ಶಿರಸಿ: ರಾಜ್ಯದಲ್ಲಿ ಕಲೆ ಏಳ್ಗೆಗೆ ಕಲಾವಿದರಿಗೆ, ಕಲಾ ಸಂಘಟನೆಗಳಿಗೆ ನೀಡಲಾಗುವ ವಾರ್ಷಿಕ ಅನುದಾನ ಈ ಬಾರಿ ಫೆಬ್ರವರಿ ಪೂರ್ಣಗೊಂಡರೂ ಸಿಗುವುದು ಕಷ್ಟ. ಕಳೆದ ಎರಡು ವರ್ಷಗಳಿಂದ ಆಮೆ ನಡಿಗೆಯಾಗಿದ್ದ ಅನುದಾನ ಬಿಡುಗಡೆಗೆ ಈ ಬಾರಿ ಕೂಡ ವಿಳಂಬದ ಗ್ರಹಣ ಹಿಡಿಯಲಿದೆ.
ಸಂಸತ್ ಚುನಾವಣೆ ಘೋಷಣೆಯಾದರೆ ಅದು ಇನ್ನೂ ಮುಂದಕ್ಕೆ ಹೋಗುವ ಸಾಧ್ಯತೆಗಳಿವೆ. ಬಿಡುಗಡೆಯಾದರೂ ಬಳಕೆಗೆ ನೀತಿ ಸಂಹಿತೆ ಅಡ್ಡಿಯಾಗುವ ಸಾಧ್ಯತೆಯಿದೆ. ಕೊನೇ ಹಂತದಲ್ಲಿ ಸಿಕ್ಕರೂ ಗಡಿಬಿಡಿ ಕಾರ್ಯಕ್ರಮದ ಅಪಾಯವೂ ಇದೆ. ನಿಗದಿತ ಸಮಯದಲ್ಲಿ ಅನುದಾನ ಬಳಕೆ ಆಗದೇ ಹೋದರೂ ಸಂಸ್ಥೆ ಕಪ್ಪು ಪಟ್ಟಿಗೆ ಸೇರುವ ಅಪಾಯವಿದೆ.
ಕರ್ನಾಟಕ ಹಾಗೂ ಹೊರ ನಾಡಿನಲ್ಲಿ ಕಲೆ-ಸಂಸ್ಕೃತಿ ಏಳ್ಗೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಲಾವಿದರಿಗೆ ವೇಷಭೂಷಣ, ವಾದ್ಯ ಪರಿಕರಗಳ ಖರೀದಿಗೆ ಗರಿಷ್ಠ 30 ಸಾವಿರ ರೂ. ಹಾಗೂ ಕಲಾ ಸಂಘಟನೆಗಳಿಗೆ ಕಲಾ ಕಾರ್ಯಕ್ರಮ ನಡೆಸಲು ಅನುದಾನ ನೀಡುತ್ತದೆ. ಕಳೆದ ಆಗಸ್ಟ್‌ನಲ್ಲಿ ಇಲಾಖೆಯ ವೆಬ್‌ಸೈಟ್ ಮೂಲಕ ಆಹ್ವಾನಿಸಲಾದ ಅರ್ಜಿ, ಪ್ರತಿ ಜಿಲ್ಲೆಯಿಂದ ಸರಾಸರಿ 500ರಿಂದ ಸಾವಿರ ಸಂಖ್ಯೆಯಲ್ಲಿ ಭರಣ ಆಗಿದ್ದವು. ಸಂಸ್ಥೆಯ ಸಂಪೂರ್ಣ ಮಾಹಿತಿ, ದಾಖಲೆ, ಲೆಕ್ಕ ತಪಾಸಣಾ ವರದಿ, ´ೋಟೋ, ಮುಂದಿನ ವರ್ಷದ ಕ್ರಿಯಾಯೋಜನೆ, ಹಿಂದಿನ ವರ್ಷ ಅನುದಾನ ಪಡೆದಿದ್ದರೆ ಅದರ ಅನುದಾನ ಬಳಕೆ ಪ್ರಮಾಣ ಪತ್ರಗಳನ್ನೂ ಸೇರಿಸಿ ಸಂಸ್ಥೆಗಳ ಪ್ರಮುಖರು, ಕಲಾವಿದರು ಅರ್ಜಿ ಸಲ್ಲಿಸಿದ್ದರು. ಕೊಡುವ ಅನುದಾನ ನವೆಂಬರ್ ಒಳಗೆ ಬಳಕೆಗೆ ಸಿಗುವಂತೆ ಇರಬೇಕಿತ್ತು.
ಹೊಸ ವರಸೆ:ಕಳೆದ ವರ್ಷದಿಂದ ಅನುದಾನಕ್ಕೆ ಅರ್ಜಿ ಸಲ್ಲಿಸಿದ ಕಲಾವಿದರು, ಸಂಘಟನೆಗಳು ಆಯಾ ಜಿಲ್ಲೆಯ ಸಹಾಯಕ ನಿರ್ದೇಶಕರ ಕಚೇರಿಗೆ ತೆರಳಿ ಮೂಲ ದಾಖಲೆಗಳನ್ನು ತೋರಿಸಿ ಸಂದರ್ಶನ ನೀಡಿ ವಾಪಸ್ಸಾಗಬೇಕಿತ್ತು. ಈ ಬಾರಿ ಅರ್ಜಿಯನ್ನು ಆಗಸ್ಟ್ ವೇಳೆಗೆ ಕರೆದಿದ್ದು, ಅರ್ಜಿ ಆಹ್ವಾನಕ್ಕೂ ಒಂದು ತಿಂಗಳು ವಿಳಂಬ ಆಗಿತ್ತು. ಉತ್ತರ ಕನ್ನಡ, ಶಿವಮೊಗ್ಗ, ಮಂಗಳೂರು, ಬೆಳಗಾವಿ, ರಾಯಚೂರು, ಮೈಸೂರು, ಕಲಬುರಗಿ, ಹುಬ್ಬಳ್ಳಿಯಂತಹ ಜಿಲ್ಲೆಗಳಲ್ಲಿ ಕೆಲವು ತಾಲೂಕುಗಳ ಕಲಾವಿದರು ಮೂರು, ನಾಲ್ಕು ತಾಸುಗಳ ಕಲಾ ಪ್ರಯಾಣ ಮಾಡಿ ದಾಖಲೆ ಪರಿಶೀಲನೆಗೆ ಹೋಗಬೇಕಿತ್ತು. 4-5 ಸಾವಿರ ರೂ.ಖರ್ಚು ಮಾಡಿದರೂ ಅನುದಾನ ಬರುವುದು ಗ್ಯಾರಂಟಿಯಿಲ್ಲ.
ಇನ್ನು, ಕಲಾ ಪ್ರದರ್ಶನ ನೀಡುತ್ತ ಊರೂರು ಸುತ್ತುವ ಕಲಾವಿದರಾಗಿದ್ದರೆ ಅವರಿಗೆ ಮಾಹಿತಿಯೇ ಸಿಗದೆ, ಅರ್ಹತೆ ಇದ್ದರೂ ವಂಚನೆಗೊಳಗಾಗುತ್ತಿದ್ದರು. ಈ ಬಾರಿ ಕೂಡ ಕೆಲವು ಜಿಲ್ಲೆಗಳಲ್ಲಿ ಅರ್ಜಿ ಸಲ್ಲಿಸಿದ ಸಂಘಟನೆಗಳ ದಾಖಲೆ ಪರಿಶೀಲನೆ ಆಗಿದ್ದು, ಇನ್ನೂ ಕೆಲವು ಜಿಲ್ಲೆಗಳಲ್ಲಿ ಈ ಪ್ರಕ್ರಿಯೆ ಇನ್ನೂ ಪೂರ್ಣಗೊಂಡಿಲ್ಲ. ಏಕೆಂದರೆ, ಕೆಲ ಜಿಲ್ಲೆಗಳಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಿಗೆ ಮಾತ್ರ ಇಲಾಖೆ ಬೇರೆಯಾಗಿದೆ. ಇಲ್ಲಿ ಪ್ರಭಾರಿ ಹೊರೆಯಾಗಿದೆ.
ನಿರ್ದೇಶಕರೇ ಇಲ್ಲ: ಅನುದಾನಗಳ ದಾಖಲೆ, ಕ್ರಿಯಾಯೋಜನೆ ನೋಡಿ, ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ, ಆರ್ಥಿಕ ಇಲಾಖೆಯಿಂದ ಅನುದಾನ ಹಂಚಿಕೆಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಲು ಕನಿಷ್ಟ ಒಂದೂವರೆಯಿಂದ ಎರಡು ತಿಂಗಳು ಬೇಕು. ಇಲಾಖೆಯಲ್ಲಿ ಅಂತಿಮ ಅನುಮೋದನೆ ನೀಡುವುದು ನಿರ್ದೇಶಕರ ಹೊಣೆ. ಆದರೆ, ನ.30ಕ್ಕೆ ಇಲಾಖೆಯ ನಿರ್ದೇಶಕ ಸ್ಥಾನದಿಂದ ಎನ್.ಆರ್. ವಿಶುಕುಮಾರ ಸೇವಾ ನಿವೃತ್ತರಾಗಿದ್ದಾರೆ. ಜೊತೆಗೆ, ಬೆಳಗಾವಿಯಲ್ಲಿ ಚಳಿಗಾಲ ಅ ಧಿವೇಶನ ಕೂಡ ಆರಂಭವಾಗುತ್ತಿದೆ. ಇದರ ಬಳಿಕವೇ ನಿರ್ದೇಶಕರ ನೇಮಕವಾಗುವ ಸಾಧ್ಯತೆಗಳಿವೆ. ಜನವರಿಯಲ್ಲಿ ನೇಮಕಗೊಂಡರೂ ಫೆಬ್ರವರಿ ಕೊನೆಗೂ ಅನುದಾನ ಬರುವ ನಿರೀಕ್ಷೆಯಿಲ್ಲ.
ನಿರಂತರವಾಗಿ ಕೆಲಸ ಮಾಡುವ ಸಂಸ್ಥೆಗಳಿಗೆ ಒಂದಿಷ್ಟು ಅನುದಾನ ನೀಡಬೇಕು. ಕಲಾವಿದರನ್ನು ಅಲೆಸದೆ ಗೌರವದಿಂದ ಕಾಣುವ ಕಾರ್ಯ ಆಗಬೇಕು. ಸಕ್ರಿಯವಾಗಿರುವ ಸಂಸ್ಥೆಗಳು ವರ್ಷಕ್ಕೆ ನಾಲ್ಕಾದರೂ ಕಾರ್ಯಕ್ರಮ ನಡೆಸಲು ಅನುದಾನ ಕೊಡಬೇಕು.
– ವೆಂಕಟೇಶ ಹೆಗಡೆ, ಕಲಾವಿದ
ಈ ಬಾರಿ ಮಾರ್ಚ್ ಒಳಗೆ ಅನುದಾನದ ನೆರವು ಬರಬಹುದು. ನಿರ್ದೇಶಕರ ಸ್ಥಾನ ನಿವೃತ್ತಿಯಿಂದ ತೆರವಾಗಿದೆ. ಇನ್ನೂ ಅನೇಕ ಜಿಲ್ಲೆಗಳಿಂದ ಪರಿಶೀಲಿಸಿದ ಅರ್ಜಿ ಬರಬೇಕಿದೆ. ಫೆಬ್ರವರಿಗೆ ಅನುದಾನದ ಪಟ್ಟಿ ಬಿಡುಗಡೆ ಆಗಬಹುದು.
– ಹೆಸರು ಹೇಳ ಬಯಸದ ಹಿರಿಯ ಅಧಿಕಾರಿ
– ರಾಘವೇಂದ್ರ ಬೆಟ್ಟಕೊಪ್ಪ