ಬೆಂಗಳೂರು: “ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಭಾರಿಸುವ ಮೂಲಕ ಕೇಂದ್ರ ಸರ್ಕಾರದ
“ವಿಕಾಸ ಯಾತ್ರೆ’ಯಲ್ಲಿ ಕರ್ನಾಟಕವೂ ಸೇರಿಕೊಳ್ಳಲಿದೆ’ ಎಂದು ಪ್ರಧಾನಿ ನರೇಂದ್ರ ಮೋದಿಯವರು ಭರವಸೆ ವ್ಯಕ್ತಪಡಿಸಿದರು.
ಬೆಂಗಳೂರಿಗೆ ಆಗಮಿಸಿದ ನರೇಂದ್ರ ಮೋದಿಯವರಿಗೆ ಎಚ್‌ಎಎಲ್ ವಿಮಾನ ನಿಲ್ದಾಣದಲ್ಲಿ ಜಿಲ್ಲಾ ಬಿಜೆಪಿ ವತಿಯಿಂದ
ಹಮ್ಮಿಕೊಂಡಿದ್ದ ಸಾರ್ವಜನಿಕ ಸ್ವಾಗತ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕರ್ನಾಟಕದ ಜನತೆ ಚುನಾವಣೆಗಾಗಿ
ಹೆಚ್ಚು ದಿನ ಕಾಯಲು ಸಿದ್ಧರಿಲ್ಲ. ಇತರೆ ರಾಜ್ಯಗಳಂತೆ “ವಿಕಾಸ ಯಾತ್ರೆ’ಯಲ್ಲಿ ಸೇರಿಕೊಳ್ಳಲು ಬಯಸುತ್ತಿದ್ದಾರೆ. ರಾಜ್ಯದ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕರ್ನಾಟಕವು ದೇಶದ ವಿಕಾಸ ಯಾತ್ರೆಯೊಳಗೆ ಸೇರಿಕೊಳ್ಳಲಿದೆ. ಈ ಬಗ್ಗೆ ನನಗೆ ಪೂರ್ಣ ವಿಶ್ವಾಸ ಇದೆ ಎಂದು ಹೇಳಿದರು.
ಪ್ರಧಾನಿಯವರ ಈ ಹೇಳಿಕೆ ಬಿಜೆಪಿ ನಾಯಕರಲ್ಲಿ ಹೊಸ ಉತ್ಸಾಹ ಮೂಡಿಸಿದೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂಬುದನ್ನು ಸೂಕ್ಷ್ಮವಾಗಿ ವಿವರಿಸುತ್ತಿರುವಾಗ ವೇದಿಕೆಯಲ್ಲಿ ರಾಜ್ಯ ಬಿಜೆಪಿ ಮುಖಂಡರ ಮೊಗದಲ್ಲಿ ಮಂದಹಾಸ ಮೂಡಿತ್ತು. ನಂತರ ಮಾತು ಮುಂದುವರಿಸಿದ ಪ್ರಧಾನಿ, ದೇಶವು ಕಾಂಗ್ರೆಸ್ ಪಕ್ಷದಿಂದ ಯಾವುದೇ ಆಸೆ, ಆಪೇಕ್ಷೆ ಇಟ್ಟುಕೊಂಡಿಲ್ಲ. ಕೇಂದ್ರದಲ್ಲಿ ಅಧಿಕಾರ ಹೊಂದಿರುವವರು ದೇಶದ ಆಂತರಿಕ ಹಾಗೂ ಬಾಹ್ಯ ಭದ್ರತೆಯ ಹೊಣೆ ಹೊತ್ತಿರುತ್ತಾರೆ. ಕಾಂಗ್ರೆಸ್‌ಗೆ ಇದರ ಅರಿವು ಇಲ್ಲ. ಕಾಂಗ್ರೆಸ್ ನವರು ಇಷ್ಟು ವರ್ಷ ಆಡಳಿತ ನಡೆಸಿದರೂ ಬುದ್ಧಿ ಬಂದಿಲ್ಲ ಎಂದು ವಾಗ್ಧಾಳಿ ನಡೆಸಿದರು.