Advertisement

ಈ ಜಯ ಮೂವರಿಗೂ ಮುಖ್ಯ

12:06 PM Jun 02, 2018 | Team Udayavani |

ಬೆಂಗಳೂರು: ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಸರ್ಕಾರ ರಚನೆಯಾದ ಬೆನ್ನಲ್ಲೇ ಎದುರಾಗಿರುವ ಎರಡನೇ ಚುನಾವಣೆಗೆ ಮೂರು ಪ್ರಮುಖ ಪಕ್ಷಗಳು ಸಜ್ಜಾಗಿದ್ದು, ಸಂಖ್ಯಾಬಲ ಹೆಚ್ಚಿಸಿಕೊಳ್ಳುವ ದೃಷ್ಟಿಯಿಂದ ದೋಸ್ತಿ ಪಕ್ಷಗಳು ಹಾಗೂ ಬಿಜೆಪಿಗೆ ಜಯನಗರ ಕ್ಷೇತ್ರದ ಚುನಾವಣೆ ಗೆಲ್ಲುವುದು ಮಹತ್ವದ್ದೆನಿಸಿದೆ.

Advertisement

ಇತ್ತೀಚೆಗೆ ನಡೆದ ರಾಜರಾಜೇಶ್ವರಿನಗರ ಕ್ಷೇತ್ರದ ಚುನಾವಣೆಯಲ್ಲಿ ಪರಸ್ಪರ ಎದುರಾಳಿಗಳಾಗಿ ಸ್ಪರ್ಧಿಸಿದ್ದ ಕಾಂಗ್ರೆಸ್‌, ಜೆಡಿಎಸ್‌ ಪಕ್ಷಗಳು  ಜಯನಗರ ಕ್ಷೇತ್ರದಲ್ಲೂ ಮೈತ್ರಿ ಇಲ್ಲದೆ ಸ್ಪರ್ಧೆಗಿಳಿದಿವೆ. ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಅಭ್ಯರ್ಥಿಗಳಿಬ್ಬರೂ ಪ್ರಚಾರದಲ್ಲಿ ತೊಡಗಿದ್ದಾರೆ.

ಇತ್ತ ತನ್ನ ತೆಕ್ಕೆಯಲ್ಲಿದ್ದ ಕ್ಷೇತ್ರವನ್ನು ಉಳಿಸಿಕೊಳ್ಳಲು ಬಿಜೆಪಿ ತೀವ್ರ ಕಸರತ್ತು ನಡೆಸಿದೆ. ಪಕ್ಷೇತರ ಅಭ್ಯರ್ಥಿ ರವಿಕೃಷ್ಣಾರೆಡ್ಡಿ ಕೂಡ ವಿಭಿನ್ನ ರೀತಿಯ ಪ್ರಚಾರದ ಮೂಲಕ ಗಮನ ಸೆಳೆದಿದ್ದು, ಚುನಾವಣಾ ಕಣ ರಂಗೇರುತ್ತಿದೆ. ಶಾಸಕರಾಗಿದ್ದ ಬಿ.ಎನ್‌.ವಿಜಯಕುಮಾರ್‌ ಅವರ ನಿಧನದಿಂದಾಗಿ ಜಯನಗರ ಕ್ಷೇತ್ರದ ಮತದಾನ ಜೂ.11ಕ್ಕೆ ಮುಂದೂಡಿಕೆಯಾಗಿತ್ತು.

ಬಳಿಕ ಬಿಜೆಪಿಯು ವಿಜಯಕುಮಾರ್‌ ಅವರ ಸಹೋದರ ಬಿ.ಎನ್‌.ಪ್ರಹ್ಲಾದ್‌ ಬಾಬು ಅವರನ್ನು ಕಣಕ್ಕಿಳಿಸಿದೆ. ಇದರಿಂದ ಟಿಕೆಟ್‌ ಆಕಾಂಕ್ಷಿಗಳಾಗಿದ್ದ ಮಾಜಿ ಮೇಯರ್‌ ಎಸ್‌.ಕೆ.ನಟರಾಜ್‌, ಪಾಲಿಕೆ ಸದಸ್ಯ ಎನ್‌.ನಾಗರಾಜ್‌, ಪಾಲಿಕೆ ಮಾಜಿ ಸದಸ್ಯ ಸಿ.ಕೆ.ರಾಮಮೂರ್ತಿ ಅಸಮಾಧಾನಗೊಂಡಿದ್ದರು.

ಪಕ್ಷದ ಹಿರಿಯ ನಾಯಕರು ಮಾತುಕತೆ ನಡೆಸಿದ ಬಳಿಕ ನಟರಾಜ್‌, ರಾಮಮೂರ್ತಿ, ಅಭ್ಯರ್ಥಿ ಪರ ಪ್ರಚಾರದಲ್ಲಿ ತೊಡಗಿದ್ದಾರೆ. ಆದರೆ ಬೈರಸಂದ್ರ ವಾರ್ಡ್‌ನ ಬಿಜೆಪಿ ಸದಸ್ಯ ಎನ್‌.ನಾಗರಾಜ್‌ ಚುನಾವಣೆ ಚಟುವಟಿಕೆಗಳಿಂದ ದೂರ ಉಳಿದಿದ್ದಾರೆ.

Advertisement

ಮೊದಲಿಗೆ ವಾರ್ಡ್‌ವಾರು ಕಾರ್ಯಕರ್ತರ ಸಭೆ ನಡೆಸಿದ ಪ್ರಹ್ಲಾದ್‌ಬಾಬು, ನಂತರ ಕ್ಷೇತ್ರದಾದ್ಯಂತ ಮತ ಯಾಚನೆ ಮಾಡುತ್ತಿದ್ದಾರೆ. ಪಾದಯಾತ್ರೆ ಮೂಲಕ ಜನರನ್ನು ನೇರವಾಗಿ ಭೇಟಿಯಾಗಿ ಮತ ಯಾಚಿಸುತ್ತಿದ್ದಾರೆ. ಇತ್ತೀಚೆಗೆ ಮಾಜಿ ಉಪಮುಖ್ಯಮಂತ್ರಿ ಆರ್‌.ಅಶೋಕ್‌ ಅವರು ರೋಡ್‌ ಶೋ ನಡೆಸಿ ಕಾರ್ಯಕರ್ತರಲ್ಲಿ ಹುರುಪು ತುಂಬಿದ್ದಾರೆ.

ಜಯನಗರ ಕ್ಷೇತ್ರಕ್ಕೆ ಹೊಂದಿಕೊಂಡಿರುವ ಕ್ಷೇತ್ರಗಳ ಬಿಜೆಪಿ ಶಾಸಕರು, ಪಾಲಿಕೆ ಸದಸ್ಯರನ್ನು ಪ್ರಚಾರಕ್ಕೆ ನಿಯೋಜಿಸುವ ಮೂಲಕ ಮತದಾರರನ್ನು ಸೆಳೆಯುವ ಪ್ರಯತ್ನ ನಡೆದಿದೆ.  ಕ್ಷೇತ್ರದಲ್ಲಿ ಅಭ್ಯರ್ಥಿ ಗೆಲುವಿನ ಹೊಣೆಯನ್ನು ಪಕ್ಷವು ಕೇಂದ್ರ ಸಚಿವ ಅನಂತಕುಮಾರ್‌ ಅವರಿಗೆ ವಹಿಸಿದ್ದು, ಗೆಲುವಿಗಾಗಿ ಕಾರ್ಯತಂತ್ರ ಹೆಣೆಯುತ್ತಿದ್ದಾರೆ.

ಕಾಂಗ್ರೆಸ್‌ ಕಸರತ್ತು: ಮಾಜಿ ಗೃಹ ಸಚಿವ ರಾಮಲಿಂಗಾರೆಡ್ಡಿ ಅವರ ಪುತ್ರಿ ಸೌಮ್ಯಾ ರೆಡ್ಡಿ ಅವರ ಸ್ಪರ್ಧೆಯಿಂದಾಗಿ ಜಯನಗರ ಕ್ಷೇತ್ರದ ಚುನಾವಣೆ ಪ್ರತಿಷ್ಠಿತ ಕಣವಾಗಿ ಮಾರ್ಪಟ್ಟಿದೆ. 2008ರ ಕ್ಷೇತ್ರ ಪುನರ್‌ವಿಂಗಡಣೆಗೂ ಮೊದಲು ತಾವು ಪ್ರತಿನಿಧಿಸುತ್ತಿದ್ದ ಬಹಳಷ್ಟು ಪ್ರದೇಶಗಳು ಸದ್ಯ ಜಯನಗರ ಕ್ಷೇತ್ರದಲ್ಲಿರುವುದದರಿಂದ ಹಳೆಯ ನಂಟು ಹಿಡಿದು ಬೆಂಬಲ ಪಡೆಯುವ ಕಾರ್ಯದಲ್ಲಿ ರಾಮಲಿಂಗಾರೆಡ್ಡಿ ನಿರತರಾಗಿದ್ದಾರೆ. ಚುನಾವಣೆ ಘೋಷಣೆಗೂ ಮುನ್ನ ಅನೌಪಚಾರಿಕವಾಗಿ ಪ್ರಚಾರ ನಡೆಸುತ್ತಿದ್ದ ಸೌಮ್ಯಾರೆಡ್ಡಿ ಅವರು ಇದೀಗ ಬಿರುಸಿನ ಪ್ರಚಾರದ ಮೊರೆ ಹೋಗಿದ್ದಾರೆ.

ಮುಖ್ಯವಾಗಿ ಯುವಜನತೆ, ನೌಕರ ವರ್ಗ, ಮಧ್ಯಮ ವರ್ಗ ಹಾಗೂ ಮಧ್ಯಮ ಕೆಳ ವರ್ಗದವರನ್ನು ಸೆಳೆಯಲು ಕಸರತ್ತು ನಡೆಸುತ್ತಿದ್ದಾರೆ. ಜತೆಗೆ ಕಾಂಗ್ರೆಸ್‌ನ ಸಾಂಪ್ರದಾಯಿಕ ಮತಗಳನ್ನು ಸೆಳೆಯುವ ಕಾರ್ಯವನ್ನೂ ಮುಂದುವರಿಸಿದ್ದಾರೆ. ರಾಮಲಿಂಗಾರೆಡ್ಡಿ ಅವರು ನಿರಂತರವಾಗಿ ಕಾರ್ಯಕರ್ತರ ಸಭೆ, ಪ್ರಚಾರ ನಡೆಸುವ ಮೂಲಕ ಪುತ್ರಿಯ ಗೆಲುವಿಗೆ ಬೆವರು ಹರಿಸುತ್ತಿದ್ದಾರೆ.

ಜೆಡಿಎಸ್‌ನಿಂದಲೂ ಸ್ಪರ್ಧೆ: ರಾಜರಾಜೇಶ್ವರಿನಗರ ಕ್ಷೇತ್ರದಂತೆ ಜಯನಗರ ಕ್ಷೇತ್ರದಲ್ಲೂ ಕಾಂಗ್ರೆಸ್‌, ಜೆಡಿಎಸ್‌ ಅಭ್ಯರ್ಥಿಗಳು ಆರೋಗ್ಯಕರ ಸ್ಪರ್ಧೆ ನಡೆಸುತ್ತಿದ್ದಾರೆ. ಜೆಡಿಎಸ್‌ ಅಭ್ಯರ್ಥಿ ಕಾಳೇಗೌಡ ಅವರು ಕ್ಷೇತ್ರದಲ್ಲಿ ಪ್ರಚಾರ ಕಾರ್ಯ ಚುರುಕುಗೊಳಿಸಿದ್ದಾರೆ. ಸಮ್ಮಿಶ್ರ ಸರ್ಕಾರ ರಚನೆಯಾಗಿರುವ ಹಿನ್ನೆಲೆಯಲ್ಲಿ ಪಕ್ಷದ ಹಿರಿಯ ನಾಯಕರನ್ನು ಪ್ರಚಾರಕ್ಕೆ ಕರೆತಂದು ಮತದಾರರನ್ನು ಸೆಳೆಯುವ ಲೆಕ್ಕಾಚಾರ ನಡೆಸಿದ್ದಾರೆ.

ರವಿಕೃಷ್ಣಾರೆಡ್ಡಿ ಬಿರುಸಿನ ಪ್ರಚಾರ: ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ರವಿಕೃಷ್ಣಾರೆಡ್ಡಿ, ಕ್ಷೇತ್ರದಲ್ಲಿ ಈಗಾಗಲೇ ಹಲವು ಸುತ್ತಿನ ಪ್ರಚಾರ ನಡೆಸಿದ್ದು, ಬದಲಾವಣೆಗಾಗಿ ಅವಕಾಶ ನೀಡಿ ಎಂದು ಮತದಾರರಲ್ಲಿ ಮನವಿ ಮಾಡುತ್ತಿದ್ದಾರೆ. ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸಿ ಅದರಲ್ಲೇ ಚುನಾವಣಾ ಠೇವಣಿಯನ್ನು ಪಾವತಿಸಿ ಗಾಂಧಿಗಿರಿ ವಿಧಾನದ ಮೂಲಕ ಗಮನ ಸೆಳೆಯುತ್ತಿದ್ದಾರೆ.

ಪಕ್ಷಗಳಿಗೆ ಪ್ರತಿಷ್ಠೆ: ಸಮ್ಮಿಶ್ರ ಸರ್ಕಾರ ರಚನೆಯಾದ ನಂತರ ಮೊದಲಿಗೆ ಎದುರಾದ ರಾಜರಾಜೇಶ್ವರಿನಗರ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆಲುವು ಸಾಧಿಸಿರುವುದು ಸಹಜವಾಗಿಯೇ ಮೈತ್ರಿ ಸರ್ಕಾರದ ಪಕ್ಷಗಳ ಹುರುಪು ಹೆಚ್ಚಿಸಿದೆ. ಇದೇ ಆತ್ಮವಿಶ್ವಾಸದಲ್ಲಿ ಜಯನಗರ ಕ್ಷೇತ್ರವನ್ನೂ ತೆಕ್ಕೆಗೆ ತೆಗೆದುಕೊಳ್ಳಲು ತೀವ್ರ ಕಸರತ್ತು ನಡೆಸಿವೆ. ಬಿಜೆಪಿ ಕೂಡ ಕ್ಷೇತ್ರದಲ್ಲಿ ಮತ್ತೆ ಕಮಲ ಅರಳಿಸಲು ಕಾರ್ಯತಂತ್ರ ಹೆಣೆಯುತ್ತಿದ್ದು, ಕುತೂಹಲ ಮೂಡಿಸಿದೆ.

ಅಣುಕು ಮತದಾನ: ಜಯನಗರ ವಿಧಾನಸಭಾ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ಶುಕ್ರವಾರ ಅಣುಕು ಮತದಾನ ಪ್ರಕ್ರಿಯೆ ನಡೆಸಲಾಯಿತು. ಜಯನಗರದ ಎನ್‌ಎಂಕೆಆರ್‌ವಿ ಕಾಲೇಜಿನಲ್ಲಿ ಚುನಾವಣಾ ಅಭ್ಯರ್ಥಿಗಳು, ಏಜೆಂಟರ ಸಮ್ಮುಖದಲ್ಲಿ ಚುನಾವಣಾಧಿಕಾರಿ ಡಾ.ಮಮತಾ ಅವರು ಮಾಹಿತಿ ನೀಡಿದರು. ಇವಿಎಂ, ವಿವಿಪ್ಯಾಟ್‌ ಯಂತ್ರಗಳ ಕಾರ್ಯ ನಿರ್ವಹಣೆ, ಸಿದ್ಧತೆ ಬಗ್ಗೆ ತಿಳಿಸಿಕೊಟ್ಟರು. ನಂತರ 1000 ಅಣುಕು ಮತದಾನದ ಮೂಲಕ ಇಡೀ ಪ್ರಕ್ರಿಯೆ ಬಗ್ಗೆ ಪ್ರಾತ್ಯಕ್ಷಿಕೆ ನೀಡಿದರು ಎಂದು ಪ್ರಕಟಣೆ ತಿಳಿಸಿದೆ.

* ಎಂ.ಕೀರ್ತಿಪ್ರಸಾದ್‌ 

Advertisement

Udayavani is now on Telegram. Click here to join our channel and stay updated with the latest news.

Next