಿ ಬೈಂದೂರಿಗೆ ತಾ.ಪಂ. ಕಾರ್ಯ ನಿರ್ವಹಣಾಧಿಕಾರಿಯನ್ನು ನೇಮಿಸಿ ಸರಕಾರ ಇತ್ತೀಚೆಗಷ್ಟೇ ಆದೇಶ ಹೊರಡಿಸಿದೆ. ಅವಿಭಜಿತ ಕುಂದಾಪುರ ತಾಲೂಕಿನಲ್ಲಿರುವ 101 ಗ್ರಾಮಗಳ ಪೈಕಿ ಹಳ್ಳಿಹೊಳೆ ಗ್ರಾಮ ಒಳಗೊಂಡಂತೆ 28 ಗ್ರಾಮಗಳನ್ನು ಬೈಂದೂರಿಗೆ ಸೇರಿಸಲಾಗಿದೆ.
ಹಳ್ಳಿಹೊಳೆಯಿಂದ ಕುಂದಾಪುರಕ್ಕೆ ಸುಮಾರು 45 ಕಿ.ಮೀ. ದೂರವಿದೆ. ಬೈಂದೂರಿಗೂ ಹೆಚ್ಚು ಕಡಿಮೆ ಇಷ್ಟೇ ದೂರದ ಅಂತರವಿದೆ. ಆದರೆ ಕುಂದಾಪುರಕ್ಕೆ ಹಳ್ಳಿಹೊಳೆಗೆ ದಿನಕ್ಕೆ 7 ಬಸ್ ಹಲವು ಟ್ರಿಪ್ ಮಾಡುತ್ತದೆ. ಬೈಂದೂರಿಗೆ ಒಂದೂ ಬಸ್ ಕೂಡ ಇಲ್ಲ. ಬೆಳಗ್ಗೆ 7.30 ರಿಂದ ಆರಂಭಗೊಂಡು,7.45 ಕ್ಕೆ, 8.05 ಕ್ಕೆ 8.20 ಕ್ಕೆ 8.40 ಕ್ಕೆ, 9.50 ಕ್ಕೆ, 10.45 ಕ್ಕೆ, 11.45ಕ್ಕೆ, ಮಧ್ಯಾಹ್ನ 12.45 ಕ್ಕೆ, 1 ಗಂಟೆಗೆ, 1.50 ಕ್ಕೆ, 3.45 ಕ್ಕೆ, ಸಂಜೆ 5.05 ಹಾಗೂ 5.35 ಕ್ಕೆ ಹಳ್ಳಿಹೊಳೆಯಿಂದ ಕುಂದಾಪುರಕ್ಕೆ ಬಸ್ ಸಂಚರಿಸುತ್ತದೆ.
Related Articles
ಹಳ್ಳಿಹೊಳೆಯಿಂದ ತಾ.ಪಂ., ತಾ| ಕಚೇರಿ ಕೆಲಸ, ತಾಲೂಕು ಆಸ್ಪತ್ರೆ, ಗೋ ಆಸ್ಪತ್ರೆ, ಇನ್ನಿತರ ಪಡಿತರ ಚೀಟಿ ನೋಂದಣಿ ಸಹಿತ ಬೇರೆ ಬೇರೆ ಸರಕಾರಿ ಕೆಲಸಕ್ಕೆ ತಾಲೂಕು ಕೇಂದ್ರವಾದ ಬೈಂದೂರಿಗೆ ತೆರಳಬೇಕು. ಆದರೆ ಬೈಂದೂರಿಗೆ ಹಳ್ಳಹೊಳೆಯಿಂದ ನೇರವಾದ ಬಸ್ ಸಂಪರ್ಕವೇ ಇಲ್ಲ. ಬೈಂದೂರಿಗೆ ತೆರಳಬೇಕಾದರೆ ಹಳ್ಳಿಹೊಳೆಯಿಂದ ಜಡ್ಕಲ್, ಮುದೂರಿಗೆ ಹೋಗುವ ಬಸ್ ಹತ್ತಿ, ಅಲ್ಲಿಂದ ಕೊಲ್ಲೂರಿಗೆ ಹೋಗುವ ಬಸ್‌ನಲ್ಲಿ ತೆರಳಿ, ಹಾಲ್ಕಲ್‌ನಲ್ಲಿ ಇಳಿದು, ಗೋಳಿಹೊಳೆ ಮಾರ್ಗದ ಮೂಲಕ ಬೈಂದೂರಿಗೆ ಹೋಗುವ ಬಸ್ ಹತ್ತಿ ಹೋಗಬೇಕು. ಇಲ್ಲದಿದ್ದರೆ ಕುಂದಾಪುರಕ್ಕೆ ಬಂದು, ಕುಂದಾಪುರದಿಂದ ಬೈಂದೂರಿಗೆ ತೆರಳಬೇಕು. ಇದು ತುಂಬಾ ದೂರದ ಮಾರ್ಗವಾಗುತ್ತದೆ.
Advertisement
ಕುಂದಾಪುರದಲ್ಲಿಯೇ ಉಳಿಸಿಕೊಳ್ಳಲಿನಮಗೆ ನಮ್ಮ ಗ್ರಾಮವಾದ ಹಳ್ಳಿಹೊಳೆಯಿಂದ ತಾಲೂಕು ಕೇಂದ್ರಕ್ಕೆ ಏನಾದರೂ ಒಂದು ಕೆಲಸಕ್ಕೆ ಹೋಗಬೇಕಾದರೆ ಬೆಳಗ್ಗೆ ಹೊರಟರೆ ಒಂದು ದಿನ ಇಡೀ ಇದಕ್ಕೆ ಬೇಕಾಗುತ್ತದೆ. ಯಾಕೆಂದರೆ ಇಲ್ಲಿಂದ ಬೈಂದೂರಿಗೆ ನೇರವಾದ ಬಸ್ ವ್ಯವಸ್ಥೆಯಿಲ್ಲ. ಬೇರೆ ಬೇರೆ ಬಸ್ ಹತ್ತಿ ಬೈಂದೂರಿಗೆ ತೆರಳಬೇಕು. ಇದಕ್ಕಿಂತ ನಮಗೆ ಕುಂದಾಪುರಕ್ಕೆ ಹೋಗುವುದೇ ಹತ್ತಿರ ಹಾಗೂ ಸುಲಭದ ಮಾರ್ಗ. ಅದಕ್ಕೆ ಹಳ್ಳಿಹೊಳೆಯನ್ನು ಬೈಂದೂರು ಬದಲು ಕುಂದಾಪುರದಲ್ಲಿಯೇ ಉಳಿಸಿಕೊಳ್ಳಲಿ. ಇಲ್ಲವಾದರೆ ಇಲ್ಲಿಂದ ಬೈಂದೂರಿಗೆ ಬಸ್ ವ್ಯವಸ್ಥೆ ಕಲ್ಪಿಸಿಕೊಡಲಿ.
– ಸುರೇಶ್ ಪೂಜಾರಿ, ಗ್ರಾಮಸ್ಥರು, ಹಳ್ಳಿಹೊಳೆ ಬಸ್ ಸೌಕರ್ಯಕ್ಕೆ ಪ್ರಯತ್ನ
ತಾಲೂಕು ಕೇಂದ್ರವಾದ ಬೈಂದೂರಿಗೆ ಹಳ್ಳಿಹೊಳೆಯಿಂದ ಬಸ್ ಸೌಕರ್ಯ ಕಲ್ಪಿಸುವ ಸಂಬಂಧ ಕುಂದಾಪುರ ಡಿಪೋ ಮ್ಯಾನೇಜರ್ ಜತೆ ಮಾತನಾಡುತ್ತೇನೆ. ಈ ಬಗ್ಗೆ ಯಾರೂ ಕೂಡ ನನ್ನ ಗಮನಕ್ಕೆ ತಂದಿರಲಿಲ್ಲ. ಆದರೆ ಶೀಘ್ರ ಅಲ್ಲಿಂದ ಬೈಂದೂರಿಗೆ ಬಸ್ ಸೌಕರ್ಯ ಕಲ್ಪಿಸುವ ಬಗ್ಗೆ ಆದ್ಯತೆ ಮೇರೆಗೆ ಪ್ರಯತ್ನಿಸಲಾಗುವುದು.
– ಡಾ| ಎಸ್.ಎಸ್. ಮಧುಕೇಶ್ವರ್, ಸಹಾಯಕ ಆಯುಕ್ತ, ಕುಂದಾಪುರ ಉಪ ವಿಭಾಗ -ಪ್ರಶಾಂತ್ ಪಾದೆ