ಬೆಂಗಳೂರು: ಬಿಬಿಎಂಪಿ ಈ ಬಾರಿಯೂ ದುಬಾರಿ ಬಜೆಟ್ ಮಂಡಿಸುವ ಮುನ್ಸೂಚನೆಗಳು ಕಂಡುಬರುತ್ತಿದ್ದು, 2020-21ನೇ ಸಾಲಿನಲ್ಲಿ 11 ಸಾವಿರ ಕೋಟಿ ರೂ. ಮೊತ್ತದ ಬಜೆಟ್ ಮಂಡನೆಗೆ ಸಿದ್ಧತೆ ಮಾಡಿಕೊಂಡಿದೆ.
ಈ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಎಲ್.ಶ್ರೀನಿವಾಸ್, ಆಸ್ತಿ ತೆರಿಗೆ ಸೇರಿ ಒಟ್ಟು 4500 ಕೋಟಿ ರೂ. ಆದಾಯ ನಿರೀಕ್ಷೆ ಇಟ್ಟುಕೊಂಡು, ರಾಜ್ಯ ಸರ್ಕಾರದಿಂದ 7,500 ಕೋಟಿ ರೂ. ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸರ್ಕಾರದಿಂದ ಬರುವ ಅನುದಾನ ನೋಡಿಕೊಂಡು ಮಾರ್ಚ್ 3ನೇ ವಾರ ಬಜೆಟ್ ಮಂಡನೆ ಮಾಡಲಾಗುವುದು ಎಂದು ಹೇಳಿದರು.
ನಗರದ ಕೆರೆಗಳು, ಪಾರ್ಕ್ ಹಾಗೂ ವೃತ್ತಗಳ ನಿರ್ವಹಣೆಗೆ ಒತ್ತು ನೀಡಲಾಗಿದೆ. ಇನ್ನೊಂದು ವಾರದಲ್ಲಿ ಎಲ್ಲ ವಿಭಾಗಗಳ ಬೇಡಿಕೆ, ಅಂದಾಜು ಪಟ್ಟಿ ಅಂತಿಮವಾಗಲಿದೆ. ಆ ನಂತರ ಬಜೆಟ್ ರೂಪುರೇಷೆಗಳನ್ನು ಅಂತಿಮ ಮಾಡಲಾಗುವುದು. ರಾಜ್ಯ ಮತ್ತು ಪಾಲಿಕೆ ವ್ಯಾಪ್ತಿಯಲ್ಲಿ ಜಾರಿಯಲ್ಲಿರುವ ಒಂದೇ ರೀತಿಯ ಯೋಜನೆಗಳನ್ನು ವಿಲೀನ ಮಾಡುವ ಮೂಲಕ ಪಾಲಿಕೆಯ ಹೊರೆ ತಗ್ಗಿಸುವ ಚಿಂತನೆ ಇದೆ. ಈ ನಿಟ್ಟಿನಲ್ಲಿ ಚರ್ಚೆ ನಡೆಯುತ್ತಿದೆ ಎಂದು ವಿವರಿಸಿದರು.
2019-20ನೇ ಸಾಲಿನಲ್ಲಿ ಕಾಂಗ್ರೆಸ್ -ಜೆಡಿಎಸ್ ಮೈತ್ರಿ ಮಂಡಿಸಿದ ಬಿಬಿಎಂಪಿ ಆರಂಭದಲ್ಲಿ 10,688 ಕೋಟಿ ರೂ. ಇತ್ತು. ಚರ್ಚೆ ಬಳಿಕ ಏಕಾಏಕಿ 12,957 ಕೋಟಿ ರೂ.ಗಳಿಗೆ ಏರಿಕೆಯಾಗಿತ್ತು. ಈ ಕುರಿತು ಬಿಜೆಪಿಯಿಂದ ವಿರೋಧ ವ್ಯಕ್ತವಾದರೂ, ಕೌನ್ಸಿಲ್ ಸಭೆಯಲ್ಲಿ ಬಜೆಟ್‌ಗೆ ಅನುಮೋದನೆ ಪಡೆದು ಸರ್ಕಾರಕ್ಕೆ ಕಳುಹಿಸಲಾಗಿತ್ತು.
ಏಕಾಏಕಿ 3 ಸಾವಿರ ಕೋಟಿ ರೂ. ಏರಿಕೆಯಾದ ಹಿನ್ನೆಲೆಯಲ್ಲಿ ಪಾಲಿಕೆಯ ಆಯುಕ್ತರಾಗಿದ್ದ ಮಂಜುನಾಥ ಪ್ರಸಾದ್, ಬಜೆಟ್ ಅವೈಜ್ಞಾನಿಕವಾಗಿರುವ ಕಾರಣ, ಅನುಷ್ಠಾನ ಸಾಧ್ಯವಾಗುವುದಿಲ್ಲ. ಬಜೆಟ್ ಗಾತ್ರವನ್ನು 9 ಸಾವಿರ ಕೋಟಿ ರೂ.ಗೆ ಇಳಿಸಿದಾಗ ಮಾತ್ರ ಅನುಷ್ಠಾನ ಸಾಧ್ಯ ಎಂದು ಸರ್ಕಾರಕ್ಕೆ ಪತ್ರ ಬರೆದಿದ್ದರು.
ನಂತರ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಅಧಿಕಾರವಹಿಸಿಕೊಂಡು ಪಾಲಿಕೆಯ ಬಜೆಟ್‌ಗೆ ತಡೆ ತಂದು, ಮತ್ತೆ ಬಜೆಟ್‌ನಲ್ಲಿ ಬದಲಾವಣೆ ಮಾಡಿದ್ದರು. ಈ ವೇಳೆ ಮೂಲ ಬಜೆಟ್‌ಗಿಂತ ಬಿಜೆಪಿಯ ಪಾಲಿಕೆ ಸದಸ್ಯರಿಗೆ ಹೆಚ್ಚಿನ ಅನುದಾನ ಮಂಜೂರಾಗಿತ್ತು.