Advertisement

ಈ ಬಾರಿ ಪಿಯು ವಿದ್ಯಾರ್ಥಿಗಳಿಗೆ ದಸರಾ ರಜೆಯ ಮಜಾ ಇಲ್ಲ !

10:46 AM Sep 09, 2019 | sudhir |

ಬೆಂಗಳೂರು: ಪರೀಕ್ಷೆ ಮುಗಿಸಿ ರಜೆಯ ಮಜಾ ಅನುಭವಿಸುವ ಅವಕಾಶ ಪ್ರಸಕ್ತ ಸಾಲಿನ ಪಿಯುಸಿ ವಿದ್ಯಾರ್ಥಿಗಳಿಗಿಲ್ಲ.!

Advertisement

ಪ್ರತಿವರ್ಷ ದಸರಾ ರಜೆಗೂ ಮೊದಲೇ ಮಧ್ಯ ವಾರ್ಷಿಕ ಪರೀಕ್ಷೆ ನಡೆಯುತ್ತದೆ. ವಿದ್ಯಾರ್ಥಿಗಳು ಪರೀಕ್ಷೆ ಪೂರೈಸಿ ದಸರಾ ರಜೆಯನ್ನು ಕುಟುಂಬದ ಸದಸ್ಯರ ಜತೆ ಅಥವಾ ಸಂಬಂಧಿಕರ ಮನೆಗೆ ಹೋಗಿ ಖುಷಿ ಯಿಂದ ಕಳೆಯುತ್ತಿದ್ದರು.

ಆದರೆ ಈ ಬಾರಿ ಅದಕ್ಕೆಲ್ಲ ಕಡಿವಾಣ ಬಿದ್ದಿದೆ. ರಜೆಯ ಬಳಿಕವೇ ಮಧ್ಯವಾರ್ಷಿಕ ಪರೀಕ್ಷೆ ನಡೆಸಲು ಪದವಿ ಪೂರ್ವ ಶಿಕ್ಷಣ ಇಲಾಖೆಯಿಂದ ಕಾಲೇಜುಗಳಿಗೆ ಸೂಚನೆ ನೀಡಲಾಗಿದೆ ಮತ್ತು ಪಿಯು ಇಲಾಖೆಯ ಮಾರ್ಗಸೂಚಿಯಲ್ಲೂ ಪ್ರಕಟಿಲಾಗಿದೆ.

2019-20ನೇ ಸಾಲಿನ ಶೈಕ್ಷಣಿಕ ಅವಧಿಯು 2020ರ ಎ.20ಕ್ಕೆ ಕೊನೆಯಾಗಲಿದೆ. ಎ.20ರಿಂದ ಬೇಸಗೆ ರಜೆ ಆರಂಭವಾಗಲಿದೆ. ಇದರ ಜತೆಗೆ ಪ್ರತಿ ವರ್ಷ ಸುಮಾರು 17 ದಿನಗಳ ದಸರಾ ರಜೆ ನೀಡಲಾಗುತ್ತದೆ. ದಸರಾ ರಜೆಗೂ ಮೊದಲೇ ಒಂದು ಕಿರು ಪರೀಕ್ಷೆ ಹಾಗೂ ಮಧ್ಯವಾರ್ಷಿಕ ಪರೀಕ್ಷೆ ಪೂರೈಸಿಕೊಳ್ಳಲಾಗುತ್ತದೆ. ಇಲ್ಲಿಗೆ ಮೊದಲಾರ್ಧದ ಬಹುತೇಕ ಪಠ್ಯಗಳು ಪೂರ್ಣಗೊಂಡಿರುತ್ತವೆ. ರಜೆ ಮುಗಿಸಿ ಬರುವ ವಿದ್ಯಾರ್ಥಿಗಳಿಗೆ ಪಠ್ಯದ ಎರಡನೇ ಅರ್ಧದ ಬೋಧನೆ ಮತ್ತು ಎರಡನೇ ಕಿರು ಪರೀಕ್ಷೆ ನಡೆಸಲಾಗುತ್ತದೆ.

ರಜಾ ದಿನದಲ್ಲಿ ವಿದ್ಯಾರ್ಥಿಗಳು ಅಭ್ಯಾಸ ಮಾಡಬೇಕಾದ ಸಂದಿಗ್ಧತೆಗೆ ತಲುಪಿದ್ದಾರೆ ಎಂದು ಇಲಾಖೆ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

Advertisement

ಸೆ.28ರಿಂದ ದಸರಾ ರಜೆ
ಈ ವರ್ಷದ ದಸರಾ ರಜೆ ಸೆ. 28ರಿಂದ ಆರಂಭವಾಗಿ ಅ. 13ರ ತನಕ ಇರಲಿದೆ. ಮಳೆ, ಪ್ರವಾಹದಿಂದ ಹಲವು ದಿನ ಜಿಲ್ಲಾಧಿಕಾರಿಗಳು ರಜೆ ಘೋಷಣೆ ಮಾಡಿರುವುದರಿಂದ ಕೆಲವೊಂದು ಜಿಲ್ಲೆಗಳಲ್ಲಿ ಈ ಅವಧಿಯಲ್ಲೂ ವಿಶೇಷ ತರಗತಿ ನಡೆಸುವ ಸಾಧ್ಯತೆ ಇದೆ. ಅ.14ರಿಂದ ಇಲಾಖೆಯ ಎರಡನೇ ಅರ್ಧ ಭಾಗದ ಶೈಕ್ಷಣಿಕ ಚಟುವಟಿಕೆ ಆರಂಭವಾಗಲಿದೆ.

ಪದವಿಪೂರ್ವ ಶಿಕ್ಷಣ ಇಲಾಖೆಯ ಪೂರ್ವ ನಿಯೋಜಿತ ಮಾರ್ಗಸೂಚಿಯಂತೆ ರಜೆಯ ಅನಂತರ ಮಧ್ಯವಾರ್ಷಿಕ ಪರೀಕ್ಷೆ ನಡೆಸಲು ಸೂಚನೆ ನೀಡಿದ್ದೇವೆ. ಬಹುತೇಕ ಜಿಲ್ಲೆಗಳು ಇದಕ್ಕಾಗಿ ವೇಳಾಪಟ್ಟಿ ಯನ್ನು ಸಿದ್ಧಪಡಿಸಿಕೊಂಡಿವೆ. ವಿದ್ಯಾರ್ಥಿಗಳಿಗೆ ಇದರಿಂದ ಯಾವುದೇ ಸಮಸ್ಯೆ ಆಗದು.
-ಅಸಾದುಲ್ಲಾ ಖಾನ್‌ ಜಂಟಿ ನಿರ್ದೇಶಕ (ಪ್ರಭಾರ), ಪಿಯು ಇಲಾಖೆ

ಇಲಾಖೆಯಿಂದ ಪಿಯು ಕಾಲೇಜಿಗೆ ಬೇಕಾದ ಮೂಲ ಸೌಕರ್ಯ ಒದಗಿಸಲಿ. ಬಹುತೇಕ ಕಾಲೇಜುಗಳಲ್ಲಿ ಖಾಯಂ ಉಪನ್ಯಾಸಕರು, ಪ್ರಾಂಶುಪಾಲರಿಲ್ಲ, ಅತಿಥಿ ಉಪನ್ಯಾಸಕರ ನೇಮಕಕ್ಕೆ ಅವಕಾಶ ನೀಡುತ್ತಿಲ್ಲ. ಇದರ ಪರಿಣಾಮ ಮಧ್ಯವಾರ್ಷಿಕ ಪರೀಕ್ಷೆ ಮೇಲೆ ಬಿದ್ದಿರಬಹುದು.
-ತಿಮ್ಮಯ್ಯ ಪುರ್ಲೆ, ಅಧ್ಯಕ್ಷ, ಪಿಯು ಕಾಲೇಜು ಉಪನ್ಯಾಸಕರ ಸಂಘ

–  ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next