Advertisement

ಈ ಬಾರಿ ಖಂಡಿತಾ ಶಿಕ್ಷಕರು ನನ್ನ ಕೈ ಹಿಡಿಯುತ್ತಾರೆ: ಬಸವರಾಜ ಗುರಿಕಾರ

09:39 AM Jun 09, 2022 | Team Udayavani |

ಧಾರವಾಡ: ಕರ್ನಾಟಕ ರಾಜ್ಯ ವಿಧಾನ ಪರಿಷತ್ತಿಗೆ ಸತತ 40 ವರ್ಷಗಳ ಕಾಲ ಬಸವರಾಜ ಹೊರಟ್ಟಿಯವರನ್ನು ಶಿಕ್ಷಕರು ಆಯ್ಕೆ ಮಾಡಿದ್ದಾರೆ. ಆದರೆ ನಾನು ಸತತ 40 ವರ್ಷಗಳಿಂದ ಯಾವುದೇ ಅಧಿಕಾರವಿಲ್ಲದೇ ಶಿಕ್ಷಕರ ಬೇಡಿಕೆಗಳನ್ನು ಈಡೇರಿಸಲು ಹೋರಾಟ ನಡೆಸುತ್ತ ಬಂದಿದ್ದೇನೆ. ಹೀಗಾಗಿ ಈ ಬಾರಿ ಖಂಡಿತಾ ಚುನಾವಣೆಯಲ್ಲಿ ಶಿಕ್ಷಕರು ನನಗೆ ಮತ ಕೊಟ್ಟು ಆಯ್ಕೆ ಮಾಡುವುದು ಖಚಿತ.

Advertisement

“ಉದಯವಾಣಿ’ ಜತೆ ಮಾತನಾಡಿದ ವಿಧಾನ ಪರಿಷತ್ತಿನ ಪಶ್ಚಿಮ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಬಸವರಾಜ ಗುರಿಕಾರ ಅವರ ಆತ್ಮವಿಶ್ವಾಸದ ನುಡಿಗಳಿವು. ಒಟ್ಟಾರೆ ಅವರು ಹೇಳಿದ್ದು:

ಶಿಕ್ಷಣ ಕ್ಷೇತ್ರದಲ್ಲಿನ ಸಮಸ್ಯೆಗಳನ್ನು ಬಗೆಹರಿಸುವು ದಕ್ಕಾಗಿಯೇ ಇಡೀ ಜೀವನ ಮುಡುಪಾಗಿಟ್ಟಿದ್ದೇನೆ. ಶಿಕ್ಷಕರಿಂದ, ಶಿಕ್ಷಕರಿಗಾಗಿ ಹಾಗೂ ಶಿಕ್ಷಕರಿಗೋಸ್ಕರ ಸದಾ ಶ್ರಮಿಸುತ್ತ ಬಂದಿದ್ದೇನೆ. 1980ರ ದಶಕದಲ್ಲಿ ಶಿಕ್ಷಕರ ಪರ ಧ್ವನಿ ಎತ್ತಲು ಆಡಳಿತಶಾಹಿ ವಲಯದಲ್ಲಿ ಸಾಕಷ್ಟು ಸಮಸ್ಯೆಗಳಿದ್ದವು. ಗಟ್ಟಿ ಧ್ವನಿ ಎತ್ತಿದವರಿಗೆ ಅಮಾನತು ಶಿಕ್ಷೆಯಾಗುತ್ತಿತ್ತು. ಅಂತಹ ಸಂದರ್ಭದಲ್ಲಿ ಗುರುವಿನ ಸ್ಥಾನದಲ್ಲಿ ಜೀವನ ಕಳೆದು ಶಿಕ್ಷಕ ಸಮುದಾಯದ ಬೇಡಿಕೆಗಳನ್ನು ಗಂಭೀರವಾಗಿ ಪರಿಗಣಿಸುತ್ತಲೇ ಇರಲಿಲ್ಲ.

ಅಂತಹ ಸಂದರ್ಭ ಬೆರಳೆಣಿಕೆಯಷ್ಟು ಶಿಕ್ಷಕ ರನ್ನು ಕಟ್ಟಿಕೊಂಡು ಕೈಯಿಂದಲೇ ಖರ್ಚು ಮಾಡಿಕೊಂಡು ಹಗಲು ರಾತ್ರಿ ಎನ್ನದೇ ಉತ್ತರದ ಬೀದರನಿಂದ ಹಿಡಿದು ಚಾಮ ರಾಜನಗರದವರೆಗಿನ ಎಲ್ಲಾ ಜಿಲ್ಲೆಗಳಲ್ಲೂ ಕೂಡ ಅತೀ ದೊಡ್ಡ ಶಿಕ್ಷಕ ಸಮುದಾಯವನ್ನು ಸಂಘಟಿಸುತ್ತ ಬಂದಿದ್ದೇನೆ. ಆ ದಿನಗಳನ್ನು ನೆನೆದರೆ ಖಂಡಿತ ಇಷ್ಟೊಂದು ಎತ್ತರಕ್ಕೆ ಶಿಕ್ಷಕರು ನನ್ನನ್ನು ಕೊಂಡೊಯ್ಯುತ್ತಾರೆ ಎಂದುಕೊಂಡಿರಲಿಲ್ಲ. ಇದೀಗ ಮತ್ತೂಮ್ಮೆ ಶಿಕ್ಷಕರು ತಮ್ಮ ಅಮೂಲ್ಯವಾದ ಮತ ನೀಡಿ ನನ್ನ ಗೆಲ್ಲಿಸುವ ಮೂಲಕ ಮಹತ್ವದ ಜವಾಬ್ದಾರಿ ಕೊಡುತ್ತಾರೆ ಎಂಬ ವಿಶ್ವಾಸವಿದೆ.

ಶಿಕ್ಷಕರ ಸಮಸ್ಯೆಗಳು ಮತ್ತು ಅಭಿವೃದ್ಧಿ ಪರ ವಿಚಾರಗಳೇನು ಎಂಬುದನ್ನು ನಾನು ಈಗಾಗಲೇ ಅರಿತಿದ್ದೇನೆ. ಇನ್ನಷ್ಟು ಒತ್ತು ಕೊಟ್ಟು ಶಿಕ್ಷಕರ ಸೇವೆ ಮಾಡುವ ಹಂಬಲದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಪರಿಷತ್ತಿನ ಕಣಕ್ಕಿಳಿದಿದ್ದೇನೆ. ಶಿಕ್ಷಕ ವೃಂದ ಖಂಡಿತ ನನ್ನನ್ನು ಆಯ್ಕೆ ಮಾಡುತ್ತಾರೆ ಎನ್ನುವ ಭರವಸೆ ಇದೆ.  –ಬಸವರಾಜ ಗುರಿಕಾರ, ಪಶ್ಚಿಮ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ

Advertisement

5ನೇ ಆಯೋಗದ ಕಸುವು: ಶಿಕ್ಷಕರ ಐದನೇ ವೇತನ ಆಯೋಗಕ್ಕೆ ಖುದ್ದು ನಾನೇ ವರದಿ ತಯಾರಿಸಿದೆ. ಶಿಕ್ಷಕರ ವೇತನ ತಾರತಮ್ಯ ಕಡಿಮೆಯಾಗಬೇಕಾದರೆ ಮಧ್ಯಂತರ ಪರಿಹಾರದ ಜತೆಗೆ ವಿಶೇಷ ವೇತನ ನೀಡಬೇಕೆಂದು ಹೊಸ ಬೇಡಿಕೆ ಮಂಡಿಸಿ ವೇತನ ಆಯೋಗದಿಂದ ಶಿಕ್ಷಕರಿಗೆ ವಿಶೇಷ ವೇತನ ಮತ್ತು ಮಧ್ಯಂತರ ಪರಿಹಾರ ಕೊಡಬೇಕೆಂದು ಪ್ರಯತ್ನಿಸಿದೆ. ಮುಂದೆ 6ನೇ ವೇತನ ಆಯೋಗದ ಮುಂದೆ ವಿಶೇಷ ವೇತನ ವಿಲೀನವಾಗಬೇಕೆಂದು ಪ್ರಬಲ ವಾದ ಮಂಡಿಸಿ, ವರದಿ ಸಲ್ಲಿಸಿ ವಿಶೇಷ ವೇತನ ಮೂಲ ವೇತನದಲ್ಲಿ ವಿಲೀನಗೊಳಿಸಲು ಪಟ್ಟ ಪಾಡು ದೇವರಿಗೆ ಗೊತ್ತು. ಇದರಿಂದ ಹೆಚ್ಚುವರಿಯಾಗಿ ಒಂದು ವೇತನ ಬಡ್ತಿ ಕೋರಿದೆ. ಇದು ಸರ್ಕಾರಿ ನೌಕರರ ಪೈಕಿ ಬರೀ ಶಿಕ್ಷಕರಿಗೆ ಮಾತ್ರ ಸಿಕ್ಕಿದ್ದು ನಮ್ಮ ದೊಡ್ಡ ಹೋರಾಟದಿಂದ ಎಂಬುದನ್ನು ನಮ್ಮ ಶಿಕ್ಷಕರೆಲ್ಲರೂ ಮನಗಂಡಿದ್ದಾರೆ. ಇನ್ನು 80ರ ದಶಕದಲ್ಲಿಯೇ ವಯೋಮಿತಿ ಆಧಾರದ ಮೇಲೆ ಶಿಕ್ಷಕರ ನೇಮಕಾತಿ ಆದೇಶ ಮಾಡಿಸಿದೆವು. ಅಖಂಡ ಧಾರವಾಡ ಜಿಲ್ಲೆಯ ಶಿಕ್ಷಕರ ನೇಮಕಾತಿಗಳು ರದ್ದುಗೊಂಡಾಗ ನಿರಂತರವಾಗಿ ಎರಡು ತಿಂಗಳು ಹೋರಾಟ ಮಾಡಿ 482 ಶಿಕ್ಷಕರನ್ನು ನೇಮಕ ಮಾಡಿದ ಹೋರಾಟವೂ ನನ್ನ ಕ್ಷೇತ್ರದ ವ್ಯಾಪ್ತಿಯಲ್ಲೇ ನಡೆದಿದೆ. ಇದನ್ನು ಈ ಕ್ಷೇತ್ರದ ಶಿಕ್ಷಕ ಸಮುದಾಯ ಮರೆತಿಲ್ಲ.

ಧಾರವಾಡಕ್ಕೆ ವಿಶೇಷ ಕೊಡುಗೆ:  ನಾನು ಹುಟ್ಟಿದ್ದು, ಓದಿ ಬೆಳೆದಿದ್ದು ಎಲ್ಲವೂ ಅಖಂಡ ಧಾರವಾಡ ಜಿಲ್ಲೆಯಲ್ಲಿಯೇ. ಶಿಕ್ಷಕರ ಸಂಘದ ರಾಜ್ಯ ಅಧ್ಯಕ್ಷನಾದರೂ ಸ್ವಕ್ಷೇತ್ರವನ್ನು ಎಂದಿಗೂ ಮರೆಯದೇ ಕಾರ್ಯನಿರ್ವಹಿಸಿದ್ದೇನೆ. ಧಾರವಾಡ ಶಹರಕ್ಕೆ ಪ್ರತ್ಯೇಕ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಸ್ಥಾಪನೆ, ಧಾರವಾಡದ ನೌಕರರ ಭವನದಲ್ಲಿ ಸಾಂಸ್ಕೃತಿಕ ಸಮುದಾಯ ಭವನ ಹಾಗೂ ಕೊಠಡಿಗಳ ನಿರ್ಮಾಣ ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯ ಮಾಡಿದ್ದೇನೆ. ಹೀಗಾಗಿ ಅಖಂಡ ಧಾರವಾಡ ಜಿಲ್ಲೆಯ ಶಿಕ್ಷಕ ವೃಂದದ ಪ್ರೀತಿ ನನ್ನೊಂದಿಗಿದೆ.

ನಾನು ಶಿಕ್ಷಕರ ಸೇವಕ:  ನಾನು ಶಿಕ್ಷಕರ ನಾಯಕನಲ್ಲ ಬದಲಿಗೆ ಶಿಕ್ಷಕರ ಸೇವಕ ಎಂದೇ ತಮ್ಮನ್ನು ಕರೆದುಕೊಳ್ಳುವ ಗುರಿಕಾರ ಅವರು ಹಳ್ಳಿಯಿಂದ ಹಿಡಿದು ದಿಲ್ಲಿವರೆಗೂ ತಮ್ಮ ಕಾರ್ಯವೈಖರಿಯಿಂದಲೇ ಹೆಸರು ಮಾಡಿದ್ದಾರೆ. ಶಿಕ್ಷಕರ ರಾಷ್ಟ್ರಮಟ್ಟದ ಸಂಘಟನೆಗೆ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದು ಅವರ ಸಾಧನೆ ಮತ್ತು ಸೇವೆಗೆ ಹಿಡಿದ ಕನ್ನಡಿಯಾಗಿದೆ.

-ಡಾ|ಬಸವರಾಜ ಹೊಂಗಲ್‌

Advertisement

Udayavani is now on Telegram. Click here to join our channel and stay updated with the latest news.

Next