Advertisement
ದೃಷ್ಟಾರ ಮುಂದಿನ ಪೀಳಿಗೆಯ ಬಗ್ಗೆ ಯೋಚನೆ ಮಾಡಿದರೆ, ರಾಜಕೀಯ ನಾಯಕ ಕೇವಲ ಮುಂದಿನ ಚುನಾವಣೆ ಗೆಲ್ಲುವುದು ಹೇಗೆ ಎನ್ನುವುದನ್ನಷ್ಟೇ ಯೋಚಿಸುತ್ತಾನೆ. ಇದು ರಾಜಕೀಯ ವ್ಯವಸ್ಥೆ ಮತ್ತು ರಾಜಕೀಯ ನಾಯಕರ ದೂರದೃಷ್ಟಿಯ ಪರಿ. ಐದು ವರ್ಷಕ್ಕೆ ಒಮ್ಮೆ ಚುನಾವಣೆಯಾಗುವುದರಿಂದ ಚುನಾವಣೆಯಲ್ಲಿ ಗೆದ್ದವರ ದೂರದೃಷ್ಟಿಯೂ ಐದು ವರ್ಷಕ್ಕೆ ಸೀಮಿತವಾಗಿರುತ್ತದೆ. ಪ್ರತೀ ಒಂದು ವರ್ಷಕ್ಕೆ ಚುನಾವಣೆ ನಡೆಯುವ ವ್ಯವಸ್ಥೆ ಇದ್ದಿದ್ದರೆ ರಾಜಕೀಯ ನಾಯಕರ ದೂರದೃಷ್ಟಿ ಚಿಂತನೆಯೂ ಒಂದು ವರ್ಷಕ್ಕೆ ಸೀಮಿತವಾಗುತಿತ್ತು. ಹೀಗಾಗಿಯೇ ನಮ್ಮ ರಾಜಕೀಯ ನಾಯಕರಲ್ಲಿ ದೀರ್ಘಕಾಲದ ದೂರದೃಷ್ಟಿಯಿಲ್ಲ.
Related Articles
Advertisement
ಸಾಮಾನ್ಯ ಕಾರ್ಯಕರ್ತನೂ ಹೇಗೆ ಚುನಾವಣೆ ಗೆಲ್ಲಲು ಸಾಧ್ಯ ಎಂಬುದನ್ನು ಬಿಜೆಪಿ ತೋರಿಸಿಕೊಟ್ಟಿದೆ. ಸಾಮಾನ್ಯ ಕಾರ್ಯಕರ್ತನಾಗಿದ್ದ ನನಗೆ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಟಿಕೆಟ್ ನೀಡಿ, ಕಾರ್ಯಕರ್ತ ಶ್ರಮದಿಂದ ಕೆಲವು ಸಾಧ್ಯವಾಗಿಸಿದೆ. ಚುನಾವಣೆ ಸ್ಪರ್ಧೆ ಮಾಡುವಾಗ ನನ್ನ ಬ್ಯಾಂಕ್ ಖಾತೆಯಲ್ಲಿ ಇದ್ದದ್ದು ಕೇವಲ 13 ಲಕ್ಷ ರೂ. ಬಿಜೆಪಿ ಪಕ್ಷ ಮತ್ತು ಪ್ರಧಾನಿ ಮೋದಿಯವರಿಂದ ನನ್ನ ಗೆಲವು ಸಾಧ್ಯವಾಗಿದೆ. ಮುಖ್ಯಮಂತ್ರಿ, ಸಂಸದ, ಶಾಸಕನ ಮಗ ಚುನಾವಣೆ ಸಂದರ್ಭದಲ್ಲಿ ನಾಯಕನಾಗಿ ಚುನಾವಣೆಯ ಸ್ಪರ್ಧಿಸಿ, ಗೆಲ್ಲುವ ಪದ್ಧತಿ ಬದಲಾಗಬೇಕು. ಸಾಮಾನ್ಯ ಕಾರ್ಯಕರ್ತ ಕೇವಲ ಪಕ್ಷ ಬ್ಯಾನರ್, ಬಂಟಿಂಗ್ಸ್ ಕಟ್ಟಲು, ನಾಯಕರು ಬಂದಾಗ ಜಯ ಘೋಷ ಕೂಗಲು ಸೀಮಿತವಾಗದೇ, ಕಾರ್ಯಕರ್ತನು ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲವು ಸಾಧಿಸುವಂತಾಗಬೇಕು. ಅಂತಹ ವ್ಯವಸ್ಥೆ ಬೇಕಾದರೆ ಒಂದು ದೇಶ-ಒಂದು ಚುನಾವಣೆ ಬರಬೇಕು. ಸದ್ಯದ ಚುನಾವಣ ವ್ಯವಸ್ಥೆಯಲ್ಲಿ ಒಂದು ಚುನಾವಣೆಗೆ ಎಷ್ಟು ಕೋಟಿ ಖರ್ಚಾಗುತ್ತದೆ ಮತ್ತು ಚುನಾವಣೆಯಲ್ಲಿ ಸ್ಪರ್ಧಿಸಿ, ಗೆಲುವಿಗಾಗಿ ಖರ್ಚು ಮಾಡಿದ ವ್ಯಕ್ತಿ ಗೆದ್ದ ಅನಂತರ ಮೊದಲು ತಾನು ಚುನಾವಣೆಯಲ್ಲಿ ಖರ್ಚು ಮಾಡಿದ ಹಣವನ್ನು ವಾಪಾಸ್ ಪಡೆಯುವುದು ಹೇಗೆ ಮತ್ತು ಮುಂದಿನ ಚುನಾ ವಣೆಗೆ ಖರ್ಚು ಮಾಡಬೇಕಾದ ಹಣವನ್ನು ಸಂಗ್ರಹಿಸುವುದು ಹೇಗೆ ಎಂಬುದಕ್ಕೆ ದಾರಿ ಹುಡುಕಿ, ಆ ಕಾರ್ಯವನ್ನು ಮೊದಲು ಆರಂಭಿಸುತ್ತಾನೆ. ಇದರಿಂದ ಇಡೀ ವ್ಯವಸ್ಥೆ ಭ್ರಷ್ಟವಾಗುತ್ತದೆ. ಚುನಾವಣೆಯೇ ಭ್ರಷ್ಟಾಚಾರ ವ್ಯವಸ್ಥೆಯ ಬೇರು ಎಂಬಂತಾಗಿದೆ. ಯಾವ ಹಂತಕ್ಕೆ ತಲುಪಿದ್ದೇವೆ ಎಂದರೆ, ಯಾವ ಠಾಣೆಗೆ ಯಾವ ಇನ್‌ಸ್ಪೆಕ್ಟರ್ ಹಾಕಬೇಕು ಎಂದಾಗ, ಇನ್‌ಸ್ಪೆಕ್ಟರ್ ಎಷ್ಟು ಕಾಸು ಕೊಟ್ಟು ಬರಬೇಕು ಎಂಬುದು ಶುರುವಾಗುತ್ತದೆ. ಯಾವ ಸಬ್ ರಿಜಿಸ್ಟ್ರಾರ್ ಯಾವ ಸರ್ಕಲ್‌ಗೆ ಬರಬೇಕು ಎಂದಾಗ ಭ್ರಷ್ಟಾಚಾರ ಹುಟ್ಟಿಕೊಳ್ಳುತ್ತದೆ. ಇಡೀ ವ್ಯವಸ್ಥೆಯೇ ಹೀಗಾಗಿ ಬಿಟ್ಟಿದೆ. ಕಾರಣ, ರಾಜಕೀಯ ನಾಯಕರು ಚುನಾವಣೆಯಲ್ಲಿ ಗೆಲ್ಲಲು ಅಷ್ಟು ದೊಡ್ಡ ಮೊತ್ತವನ್ನು ಖರ್ಚು ಮಾಡಿರುತ್ತಾರೆ. ರಾಜಕಾರಣಿಗಳು ಏನು ಮಾಡುತ್ತಾರೋ, ಹಣಕೊಟ್ಟು ಆಯಕಟ್ಟಿನ ಹುದ್ದೆ ಅಥವಾ ಸ್ಥಾನ ಗಿಟ್ಟಿಸಿಕೊಂಡ ಅಧಿಕಾರಿಗಳು ಕೂಡ, ಅದನ್ನೇ ಮುಂದುವರಿಸುತ್ತಾರೆ. ಇಡೀ ವ್ಯವಸ್ಥೆಯೇ ದುಡ್ಡಿನ ಮೇಲೆ ನಿಂತು ಬಿಟ್ಟಿದೆ. ಇದೆಲ್ಲವನ್ನು ಪೂರ್ಣವಾಗಿ ಬದಲಾಯಿಸುವ ನಿಟ್ಟಿನಲ್ಲಿ ಪ್ರಧಾನಿ ಕಚೇರಿಯಿಂದ ಹಿಡಿದು ಗ್ರಾಮ ಪಂಚಾ ಯತ್ ಕಚೇರಿವರೆಗಿನ ಭ್ರಷ್ಟಾಚಾರವನ್ನು ತೊಲ ಗಿಸಲು ಪ್ರಧಾನಿ ಮೋದಿ ಹೊಸ ವ್ಯವಸ್ಥೆ ಜಾರಿಗೆ ತರಲು ಮುಂದಾಗಿದ್ದಾರೆ.
ಚುನಾವಣ ವ್ಯವಸ್ಥೆಯು ಮುಕ್ತ ಮಾರುಕಟ್ಟೆಯ ರೀತಿಯಲ್ಲಿರಬೇಕು. ಆಮ್‌ಆದ್ಮಿ ಪಾರ್ಟಿಯನ್ನು ಒಪ್ಪದೇ ಇರಬಹುದು. ಆದರೆ ಆಮ್ ಆದ್ಮಿ ಪಾರ್ಟಿಯ ಮಾದರಿಯಲ್ಲಿ ಹೊಸ ಪಕ್ಷ ಗಳು, ಹೊಸ ರಾಜಕೀಯ ನಾಯಕರು ಬರುತ್ತಿರಬೇಕು. ರಾಜಕೀಯ ಪಕ್ಷಗಳು ಹೆಚ್ಚಾದಂತೆ ಸದೃಢ ಹಾಗೂ ಉತ್ತಮ ರಾಜಕೀಯ ಸ್ಪರ್ಧೆಗೆ ಅನೇಕ ಅಂಶಗಳು ಸೃಷ್ಟಿಯಾಗುತ್ತವೆ. ಹಿರಿಯ ಸಾಹಿತಿಗಳು, ಖ್ಯಾತನಾಮರು ಹಾಗೂ ಸಮಾಜ ಸುಧಾ ರಕರಲ್ಲಿ ಹಲವರು ಈ ಹಿಂದಿನ ಅನೇಕ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದಾರೆ. ಕೆಲವರಂತೂ ಠೇವಣಿಯನ್ನು ಕಳೆದು ಕೊಂಡಿದ್ದರು. ಕಾರಣ ಚುನಾವಣ ವ್ಯವಸ್ಥೆಯಲ್ಲಿರುವ ಕೆಲ ವೊಂದು ನಿರೀಕ್ಷಿತ ಅಂಶಗಳನ್ನು ಅವರು ತಲುಪಲು ಸಾಧ್ಯ ವಾಗುತ್ತಿರಲಿಲ್ಲ. ಎಲ್ಲರೂ ಚುನಾವಣೆಯಲ್ಲಿ ಸ್ಪರ್ಧೆ ಮಾಡು ವಂತಾಗಬೇಕು ಮತ್ತು ಮುಕ್ತ ಸ್ಪರ್ಧೆ, ಹೊಸ ಚಿಂತನೆ, ಹೊಸ ನಾಯಕತ್ವ ಹುಟ್ಟಿಕೊಳ್ಳುತ್ತಿರಬೇಕು.
ಅಜ್ಜ, ಅಜ್ಜಿ, ಮುತ್ತಜ್ಜ, ಮನೆತನದ ಹೆಸರು ಹೇಳಿಕೊಂಡು ರಾಜಕೀಯದಲ್ಲಿ ಇದ್ದವರು ಮತ್ತು ಇರಬೇಕು ಎಂದುಕೊಂಡಿರುವವರು ಎಂದಿಗೂ ರಾಜಕೀಯಲ್ಲಿ ಅಥವಾ ಚುನಾವಣ ವ್ಯವಸ್ಥೆಯಲ್ಲಿ ಹೊಸ ಚಿಂತನೆ, ಮುಕ್ತ ಸ್ಪರ್ಧೆಯನ್ನು ಬಯಸುವುದಿಲ್ಲ. ಹೀಗಾಗಿಯೇ ಕಾಂಗ್ರೆಸ್ ಪಕ್ಷ, ಒಳಗಿನ ಹಾಗೂ ಹೊರಗಿನ ಸ್ಪರ್ಧೆಯನ್ನು ವಿರೋಧಿಸುತ್ತಾ ಬಂದಿದೆ. ಪಕ್ಷದ ಒಳಗೆ ಸ್ಪರ್ಧೆ ಏರ್ಪಟ್ಟರೆ ರಾಹುಲ್ ಗಾಂಧಿಗೆ ಇಕ್ಕಟ್ಟು, ಪಕ್ಷದ ಹೊರಗೆ ಸ್ಪರ್ಧೆ ಇದೆ ಎಂದಾದರೆ ಇಡೀ ಪಕ್ಷವೇ ಇಕ್ಕಟ್ಟು ಎಂಬ ಧೋರಣೆಯಲ್ಲಿದೆ. ಹೀಗಾಗಿ ಅವರಿಗೆ ರಾಜಕೀಯ ಸ್ಪರ್ಧೆ ಬೇಕಾಗಿಲ್ಲ. ಈಗ ಇರುವ ವ್ಯವಸ್ಥೆಯನ್ನೇ ಮುಂದುವರಿಸಿಕೊಂಡು ಹೋಗಲು ಇಚ್ಛಿಸು ತ್ತಿದ್ದಾರೆ. ಹೀಗಾಗಿಯೇ ಒಂದು ದೇಶ ಒಂದು ಚುನಾವಣೆಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ರಾಜಕೀಯ ವ್ಯವಸ್ಥೆ ಸುಧಾರಣೆಗೆ ಒಂದು ದೇಶ-ಒಂದು ಚುನಾವಣೆ ಬರಬೇಕು. ಇದರಿಂದ ಭಾರತೀಯ ಪ್ರಜ್ಞಾಪ್ರಭುತ್ವ ವ್ಯವಸ್ಥೆಗೂ ಇನ್ನಷ್ಟು ಶಕ್ತಿ ಬರಲಿದೆ.
– ತೇಜಸ್ವಿ ಸೂರ್ಯ, ಸಂಸದ ಹಾಗೂ ಬಿಜೆಪಿ ಯುವಮೋರ್ಚಾ ರಾಷ್ಟ್ರೀಯ ಅಧ್ಯಕ್ಷ