Advertisement

ಈ ಬಾರಿ ಮಳೆಯಿಂದ ಅಪಾಯವಿಲ್ಲ : ಹಿರಿಯ ಭೂ ವಿಜ್ಞಾನಿ ಡಾ|ಪ್ರಕಾಶ್‌

12:39 AM Apr 29, 2022 | Team Udayavani |

ಮಡಿಕೇರಿ: ಜಿಯೋ-ಮೀಟಿಯೋ ರಾಲಜಿ ಎಂಬ ಹೊಸ ವೈಜ್ಞಾನಿಕ ಅಂತರ ಶಿಸ್ತೀಯ ಅಧ್ಯಯನ ಸಿದ್ಧಾಂತದ ಮೂಲಕ ವಿಶ್ವದೆಲ್ಲೆಡೆ ಸಂಭವಿಸುವ ಜ್ವಾಲಾಮುಖಿ ವಿಸ್ಫೋಟಗಳನ್ನು ಆಧರಿಸಿ ನಡೆಸಿದ ಸಂಶೋಧನೆಯಂತೆ ಪ್ರಸಕ್ತ 2022ರ ಮುಂಗಾರಿನಲ್ಲಿ ಕರ್ನಾಟಕ ಮತ್ತು ಕೇರಳ ರಾಜ್ಯದಲ್ಲಿ ಈ ಹಿಂದಿನ ಸಾಲುಗಳಲ್ಲಿ ಸಂಭವಿಸಿದ ಭಾರೀ ಪ್ರಮಾಣದ ಮಳೆ, ಪ್ರವಾಹ ಮತ್ತು ಭೂಕುಸಿತದಂತಹ ಪ್ರಾಕೃತಿಕ ವಿಕೋಪಗಳ ಅಪಾಯ ಇರುವುದಿಲ್ಲವೆಂದು ಜಿಯೋಲಾಜಿಕಲ್‌ ಸರ್ವೇ ಆಫ್ ಇಂಡಿಯಾದ ನಿವೃತ್ತ ಪ್ರಧಾನ ಉಪ ನಿರ್ದೇಕರಾದ ಹಿರಿಯ ಭೂ ವಿಜ್ಞಾನಿ ಡಾ| ಎಚ್‌.ಎಸ್‌.ಎಂ. ಪ್ರಕಾಶ್‌ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

Advertisement

ಕೊಡಗನ್ನು ಸೇರಿದಂತೆ ಕರ್ನಾಟಕದ ಹಲವೆಡೆ ಮತ್ತು ಕೇರಳ ರಾಜ್ಯದಲ್ಲಿ 2018ರಲ್ಲಿ ಭಾರೀ ಪ್ರಮಾಣದ ಮಳೆಯಾಗಿ ಅನಾಹುತಗಳು ಸಂಭವಿಸಿತ್ತು. ಇದರ ಕಾರಣಗಳನ್ನು ತನ್ನ ಹೊಸ ಸಿದ್ಧಾಂತದಡಿ ವೈಜ್ಞಾನಿಕ ಮಾಹಿತಿಗಳನ್ನು ಕಲೆ ಹಾಕಿ ಪರೀಕ್ಷೆಗೆ ಒಳಪಡಿಸಿದಾಗ, ಮಾರಿಷಸ್‌ ದ್ವೀಪದ ಬಳಿಯ ಸಮುದ್ರದಾಳದ ಜ್ವಾಲಾಮುಖೀ 2018ರ ಆಗಸ್ಟ್‌ಗೂ ಮುಂಚೆ ಮೂರು ತಿಂಗಳಿನಿಂದ ಸಕ್ರಿಯವಾಗಿದ್ದು, ಇದರಿಂದ ಅತ್ಯಂತ  ಹೆಚ್ಚಿನ ತೇವಾಂಶ ಅತ್ಯಧಿಕ ಮಟ್ಟದಲ್ಲಿ ಹೆಚ್ಚಿರುವುದು ಭಾರೀ ಮಳೆಗೆ  ಕಾರಣವೆಂಬುದು ಸ್ಪಷ್ಟವಾಯಿತು. ಈ ನೂತನ  ವೈಜ್ಞಾನಿಕ ಸಿದ್ಧಾಂತದಡಿ 2020ರಲ್ಲಿ ಮತ್ತು 2021ರಲ್ಲಿ ಸಾಧಾರಣ ಮಟ್ಟದ ಮಳೆಯಾ ಗುತ್ತದೆಂದು ತಾನು ನೀಡಿದ ಮುನ್ಸೂಚನೆಗಳು ದೃಢವಾಗಿವೆ ಎಂದು ಹೇಳಿದರು.

ಭೂಮಿಯ ಮೇಲೆ 400ಕ್ಕೂ ಹೆಚ್ಚಿನ ಜ್ವಾಲಾಮುಖೀಗಳಿದ್ದು, ಇವುಗಳಲ್ಲಿ ಪ್ರತಿನಿತ್ಯ 40ಕ್ಕೂ ಹೆಚ್ಚಿನ ಜ್ವಾಲಾಮುಖೀಗಳು ಸಕ್ರಿಯವಾಗಿರುತ್ತವೆ. ಇವುಗಳ ಬಗ್ಗೆ ನಿರಂತರವಾದ ಮಾಹಿತಿಯನ್ನು ಕಲೆ ಹಾಕಿ, ಜ್ವಾಲಾಮುಖೀ ಸ್ಫೋಟದಿಂದ ಭೂಮಿಯ ವಾಯು ಪದರಗಳಲ್ಲಿ ಉಂಟಾಗುವ ಬದಲಾವಣೆ, ತೇವಾಂಶದ ಹೆಚ್ಚಳದ ಕುರಿತು ವೈಜ್ಞಾನಿಕವಾಗಿ ಮಾಹಿತಿಯನ್ನು ಕಲೆ ಹಾಕಿ ನಡೆಸಿರುವ ಆಳವಾದ ಅಧ್ಯಯನಗಳಿಂದ ಈ ಬಾರಿ  ಗಂಭೀರ ಸ್ವರೂಪದ ಮಳೆ ಮುಂಗಾರಿನ ಅವಧಿಯಲ್ಲಿ ಇರುವುದಿಲ್ಲವೆಂದು ಗುರುತಿಸಿರುವುದಾಗಿ ಸ್ಪಷ್ಟಪಡಿಸಿದರು.

ಸಾಮಾನ್ಯವಾಗಿ ಹವಾಮಾನ ಇಲಾಖೆ ಭೂಮಿಯ ವಾಯು ಪದರಗಳ ವ್ಯತ್ಯಯವನ್ನಷ್ಟೆ ಅಂದಾಜಿಸಿ ಮಳೆಯ ಮುನ್ಸೂಚನೆಗಳನ್ನು ನೀಡುತ್ತದೆ. ಆದರೆ ನಿರಂತರ ಅಧ್ಯಯನದ ಮೂಲಕ ಜ್ವಾಲಾಮುಖೀಗಳ ಪರಿಣಾಮ ಭೂಮಿಯ ಮೇಲ್ಭಾಗದ ನಾಲ್ಕು ಪದರಗಳಲ್ಲಿನ ಬದಲಾವಣೆಗಳನ್ನು ಸ್ಪಷ್ಟವಾಗಿ ಗುರುತಿಸುವ ವೈಜ್ಞಾನಿಕ ಅಂತರ ಶಿಸ್ತೀಯ ಅಧ್ಯಯನ ಸಿದ್ಧಾಂತವನ್ನು ವಿಜ್ಞಾನ ಜಗತ್ತಿಗೆ ತಾವು ನೀಡಿದ್ದು, ಅದರ ಮೂಲಕ ಮುಂಗಾರಿನ ಮುನ್ಸೂಚನೆಯನ್ನು ವೈಜ್ಞಾನಿಕ ಹಿನ್ನೆಲೆಯನ್ನು ಆಧರಿಸಿ ನೀಡುತ್ತಿರುವುದಾಗಿ ಸ್ಪಷ್ಟಪಡಿಸಿದರು.

ಕುಶಾಲನಗರ ಪ್ರವಾಹ ಸಂತ್ರಸ್ತರ ವೇದಿಕೆ ಅಧ್ಯಕ್ಷ‌ ಎಂ.ಎನ್‌. ಚಂದ್ರಮೋಹನ್‌ ಪತ್ರಿಕಾ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Advertisement

ತಾಪ ಹೆಚ್ಚಳಕ್ಕೆ ಕಾರ್ಬನ್‌ ಡಯಾಕ್ಸೈಡ್‌ ಕಾರಣವಲ್ಲ :  ಭೂಮಿಯ ತಾಪಮಾನ ಹೆಚ್ಚಳಕ್ಕೆ ಕಾರ್ಖಾನೆಗಳಿಂದ, ವಾಹನಗಳಿಂದ ಉತ್ಪತ್ತಿ ಯಾಗುವ ಕಾರ್ಬನ್‌ ಡಯಾಕ್ಸೈಡ್‌ ಕಾರಣ ವೆನ್ನುವುದಕ್ಕೆ ಯಾವುದೇ ಸ್ಪಷ್ಟ ಪುರಾವೆಗಳಿ ಲ್ಲವೆಂದು ಪ್ರತಿಪಾದಿಸಿದ ಡಾ| ಎಚ್‌.ಎಸ್‌.ಎಂ. ಪ್ರಕಾಶ್‌ ಅವರು, ಕಾರ್ಖಾನೆಗಳು, ವಾಹನಗಳು ಇಲ್ಲದ ನೂರಾರು ವರ್ಷಗಳ ಹಿಂದೆಯೂ ಭಾರೀ ಪ್ರಮಾಣದ ಬರಗಾಲ ಉಂಟಾಗಿರುವುದನ್ನು ಇತಿಹಾಸದ ಮೂಲಕ ನಾವು ಕಾಣಬಹುದು ಎಂದು  ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next