ಬೆಂಗಳೂರು: ಕೋವಿಡ್ ಹೊಡೆತದ ಬಳಿಕ ಆರ್ಥಿಕ ಚಟುವಟಿಕೆಗಳು ಚೇತರಿಕೆಯಾಗುತ್ತಿದ್ದಂತೆ ವಿದ್ಯುತ್ ಬೇಡಿಕೆಯೂ ಸಹಜ ಸ್ಥಿತಿಗೆ ಮರಳುತ್ತಿದೆ. ಐದು ತಿಂಗಳಿಂದ ಸ್ಥಗಿತಗೊಂಡಿದ್ದ ರಾಯಚೂರಿನ ಆರ್‌ಟಿಪಿಎಸ್ ಮತ್ತು ಬಿಟಿಪಿಎಸ್ ಉಷ್ಣ ಸ್ಥಾವರಗಳಲ್ಲಿ ಬುಧವಾರ ವಿದ್ಯುತ್ ಉತ್ಪಾದನೆ ಆರಂಭವಾಗಿದ್ದು, ಈ ಬೇಸಗೆಗೆ ವಿದ್ಯುತ್ ಕ್ಷಾಮ ಇರುವುದಿಲ್ಲ ಎಂಬ ಸಿಹಿ ಸುದ್ದಿಯೂ ಹೊರಬಿದ್ದಿದೆ.
ಸದ್ಯದ ಬೇಡಿಕೆಯ ಶೇ. 50ರಷ್ಟು ಸೌರಶಕ್ತಿ ವಿದ್ಯುತ್ ಪೂರೈಕೆಯಾಗುತ್ತಿದೆ. ಜಲಾಶಯಗಳಲ್ಲಿ ನೀರಿನ ಸಂಗ್ರಹ ಉತ್ತಮವಾಗಿದೆ. ಹಾಗಾಗಿ ಮುಂದಿನ ಜೂನ್‌ವರೆಗೆ ರಾಜ್ಯದಲ್ಲಿ ವಿದ್ಯುತ್ ಕೊರತೆ ತಲೆದೋರುವ ಸಾಧ್ಯತೆ ಕಡಿಮೆ.
ಕೋವಿಡ್ ಕಾರಣಕ್ಕೆ ಕುಸಿದಿದ್ದ ವಿದ್ಯುತ್ ಬೇಡಿಕೆ ಮತ್ತೆ ಸಹಜದತ್ತ ಮರಳಿದೆ. ನಿತ್ಯ 11,500ರಿಂದ 12,000 ಮೆ.ವ್ಯಾ. ವಿದ್ಯುತ್‌ಗೆ ಬೇಡಿಕೆ ಸೃಷ್ಟಿಯಾಗುತ್ತಿದ್ದು, ಮುಂದಿನ ತಿಂಗಳಲ್ಲಿ ಬೇಡಿಕೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಮಾರ್ಚ್ ವರೆಗೆ ವಿದ್ಯುತ್ ಬೇಡಿಕೆ ಗರಿಷ್ಠಕ್ಕೆ ಏರಿಕೆಯಾಗಲಿದ್ದು, ಎಪ್ರಿಲ್ ಅನಂತರ ತಗ್ಗುವ ನಿರೀಕ್ಷೆ ಇದೆ ಎಂದು ಮೂಲಗಳು ತಿಳಿಸಿವೆ.
ವಿದ್ಯುತ್ ಉತ್ಪಾದನೆ ಅಬಾಧಿತ
ಜಲವಿದ್ಯುತ್ ಘಟಕಗಳಿರುವ ಜಲಾಶಯಗಳಲ್ಲಿ ಸದ್ಯ ನೀರಿನ ಸಂಗ್ರಹ ಉತ್ತಮವಾಗಿದೆ. ಸದ್ಯ ಒಟ್ಟು ಸಾಮರ್ಥ್ಯದ ಶೇ. 70ರಷ್ಟು ಮಾತ್ರ ಜಲವಿದ್ಯುತ್ ಉತ್ಪಾದನೆಯಾಗುತ್ತಿದ್ದು, ಜೂನ್‌ವರೆಗೆ ಪರಿಸ್ಥಿತಿ ನಿಭಾಯಿಸಬಹುದು. ಜತೆಗೆ 5,000ದಿಂದ 6000 ಮೆ.ವ್ಯಾ.ನಷ್ಟು ವಿದ್ಯುತ್ ಸೌರ ಮತ್ತು ಪವನ ಶಕ್ತಿ ಮೂಲದಿಂದ ಪೂರೈಕೆಯಾಗುತ್ತಿದೆ.
ಕಲ್ಲಿದ್ದಲು ದಾಸ್ತಾನು ವಿವರ (ಟನ್‌ಗಳಲ್ಲಿ)
ಆರ್‌ಟಿಪಿಎಸ್ 6.08 ಲಕ್ಷ
ಬಿಟಿಪಿಎಸ್ 1.56 ಲಕ್ಷ
ವೈಟಿಪಿಎಸ್ 1.84 ಲಕ್ಷ