Advertisement

ಈ ಬಾರಿ ಅಂಬಾರಿಯಲ್ಲಿ ದುಗ್ಗಮ್ಮನ ಉತ್ಸವ ಮೂರ್ತಿ

04:36 PM Sep 30, 2018 | Team Udayavani |

ದಾವಣಗೆರೆ: ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಿ ದಸರಾ ಮಹೋತ್ಸವ ಅ. 10 ರಿಂದ 19ರ ವರೆಗೆ ನಡೆಯಲಿದ್ದು, ಅಂಬಾರಿಯ ಮೇಲೆ ದೇವಿ ಉತ್ಸವ ಮೂರ್ತಿಯ ಮೆರವಣಿಗೆ ಈ ಬಾರಿಯ ವಿಶೇಷ ಆಕರ್ಷಣೆಯಾಗಲಿದೆ.

Advertisement

ಶನಿವಾರ, ದೇವಸ್ಥಾನದ ಟ್ರಸ್ಟ್‌ ಅಧ್ಯಕ್ಷರೂ ಆಗಿರುವ ಶಾಸಕ ಶಾಮನೂರು ಶಿವಶಂಕರಪ್ಪರ ಅಧ್ಯಕ್ಷತೆಯಲ್ಲಿ ದೇವಸ್ಥಾನದ ಪ್ರಸಾದ ನಿಲಯದಲ್ಲಿ ದಸರಾ ಮಹೋತ್ಸವ ಕುರಿತು ನಡೆದ ಸಭೆಯಲ್ಲಿ ಈ ಬಾರಿ ಉತ್ಸವವನ್ನು ಅದ್ಧೂರಿಯಾಗಿ ಆಚರಿಸಲು ತೀರ್ಮಾನಿಸಲಾಯಿತು.

ಅ. 10ರಿಂದ 19ರ ವರೆಗೆ ದೇವಿಗೆ ಪ್ರತಿನಿತ್ಯ ಅಭಿಷೇಕ, ಪೂಜೆ, ವಿಶೇಷ ಅಲಂಕಾರ, ಪುರಾಣ ಮುಂತಾದ ಧಾರ್ಮಿಕ ಕಾರ್ಯಗಳು ನಡೆಯಲಿವೆ. ಅ. 20ರಂದು ಸಾಮೂಹಿಕ ಮದುವೆ, ಅನ್ನಸಂತರ್ಪಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಟ್ರಸ್ಟ್‌ನ ಹಂಗಾಮಿ ಕಾರ್ಯದರ್ಶಿ ಗೌಡ್ರ ಚನ್ನಬಸಪ್ಪ ಸಭೆಗೆ ತಿಳಿಸಿದರು.

ಮುಖಂಡ ಕರಿಗಾರ್‌ ಬಸಪ್ಪ ಮಾತನಾಡಿ, ವಿಜಯ ದಶಮಿಯಂದು ಮೈಸೂರು ದಸರಾ ಮಾದರಿಯಲ್ಲಿ ಆನೆ ಮೇಲೆ ಅಂಬಾರಿಯಲ್ಲಿ ದೇವಿಯ ಉತ್ಸವ ಮೂರ್ತಿ ಇರಿಸಿ, ದೇವಸ್ಥಾನದಿಂದ ಮೆರವಣಿಗೆ ಆರಂಭಿಸಬೇಕೆಂದು ಮಂಡಿಸಿದ ಪ್ರಸ್ತಾಪಕ್ಕೆ ಸಭೆ ಒಪ್ಪಿಗೆ ಸೂಚಿಸಿತು.

ಉತ್ಸವ ಸಮಿತಿ ರಚಿಸುವುದಕ್ಕೂ ಸಭೆ ನಿರ್ಧರಿಸಿತು. ದೇವಿಯ ದರ್ಶನಕ್ಕೆ ಬರುವ ಭಕ್ತರ ಸಂಖ್ಯೆ ಹೆಚ್ಚಳವಾಗಿದೆ. ಬಹಳ ಜನ ಅಭಿಷೇಕ ಸೇವೆ ಮಾಡಿಸುತ್ತಾರೆ. ಹಾಗಾಗಿ ಪೂಜೆ, ಅಭಿಷೇಕಕ್ಕೆ 2 ಕಡೆ ವ್ಯವಸ್ಥೆ ಮಾಡಲು ಸಭೆ ಸಮ್ಮತಿಸಿತು. ಮಾಜಿ ಶಾಸಕ ಯಜಮಾನ್‌ ಮೋತಿ ವೀರಣ್ಣ, ಟ್ರಸ್ಟ್‌ನ ಸದಸ್ಯ ಅಥಣಿ ವೀರಣ್ಣ, ಎಚ್‌.ಬಿ. ಗೋಣೆಪ್ಪ, ಯಶವಂತರಾವ್‌ ಜಾಧವ್‌ ಇತರರು ಸಭೆಯಲ್ಲಿದ್ದರು.

Advertisement

ಆಕ್ಷೇಪ, ಮಾತಿನ ಚಕಮಕಿ…. : ಬಾಬುದಾರರು ಹಲವಾರು ವರ್ಷಗಳಿಂದ ದೇವಸ್ಥಾನದ ಸೇವಾ ಕಾರ್ಯಗಳಲ್ಲಿ ಭಾಗಿಯಾಗುತ್ತಾ ಬಂದಿದ್ದಾರೆ. ಅವರನ್ನು ದೇವಸ್ಥಾನದ ಸಮಿತಿಯೊಳಗೆ ಏಕೆ ತೆಗೆದುಕೊಂಡಿಲ್ಲ ಎಂಬ ವಿಚಾರ ಸಭೆಯಲ್ಲಿ ಬಿಸಿ ಚರ್ಚೆಗೆ ಕಾರಣವಾಯಿತು.

ಗೌಡ್ರ ರೇವಣಸಿದ್ದಪ್ಪ ಮತ್ತಿತರರು ಈ ವಿಷಯ ಪ್ರಸ್ತಾಪಿಸಿ, ದೇವಿಯ ಹಬ್ಬವನ್ನು ಮೊದಲಿನಿಂದಲೂ ಮಾಡಿಕೊಂಡು ಬಂದಿದ್ದೇವೆ. ಸಮಿತಿಯೊಳಗೆ ತಮ್ಮನ್ನು ಏಕೆ ತೆಗೆದುಕೊಂಡಿಲ್ಲ ಎಂದು ಪ್ರಶ್ನಿಸಿದರು. ಈ ವಿಚಾರ ಸಭೆ
ಕಾವೇರುವಂತೆ ಮಾಡಿತು. ಆಗ ಮಾತಿನ ಚಕಮಕಿ ನಡೆಯಿತು. ಅಸಮಾಧಾನ, ಆಕ್ಷೇಪಗಳು ವ್ಯಕ್ತವಾದವು. ಇತ್ತೀಚೆಗೆ ಮೂವರು ಸದಸ್ಯರನ್ನು ನೇಮಕ ಮಾಡಿಕೊಂಡಿರುವ ವಿಚಾರವನ್ನು ಯಶವಂತರಾವ್‌ ಜಾಧವ್‌ ಪ್ರಸ್ತಾಪಿಸಿದರು.

ಯುವಕರಿಗೂ ಅವಕಾಶ ಕೊಡಿ ಎಂದು ರಾಜನಹಳ್ಳಿ ಶಿವಕುಮಾರ್‌ ಆಗ್ರಹಿಸಿದರು. ಒಂದು ಹಂತದಲ್ಲಿ ಮಧ್ಯ ಪ್ರವೇಶಿಸಿದ ಶಾಸಕ ಶಾಮನೂರು ಶಿವಶಂಕರಪ್ಪ, ಏನೇ ಹೇಳುವುದಿದ್ದರೂ ಅದಕ್ಕೊಂದು ವಿಧಾನವಿದೆ. ಸಭಾ ಮರ್ಯಾದೆ ಕಾಪಾಡಬೇಕು. ತಮ್ಮನ್ನು ಅಧ್ಯಕ್ಷರನ್ನಾಗಿ ಮಾಡಿ ಎಂದು ತಾವೇನೂ ಕೇಳಿರಲಿಲ್ಲ ಎಂದರು.

ತಮ್ಮ ಹೆಸರು ಪ್ರಸ್ತಾಪವಾದ ಬಗ್ಗೆ ಸದಸ್ಯ ಅಥಣಿ ವೀರಣ್ಣ ಪ್ರತಿಕ್ರಿಯೆ ನೀಡಿ, ಭಾವನಾತ್ಮಕ ಮಾತುಗಳು ಬೇಡ, ಸಭೆಯಿಂದಲೇ ತಮ್ಮ ಹೆಸರು ಪ್ರಸ್ತಾಪವಾಗಿತ್ತು ಎಂದು ಹೇಳಿದರು. ಸಭೆಯ ಆರಂಭದಲ್ಲಿ ಯಶವಂತರಾವ್‌
ಜಾಧವ್‌ ಅವರು ಸಮಿತಿಗೆ ನೀಡಿದ ಪತ್ರದ ಬಗ್ಗೆ ಪ್ರಸ್ತಾಪವಾಯಿತು. ಅದನ್ನು ಸ್ವತಃ ಶಾಸಕ ಶಾಮನೂರು ಶಿವಶಂಕರಪ್ಪನವರೇ ಸಭೆಗೆ ಓದಿ ಹೇಳಿದರು. ಸಮಿತಿಯ ಚಟುವಟಿಕೆಗಳು ಪಾರದರ್ಶಕವಾಗಿಲ್ಲ, ನಿಗೂಢವಾಗಿವೆ. ಜನರಿಗೆ ಅನುಮಾನ ಮೂಡುವಂತೆ ಮಾಡಿವೆ. ಭಕ್ತರ ಅನುಮಾನ ಪರಿಹರಿಸಿ ಎಂಬುದಾಗಿ ಜಾಧವ್‌ ಆ ಪತ್ರದಲ್ಲಿ ಪ್ರಸ್ತಾಪಿಸಿದ್ದರು. ಹೊಸ ಸದಸ್ಯರ ನೇಮಕ, ಟ್ರಸ್ಟ್‌ ರಚನೆ ಬಗ್ಗೆ ಆಕ್ಷೇಪವೂ ಆ ಪತ್ರದಲ್ಲಿತು.

Advertisement

Udayavani is now on Telegram. Click here to join our channel and stay updated with the latest news.

Next