ಓದಿದ ವಿಷಯಗಳೆಲ್ಲವೂ ಸರಿಯಾದ ಸಮಯಕ್ಕೆ ಕೈ ಕೊಡುತ್ತಿದ್ದುದರಿಂದ ರಮೇಶ ಸೆಕೆಂಡ್ ಕ್ಲಾಸ್‌ಗೆ ಸೀಮಿತವಾಗಿದ್ದ. ಹೇಗಾದರೂ ಮಾಡಿ ಫಸ್ಟ್ ರ್‍ಯಾಂಕ್ ಪಡೀಬೇಕು ಅಂತ ಪಣ ತೊಟ್ಟವನಿಗೆ ಸಿಕ್ಕಿದ್ದು ಒಂದು ಆಯುರ್ವೇದ ಲೇಹ…
ಅನಿವಾರ್ಯ ಕಾರಣದಿಂದ ನಾನು ಪ್ರೌಢಶಿಕ್ಷಣವನ್ನು ಅರ್ಧಕ್ಕೆ ಮೊಟಕುಗೊಳಿಸಿ, ಬೇರೆ ಊರಿಗೆ ಓದಲು ತೆರಳಬೇಕಾಯಿತು. ನಮ್ಮ ಹಳ್ಳಿಯನ್ನು ಬಿಟ್ಟು ಮುಂದಿನ ಊರನ್ನೂ ನೋಡದ ನನ್ನನ್ನು ದೂರದ ಹಾಸ್ಟೆಲ್‌ಗೆ ಸೇರಿಸಿದಾಗ ಬಾವಿಯಿಂದ ನೇರ ಸಮುದ್ರಕ್ಕೆ ಬಿಟ್ಟಂಥ ಪರಿಸ್ಥಿತಿ. ಮೊದಮೊದಲು ತಂದೆ ತಾಯಿಯ ನೆನಪಾಗಿ ಹಾಸ್ಟೆಲ್ ಜೀವನ ಕಷ್ಟವೆನಿಸಿದರೂ ದಿನಕಳೆದಂತೆ ಅದುವೇ ಸ್ವರ್ಗವೆನಿಸಿತು. ಹೊಸ ಸ್ಕೂಲು, ಫ್ರೆಂಡ್ಸುಗಳಿದ್ದ ವಾತಾವರಣವನ್ನು ಮನಸ್ಸು ನಿಧಾನಕ್ಕೆ ತನ್ನದಾಗಿಸಿಕೊಳ್ಳುತ್ತಾ ಬಂತು. ಓದಿಗೆ ಮತ್ತಷ್ಟು ಪ್ರೇರಣೆಯಾಯಿತು.
ನಾವು ಅದೆಷ್ಟು ತರಲೆ ತುಂಟರೋ, ಓದಿನಲ್ಲಿ ಅಷ್ಟೇ ನಿಪುಣರಿದ್ದೆವು. ಹಾಗಾಗಿ, ನಮ್ಮ ನಮ್ಮ ನಡುವೆ ಓದುವ ವಿಚಾರದಲ್ಲಿ ಸಣ್ಣ ಮಟ್ಟದ ಸ್ಪರ್ಧೆ ಇತ್ತು. ಆದರೆ, ತಾನು ಜಾಣ ಎಂದು ಯಾರೂ ತೋರಿಸಿಕೊಳ್ಳುತ್ತಿರಲಿಲ್ಲ. ಬಹುತೇಕ ವಿದ್ಯಾರ್ಥಿಗಳು ಉತ್ತಮ ಅಂಕ ಗಳಿಸುತ್ತಿದ್ದೆವು. ಆದರೆ, ನನ್ನ ಗೆಳೆಯ ರಮೇಶನಿಗೆ ತರಗತಿಗೆ ಪ್ರಥಮ ಸ್ಥಾನ ಗಳಿಸಬೇಕೆಂಬ ಆಸೆ. ಏನು ಮಾಡುವುದು? ಹಗಲು- ರಾತ್ರಿ ಕಣ್ಣಿಗೆ ಎಣ್ಣೆ ಬಿಟ್ಟು ಓದಿದರೂ ವಿದ್ಯೆ ಅವನ ತಲೆಗೆ ಹತ್ತುತ್ತಿರಲಿಲ್ಲ. ಮುಕ್ಕೋಟಿ ದೇವರನ್ನು ನೆನೆದು ಪರೀಕ್ಷೆ ಬರೆಯಲು ಹೋಗಿ ಕೂತರೆ, ಪ್ರಶ್ನೆ ಪತ್ರಿಕೆ ಕೈಗೆ ಸಿಗುವುದರೊಳಗೆ ಓದಿದ್ದ ಎಲ್ಲ ವಿಷಯಗಳೂ ಗುಡ್ಡ ಹತ್ತಿ ಹೋಗುತ್ತಿದ್ದವು. ಹೀಗಾಗಿ, ಅವನು ಯಾವಾಗಲೂ ಸೆಕೆಂಡ್ ಕ್ಲಾಸ್‌ನಲ್ಲೇ ಪಾಸಾಗುತ್ತಿದ್ದ. ಇದರಿಂದಾಗಿ ಅವನು ಸಾಕಷ್ಟು ಮನನೊಂದಿದ್ದ.
ಆದರೆ, ಒಂದು ಬಾರಿ ಪರೀಕ್ಷೆ ಮುಗಿಸಿ ಊರಿಗೆ ಹೋಗಿ ಮರಳಿ ಬಂದ ರಮೇಶ ಮೊದಲಿನಂತೆ ಇರಲಿಲ್ಲ. ಹೊಸ ಹುರುಪಿನಲ್ಲಿದ್ದ. ಮುಖದಲ್ಲಿ ಮಂದಹಾಸ ತುಂಬಿತ್ತು. ರಮೇಶನ ಈ ಬದಲಾವಣೆಗೆ ಕಾರಣವೇನೆಂದು ತಿಳಿಯದೆ ಗೆಳೆಯರೆಲ್ಲರೂ ಬೆರಗಾಗಿ¨ªೆವು. “ಈ ಸಲ ಕಪ್ ನಮ್ದೇ’ ಅನ್ನೋ ಹಾಗೆ “ಈ ಸಲ ಟಾಪರ್ ನಾನೇ’ ಎಂದು ಆತ ಬೀಗುತ್ತಿದ್ದ. ಅವನು ಹೀಗೆ ಅನ್ನುವುದಕ್ಕೆ ಒಂದು ಬಲವಾದ ಕಾರಣ ಇತ್ತು. ಊರಿಗೆ ಹೋದವನು ಸುಮ್ಮನೆ ಬಂದಿರಲಿಲ್ಲ. ಓದಿದ್ದು ತಲೆಯಲ್ಲಿ ಉಳಿಯುವ ಹಾಗೆ ಮಾಡುವ ಒಂದು ರಾಮಬಾಣದೊಂದಿಗೆ ರೆಡಿಯಾಗೇ ಬಂದಿದ್ದ. ಅದುವೇ ಆರ್ಯುವೇದಿಕ್ ಲೇಹ ಶಂಖಪುಷ್ಟಿ. ಅದನ್ನು ಕುಡಿದರೆ ಜ್ಞಾಪಕ ಶಕ್ತಿ ಹೆಚ್ಚಾಗುತ್ತದಂತೆ, ಓದಿದ್ದೆಲ್ಲವೂ ತಲೆಯಲ್ಲಿ ಅಚ್ಚಾಗಿ ಬಿಡುತ್ತದಂತೆ… ಹೀಗೆ ಅಂತೆ ಕಂತೆಗಳ ಜೊತೆಗೆ ರ್‍ಯಾಂಕ್ ಬರುವ ಕನಸು ಕಾಣುತ್ತಿದ್ದ.
ಆದರೆ, ಆ ಔಷಧಿಯ ಬಗ್ಗೆ ಅವನು ಯಾರ ಜೊತೆಯೂ ಹೇಳಿರಲಿಲ್ಲ. ವಿಷಯವನ್ನು ಗುಪ್ತವಾಗಿಟ್ಟಿದ್ದ. ರಾತ್ರಿ ಎಲ್ಲರೂ ಮಲಗಿದ ಮೇಲೆ ನಿಧಾನವಾಗಿ ಬ್ಯಾಗ್‌ನಿಂದ ಔಷಧ ತೆಗೆದು ಯಾರಿಗೂ ತಿಳಿಯದಂತೆ ಕುಡಿದು ಮಲಗುತ್ತಿದ್ದ. ಒಂದು ರಾತ್ರಿ ಹೀಗೆ ಕಳ್ಳನಂತೆ ಟಾನಿಕ್ ಸೇವಿಸುತ್ತಿರುವಾಗ ಇನ್ನೊಬ್ಬ ಗೆಳೆಯ ಶಿವಾನಂದ ಎಂಬವನ ಕಣ್ಣಿಗೆ ಬಿದ್ದ. ಮರೆಯಲ್ಲಿ ನಿಂತು ನೋಡಿದ್ದ ಶಿವಾನಂದ, ಶಂಕಪುಷ್ಟಿಯ ವಿಷಯವನ್ನು ಎಲ್ಲ ಸ್ನೇಹಿತರಿಗೂ ಟಾಂ ಟಾಂ ಮಾಡಿದ. ನಂತರ ರಮೇಶನ ಸ್ಥಿತಿ ದೇವರಿಗೇ ಪ್ರೀತಿ. ರಮೇಶನಿಗೆ ಎಲ್ಲ ಸೇರಿ “ಶಂಖಪುಷ್ಟಿ’ ಎಂದು ನಾಮಕಾರಣ ಮಾಡಿದರು. ಮೊದಮೊದಲು ಇದರಿಂದ ಕೋಪಗೊಳ್ಳುತ್ತಿದ್ದನಾದರೂ ನಂತರ ಆ ಹೆಸರೇ ಅವನಿಗೆ ರೂಢಿಯಾಯ್ತು. ನೀವು ಏನಾದರೂ ಕರೆಯಿರಿ ಅಂತ ಸುಮ್ಮನಾಗಿಬಿಡುತ್ತಿದ್ದ. ಕೊನೆಗೆ ಆ ಪಾರ್ಟಿ ಎಸ್ಸೆಸ್ಸೆಲ್ಸಿಯಲ್ಲಿ ಎರಡು ವಿಷಯದಲ್ಲಿ ಡುಮ್ಕಿ ಹೊಡೆದ!
ಅಂಬಿ ಎಸ್. ಹೈಯ್ನಾಳ್