Advertisement

ಈ ಬಾರಿ 30 ಲಕ್ಷ ರೈತರಿಗೆ 20810 ಕೋಟಿ ರೂ. ಬೆಳೆ ಸಾಲ : ಎಸ್.ಟಿ.ಸೋಮಶೇಖರ್ ಘೋಷಣೆ

03:28 PM May 31, 2021 | Team Udayavani |

ಬೆಂಗಳೂರು: ಕಳೆದ ಸಾಲಿನಲ್ಲಿ ಶೇ. 114.70 ರೈತರಿಗೆ ಬೆಳೆಸಾಲ ನೀಡಿಕೆ ಮೂಲಕ ಗುರಿಯನ್ನು ಮೀರಿ ಸಾಧನೆ ಮಾಡಿದ್ದು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಸೂಚನೆ ಮೇರೆಗೆ ಪ್ರಸಕ್ತ ಸಾಲಿನ ಅಂದರೆ, 2021-22ರಲ್ಲಿ 30 ಲಕ್ಷ ರೈತರಿಗೆ 20810 ಕೋಟಿ ರೂ. ಬೆಳೆ ಸಾಲ ನೀಡುವ ಗುರಿಯನ್ನು ನೀಡಿದ್ದೇವೆ ಎಂದು ಸಹಕಾರ ಸಚಿವರಾದ ಎಸ್.ಟಿ. ಸೋಮಶೇಖರ್ ತಿಳಿಸಿದರು.

Advertisement

ವಿಕಾಸಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವರು, ಯಾವುದೇ ಕಾರಣಕ್ಕೂ ನಮ್ಮ ರೈತಾಪಿ ವರ್ಗದವರಿಗೆ ತೊಂದರೆಯಾಗಬಾರದು. ಹೀಗಾಗಿ 30 ಲಕ್ಷ ರೈತರಿಗೆ ಹೆಚ್ಚಿನ ಸಾಲ ತಲುಪುವಂತಾಗಬೇಕು ಎಂದು ಮುಖ್ಯಮಂತ್ರಿಗಳು ನೀಡಿದ ಸೂಚನೆಯನ್ವಯ ಕ್ರಮವನ್ನು ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು.

ಕಳೆದ ಆರ್ಥಿಕ ವರ್ಷವಾದ 2020-21ರಲ್ಲಿ 24.50 ಲಕ್ಷ ರೈತರಿಗೆ 15400 ಕೋಟಿ ರೂಪಾಯಿ ಅಲ್ಪಾವಧಿ, ಮಧ್ಯಮಾವಧಿ ಹಾಗೂ ದೀರ್ಘಾವಧಿ ಸಾಲ ನೀಡಿಕೆಯ ಗುರಿಯನ್ನು ಹೊಂದಲಾಗಿತ್ತು. ನಮ್ಮ ಅಪೆಕ್ಸ್ ಬ್ಯಾಂಕ್ ಹಾಗೂ 21 ಡಿಸಿಸಿ ಬ್ಯಾಂಕ್ ಗಳು 25,93,982 ರೈತರಿಗೆ 17490 ಕೋಟಿ ರೂಪಾಯಿ ಸಾಲವನ್ನು ನೀಡಿವೆ. ಕೊರೋನಾ ಸಂಕಷ್ಟದ ಸಂದರ್ಭದಲ್ಲಿ ಶೇಕಡಾ 100 ಗುರಿ ಮೀರಿ ಶೇ. 114.70 ಸಾಧನೆಯನ್ನು ಮಾಡುವ ಮೂಲಕ ರೈತರ ಸಂಕಷ್ಟಕ್ಕೆ ಸ್ಪಂದಿಸುವ ಕೆಲಸವನ್ನು ನಮ್ಮ ಸರ್ಕಾರ ಮಾಡಿದೆ. ಈ ಸಾಲಿನಲ್ಲಿಯೂ ಇದೇ ರೀತಿಯ ಸಾಧನೆಯನ್ನು ಮಾಡುವ ಬಗ್ಗೆ ಎಂದು ಸಚಿವರಾದ ಸೋಮಶೇಖರ್ ಅವರು ವಿಶ್ವಾಸ ವ್ಯಕ್ತಪಡಿಸಿದರು.

21 ಡಿಸಿಸಿ ಬ್ಯಾಂಕ್ ಗಳಿಗೆ ಈಗಾಗಲೇ ಸೂಚನೆಯನ್ನು ನೀಡಿದ್ದು, ಪ್ರಸಕ್ತ ಆರ್ಥಿಕ ವರ್ಷದಲ್ಲಿ 30 ಲಕ್ಷ ರೈತರನ್ನೂ ತಲುಪಬೇಕು, 20810 ಕೋಟಿ ರೂ. ಬೆಳೆ ಸಾಲವನ್ನು ನೀಡಬೇಕು ಎಂದು ಸೂಚಿಸಿದ್ದೇನೆ. ಲಾಕ್‌ಡೌನ್ ಮುಗಿದ ಬಳಿಕ ಡಿಸಿಸಿ ಬ್ಯಾಂಕ್‌ಗಳಿಗೆ ನಾನೇ ಖುದ್ದಾಗಿ ಭೇಟಿ ನೀಡಿ ಪರಿಶೀಲನೆ, ಸಲಹೆ-ಸೂಚನೆಗಳನ್ನು ನೀಡಲಿದ್ದೇನೆ. ಕಳೆದ ಬಾರಿ 5-6 ಡಿಸಿಸಿ ಬ್ಯಾಂಕ್ ಗಳು ಶೇ. 100 ಗುರಿ ಮುಟ್ಟಲು ಸಾಧ್ಯವಾಗಿಲ್ಲ. ಈ ವೇಳೆ ಅವರಿಗೂ ಸಹ ಗುರಿ ಮುಟ್ಟಲೇಬೇಕು ಎಂದು ಸೂಚನೆಯನ್ನು ನೀಡಿದ್ದಾಗಿ ಸಚಿವರಾದ ಸೋಮಶೇಖರ್ ತಿಳಿಸಿದರು.

ಡಿಸಿಸಿ ಬ್ಯಾಂಕ್ ಗಳು ತಮಗೆ ನೀಡಿರುವ ಗುರಿಯನ್ನು ತಲುಪಲೇಬೇಕು. ಯಾವುದೇ ಕಾರಣಕ್ಕೂ ಇದರಿಂದ ತಪ್ಪಿಸಿಕೊಳ್ಳಬಾರದು. ರೈತರಿಗೆ ನೂರಕ್ಕೆ ನೂರು ಸಾಲ ಸಿಗಬೇಕು. 21 ಡಿಸಿಸಿ ಬ್ಯಾಂಕ್ ಗಳ ಪ್ರಗತಿ ಪರಿಶೀಲನೆಯನ್ನೂ ಮಾಡಲಿದ್ದು, 30 ಲಕ್ಷ ರೈತರಿಗೆ 20810 ಕೋಟಿ ರೂಪಾಯಿ ಬೆಳೆ ಸಾಲ ದೊರೆಯುವಂತೆ ನೋಡಿಕೊಳ್ಳಲಾಗುವುದು ಎಂದು ಸಚಿವರಾದ ಎಸ್ ಟಿ ಎಸ್ ತಿಳಿಸಿದರು.

Advertisement

ಸಕಳೆದ ಬಾರಿ ಏನು ಗುರಿ ಇತ್ತು? ಎಷ್ಟು ಸಾಧನೆ ಮಾಡಲಾಗಿದೆ? ಈ ಬಾರಿ ಎಷ್ಟು ಗುರಿಯನ್ನು ನೀಡಬಹುದು ಎಂಬುದನ್ನು ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಾದ ತುಷಾರ್ ಗಿರಿನಾಥ್ ಹಾಗೂ ಸಹಕಾರ ಸಂಘಗಳ ನಿಬಂಧಕರಾದ ಜಿಯಾವುಲ್ಲ ಅವರು ಖುದ್ದು ಎಲ್ಲ ಡಿಸಿಸಿ ಬ್ಯಾಂಕ್ ಗಳ ಜೊತೆಗೆ ಚರ್ಚಿಸಿ ಗುರಿಯನ್ನು ನಿಗದಿಪಡಿಸಿದ್ದಾರೆ. ಅಲ್ಲದೆ, ಶೇ. 100 ಗುರಿ ಸಾಧನೆ ಮಾಡಿದ ಡಿಸಿಸಿ ಬ್ಯಾಂಕ್ ಗಳಿಗೆ ಧನ್ಯವಾದಗಳನ್ನು ಸಲ್ಲಿಸಿದ್ದೇವೆ. ಡಿಸಿಸಿ ಬ್ಯಾಂಕ್ ಗಳಿಗೆ ಅಪೆಕ್ಸ್ ಬ್ಯಾಂಕ್ ನಿಂದ ಆಗಬೇಕಾದ ಎಲ್ಲ ಸೌಲಭ್ಯಗಳನ್ನು ಮಾಡಿಕೊಡಲಾಗುವುದು ಎಂದು ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರು, ಶಾಸಕರಾದ ಬೆಳ್ಳಿ ಪ್ರಕಾಶ್ ಅವರ ಸಮ್ಮುಖದಲ್ಲಿ ತಿಳಿಸಿದ್ದೇವೆ ಎಂದು ಸಚಿವರಾದ ಸೋಮಶೇಖರ್ ಅವರು ತಿಳಿಸಿದರು.

ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರು, ಶಾಸಕರಾದ ಬೆಳ್ಳಿ ಪ್ರಕಾಶ್, ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಾದ ತುಷಾರ್ ಗಿರಿನಾಥ್, ಸಹಕಾರ ಸಂಘಗಳ ನಿಬಂಧಕರಾದ ಜಿಯಾವುಲ್ಲ, ಎಲ್ಲ ಡಿಸಿಸಿ ಬ್ಯಾಂಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next