ಇನಿಯಾ,
ಒಲವಿನ ಓಲೆಯಿದು, ಹೃದಯದ ಆಸೆಯಿದು, ನನ್ನ ಪ್ರೀತಿ ದೋಣಿಯ ನಾವಿಕ ನೀನಾಗಬೇಕೆಂದು ಕಾಯುತ್ತಿರುವ ಹೂ ಮನಸ್ಸು ನನ್ನದು.
ಪ್ರಥಮ ಪಿಯುಸಿ ಆರಂಭದ ದಿನಗಳವು. ಹೇಳಿ ಕೇಳಿ ಹದಿ ಹರೆಯದ ವಯಸ್ಸು, ನೋಡಿದ್ದೆಲ್ಲ ಬೇಕೆನ್ನುವ ಮನಸ್ಸು. ಆಗ ಸಿಕ್ಕಿದವನು ನೀನು. ಪ್ರೀತಿ, ಪ್ರೇಮ ಅಂದ್ರೆ ಏನು ಅಂತ ತಿಳಿಯದ ಮುಗ್ದೆ ನಾನಾಗಿದ್ದೆ. ತರಗತಿ ಮುಗಿಸಿ ಬರುವಾಗ ಅಚಾನಕ್ ಆಗಿ ನನ್ನ ಮುಂದೆ ಬಂದೆ ನೀನು. ಆ ಮೊದಲ ಭೇಟಿಯಲ್ಲೇ ಏನೋ ರೋಮಾಂಚನದ ಅನುಭವ ಆಯ್ತು.
ನೀನಾಗೇ ನನ್ನ ಮಾತಾಡಿಸಿದರೂ, ಏನಂತ ಉತ್ತರಿಸಬೇಕು ಅಂತ ತಿಳಿಯದೆ ತಡಬಡಾಯಿಸಿಬಿಟ್ಟೆ. ನಿನ್ನ ಮಾತು ನನಗೆ ಸಂಗೀತದಂತೆ ಕೇಳಿಸುತ್ತಿತ್ತು. ಅದಕ್ಕೇ ಮೌನವಾಗಿ ಆಲಿಸುತ್ತಾ ನಿಂತೆ. ಅದಕ್ಕಿಂತ ಮುಂಚೆ ಹಿಂದೆಂದೂ ನಾನು ನಿನ್ನನ್ನು ನೋಡಿರಲಿಲ್ಲ. “ಇವನ್ಯಾರು?’ ಅನ್ನೋ ಪ್ರಶ್ನೆ ಕಾಡಿತಾದರೂ, ಯಾವುದೋ ಅಗೋಚರ ಬಾಂಧವ್ಯ ಆ ಪ್ರಶ್ನೆಯನ್ನು ಮರೆಸಿ ಹಾಕಿತು. ನನ್ನ ಅಕ್ಕಪಕ್ಕ ನನಗಿಂತಲೂ ಸುಂದರಿಯರಾದ ಎಷ್ಟೊಂದು ಹುಡುಗಿಯರಿದ್ರೂ ಈ ಶ್ಯಾಮಲ ವರ್ಣದ ಶ್ಯಾಮಲೆಯನ್ನೇ ಯಾಕೆ ನೀನು ಮಾತಾಡಿಸಿದೆ ಅಂತಲೂ ಗೊತ್ತಿಲ್ಲ..
ಪ್ರೀತಿ ಎಂಬ ಭಾವನಾ ಲೋಕಕ್ಕೆ ನನ್ನನ್ನು ಪರಿಚಯಿಸಿದವನು ನೀನೇ. ಅಂದು ನೀನು ನನ್ನ ಪೋನ್ ನಂಬರ್ ಕೇಳಿದಾಗ, ನಾನು ಕೊಡಲಿಲ್ಲ. ಆದರೆ ನೀನು ಅಲ್ಲಿಂದ ಹೊರಟು ಹೋದ ಮೇಲೆ, ಛೇ! ಎಂಥಾ ಪೆದ್ದಿ ನಾನು. ನಂಬರ್ ಕೊಟ್ಟಿದ್ದರೆ ಗಂಟೇನು ಹೋಗ್ತಿತ್ತು ಅಂತ ಅನ್ನಿಸಿತು.
ಅವತ್ತು ನೀನೇನೋ ಮರು ಮಾತಾಡದೆ ಹೋಗಿಬಿಟ್ಟೆ. ಆದ್ರೆ, ನಾನು ಅಂದಿನಿಂದ ಇಂದಿನವರೆಗೆ ನಿನಗೋಸ್ಕರ ಕಾಯ್ತಾ ಇದ್ದೀನಿ. ನಾಲ್ಕು ವರ್ಷದಿಂದ ನಿನ್ನದೇ ಧ್ಯಾನದಲ್ಲಿರುವ ನನಗೆ ನೀನು ಆದಷ್ಟು ಬೇಗ ಮತ್ತೆ ಸಿಗು. ನೀನು ಮೊದಲು ನೋಡಿದಾಗ ನಾನು ಹಾಕಿದ್ದ ಅದೇ ಹಸಿರು ಬಣ್ಣದ ಲಂಗ ದಾವಣಿ ಹಾಕಿ ಅದೇ ಕಾಲೇಜಿನ ಗೇಟ್ ಮುಂದೆ ಕಾಯುತ್ತಿರುತ್ತೀನಿ. ಮತ್ತೂಮ್ಮೆ ನನ್ನೆದುರು ಬಾ. ನಾನೇ ಮೊದಲು ಮಾತಾಡಿಸ್ತೀನಿ. ನಂಬರ್ ಕೂಡಾ ಕೊಡ್ತೀನಿ. ಸರೀನಾ?
ಇಂತಿ ನಿನ್ನ ಪ್ರೀತಿಯ ಶ್ಯಾಮಲೆ..
ಕಾವ್ಯಾ ಎನ್.