Advertisement

ಈ ಬಾರಿ ಶಾಲಾರಂಭದಲ್ಲಿ ವಿದ್ಯಾರ್ಥಿಗಳಿಗೆ ಸಿಗದು ಪಠ್ಯಪುಸ್ತಕ

03:33 AM May 07, 2022 | Team Udayavani |

ಉಡುಪಿ/ಬೆಂಗಳೂರು: ರಾಷ್ಟ್ರೀಯ ಶಿಕ್ಷಣ ನೀತಿಯಿಂದಾಗಿ ಪಠ್ಯಪುಸ್ತಕ ಪರಿಷ್ಕರಣೆ ಮತ್ತು ರಷ್ಯಾ-ಉಕ್ರೇನ್‌ ನಡುವಿನ ಯುದ್ಧದಿಂದಾಗಿ ಮುದ್ರಣ ಕಾಗದದ ಅಲಭ್ಯತೆ ಹಿನ್ನೆಲೆಯಲ್ಲಿ ಈ ಬಾರಿ ಶಾಲಾರಂಭದ ವೇಳೆಗೆ ಪಠ್ಯಪುಸ್ತಕ ಸಿಗುವುದು ಸಂಶಯ.

Advertisement

ಇದೇ ಮೇ 16ರಿಂದ ರಾಜ್ಯಾದ್ಯಂತ 1ನೇ ತರಗತಿಯಿಂದ 10ನೇ ತರಗತಿವರೆಗೆ ಶಾಲೆ ಆರಂಭವಾಗಲಿದೆ. ಆದರೆ ಇನ್ನೂ ಶೇ.30ಕ್ಕಿಂತಲೂ ಹೆಚ್ಚು  ಮುದ್ರಣ ಬಾಕಿ ಇದೆ. ಇಲಾಖೆ ಪ್ರಕಾರ ಶೇ. 32 ಹಾಗೂ ಪಠ್ಯಪುಸ್ತಕ ಸಂಘದ ಪ್ರಕಾರ ಶೇ. 35ರಷ್ಟು ಮುದ್ರಣ ಬಾಕಿ ಇದೆ. ಸುರೇಶ್‌ ಕುಮಾರ್‌ ಶಿಕ್ಷಣ ಸಚಿವರಾಗಿದ್ದಾಗ ಪಠ್ಯಪುಸ್ತಕ ಪರಿಷ್ಕರಣೆಗಾಗಿ ರಚಿಸಲಾಗಿದ್ದ ರೋಹಿತ್‌ ಚಕ್ರತೀರ್ಥ ನೇತೃತ್ವದ ಸಮಿತಿ ನೀಡಿದ ವರದಿ  ಆಧಾರದಲ್ಲೇ ಹೊಸದಾಗಿ ಪುಸ್ತಕ ಮುದ್ರಿಸಬೇಕಾಗಿದೆ.  ಇದರಿಂದಾಗಿ  2021-22ನೇ ಸಾಲಿನಲ್ಲಿ 83 ಶೀರ್ಷಿಕೆಯಡಿ ಮುದ್ರಣಗೊಂಡಿರುವ 6,76,997 ಪಠ್ಯಪುಸ್ತಕಗಳು ಅನುಪಯುಕ್ತವಾಗಲಿದೆ.

ಎರಡು ತಿಂಗಳು ವಿಳಂಬ?
ಕಚ್ಚಾ ಕಾಗದ ಇಲ್ಲದ ಕಾರಣ ಕಳೆದ 13 ದಿನಗಳಿಂದ ಪಠ್ಯಪುಸ್ತಕ ಮುದ್ರಣ ಸ್ಥಗಿತಗೊಳಿಸಲಾಗಿದೆ. ಸರಕಾರ ಒಂದು ಲೋಡ್‌ ಪೇಪರ್‌ ನೀಡುತ್ತೇನೆ ಎಂದಿತ್ತು. ಆದರೂ ನೀಡಿಲ್ಲ. ಈವರೆಗೆ ಶೇ.55ರಷ್ಟು ಪುಸ್ತಕಗಳು ಮಾತ್ರ ಮುದ್ರಣಗೊಂಡಿವೆ. ಮುದ್ರಣಕ್ಕೆ ಕಾಗದ ಸರಬರಾಜು ಮಾಡುತ್ತಿರುವ ಆಂಧ್ರ ಪ್ರದೇಶ ಮತ್ತು ತಮಿಳುನಾಡು ಮಿಲ್‌ಗ‌ಳು ಪ್ರತಿ ತಿಂಗಳು ಕೇವಲ ಶೇ.10ರಷ್ಟು ಕಾಗದ ಮಾತ್ರ ಸರಬರಾಜು ಮಾಡುವುದಾಗಿ ತಿಳಿಸಿವೆ. ಈ ಹಿನ್ನೆಲೆಯಲ್ಲಿ ಉಳಿದ ಪುಸ್ತಕಗಳು ಮುದ್ರಣವಾಗಲು ಕನಿಷ್ಠ ಆಗಸ್ಟ್‌ ತಿಂಗಳವರೆಗೆ ಸಮಯ ಬೇಕಾಗಬಹುದು ಎಂದು ಕರ್ನಾಟಕ ಪಠ್ಯಪುಸ್ತಕ ಮುದ್ರಕರ ಸಂಘದ ಅಧ್ಯಕ್ಷ ಸತ್ಯ ಸುಬ್ರಹ್ಮಣ್ಯ ತಿಳಿಸಿದ್ದಾರೆ.

ಏನೆಲ್ಲ ಬದಲಾವಣೆ?
ಟಿಪ್ಪು ಸುಲ್ತಾನ್‌ಗೆ ಸಂಬಂಧಿಸಿದ ಕೆಲವು ವಿಷಯಗಳನ್ನು 7ನೇ ತರಗತಿಯ ಪಠ್ಯದಿಂದ ತೆಗೆದು ಹಾಕಲಾಗಿದೆ. ಹಾಗೆಯೇ 8ನೇ ತರಗತಿಯ ಪಠ್ಯದಲ್ಲಿ ಸಿಂಧು ನಾಗರಿಕತೆಗೆ ಸಂಬಂಧಿಸಿ ಕೆಲವು ಹೊಸ ಸೇರ್ಪಡೆಯನ್ನು ಮಾಡಲಾಗಿದೆ ಎಂದೂ ಹೇಳಲಾಗುತ್ತಿದೆ. ಹೀಗಾಗಿ ಪ್ರಮುಖವಾಗಿ 6ರಿಂದ 8ನೇ ತರಗತಿ ಕನ್ನಡ ಮತ್ತು ಸಮಾಜ ವಿಜ್ಞಾನ ವಿಷಯದ ಪಠ್ಯದಲ್ಲಿ ಬದಲಾವಣೆ ಮಾಡಲಾಗಿದೆ.

6ರಿಂದ 10ನೇ ತರಗತಿಯ ಎಲ್ಲ ಮಾಧ್ಯಮದ ಸಮಾಜ ವಿಜ್ಞಾನ ಪಠ್ಯಪುಸ್ತಕ ಪರಿಷ್ಕರಿಸಲಾಗಿದೆ. 1ರಿಂದ 10ನೇ ತರಗತಿಯ ಪ್ರಥಮ ಭಾಷೆ ಕನ್ನಡ(ಮೂರನೇ ತರಗತಿ ಹೊರತುಪಡಿಸಿ), 6,8 ಮತ್ತು 9ನೇ ತರಗತಿಯ ಕನ್ನಡ ದ್ವಿತೀಯ ಭಾಷೆ, 7, 8 ಮತ್ತು 9ನೇ ತರಗತಿಗಳ ತೃತೀಯ ಭಾಷೆ ಎಲ್ಲ ಮಾಧ್ಯಮದ ಪಠ್ಯವೂ ಪರಿಷ್ಕರಣೆಯಾಗಲಿದೆ. ಈ ಎಲ್ಲ ಪಠ್ಯಗಳು ಹೊಸದಾಗಿ ಮುದ್ರಣವಾಗುತ್ತಿದೆ.

Advertisement

ರೋಹಿತ್‌ ಚಕ್ರತೀರ್ಥ ನೇತೃತ್ವದ ಸಮಿತಿ ನೀಡಿದ ವರದಿಯನ್ನು ಆಧಾರವಾಗಿಟ್ಟುಕೊಂಡು ಕೆಲವು ತರಗತಿಯ ಹಲವು ಪಠ್ಯಗಳನ್ನು ಪರಿಷ್ಕರಿಸಿದ್ದೇವೆ. ಎಲ್ಲ  ತರಗತಿಗಳ ಪಠ್ಯಪುಸ್ತಕ ಪರಿಷ್ಕರಣೆಯಾಗಿಲ್ಲ. ವಿವಾದಾತ್ಮಕ ಅಂಶಗಳನ್ನು ತೆಗೆದಿದ್ದೇವೆ. ಶೀಘ್ರವೇ ಹೊಸ ಪಠ್ಯಪುಸ್ತಕವನ್ನು ಮಕ್ಕಳಿಗೆ ತಲುಪಿಸಲಿದ್ದೇವೆ.
-ಬಿ.ಸಿ.ನಾಗೇಶ್‌, ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ

ಈಗಾಗಲೇ ಪಠ್ಯದ ಶೇ.68ರಷ್ಟು ಮುದ್ರಣ ಕಾರ್ಯ ಪೂರ್ಣ ಗೊಂಡಿದೆ. ಕಾಗದದ ಕೊರತೆ  ಇರುವುದಿಂದ ಮೇ ಅಂತ್ಯದೊಳಗೆ ಪೂರ್ಣ ಪ್ರಮಾಣದಲ್ಲಿ ಮುದ್ರಣವಾಗುವ ಸಾಧ್ಯತೆಯಿಲ್ಲ. ಶೀಘ್ರವೇ ಜಿಲ್ಲಾ  ಕೇಂದ್ರಗಳಿಗೆ  ಪಠ್ಯಪುಸ್ತಕ ಪೂರೈಕೆ ಪ್ರಕ್ರಿಯೆ ಆರಂಭಿಸಲಿದ್ದೇವೆ.
-ಡಾ| ಆರ್‌. ವಿಶಾಲ್‌,
ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ

ರಾಜ್ಯದಲ್ಲಿ ಈಗಾಗಲೇ ಶೇ.65ರಷ್ಟು ಪುಸ್ತಕಗಳು ಮುದ್ರಣವಾಗಿದ್ದು, ಈ ಪೈಕಿ ಶೇ.58ರಷ್ಟು ಪುಸ್ತಕಗಳನ್ನು ಈಗಾಗಲೇ ಬಿಇಒಗಳಿಗೆ ರವಾನೆ ಮಾಡಲಾಗಿದೆ. ಶಾಲೆ ಆರಂಭವಾಗುವಷ್ಟರಲ್ಲಿ  ಉಳಿದ ಪುಸ್ತಕಗಳನ್ನು ಆದಷ್ಟು ಬೇಗ ಮುದ್ರಣ ಮಾಡಿಕೊಡುವಂತೆ ಮುದ್ರಕರಿಗೆ ಸೂಚಿಸಲಾಗಿದೆ.
– ಎಂ.ಪಿ. ಮಾದೇಗೌಡ, ಕರ್ನಾಟಕ
ಪಠ್ಯಪುಸ್ತಕ ಸಂಘದ ವ್ಯವಸ್ಥಾಪಕ ನಿರ್ದೇಶಕ

 

-ರಾಜು ಖಾರ್ವಿ ಕೊಡೇರಿ/ಎನ್‌.ಎಲ್‌. ಶಿವಮಾದು

Advertisement

Udayavani is now on Telegram. Click here to join our channel and stay updated with the latest news.

Next