ಬೆಳಗಾವಿ: 40 ವರ್ಷಗಳ ಹಿಂದೆ ಉಡುಪಿ ಜಿಲ್ಲೆ ಬಿಟ್ಟು ಗಡಿ ಜಿಲ್ಲೆ ಬೆಳಗಾವಿಗೆ ಉಪ ಜೀವನ ನಡೆಸಲು ಬಂದ ಈ ವ್ಯಕ್ತಿ ಈಗ ಯೋಗ ಮಾಸ್ಟರ್. ಡಾ. ರಾಜಕುಮಾರ ಅವರ ಕಾಮನ ಬಿಲ್ಲು ಸಿನಿಮಾದಿಂದ ಪ್ರೇರಿತರಾಗಿ ಯೋಗ ಕಲಿತಿರುವ ಮುರಳೀಧರ ಪ್ರಭು ತಮ್ಮ ಮಕ್ಕಳನ್ನು ಅಂತಾರಾಷ್ಟ್ರೀಯ ಯೋಗ ಪಟುಗಳನ್ನಾಗಿ ಬೆಳೆಸುತ್ತಿದ್ದಾರೆ.
ಮೂಲತಃ ಉಡುಪಿಯವರಾದ ಮುರಳೀಧರ ಪ್ರಭು ಅವರು ಬೆಳಗಾವಿಯಲ್ಲಿ ಪಾನ್ ಬೀಡಾ ಅಂಗಡಿ ನಡೆಸುತ್ತಾರೆ. 80ರ ದಶಕದಲ್ಲಿ ಬಿಡುಗಡೆಯಾದ ಡಾ| ರಾಜಕುಮಾರ ಅವರ ಕಾಮನಬಿಲ್ಲು ಸಿನಿಮಾದಲ್ಲಿ ಯೋಗ ಮಾಡುತ್ತಿರುವ ದೃಶ್ಯದಿಂದ ಪ್ರೇರಿತಗೊಂಡರು. 35 ವರ್ಷಗಳ ಹಿಂದೆ ಹನುಮಂತರಾವ ಸಾವಂತ ಎಂಬ ಗುರುವಿನ ಬಳಿ ಯೋಗ ಕಲಿತರು.
ತಮ್ಮ ಆರೋಗ್ಯವನ್ನು ಸದೃಢವಾಗಿಟ್ಟುಕೊಂಡಿರುವ ಮುರಳೀಧರ ಸುಮಾರು 15 ವರ್ಷಗಳಿಂದ ಯೋಗ ಕಲಿಸುತ್ತಿದ್ದಾರೆ. ಬೆಳಗಾವಿ ನಗರದ ಶ್ರೀಮಾತಾ ಯೋಗ ಮಂದಿರಲ್ಲಿ ಯೋಗ ತರಬೇತಿ ಕೇಂದ್ರ ನಡೆಸುತ್ತಿದ್ದಾರೆ. ನಿತ್ಯ 70ಕ್ಕೂ ಹೆಚ್ಚು ಜನ ಯೋಗ ಕಲಿಯಲು ಬರುತ್ತಾರೆ. ಪುರುಷರು, ಮಹಿಳೆಯರು ಹಾಗೂ ಚಿಕ್ಕ ಮಕ್ಕಳೂ ತರಬೇತಿ ಪಡೆಯುತ್ತಿದ್ದಾರೆ.
ಖನ್ನತೆ, ಅನಾರೋಗ್ಯ, ಬೆನ್ನು ನೋವು, ಕುತ್ತಿಗೆ ನೋವು, ಕೌಟುಂಬಿಕ ಕಲಹದಿಂದ ಮಾನಸಿಕ ತೊಂದರೆಯಿಂದ ಬಳಲುತ್ತಿರುವವರು ಮುರಳೀಧರ ಬಳಿ ಯೋಗ, ಪ್ರಾಣಾಯಾಮದಿಂದ ಗುಣಮುಖರಾಗಿದ್ದಾರೆ. ಅನಾರೋಗ್ಯ ಪೀಡಿತರಾದವರೇ ಮುರಳೀಧರ ಅವರ ಯೋಗ ತರಬೇತಿ ಕೇಂದ್ರಕ್ಕೆ ಬಂದು ಮತ್ತೆ ಆರೋಗ್ಯ ಮರಳಿ ಪಡೆದ ಉದಾಹರಣೆಗಳು ಬಹಳಷ್ಟಿವೆ.
ಮುರಳೀಧರ ಪ್ರಭು ಗರಡಿಯಲ್ಲಿ ಯೋಗ ಕಲಿತವರಲ್ಲಿ ನಾಲ್ವರು ಅಂತಾರಾಷ್ಟ್ರೀಯ, ಐದಕ್ಕೂ ಹೆಚ್ಚು ಜನ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದಾರೆ. ಕೆಲ ಕಾಲೇಜು ವಿದ್ಯಾರ್ಥಿಗಳು ಯುನಿವರ್ಸಿಟಿ ಬ್ಲ್ಯೂ ಆಗಿದ್ದಾರೆ. ಇವರ ಮಗಳು ನವ್ಯ ಪ್ರಭು ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿ ಪದಕ ಗಿಟ್ಟಿಸಿಕೊಂಡಿದ್ದಾಳೆ. ಮಗ ನಾಗರಾಜ ಪ್ರಭು ಕೂಡ ರಾಜ್ಯ ಮಟ್ಟದಲ್ಲಿ ಮಿಂಚಿ ಹೆಸರು ಮಾಡಿದ್ದಾನೆ. ಜಯ ಶೈಲೇಶ ಪ್ರಭು ಎಂಬ ವಿದ್ಯಾರ್ಥಿ ಸಿಂಗಾಪುರ ಹಾಗೂ ಮಲೇಷಿಯಾದಲ್ಲಿ ನಡೆದ ಯೋಗ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾನೆ. ವಿಶ್ವನಾಥ ಮಣಗುತಕರ ಎಂಬ ವಿದ್ಯಾರ್ಥಿ ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿದ್ದಾನೆ.
ಪಾಶ್ಚಾತ್ಯ ದೇಶಗಳಲ್ಲಿ ಯೋಗಕ್ಕೆ ವಿಶೇಷ ಸ್ಥಾನ ಇದೆ. ನಮ್ಮ ಯೋಗವನ್ನೇ ಆಧುನಿಕವಾಗಿ ಬಳಸಿಕೊಂಡಿರುವ ವಿದೇಶಿಗರು ಯೋಗಾಸನಗಳಿಗೆ ಬೇರೆ ಬೇರೆ ಹೆಸರನ್ನಿಟ್ಟು ತಮ್ಮದೇ ಕಲೆ ಎನ್ನುವಂತೆ ಬಿಂಬಿಸಿಕೊಳ್ಳುತ್ತಿದ್ದಾರೆ. ಮೂಲತಃ ನಮ್ಮ ಭಾರತೀಯ ಪರಂಪರೆಯ ಯೋಗ ಭಾರತದಲ್ಲಿ ಇನ್ನೂ ಗಟ್ಟಿಯಾಗಬೇಕಿದೆ. ಯೋಗದಿಂದ ರೋಗ ಮುಕ್ತರಾಗಬೇಕೆನ್ನುವ ಸಂದೇಶ ರವಾನಿಸುವ ಕಾರ್ಯ ಆಗಬೇಕಿದೆ ಎನ್ನುತ್ತಾರೆ ಮುರಳೀಧರ ಪ್ರಭು.
•ಭೈರೋಬಾ ಕಾಂಬಳೆ