Advertisement
ಹಿಂದಿನ ವರ್ಷಗಳವರೆಗೆ ಈಶಾನ್ಯವೆನ್ನುವುದು ಕಾಂಗ್ರೆಸ್‌ನ ಗಟ್ಟಿ ನೆಲ ಎಂಬುದು ನಂಬಿಕೆಯಾಗಿತ್ತು. 2016ರಲ್ಲಿ ನಡೆದ ಅಸ್ಸಾಂ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದ ಕೂಡಲೇ ಈಶಾನ್ಯ ರಾಜ್ಯಗಳಲ್ಲಿನ ರಾಜಕೀಯ ವಾತಾವರಣವೇ ಬದಲಾಯಿತು. ಈಶಾನ್ಯ ರಾಜ್ಯ ಪ್ರಜಾಸತ್ತಾತ್ಮಕ ಮೈತ್ರಿಕೂಟ ಎನ್ನುವುದನ್ನು ರಚಿಸಲಾಗಿದ್ದು, ಅದಕ್ಕೆ ಶರ್ಮಾ ಸಂಚಾಲಕರೂ ಹೌದು. ಹೀಗಾಗಿ ಸದ್ಯ ಈಶಾನ್ಯ ರಾಜ್ಯಗಳ ಪೈಕಿ ಮಿಜೋರಾಂನಲ್ಲಿ ಮಾತ್ರ ಕಾಂಗ್ರೆಸ್ ನೇತೃತ್ವದ ಸರ್ಕಾರ ಇದೆ. ಹಾಲಿ ಮುಖ್ಯಮಂತ್ರಿ ಲಾಲ್ತನ್ ಹಾವ್ಲಾ 2008ರಿಂದ ಅಧಿಕಾರದಲ್ಲಿದ್ದಾರೆ. 2013ರಲ್ಲಿ ನಡೆದಿದ್ದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸನ್ನು ಮುನ್ನಡೆಸಿದ್ದ ಅವರು ಸತತ 2ನೇ ಬಾರಿಗೆ ಪಕ್ಷವನ್ನು ಅಧಿಕಾರದಲ್ಲಿ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಇನ್ನು ಅಲ್ಲಿ 1 ಲೋಕಸಭೆ ಮತ್ತು 1 ರಾಜ್ಯಸಭೆ ಸ್ಥಾನಗಳು ಇದ್ದು, ಅವೆರಡನ್ನೂ ಕಾಂಗ್ರೆಸ್ ನಾಯಕರೇ ಗೆದ್ದುಕೊಂಡಿದ್ದಾರೆ.
Related Articles
Advertisement
ಮಿಜೋ ನ್ಯಾಷನಲ್ ಫ್ರಂಟ್ ಮುಖ್ಯಸ್ಥ, ಮಾಜಿ ಮುಖ್ಯಮಂತ್ರಿ ಝೊರಾಮ್‌ತಾಂಗ ಪ್ರಕಾರ ಅವರ ಪಕ್ಷಕ್ಕೆ ರಾಷ್ಟ್ರೀಯ ಮಟ್ಟದಲ್ಲಿ ಬಿಜೆಪಿ ಜತೆಗೆ ಮೈತ್ರಿ ಇದ್ದರೂ, ಅದು ರಾಜ್ಯ ಮಟ್ಟದಲ್ಲಿ ಪ್ರತ್ಯೇಕ ಅಸ್ತಿತ್ವ ಕಾಯ್ದುಕೊಳ್ಳಲಿದೆಯಂತೆ. ತಮಾಷೆಯ ವಿಷಯವೆಂದರೆ ಈ ರಾಜ್ಯದಲ್ಲಿ ಕಾಂಗ್ರೆಸ್ ಹೊರತಾಗಿರುವ ಪಕ್ಷಗಳು ಅಂದರೆ ಮಿಜೋ ನ್ಯಾಷನಲ್ ಫ್ರಂಟ್ ಬಿಜೆಪಿಯನ್ನು “ಕ್ರಿಶ್ಚಿಯನ್ ವಿರೋಧಿ ಪಕ್ಷ’ ಎಂದು ಟೀಕಿಸುತ್ತವೆ. ಅದರ ಜತೆ ಜತೆಯಾಗಿಯೇ ಮೈತ್ರಿಯನ್ನೂ ಮಾಡಿಕೊಂಡಿವೆ. ದೇಶದ ಉಳಿದ ಭಾಗದಲ್ಲಿ ಕಾಂಗ್ರೆಸ್-ಬಿಜೆಪಿ ವಿರುದ್ಧ ದಿಕ್ಕಿನಲ್ಲಿದ್ದರೆ, ಈ ರಾಜ್ಯದ ಒಂದು ಭಾಗದಲ್ಲಿ ಕಾಂಗ್ರೆಸ್-ಬಿಜೆಪಿ ಒಪ್ಪಂದ ಮಾಡಿಕೊಂಡಿವೆ. ಚಕಾ¾ ಸ್ವಾಯತ್ತ ಜಿಲ್ಲಾ ಮಂಡಳಿ (ಸಿಎಡಿಸಿ)ಗೆ ಈ ವರ್ಷದ ಏಪ್ರಿಲ್‌ನಲ್ಲಿ ನಡೆದಿದ್ದ ಚುನಾವಣೆಯಲ್ಲಿ ಅತಂತ್ರ ಫಲಿತಾಂಶ ಬಂದ ಬಳಿಕ ಅವೆರಡೂ ಪಕ್ಷಗಳೂ ಹೊಂದಾಣಿಕೆ ಮಾಡಿಕೊಂಡಿವೆ.
ಮಿಜೋರಾಂನಲ್ಲಿ ಕೇರಳದ ಬಳಿಕ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಸಾಕ್ಷರತೆ ಇದೆ. ಭಾರತೀಯ ಒಕ್ಕೂಟ ವ್ಯವಸ್ಥೆಯಲ್ಲಿದ್ದರೂ, ಈ ರಾಜ್ಯಕ್ಕೆ ಭಾರತದ ಇತರ ರಾಜ್ಯಗಳ ನಾಗರಿಕರು ಪ್ರವೇಶಿಸಬೇಕಾದರೆ ಮಿಜೋರಾಂ ಸರ್ಕಾರ ನೀಡುವ ಇನ್ನರ್ ಲೈನ್ ಪರ್ಮಿಟ್ (ಒಂದು ಮಾದರಿಯ ವೀಸಾ ವ್ಯವಸ್ಥೆ ಎನ್ನಬಹುದು) ಬೇಕೇ ಬೇಕು.
ರಾಜಕೀಯವಾಗಿ ಕೂಡ ಇತಿಹಾಸವೇನೆಂದರೆ ಕಾಂಗ್ರೆಸ್ ಅಥವಾ ಮಿಜೋ ನ್ಯಾಷನಲ್ ಫ್ರಂಟ್ ಸತತ ಎರಡು ಅವಧಿಗೆ ಅಧಿಕಾರ ನಡೆಸಿದರೆ, ಮೂರನೇ ಅವಧಿಗೆ ಅಧಿಕಾರ ಮುಂದುವರಿಸಿದ ಇತಿಹಾಸ ಇದುವರೆಗೆ ಇಲ್ಲ. ಹೀಗಾಗಿ, 2008 ಮತ್ತು 2013ರ ಚುನಾವಣೆ ಗೆದ್ದ ಲಾಲ್ತನ್ ಹಾವ್ಲಾ ನೇತೃತ್ವದ ಕಾಂಗ್ರೆಸ್‌ಗೆ ಈ ಚುನಾವಣೆ ಸವಾಲಾಗಿ ಪರಿಣಮಿಸಬಹುದು. 2016ರ ಬಳಿಕ ಹೆಚ್ಚಿನ ಎಲ್ಲಾ ಈಶಾನ್ಯ ರಾಜ್ಯಗಳಲ್ಲಿ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿದೆ. “ಈ ರಾಜ್ಯದಲ್ಲಿ ಬಿಜೆಪಿಗೆ ನೆಲೆಯೇ ಇಲ್ಲ. ಪ್ರಬಲ ನಾಯಕತ್ವವೂ ಇಲ್ಲ. ನಿಷ್ಠಾವಂತ ಕಾರ್ಯಕರ್ತರ ಪಡೆಯೂ ಇಲ್ಲ. ಹೀಗಾಗಿ ಕೇವಲ ಸಾಮಾಜಿಕ ಜಾಲತಾಣಗಳಲ್ಲಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಾರಿಗೊಳಿಸಿದ ವಿವಿಧ ಯೋಜನೆಗಳನ್ನು ಮುಂದಿಟ್ಟುಕೊಂಡು ಪ್ರಚಾರ ನಡೆಸಬೇಕಾಗಿದೆ. ಎಲ್ಲರಿಗೂ ಸಮಾನವಾಗಿ ಅವಕಾಶ ಕೊಡುವ ಪಕ್ಷ ನಮ್ಮದು. ಮೇಘಾಲಯ ಮತ್ತು ಗೋವಾದಲ್ಲಿರುವ ಬಿಜೆಪಿ ನೇತೃತ್ವದ ಸರ್ಕಾರದಲ್ಲಿ ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿದವರೂ ಕೂಡ ಸಚಿವರಾಗಿದ್ದಾರೆ’ ಎನ್ನುತ್ತಾರೆ ಪಕ್ಷದ ಸಾಮಾಜಿಕ ಜಾಲತಾಣದ ಸದಸ್ಯರೊಬ್ಬರು.
ಹಾಲಿ ಸಾಲಿನಲ್ಲಿ ಚುನಾವಣೆ ಇದ್ದರೂ ಪ್ರಚಾರ ನಡೆಯುತ್ತಿದೆಯೋ ಇಲ್ಲವೋ ಎಂಬ ವಿಚಾರವೇ ಗೊತ್ತಾಗುತ್ತಿಲ್ಲ. ಸರ್ಕಾರ ಜಾರಿ ಮಾಡಿದ ವಿವಿಧ ಕಲ್ಯಾಣ ಕಾರ್ಯಕ್ರಮಗಳ ಪೋಸ್ಟರ್‌ಗಳಾಗಲೀ, ದೊಡ್ಡ, ದೊಡ್ಡ ರ್ಯಾಲಿಗಳಾಗಲಿ ಕಂಡು ಬರುತ್ತಿಲ್ಲ. ದೇಶದ ಮಾಧ್ಯಮಗಳಲ್ಲಿಯೂ ಮಿಜೋರಾಂ ವಿಧಾನಸಭೆ ಚುನಾವಣೆ ಪ್ರಮುಖವಾದದ್ದು ಎಂಬ ವರದಿ ಪ್ರಕಟವಾಗಿಲ್ಲ. ಮುಖ್ಯ ಚುನಾವಣಾಧಿಕಾರಿ ಎಸ್.ಬಿ.ಶಶಾಂಕ್ ಅವರು “ಬ್ರೂ’ ನಿರಾಶ್ರಿತರಿಗೆ ಮತ ಹಾಕಲು ಅವಕಾಶ ಮಾಡಿಕೊಟ್ಟದ್ದಕ್ಕಾಗಿ ಅವರನ್ನು ಬದಲಾಯಿಸಲೇಬೇಕೆಂದು ಸಾರ್ವಜನಿಕರು ಆಕ್ರೋಶಗೊಂಡು ಪ್ರತಿಭಟಿಸಿದ್ದರು. ಮುಖ್ಯಮಂತ್ರಿ ಲಾಲ್ತನ್ ಹಾವ್ಲಾ ಕೂಡ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದರು. ಈ ವಿಚಾರ ಮಾತ್ರ ಮಾಧ್ಯಮಗಳಲ್ಲಿ ಪ್ರಮುಖವಾಗಿ ಸುದ್ದಿಯಾಯಿತು. ಉಳಿದಂತೆ ಅಲ್ಲಿ ತಣ್ಣಗಿನ ವಾತಾವರಣವಿದೆ.
ಕ್ರಿಶ್ಚಿಯನ್ ಸಮುದಾಯವೇ ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಅಲ್ಲಿ ಚರ್ಚ್ ಹೇಳುವ ಮಾತೇ ಅಂತಿಮ. ಸಾಮಾಜಿಕವಾಗಿ ಮತ್ತು ರಾಜಕೀಯವಾಗಿ ಚರ್ಚ್ ನಾಯಕತ್ವ ಸೂಚಿಸುವ ನಿರ್ಣಯಗಳೇ ಆಡಳಿತಾತ್ಮಕ ರಂಗದ ಮೇಲೆ ಪ್ರಭಾವ ಬೀರುತ್ತವೆ. ಹೀಗಾಗಿ ರಾಜಕೀಯವಾಗಿ ಯಾರು ಪ್ರವರ್ಧಮಾನಕ್ಕೆ ಬರಬೇಕು ಎಂಬ ವಿಚಾರದಲ್ಲಿ ಧಾರ್ಮಿಕ ನಾಯಕರ ನಿರ್ಣಯವೇ ಮುಖ್ಯವಾಗುವುದರಿಂದ ನವ ನಾಯಕರು ಪ್ರವರ್ಧಮಾನಕ್ಕೆ ಬರುವುದು ವಿಳಂಬವೇ ಆಗುತ್ತದೆ. ಹಾಲಿ ಮುಖ್ಯಮಂತ್ರಿ ಲಾಲ್ತನ್ ಹಾವ್ಲಾ (79), ಮಿಜೋ ನ್ಯಾಷನಲ್ ಫ್ರಂಟ್ ನಾಯಕ, ಮಾಜಿ ತೀವ್ರವಾದಿ ಝೊರಾಮ್‌ತಾಂಗಾ (84), ಹಾಲಿ ವಿಧಾನಸಭೆಯ ಸ್ಪೀಕರ್ ಹೈಫಿ (81) ಹೀಗೆ ಇಳಿವಯಸ್ಸಿನವರೇ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ.
ಮತ್ತೂಂದು ಪ್ರಮುಖವಾದ ಅಂಶವೆಂದರೆ ಈ ರಾಜ್ಯದಲ್ಲಿ ದೇಶದ ಉಳಿದ ಭಾಗಗಳಿಗಿಂತ ಅತಿ ಹೆಚ್ಚು, ಅಂದರೆ ಶೇ.95ರಷ್ಟು ಮಂದಿ ಬುಡಕಟ್ಟು ಜನಾಂಗದವರು ಇದ್ದಾರೆ. ಒಂದು ಸ್ಥಾನ ಹೊರತುಪಡಿಸಿ ಉಳಿದ 39 ಸ್ಥಾನಗಳು ಪರಿಶಿಷ್ಟ ಪಂಗಡ (ಎಸ್‌ಟಿ)ಕ್ಕೆ ಮೀಸಲಾಗಿ ಇರಿಸಲಾಗಿದೆ. ಈ ರಾಜ್ಯದಲ್ಲಿ ಇನ್ನೂ ವಿಶೇಷವಾದ ಅಂಶವಿದೆ. ಪುರುಷರಷ್ಟೇ ಮಹಿಳೆಯರೂ ಪ್ರಧಾನವಾಗಿ ರಾಜಕೀಯ ವ್ಯವಸ್ಥೆಯಲ್ಲಿ ಭಾಗವಹಿಸುತ್ತಾರೆ. ಚುನಾವಣಾ ಆಯೋಗದ ಮಾಹಿತಿ ಪ್ರಕಾರ ಒಟ್ಟು ಮತದಾರರು 7.7 ಲಕ್ಷ (3.93 ಮಹಿಳಾ ಮತದಾರರು, 3.74 ಲಕ್ಷ ಪುರುಷ ಮತದಾರರು). ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 19 ಸಾವಿರ ಮಂದಿ ಮತದಾರರು ಇದ್ದಾರೆ. ಈ ಪೈಕಿ 11 ಸಾವಿರ ಮಂದಿ ಬ್ರೂ ನಿರಾಶ್ರಿತರು. ಅವರು ಇದೇ ಮೊದಲ ಬಾರಿಗೆ ರಾಜ್ಯದಲ್ಲಿ ಹಕ್ಕು ಚಲಾವಣೆ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಹೀಗಾಗಿ, ಪ್ರಸಕ್ತ ಸಾಲಿನ ಮಿಜೋರಾಂ ಚುನಾವಣೆಯಲ್ಲಿ ಬಿಜೆಪಿಗೆ ಅದೃಷ್ಟ ಖುಲಾಯಿಸಲಿದೆಯೋ ಇಲ್ಲವೋ ಡಿ.11ರ ಫಲಿತಾಂಶವೇ ಹೇಳಬೇಕು. 40 ಸ್ಥಾನಗಳ ಪೈಕಿ 5ರಲ್ಲಿ ಗೆದ್ದರೂ, ಆ ರಾಜ್ಯದ ಮಟ್ಟಿಗೆ ಕಿಂಗ್‌ಮೇಕರ್ ಆಗಲಿದೆ ಬಿಜೆಪಿ ಎನ್ನುವುದು ಸದ್ಯದ ಲೆಕ್ಕಾಚಾರ.
ಸದಾಶಿವ ಕೆ.