ಬೆಂಗಳೂರು: ರಾಜ್ಯದಲ್ಲಿ ಆಡಳಿತಾರೂಢ ಕಾಂಗ್ರೆಸ್ ಸರ್ಕಾರವು ಲಿಂಗಾಯತ-ವೀರಶೈವ ಪ್ರತ್ಯೇಕ ಧರ್ಮ ಮಾನ್ಯತೆಗಾಗಿ ಕೇಂದ್ರಕ್ಕೆ ಶಿಫಾರಸು ಮಾಡಿರುವ ಬೆನ್ನಲ್ಲೇ ವೀರಶೈವ-ಲಿಂಗಾಯತ ಮಠಾಧೀಶರ ಭೇಟಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮುಂದಾಗಿದ್ದಾರೆ. ಸಿದ್ದರಾಮಯ್ಯ ಸರ್ಕಾರದ ನಿರ್ಧಾರಕ್ಕೆ ರಾಜಕೀಯವಾಗಿಯೇ ಉತ್ತರಿಸುವ ತಂತ್ರ ಇದಾಗಿದೆ.
ಮಾರ್ಚ್ 26, 27 ಹಾಗೂ 30,31 ರಂದು ರಾಜ್ಯ ಪ್ರವಾಸ ಮಾಡಲಿರುವ ಅಮಿತ್ ಶಾ, ಸಿದ್ಧಗಂಗಾ, ಸಿರಿಗೆರೆ, ಮುರುಘಾಮಠ ಹಾಗೂ ಸುತ್ತೂರು ಮಠಗಳಿಗೆ ಭೇಟಿ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ರಾಜ್ಯ ಸರ್ಕಾರದ ಶಿಫಾರಸು ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಯಾವ ರೀತಿಯ ಕ್ರಮ ಕೈಗೊಳ್ಳಬಹುದು ಎಂಬುದರ ಬಗ್ಗೆ ಮಠಾಧೀಶರ ಅಭಿಪ್ರಾಯ, ಸಲಹೆ ಪಡೆಯುವುದು ಈ ಭೇಟಿಯ ಉದ್ದೇಶ ಎಂದು ಹೇಳಲಾಗಿದೆ.
ಮಾರ್ಚ್ 26 ರಂದು ಸಿದ್ಧಗಂಗಾ ಮಠ, 27 ರಂದು ಸಿರಿಗೆರೆ ಹಾಗೂ ಮುರುಘಾ ಮಠ, 30 ರಂದು ಸುತ್ತೂರು ಮಠಕ್ಕೆ ಭೇಟಿ ನೀಡುವ ಕಾರ್ಯಕ್ರಮ ನಿಗದಿಯಾಗಿದೆ. ಪ್ರತ್ಯೇಕ ಧರ್ಮ ಮಾನ್ಯತೆ “ಅಸ್ತ್ರ’ಕ್ಕೆ ರಾಜಕೀಯವಾಗಿಯೇ ತಿರುಗೇಟು ನೀಡುವುದು ಇದರ ಉದ್ದೇಶ ಎಂದು ಹೇಳಲಾಗಿದೆ.
ಇದೇ ಕಾರಣಕ್ಕೆ ರಾಜ್ಯ ನಾಯಕರಿಗೆ ಪ್ರತ್ಯೇಕ ಧರ್ಮ ಕುರಿತು ಹೆಚ್ಚು ಮಾತನಾಡದಂತೆ ಅಮಿತ್ ಶಾ ಸೂಚನೆ ನೀಡಿದ್ದರು. ಇದೀಗ ಖುದ್ದು ಅವರೇ ಮಠಾಧೀಶರನ್ನು ಭೇಟಿ ಮಾಡಿ ಅಭಿಪ್ರಾಯ ಸಂಗ್ರಹಿಸಲಿದ್ದಾರೆ ಎಂದು ತಿಳಿದು ಬಂದಿದೆ.
ಅಮಿತ್ ಶಾ ಅವರು ಈ ತಿಂಗಳ ಅಂತ್ಯದಲ್ಲಿ ನಾಲ್ಕು ದಿನ ರಾಜ್ಯ ಪ್ರವಾಸಕ್ಕೆ ಬರುವುದು ಮೊದಲೇ ನಿಗದಿಯಾಗಿತ್ತಾದರೂ ಮಠ ಹಾಗೂ ಮಠಾಧೀಶರ ಭೇಟಿ ಪ್ರಸ್ತಾಪ ಇರಲಿಲ್ಲ. ಎರಡು ದಿನಗಳ ಹಿಂದೆ ರಾಜ್ಯ ಸರ್ಕಾರ ಲಿಂಗಾಯತ-ವೀರಶೈವ ಪ್ರತ್ಯೇಕ ಧರ್ಮ ಮಾನ್ಯತೆಗೆ ಶಿಫಾರಸು ಮಾಡಿದ್ದರಿಂದ ಉಂಟಾಗಿರುವ ವಿವಾದ ಹಿನ್ನೆಲೆಯಲ್ಲಿ ರಾಜಕೀಯವಾಗಿಯೇ ಅದನ್ನು ನಿರ್ವಹಣೆ ಮಾಡಲು ದಿಢೀರ್ ಮಠಗಳ ಭೇಟಿ ಸೇರಿಸಿ ಪ್ರವಾಸ ಕಾರ್ಯಕ್ರಮದ ಪಟ್ಟಿ ಪರಿಷ್ಕರಿಸಲಾಗಿದೆ ಎಂದು ಹೇಳಲಾಗಿದೆ.
ರಾಜ್ಯಸಭೆ ಚುನಾವಣೆ ನಂತರ ರಾಜಕೀಯ ಬದಲಾವಣೆ
ರಾಜ್ಯಸಭೆ ಚುನಾವಣೆ ನಂತರ ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಬದಲಾವಣೆಗಳು ಆಗಲಿವೆ. ಕಾಂಗ್ರೆಸ್‌ನ ಹಲವಾರು ನಾಯಕರು ಸಂಪರ್ಕದಲ್ಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ಶಾಮನೂರು ಶಿವಶಂಕರಪ್ಪ, ಎಸ್.ಎಸ್.ಮಲ್ಲಿಕಾರ್ಜುನ ಅವರಿಗೆ ಬಿಜೆಪಿ ಗಾಳ ಹಾಕಿದೆ ಎಂಬ ಮಾತುಗಳ ಬೆನ್ನಲ್ಲೇ ಯಡಿಯೂರಪ್ಪ ಹೇಳಿಕೆ ಕುತೂಹಲ ಮೂಡಿಸಿದೆ.
ಬುಧವಾರ ಪಕ್ಷದ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯಸಭೆ ಚುನಾವಣೆ ನಂತರ ರಾಜಕಾರಣದಲ್ಲಿ ಬದಲಾವಣೆಗಳು ಆಗಲಿವೆ. ಆದರೆ, ಸದ್ಯಕ್ಕೆ ಏನೂ ಹೇಳುವುದಿಲ್ಲ. ರಾಜ್ಯದಲ್ಲಿ ಬಿಜೆಪಿ 150 ಕ್ಷೇತ್ರ ಗೆಲ್ಲುವ ಗುರಿ ಹೊಂದಿದ್ದು, ಖಂಡಿತವಾಗಿಯೂ ಆ ಸಂಖ್ಯೆ ದಾಟಲಿದ್ದೇವೆ ಎಂದರು.