Advertisement

ಈ ಬಾರಿಯ ದ್ವಿತೀಯ ಪಿಯು ಪರೀಕ್ಷೆ ಇನ್ನಷ್ಟು ಕಠಿನ! 3 ನೀಲನಕ್ಷೆ ಪ್ರಕಟಿಸಿದ ಮಂಡಳಿ

12:48 AM Sep 17, 2024 | Team Udayavani |

ಬೆಂಗಳೂರು: ಪ್ರಸ್ತುತ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯು ಅಂತಿಮ ಪರೀಕ್ಷೆಯು ಹಿಂದಿನ ವರ್ಷಗಳ ಅಂತಿಮ ಪರೀಕ್ಷೆಗಳಿಗಿಂತ ಕಠಿನವಾಗಿರಲಿದೆ. ಕಳೆದ ವರ್ಷ ಒಟ್ಟು ಅಂಕಗಳಲ್ಲಿ ಶೇ. 10 ಕಠಿನ ಪ್ರಶ್ನೆಗಳಿಗೆ ಮೀಸಲಿರಿಸಲಾಗಿತ್ತು. ಆದರೆ ಈ ಬಾರಿ ಹಲವು ವಿಷಯಗಳಲ್ಲಿ ಕಠಿನತೆಯ ಮಟ್ಟ ಶೇ. 40 ಮೀರಲಿದೆ. ಹಾಗೆಯೇ 2 ಮತ್ತು 3 ಅಂಕ, 4 ಮತ್ತು 5 ಅಂಕಗಳ ಪ್ರಶ್ನೆಗಳಲ್ಲಿ ಪರಸ್ಪರ ಬದಲಾವಣೆ, ಆಯ್ಕೆಯಲ್ಲಿ ಕಡಿತ ಮಾಡಲಾಗಿದೆ.

Advertisement

ಕಳೆದ ವರ್ಷ ಮೊದಲ ಬಾರಿಗೆ ದ್ವಿತೀಯ ಪಿಯುಸಿಯಲ್ಲಿ 3 ವಾರ್ಷಿಕ ಪರೀಕ್ಷೆ ಪದ್ಧತಿ ಅಳವಡಿಸಿದ್ದು ಮಾತ್ರವಲ್ಲದೆ, ಎಲ್ಲ ವಿಷಯಗಳಿಗೂ 20 ಅಂಕಗಳನ್ನು ಆಂತರಿಕ ಮೌಲ್ಯಮಾಪನಕ್ಕೆ ನೀಡುವ ಪದ್ಧತಿ ಆರಂಭಿಸಲಾಗಿತ್ತು. ಈ ಬಾರಿ ಗೊಂದಲ ಮುಕ್ತವಾಗಿ ಪರೀಕ್ಷೆ ನಡೆಸುವ ಇರಾದೆಯೊಂದಿಗೆ ಇಲಾಖೆ ಕಾರ್ಯಪ್ರವೃತ್ತವಾಗಿದೆ. ಈ ಹಿನ್ನೆಲೆಯಲ್ಲಿ ಮಧ್ಯವಾರ್ಷಿಕ ಪರೀಕ್ಷೆಗೆ ಮುಂಚಿತವಾಗಿಯೇ ವಾರ್ಷಿಕ ಪರೀಕ್ಷೆಯ ಪ್ರಶ್ನೆಪತ್ರಿಕೆಯ 3 ಮಾದರಿಗಳನ್ನು ಮತ್ತು ಪ್ರಶ್ನೆ ಕೇಳಲು ಅನುಸರಿಸಬೇಕಾದ ಮಾನದಂಡ, ಪ್ರಶ್ನೆಪತ್ರಿಕೆಯ ಕಠಿನತೆಯ ಮಟ್ಟದ ಬಗ್ಗೆ ನೀಲನಕ್ಷೆ ಹೊರಡಿಸಿದೆ.

ಹಾಗೆಯೇ ಇದೇ ಮೊದಲ ಬಾರಿಗೆ ಪ್ರತೀ ವಿಷಯ, ಪ್ರತೀ ಮಾದರಿಗೂ ಪ್ರತ್ಯೇಕ ನೀಲನಕ್ಷೆ ಸಿದ್ಧಪಡಿಸಲಾಗಿದೆ. ಅದೇ ರೀತಿ ಪ್ರತೀ ವಿಷಯಕ್ಕೂ ಪ್ರಶ್ನೆಗಳ ಕಠಿನತೆಯ ಪ್ರಮಾಣವನ್ನು ಭಿನ್ನವಾಗಿ ನಿಗದಿ ಮಾಡಿದೆ.

ಪ್ರಶ್ನೆಪತ್ರಿಕೆಯ ನೀಲನಕ್ಷೆಯಲ್ಲೇ ಪ್ರಶ್ನೆಗಳ ಸ್ವರೂಪ ಹೇಗಿರಬೇಕು ಎಂದು ನಿಗದಿ ಮಾಡಲಾಗಿದೆ. ವಿದ್ಯಾರ್ಥಿಗಳ ಸ್ಮರಣೆ ಮತ್ತು ಗ್ರಹಿಕೆ (ಲೋವರ್‌ ಆರ್ಡರ್‌ ಥಿಂಕಿಂಗ್‌ ಸ್ಕಿಲ್ಸ್‌ -ಲಾಟ್ಸ್‌)ಯನ್ನು ಆಧರಿಸಿ ಸುಲಭ ಪ್ರಶ್ನೆಗಳನ್ನು ಕೇಳಬೇಕು ಎಂದು ಹೇಳಲಾಗಿದೆ. ಎಲ್ಲ ಪ್ರಶ್ನೆಪತ್ರಿಕೆಗಳಲ್ಲಿಯೂ ಲಾಟ್ಸ್‌ ಆಧಾರದಲ್ಲಿ ಕೇಳುವ ಪ್ರಶ್ನೆಗಳು ಮತ್ತು ನಿಗದಿಪಡಿಸಿರುವ ಅಂಕಕ್ಕೆ ಸಿಂಹಪಾಲಿದೆ. ಆದರೆ ಅನ್ವಯ, ವಿಶ್ಲೇಷಣೆ, ಮೌಲ್ಯಮಾಪನ ಮತ್ತು ಸೃಜನಾತ್ಮಕತೆ (ಹೈಯರ್‌ ಆರ್ಡರ್‌ ಥಿಂಕಿಂಗ್‌ ಸ್ಕಿಲ್ಸ್‌- ಹಾಟ್ಸ್‌) ಬಯಸುವ ಪ್ರಶ್ನೆ ಮತ್ತು ಅಂಕಗಳ ಪ್ರಮಾಣವನ್ನು ಈ ಬಾರಿ ಹೆಚ್ಚಿಸಲಾಗಿದೆ. ಉದಾಹರಣೆಗೆ, ಈ ಬಾರಿಯ ದ್ವಿತೀಯ ಪಿಯುವಿನ ಕನ್ನಡದ ಒಂದು ಮಾದರಿ ಪ್ರಶ್ನೆಪತ್ರಿಕೆಯಲ್ಲಿ ಲಾಟ್ಸ್‌ಗೆ ಶೇ. 72.5 ಅಂಕ ನಿಗದಿಯಾಗಿದ್ದರೆ, ಹಾಟ್ಸ್‌ಗೆ ಶೇ. 27.5 ಅಂಕ ನಿಗದಿಯಾಗಿದೆ. ಆಂಗ್ಲ ಭಾಷೆ, ಸಮಾಜಶಾಸ್ತ್ರ, ಗಣಿತ, ಭೌತಶಾಸ್ತ್ರದಲ್ಲಿ ಶೇ. 40 ಸುಲಭ, ಶೇ. 40 ಸಾಧಾರಣ ಮತ್ತು ಶೇ. 20 ಕಠಿನ ಪ್ರಶ್ನೆಗಳನ್ನು ಕೇಳಲು ಸೂಚಿಸಲಾಗಿದೆ.

ರಾಜ್ಯದ ದ್ವಿತೀಯ ಪಿಯುವಿನಲ್ಲಿರುವ ಒಟ್ಟು 36 ವಿಷಯಗಳಿಗೂ ಲಾಟ್ಸ್‌ ಮತ್ತು ಹಾಟ್ಸ್‌ಗೆ ಅಂಕಗಳನ್ನು ನಿಗದಿ ಪಡಿಸಲಾಗಿದೆ. 3 ಮಾದರಿಯಲ್ಲಿ ಲಾಟ್ಸ್‌ ಮತ್ತು ಹಾಟ್ಸ್‌ಗೆ ನಿಗದಿ ಪಡಿಸಿರುವ ಅಂಕಗಳಲ್ಲಿ ಅಲ್ಪ ಮಟ್ಟಿನ ವ್ಯತ್ಯಾಸವಿದ್ದರೂ ಒಟ್ಟಾರೆಯಾಗಿ ಅಂಕಗಳ ಹಂಚಿಕೆ ಪ್ರಮಾಣ ಅಸುಪಾಸಿನಲ್ಲೇ ಇದೆ.

Advertisement

ಈ ಬಾರಿ ಮಧ್ಯವಾರ್ಷಿಕ ಪರೀಕ್ಷೆಯೂ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಪ್ರಶ್ನೆಪತ್ರಿಕೆಗಳನ್ನು ಸಿದ್ಧಪಡಿಸುತ್ತಿದ್ದು, ಮಕ್ಕಳಿಗೆ ಮಾದರಿ ಪ್ರಶ್ನೆಪತ್ರಿಕೆಯ ಪರಿಚಯವಾಗಲಿದೆ. ಜತೆಗೆ ಕಲಿಕೆಯಲ್ಲಿ ಹಿಂದುಳಿದಿರುವ ಮಕ್ಕಳಿಗೆ ಪರಿಹಾರ ಬೋಧನೆ ಚಟುವಟಿಕೆ ನಡೆಸಲು ಶಿಕ್ಷಣ ಇಲಾಖೆ ಮುಂದಾಗಿದೆ. ಡಿಸೆಂಬರ್‌ ಅಂತ್ಯದೊಳಗೆ ಪಠ್ಯ ಪೂರ್ಣಗೊಳಿಸಿ ಪುನರ್ಮನನ ಚಟುವಟಿಕೆಗಳನ್ನು ನಡೆಸುವಂತೆ ಸೂಚನೆ ನೀಡಲಾಗಿರುವುದರಿಂದ ಪ್ರಶ್ನೆಪತ್ರಿಕೆ ತುಸು ಕಠಿನವಾಗಿದ್ದರೂ ಮಕ್ಕಳಿಗೆ ಸಮಸ್ಯೆ ಆಗಲಾರದು ಎಂಬ ವಿಶ್ವಾಸದಲ್ಲಿ ಇಲಾಖೆಯ ಅಧಿಕಾರಿಗಳಿದ್ದಾರೆ.

ಏಕರೂಪದ ನೀಲಿನಕ್ಷೆಗೆ ಆಗ್ರಹ
ಪಿಯು ಉಪನ್ಯಾಸಕರು ಈ ಪ್ರಶ್ನೆಪತ್ರಿಕೆ ಮಾದರಿಯ ಬಗ್ಗೆ ತಮ್ಮ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಈ ಮಾದರಿ ಗ್ರಾಮೀಣ ಮಕ್ಕಳ ಶೈಕ್ಷಣಿಕ ಹಿನ್ನಡೆಗೆ ಕಾರಣವಾಗಬಹುದು ಎಂಬುದು ಅವರ ಪ್ರಮುಖ ಆತಂಕ. ಈ ಹಿಂದಿನ ಶೈಕ್ಷಣಿಕ ವರ್ಷಗಳಲ್ಲಿ 3 ಮಾದರಿಯ ಪ್ರಶ್ನೆಪತ್ರಿಕೆಗಳಿದ್ದರೂ ನೀಲನಕ್ಷೆ ಒಂದೇ ಇರುತ್ತಿತ್ತು, ಆದರೆ ಈ ಬಾರಿ 3 ನೀಲನಕ್ಷೆ ಇರುವುದರಿಂದ ಯಾವ ಪಾಠದಿಂದ ಯಾವೆಲ್ಲ ಅಂಕದ ಪ್ರಶ್ನೆಗಳು ಬರಲಿವೆ ಎಂಬ ಸ್ಪಷ್ಟತೆಯಿಲ್ಲ. ಆದ್ದರಿಂದ ಏಕರೂಪದ ನೀಲನಕ್ಷೆ ರೂಪಿಸಬೇಕು ಎಂದು ಹಲವು ಉಪನ್ಯಾಸಕರು ಆಗ್ರಹಿಸುತ್ತಿದ್ದಾರೆ.

ಏಕರೂಪದ ನೀಲನಕ್ಷೆ ರೂಪಿಸಬೇಕು. ಒಂದೇ ಪ್ರಶ್ನೆಯನ್ನು ಒಂದೊಂದು ನೀಲನಕ್ಷೆಯಲ್ಲಿ ಬೇರೆ ಬೇರೆ ಅಂಕಗಳಿಗೆ ಕೇಳಿರುವ ಉದಾಹರಣೆಯಿದೆ. ನೇರ ಮತ್ತು ಸರಳ ಪ್ರಶ್ನೆಗಳನ್ನು ಕಠಿನಗೊಳಿಸಬಾರದು.
-ಎಸ್‌.ಆರ್‌.ವೆಂಕಟೇಶ್‌, ಕಾರ್ಯಾಧ್ಯಕ್ಷ, ಕರ್ನಾಟಕ ರಾಜ್ಯ ಪ.ಪೂ. ಕಾಲೇಜುಗಳ ಉಪನ್ಯಾಸಕರ ಸಂಘ

 

Advertisement

Udayavani is now on Telegram. Click here to join our channel and stay updated with the latest news.

Next